ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ವೈಫಲ್ಯ: ಸರ್ಕಾರದ ವಿರುದ್ಧ ಆಕ್ರೋಶ

Last Updated 2 ಅಕ್ಟೋಬರ್ 2012, 8:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಿಜೆಪಿ ಸರ್ಕಾರ ಸಮರ್ಪಕ ವಿದ್ಯುತ್ ಪೂರೈಕೆಯ್ಲ್ಲಲಿ ವಿಫಲವಾಗಿರುವುದನ್ನು ಖಂಡಿಸಿ ಸೋಮವಾರ  ಚಿತ್ರದುರ್ಗ ಲೋಕಸಭಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ನಗರದ ಬೆಸ್ಕಾಂ ಕಚೇರಿ ಮಂದೆ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದರು.


ಸಮಪರ್ಕವಾಗಿ ವಿದ್ಯುತ್ ಪೂರೈಕೆ ಮಾಡದ ಕಾರಣಕ್ಕಾಗಿ ಜಿಲ್ಲೆ ಸೇರಿದಂತೆ ಇಡೀ ರಾಜ್ಯವೇ ಕತ್ತಲುಮಯವಾಗಿದೆ. ದಿನದಿಂದ ದಿನಕ್ಕೆ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ. ಹಗಲು ರಾತ್ರಿ ಎನ್ನದೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಕೈಗಾರಿಕೆ, ಗುಡಿಕೈಗಾರಿಕೆ, ರೈತರು, ವ್ಯಾಪಾರಸ್ಥರು ಸೇರಿದಂತೆ ಅನೇಕರಿಗೆ ತೊಂದರೆಯಾಗುತ್ತಿದ್ದು, ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಇಷ್ಟೆಲ್ಲಾ ತೊಂದರೆಗೆ ಇಂಧನ ಸಚಿವರು ನೇರ ಕಾರಣ ಎಂದು ದೂರಿದರು.

ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ಪಕ್ಷ ವಿದ್ಯುತ್ ಸಮಸ್ಯೆ ನಿಭಾಯಿಸಲು 10 ಸಾವಿರ ಮೆಗಾವ್ಯಾಟ್ ಹೆಚ್ಚಿಸಲು ಕ್ರಮ ಕೈಗೊಳ್ಳುವುದರ ಜತೆಗೆ ರೈತರ ಪಂಪ್‌ಸೆಟ್‌ಗಳಿಗೆ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಪ್ರತಿ ಹಳ್ಳಿಗಳನ್ನೂ ಕತ್ತಲೆಯಲ್ಲಿರುವಂತೆ ಮಾಡಿದೆ.

ಇದೇ ಬಿಜೆಪಿ ಸರ್ಕಾರದ ದೊಡ್ಡ ಸಾಧನೆಯಾಗಿದೆ. ರೈತರಿಗೆ ಉಚಿತ ವಿದ್ಯುತ್ ನೀಡುವ ಹೇಳಿಕೆ ಪೊಳ್ಳು ಭರವಸೆ ಎಂದು ಸಾಬೀತು ಮಾಡಿದ್ದು, ಅದರ ಬೆನ್ನಲ್ಲೇ ಮೀಟರ್ ಕಡ್ಡಾಯಗೊಳಿಸಿದೆ. ವಿದ್ಯುತ್ ಕೊಡದಿದ್ದರೂ ಬಾಕಿ ವಸೂಲಿಗೆ ಮುಂದಾಗಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರು, ಬೆಸ್ಕಾಂ ಕಚೇರಿ ಬಾಗಿಲು ಮೂಲಕ ನುಗ್ಗಲು ಯತ್ನಿಸಿದರು. ಆದರೆ, ಪೊಲೀಸರು ಅವಕಾಶ ನೀಡಲಿಲ್ಲ. ನಂತರ ಸುತ್ತಲೂ ಗೋಡೆ ಹಾರಲು ಯತ್ನಿಸಿದಾಗ ಪೊಲೀಸರು ತಡೆದರು.

ಚಿತ್ರದುರ್ಗ ಲೋಕಸಭಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಖಾಲಿದ್ ಹುಸೇನ್, ಉಪಾಧ್ಯಕ್ಷ ಸೈಯದ್ ಮೊಹಿದ್ದೀನ್, ಪ್ರಧಾನ ಕಾರ್ಯದರ್ಶಿ ಎಸ್. ಮೋಹನ್, ಎಂ.ಸಿ. ವಿನೂತನ್, ಮುಖಂಡರಾದ ಟಿ.ತಿಪ್ಪೇಸ್ವಾಮಿ, ರೆಹಮಾನ್, ನಜ್ಮತಾಜ್, ಅಶ್ರಫ್ ಆಲಿ, ಕಾರೇಹಳ್ಳಿ ಉಲ್ಲಾಸ್, ಸುಧಮ್ಮ , ಪ್ರಕಾಶ್, ಸತೀಶ್, ಅಕ್ರಮ್ ಜಾಫರ್ ಷರೀಪ್, ಸತೀಶ್, ರಾಕೇಶ್, ಶಾಂತಕುಮಾರ್, ನಾಗರಾಜ್, ವಸೀಂ ಪಾಲ್ಗೊಂಡಿದ್ದರು.

ಹಿರಿಯೂರು ವರದಿ

ರಾಜ್ಯ ಸರ್ಕಾರದ ವಿದ್ಯುತ್ ಸರಬರಾಜಿನಲ್ಲಿನ ವೈಫಲ್ಯ ಕುರಿತು ತಾಲ್ಲೂಕು ಯುವಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ನಗರದ ಪ್ರಧಾನ ರಸ್ತೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದ ನಂತರ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಹೊಸದಾಗಿ ಒಂದು ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಆರಂಭಿಸಲಿಲ್ಲ. ವಿದ್ಯುತ್ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ.  ರೈತರು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ರಾಜ್ಯ ಕಗ್ಗತ್ತಲಿನ ಕಡೆ ಸಾಗುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರದ ದಿವ್ಯ ನಿಲಕ್ಷ್ಯ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಚ್. ರಾಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಚ್. ಮಂಜುನಾಥ್, ಚಂದ್ರಾನಾಯ್ಕ, ಅಯೂಬ್‌ಖಾನ್, ಕೆ.ಆರ್. ವೆಂಕಟೇಶ್, ಚಂದ್ರಶೇಖರ್, ನಾಹಿದ್, ಸಿಗ್ಬತ್‌ಉಲ್ಲಾ, ಎಲ್.ವಿ. ಕುಮಾರಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT