ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸಮಸ್ಯೆ: ಡಿಸಿ ಭೇಟಿಗೆ ನಿರ್ಧಾರ

ಸಾಗರಪೇಟೆ: ನಾಟಿ ಕಾರ್ಯ ಸ್ಥಗಿತ; ರೈತ ಮುಖಂಡರ ಸಭೆಯಲ್ಲಿ ಚರ್ಚೆ
Last Updated 17 ಜನವರಿ 2013, 5:24 IST
ಅಕ್ಷರ ಗಾತ್ರ

ಬಸವಾಪಟ್ಟಣ: ಈ ಭಾಗದ ರೈತರ ಪಂಪ್‌ಸೆಟ್‌ಗಳಿಗೆ ಉಂಟಾಗಿರುವ ವಿದ್ಯುತ್ ಸಮಸ್ಯೆ ನಿವಾರಣೆಗಾಗಿ ಬರುವ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಬುಧವಾರ ಸೇರಿದ್ದ ರೈತರು ನಿರ್ಧಾರ ಕೈಗೊಂಡರು.

ರೈತರನ್ನು ಉದ್ದೇಶಿಸಿ ಮಾತನಾಡಿದ  ಪಟೇಲ್, ಈಗಾಗಲೇ ಇಂಧನ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರು ಈ ಸಮಸ್ಯೆ ಬಗ್ಗೆ ಚರ್ಚಿಸಲು ಒಪ್ಪಿಗೆ ನೀಡಿದ್ದು, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅವರನ್ನು ಸಭೆಗೆ ಕರೆಸಿ ಈ ವಿಷಯವನ್ನು ಪ್ರಸ್ತಾಪ ಮಾಡಿ ಚರ್ಚಿಸಲಾಗುವುದು. ಸಭೆಗೆ ವಿವಿಧ ರೈತ ಸಂಘಟನೆಗಳು ಬೆಂಬಲ ನೀಡಲಿದ್ದು, ಪ್ರತಿ ಗ್ರಾಮಗಳಿಂದ ಸಾಕಷ್ಟು ರೈತರು ಸೋಮವಾರದ ಸಭೆಗೆ ಹಾಜರಾಗಬೇಕೆಂದು ಮನವಿ ಮಾಡಿದರು.

ನಿವೃತ್ತ ಪ್ರಾಂಶುಪಾಲ ಓ. ನಾಗೇಂದ್ರಪ್ಪ ಮಾತನಾಡಿ, ಈಗಾಗಲೇ ಬತ್ತದ ನಾಟಿಗಾಗಿ ರೈತರು ಸಸಿಗಳನ್ನು ಬೆಳೆಸಿದ್ದು, ವಿದ್ಯುತ್ ಇಲ್ಲದೇ ನಾಟಿಕಾರ್ಯ ಸ್ಥಗಿತಗೊಂಡಿದೆ. ಹಿಂದಿನಂತೆ ವಿದ್ಯುತ್ ಸರಬರಾಜು ಮಾಡಬೇಕು ಎಂಬ ಬೇಡಿಕೆಯು ನ್ಯಾಯ ಸಮ್ಮತವಾಗಿದ್ದು, ಶಾಂತಿ ಮತ್ತು ಸೌಹಾರ್ದತೆಯಿಂದ ರೈತರು ಸರ್ಕಾರ ಮತ್ತು ವಿದ್ಯುತ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವಲ್ಲಿ ಸಹಕಾರ ನೀಡಬೇಕು ಎಂದರು.

ಎಂ.ಎನ್. ರಮೇಶ್, ಕೆ. ಪಿ. ಓಂಕಾರನಾಯ್ಕ, ದೀಪಕ್ ಮಾತನಾಡಿದರು. ಎಸ್. ಅಣ್ಣೋಜಿರಾವ್, ಎಸ್.ವಿ. ಕೇಶವಮೂರ್ತಿ, ಬಿ.ಡಿ. ರಾಮಚಂದ್ರಪ್ಪ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.

ದೇಣಿಗೆ ನೀಡಲು ಮನವಿ
ಬಸವಾಪಟ್ಟಣದ ಚಿನ್ಮೂಲಾದ್ರಿ ಶ್ರೇಣಿಯ ಬೆಟ್ಟದಲ್ಲಿರುವ ಪುರಾಣ ಪ್ರಸಿದ್ಧ ದುರ್ಗಾದೇವಿ ದೇಗುಲದ ಪುನರ್ ನಿರ್ಮಾಣಕ್ಕೆ ದೇಗುಲ ಸಮಿತಿಯ ಅಧ್ಯಕ್ಷ ದೊಡ್ಡಚನ್ನಪ್ಪ ಪಟೇಲ್ ಈಚೆಗೆ ಚಾಲನೆ ನೀಡಿದರು.

ನಂತರ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ದೇಗುಲ ನಾಡಿನ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ಇದಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ದ್ರಾವಿಡ ಶೈಲಿಯಲ್ಲಿ ನಮ್ಮ ಪೂರ್ವಿಕರು ಆಗ ನಿರ್ಮಿಸಿದ್ದ ಮಾದರಿಯಲ್ಲಿ ದೇಗುಲವನ್ನು ರೂ. 1.5 ಕೋಟಿ  ವೆಚ್ಚದಲ್ಲಿ ಪುನರ್‌ನಿರ್ಮಾಣ ಮಾಡಲಾಗುವುದು. ನಾಡಿನಾದ್ಯಂತ ಇರುವ ದೇವಿಯ ಭಕ್ತರು ದೇಗುಲಕ್ಕೆ ಉದಾರ ದಾನ ನೀಡಬೇಕೆಂದು ದೊಡ್ಡಚನ್ನಪ್ಪ ವಿನಂತಿಸಿದರು.

ದೇಗುಲದ ಕಾರ್ಯದರ್ಶಿ ಎಂ.ಎಸ್. ಜಯಣ್ಣ ಮಾತನಾಡಿ, ಈಗಾಗಲೇ ತಮಿಳುನಾಡಿನ ಖ್ಯಾತ ಶಿಲ್ಪಿಗಳಿಂದ ದೇಗುಲದ ಕಂಬಗಳ ಕೆತ್ತನೆಯ ಕಾರ್ಯ ಆರಂಭಿಸಲಾಗಿದೆ. ಒಂದು ವರ್ಷದಲ್ಲಿ ದೇಗುಲದ ನಿರ್ಮಾಣವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, ಪ್ರತಿವರ್ಷದಂತೆ ದೇವಿಯ ರಥೋತ್ಸವ ಮತ್ತು ಸಿಡಿ ಉತ್ಸವಗಳು ಎಂದಿನಂತೆ ನಡೆಯುತ್ತವೆ. ಭಕ್ತರ ಸಹಕಾರ ಇದಕ್ಕೆ ಅಗತ್ಯವಾಗಿದೆ ಎಂದರು.

ದೇಗುಲ ಸಮಿತಿಯ ಸದಸ್ಯರು ಮತ್ತು ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಚ್.ಬಿ. ಹಾಲಪ್ಪ ಸ್ವಾಗತಿಸಿದರು. ಬಿ.ಎಲ್. ಷಣ್ಮುಖಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT