ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಬಳಕೆ ನಿಯಂತ್ರಣ

Last Updated 20 ಮೇ 2012, 19:30 IST
ಅಕ್ಷರ ಗಾತ್ರ

ಅಭಿವೃದ್ಧಿಗೆ ಅಡ್ಡಗಾಲಾಗಿರುವ ವಿದ್ಯುತ್ ಕೊರತೆ ಮತ್ತು ನಿರ್ವಹಣೆಗೆ ಹೆಣಗಾಟ ತಪ್ಪಿದ್ದೇ ಇಲ್ಲ. ಅತಿಯಾಗಿ ವಿದ್ಯುತ್ ಬಳಕೆಯಾಗುವ ಅವಧಿಯಲ್ಲಿ ಉಪಯೋಗಿಸುವ ವಿದ್ಯುತ್‌ಗೆ ಇನ್ನು ಮುಂದೆ ಗೃಹ ಬಳಕೆದಾರರು ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ.

ವಿವೇಚನಾರಹಿತವಾಗಿ ವಿದ್ಯುತ್ ಉಪಯೋಗಿಸುವವರ ಮೇಲೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವುದು ಎಚ್ಚರಿಕೆಯ ಕ್ರಮ. ಈಗಾಗಲೇ ಹದಿನೇಳು ರಾಜ್ಯಗಳಲ್ಲಿ ಪೀಕ್‌ಅವರ್ ಬಳಕೆದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಈ ಬಗ್ಗೆ ಗ್ರಾಹಕರಲ್ಲಿ ತಿಳುವಳಿಕೆ ಮೂಡಿಸುವ ಕೆಲಸವೂ ಚಳವಳಿಯೋಪಾದಿಯಲ್ಲಿ ನಡೆಯಬೇಕಿದೆ.

ಕರ್ನಾಟಕದಲ್ಲಿ ಸೆಪ್ಟೆಂಬರ್ 1ರಿಂದ ಕೈಗಾರಿಕೆಗಳು ಬಳಸುವ ವಿದ್ಯುತ್ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವಂತೆ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಆದೇಶಿಸಿದೆ. ಇದಕ್ಕಾಗಿ ಕೈಗಾರಿಕಾ ಘಟಕಗಳಿಗೆ ವಿಶೇಷ ವಿದ್ಯುತ್‌ಮಾಪನ ಯಂತ್ರಗಳನ್ನು ಅಳವಡಿಸಲಾಗುತ್ತಿದೆ.
 
ಪರಿಷ್ಕೃತ ವಿದ್ಯುತ್ ದರಗಳನ್ನು ಜಾರಿಗೊಳಿಸುವ ಮೊದಲು ನಾಲ್ಕು ಮೆಟ್ರೊ ನಗರಗಳಲ್ಲಿ ನಾಲ್ಕುನೂರು ಮೆಗಾವಾಟ್ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳನ್ನು ತೆರೆಯವಂತೆಯೂ ಸಮಿತಿ ಸಲಹೆ ಮಾಡಿರುವುದು ಸೂಕ್ತವಾಗಿದೆ.
 
ದಿನಕ್ಕೆ ನಾಲ್ಕು ದಶಲಕ್ಷ ಯೂನಿಟ್ ವಿದ್ಯುತ್ ಕೊರತೆ ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ ಯೋಜನಾ ಆಯೋಗದ ತಜ್ಞರ ಸಮಿತಿ ಮಾಡಿರುವ ಶಿಫಾರಸು ಎಷ್ಟರಮಟ್ಟಿಗೆ ಪರಿಹಾರ ತರುತ್ತದೆ ಎಂಬುದನ್ನು ಕಾದು ನೋಡಬೇಕು.

 ವಿದ್ಯುತ್ ವಲಯದಲ್ಲಿ ಸುಧಾರಣೆ ಆಗಬೇಕೆಂಬುದೇ ಎಲ್ಲರ ಆಶಯ. ವಿದ್ಯುತ್‌ಪೂರೈಕೆ ಬಗ್ಗೆ ಗ್ರಾಹಕರಲ್ಲಿ ಅತೃಪ್ತಿ ಮನೆಮಾಡಿದೆ. ಪದೇ ಪದೇ ವಿದ್ಯುತ್ ಶುಲ್ಕ ಹೆಚ್ಚಳ ಮಾಡುವುದೇ ಪರಿಹಾರ ಎಂದೆನಿಸಿಕೊಳ್ಳಲಾರದು. ಅನಿಯಮಿತ ಲೋಡ್ ಶೆಡ್ಡಿಂಗ್ ಕೈಬಿಡಬೇಕು, ಬಾಕಿ ವಸೂಲಾತಿಯತ್ತ ಗಮನಹರಿಸಬೇಕು.
 
ಕರ್ನಾಟಕದಲ್ಲಿ ವಿದ್ಯುತ್‌ಗ್ರಾಹಕರಿಂದ ಆರು ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಬಾಕಿ ವಸೂಲಾಗಬೇಕಿದೆ. ಪ್ರಸರಣದಲ್ಲಿ ಆಗುತ್ತಿರುವ ವಿದ್ಯುತ್‌ಪೋಲು ತಪ್ಪಿಸಬೇಕು ಇತ್ಯಾದಿ ಹಲವಾರು ಪರಿಹಾರ ಸೂತ್ರಗಳು ಹಾಗೇ ಉಳಿದಿವೆ.

ದರ ಹೆಚ್ಚಳ,ದಂಡ ಹಾಗೂ ಪೀಕ್‌ಅವರ್ ಬಳಕೆ ಮೇಲೆ ನಿಯಂತ್ರಣಗಳಿಂದ ವಿದ್ಯುತ್ ವಿತರಣ ಕಂಪೆನಿಗಳು ತಮ್ಮ ಹೊರೆಯನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು. ಆದರೆ ಗ್ರಾಹಕರ ಸಮಸ್ಯೆಗಳು ಕಾಯಂ ಆಗಿ ಪರಿಹಾರ ಆಗುವ ಸಾಧ್ಯತೆ ಇಲ್ಲ.
 
ಸರಬರಾಜು, ವಿತರಣೆ ಮತ್ತು ತಾಂತ್ರಿಕ ವೈಫಲ್ಯಗಳಿಂದ ಶೇ.44 ರಷ್ಟು ವಿದ್ಯುತ್ ನಷ್ಟವಾಗುತ್ತಿರುವುದನ್ನು ತಡೆಯಲು ಏನು ಕ್ರಮ ಕೈಗೊಳ್ಳಲಾಗಿದೆ? ಇದರೊಂದಿಗೆ ಸೋರಿಕೆ ಬೇರೆ. ಇದನ್ನೆಲ್ಲಾ ನಿಯಂತ್ರಿಸಲು ಸಾಧ್ಯವಾದರೆ ಗ್ರಾಹಕರ ಮೇಲಿನ ಹೊರೆ ಕಡಿಮೆಯಾಗಲಿದೆ.

ರಾಜ್ಯದ ವಿದ್ಯುತ್ ಬೇಡಿಕೆ 7498 ಮೆಗಾವಾಟ್‌ಗಳಾದರೆ ಉತ್ಪಾದನಾ ಸಾಮರ್ಥ್ಯ 5800 ಮೆಗಾವಾಟ್ ಮಾತ್ರ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ಪ್ರತಿ ವರ್ಷ ಶೇ.10 ರಷ್ಟು ಏರಿಕೆಯಾಗುತ್ತಲೇ ಇದೆ.

ಮುಂದಿನ ವರ್ಷಗಳಲ್ಲಿ ಈ ಬೇಡಿಕೆ ಪ್ರಮಾಣ ಮತ್ತೂ ಹೆಚ್ಚುವ ನಿರೀಕ್ಷೆ ಇದೆ. ನೆನೆಗುದಿಗೆ ಬಿದ್ದಿರುವ ಉಷ್ಣವಿದ್ಯುತ್ ಯೋಜನೆಗಳನ್ನು ಕಾರ್ಯಗತ ಮಾಡುವತ್ತ ಸರ್ಕಾರ ಗಮನ ಹರಿಸಿದರೆ ಸ್ವಲ್ಪವಾದರೂ ಪರಿಹಾರದ ಬೆಳಕು ಕಂಡೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT