ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಪ್ರವಹಿಸಿ ನಾಲ್ವರ ದಾರುಣ ಸಾವು

Last Updated 1 ಜೂನ್ 2011, 20:20 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯ ಆವರಣದ  ತೊಟ್ಟಿಯಲ್ಲಿ (ಸಂಪ್) ನೀರು ತೆಗೆದುಕೊಳ್ಳಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ನಾಲ್ವರು ಸಾವನ್ನಪ್ಪಿದ ದಾರುಣ ಘಟನೆ ಮಡಿವಾಳದ ಹೊಂಗಸಂದ್ರ ಬಳಿಯ ಮುನಿಯಪ್ಪ ಲೇಔಟ್‌ನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಮುನಿಯಪ್ಪ ಲೇಔಟ್‌ನ ಒಂಬತ್ತನೇ ಮುಖ್ಯರಸ್ತೆ ನಿವಾಸಿಗಳಾದ ಸಂಧ್ಯಾ (23), ಅವರ ಸಹೋದರಿ ಶಾಲಿನಿ (19), ಮಧು (40) ಮತ್ತು ನರೇಂದ್ರ (19) ಸಾವನ್ನಪ್ಪಿದವರು. ಇವರ ರಕ್ಷಣೆಗೆ ಧಾವಿಸಿದ್ದ ಜಯಂತ್ ಮಿಸ್ತ್ರಿ (22) ಎಂಬುವರಿಗೂ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದಾರೆ.

ಸ್ನೇಹಿತರಾದ ಮಧು ಮತ್ತು ನರೇಂದ್ರ ಒಡಿಶಾ ಮೂಲದವರಾಗಿದ್ದು, ಅವರು ಸಂಧ್ಯಾ ಅವರ ಮನೆಯ ಕಟ್ಟಡದ ಎರಡನೇ ಅಂತಸ್ತಿನಲ್ಲಿ ವಾಸವಾಗಿದ್ದರು.

ಸಂಧ್ಯಾ ಮತ್ತು ನರೇಂದ್ರ ಅವರು ಸಿದ್ಧ ಉಡುಪು ಕಾರ್ಖಾನೆಯಲ್ಲಿ ಹಾಗೂ ಶಾಲಿನಿ ಅವರು ವಾಣಿಜ್ಯ ಸಮುಚ್ಚಯದಲ್ಲಿ ಕೆಲಸ ಮಾಡುತ್ತ್ದ್ದಿದರು. ಮಧು ಬಡಗಿಯಾಗಿದ್ದರು.
ಈ ನಾಲ್ಕು ಮಂದಿ ವಾಸವಾಗಿದ್ದ ಮನೆಯ ಕಟ್ಟಡದ ಆವರಣದಲ್ಲಿ ನೀರಿನ ತೊಟ್ಟಿಯನ್ನು ನಿರ್ಮಿಸಲಾಗಿದೆ.

 ಆ ತೊಟ್ಟಿಯಿಂದ ವಿದ್ಯುತ್ ಚಾಲಿತ ಮೋಟರ್‌ನ ಮೂಲಕ ಇಡೀ ಕಟ್ಟಡಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. ಕೆಲ ದಿನಗಳ ಹಿಂದೆ ಮೋಟರ್ ಕೆಟ್ಟಿದ್ದ ಹಿನ್ನೆಲೆಯಲ್ಲಿ ಕಟ್ಟಡದ ನಿವಾಸಿಗಳು ತೊಟ್ಟಿಯಿಂದ ನೀರು ತುಂಬಿಕೊಳ್ಳುತ್ತಿದ್ದರು.

ಅಂತೆಯೇ ಶಾಲಿನಿ ಅವರು ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ತೊಟ್ಟಿಯಿಂದ ನೀರು ತುಂಬಿಕೊಳ್ಳುತ್ತಿದ್ದಾಗ ಅವರಿಗೆ ವಿದ್ಯುತ್ ಪ್ರವಹಿಸಿ ಕೂಗಿಕೊಂಡರು. ಅವರ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ ಸಂಧ್ಯಾ, ಮಧು, ನರೇಂದ್ರ ಮತ್ತು ಜಯಂತ್ ಅವರಿಗೂ ವಿದ್ಯುತ್ ಪ್ರವಹಿಸಿ ಕೂಗಿಕೊಂಡರು. ಅವರ ಕೂಗಾಟ ಕೇಳಿ ಸ್ಥಳಕ್ಕೆ ಬಂದ ರಾಜು ಎಂಬುವರು ಕಟ್ಟಡದ ಜಂಕ್ಷನ್ ಬಾಕ್ಸ್‌ನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ನಂತರ ಸ್ಥಳೀಯರ ನೆರವಿನಿಂದ ಜಯಂತ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೋಲ್ಕತ್ತ ಮೂಲದ ಜಯಂತ್, ಸಂಧ್ಯಾ ಅವರ ಮನೆಯ ಕಟ್ಟಡದ ಸಮೀಪದಲ್ಲೇ ಬೇರೊಂದು ಮನೆಯಲ್ಲಿ ವಾಸವಾಗಿದ್ದಾರೆ. ಅವರು ಸಹ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ.

`ಸಂಧ್ಯಾ ಅವರ ಮನೆಯ ಬಳಿ ನಡೆದು ಹೋಗುತ್ತಿದ್ದಾಗ ಮಧು ಮತ್ತಿತರರು ಕೂಗಿದ್ದು ಕೇಳಿಸಿತು. ಸ್ಥಳಕ್ಕೆ ತೆರಳಿ ನೋಡಿದಾಗ ಆ ಐದು ಮಂದಿ ನೀರಿನ ತೊಟ್ಟಿಯ ಒಳಗಿರುವುದು ಗೊತ್ತಾಯಿತು. ಅವರನ್ನು ರಕ್ಷಿಸಲು ಯತ್ನಿಸಿದಾಗ ತೊಟ್ಟಿಯ ಕಬ್ಬಿಣದ ಮುಚ್ಚಳದಿಂದ ವಿದ್ಯುತ್ ಪ್ರವಹಿಸಿದ ಅನುಭವವಾಯಿತು. ಕೂಡಲೇ ಕಟ್ಟಡದ ಜಂಕ್ಷನ್ ಬಾಕ್ಸ್ ಬಳಿ ಹೋಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ನಂತರ ಸಾರ್ವಜನಿಕರ ನೆರವಿನಿಂದ ಜಯಂತ್ ಅವರನ್ನು ಮೇಲಕ್ಕೆ ಎತ್ತಿದೆ~ ಎಂದು ಸ್ಥಳೀಯ ನಿವಾಸಿ ರಾಜು ತಿಳಿಸಿದರು.

ಮಾಲೀಕರ ನಿರ್ಲಕ್ಷ್ಯವೇ ಕಾರಣ: `ನೀರಿನ ಮೋಟರ್ ಕೆಟ್ಟು ಹೋಗಿದ್ದ ಬಗ್ಗೆ ಮನೆಯ ಮಾಲೀಕರಿಗೆ ಮಾಹಿತಿ ನೀಡಿ ಸರಿ ಮಾಡಿಸುವಂತೆ ಮನವಿ ಮಾಡಿದ್ದೆವು. ಆದರೆ ಮಾಲೀಕರು ಈ ಬಗ್ಗೆ ಗಮನ ಹರಿಸಿರಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿತು~ ಎಂದು ಕಟ್ಟಡದ ನಿವಾಸಿಯೊಬ್ಬರು ದೂರಿದರು.

ಕಟ್ಟಡದ ಮಾಲೀಕರಾದ ಎಸ್.ಕೆ.ಶಾಮಣ್ಣ ಅವರು ಮಾರುತಿಸೇವಾ ನಗರದಲ್ಲಿ ವಾಸವಾಗಿದ್ದಾರೆ. ಅವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್. ಆಗ್ನೇಯ ವಿಭಾಗದ ಡಿಸಿಪಿ ಡಾ.ಪಿ.ಎಸ್.ಹರ್ಷ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಡಿವಾಳ ಠಾಣೆಯಲ್ಲಿ ಪ್ರಕರಣ          ದಾಖಲಾಗಿದೆ.

ಪರಿಹಾರದ ಭರವಸೆ: ಶಾಸಕ ಸತೀಶ್ ರೆಡ್ಡಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು `ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮೃತರು ಹಾಗೂ ಗಾಯಾಳುವಿನ ಕುಟುಂಬ ಸದಸ್ಯರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುತ್ತದೆ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT