ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸಮಸ್ಯೆ: ನೀರಿಗಾಗಿ ಕಾದಾಟ

Last Updated 10 ಅಕ್ಟೋಬರ್ 2011, 9:25 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ, ಮಳೆ ಅಭಾವ ಹಾಗೂ ಅಂತರ್ಜಲ ಕುಸಿತದ ಪರಿಣಾಮವಾಗಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಇರುವುದೇ ಅಪರೂಪವಾಗಿ ಪರಿಣಮಿಸಿದೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕುಡಿಯುವ ನೀರಿಗಾಗಿ ಗ್ರಾಮದ ನೀರಿನ ತೊಟ್ಟಿ ಅಥವಾ ನಲ್ಲಿಗಳ ಮುಂದೆ ಕಾದು ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ವಿದ್ಯುತ್ ಬಂತೆಂದರೆ ನೀರಿಗಾಗಿ ಕಿತ್ತಾಟ ಪ್ರಾರಂಭವಾಗುತ್ತದೆ.

ನಾಮುಂದು ತಾಮುಂದು ಎಂದು ಕೊಡ ಹಿಡಿದು ನುಗ್ಗುವುದು ಎಲ್ಲ ಕಡೆಗಳಲ್ಲೂ ಕಂಡುಬರುತ್ತದೆ. ವಿದ್ಯತ್ ಎಷ್ಟು ಹೊತ್ತು ಇರುತ್ತದೆ ಎಂದು ಹೇಳಲಾಗದು. ಹೀಗೆ ಬಂದು ಹಾಗೆ ಹೋಗುವುದೇ ಹೆಚ್ಚಾಗಿದೆ. ವಿದ್ಯುತ್ ಇದ್ದಾಗ ಕೊಡ ನೀರು ದಕ್ಕಿಸಿಕೊಂಡರೆ ಗೆದ್ದಂತೆಯೇ ಸರಿ.

ಮಳೆಯ ಕೊರತೆಯಿಂದ ಅಂತರ್ಜಲ ಇಳಿಮುಖವಾಗಿದೆ. ಕುಡಿಯುವ ನೀರಿಗಾಗಿ ಕೊರೆಯುತ್ತಿರುವ ಕೊಳವೆ ಬಾವಿಗಳ ಪೈಕಿ ಹೆಚ್ಚಿನವು ವಿಫಲವಾಗುತ್ತಿವೆ ಅಥವಾ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೀರು ಸಿಗುತ್ತಿದೆ. ಈ ಎರಡರಿಂದಲೂ ನಾಗರಿಕರಿಗೆ ಪ್ರಯೋಜನವಾಗುತ್ತಿಲ್ಲ. ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಈಚೆಗೆ 9 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಒಂದು ಕೊಳವೆ ಬಾವಿಯಲ್ಲೂ ನೀರು ಸಿಕ್ಕಿಲ್ಲ. ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ.

ಗ್ರಾಮದ ಜನತೆ ಸ್ನಾನ ಮಾಡಿ ಒಂದು ವಾರವಾಗಿದೆ. ದನಕರುಗಳ ಗೋಳನ್ನು ಹೇಳತೀರದು. ಗ್ರಾ.ಪಂ. ಕಡೆಯಿಂದ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆ ಇದೆಯಾದರೂ, ಅವರು ಕೊಡುವ ನೀರು ಕುಂಭಕರ್ಣನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ ಎಂಬಂತಿದೆ. ಇಷ್ಟು ದೊಡ್ಡ ಊರಿಗೆ ಒಂದೆರಡು ಟ್ಯಾಂಕರ್ ನೀರು ತಂದರೆ ಸಾಕಾಗುವುದಿಲ್ಲ. ಆ ನೀರನ್ನು ಪಡೆದುಕೊಳ್ಳಲು ಜಗಳ ನಡೆಯುತ್ತದೆ ಎಂದು ಗ್ರಾಮದ ಹಿರಿಯರು `ಪ್ರಜಾವಾಣಿ~ಗೆ ತಿಳಿಸಿದರು.

ಭಾನುವಾರ ಮೀಸಗಾನಹಳ್ಳಿ ಗ್ರಾಮದಲ್ಲಿ ಹೊಸ ದ್ಯಾವರ ಕಾರ್ಯಕ್ರಮವಿತ್ತು. ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಮಾತ್ರವಲ್ಲದೆ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದಲೂ ಮಹಿಳೆಯರು ಬರುತ್ತಾರೆ. ಹೀಗೆ ಬಂದ ಮಹಿಳೆಯರು ತಾವು ಬಂದು ತಂಗಿದ ಮನೆಯಿಂದ ಖಾಲಿ ಗಡಿಗೆ ಪಡೆದುಕೊಂಡು ನೀರಿಗಾಗಿ ಸುತ್ತಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

 ಕೆಲವು ಗ್ರಾಮಗಳ ಸಮೀಪ ಖಾಸಗಿ ಕೊಳವೆ ಬಾವಿಗಳಿವೆ. ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಜನ ಖಾಸಗಿ ಕೊಳವೆ ಬಾವಿಗಳಿಂದ ನೀರು ಹೊತ್ತು ತರುತ್ತಿದ್ದರು. ಅಂತರ್ಜಲ ಕುಸಿದಂತೆ ಕಾಲುವೆ ಮೂಲಕ ನೀರು ಹರಿಸುವ ಬೇಸಾಯ ನಿಂತಿದೆ. ಈಗ ಹನಿ ನೀರಾವರಿಯನ್ನು ಅಳವಡಿಸಲಾಗಿದೆ. ಅಲ್ಲಿ ಕೊಡಕ್ಕೆ ನೀರನ್ನು ತುಂಬಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಖಾಸಗಿ ಕೊಳವೆ ಬಾವಿಗಳು ಬಾಯಾರಿದ ಜನರ ನೆರವಿಗೆ ಬರುತ್ತಿಲ್ಲ.

ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಕೆರೆ ಕುಂಟೆಗಳಿಗೆ ನೀರು ಬಂದಿಲ್ಲ. ಇದ್ದ ಅಲ್ಪಸ್ವಲ್ಪ ನೀರು ಬತ್ತಿಹೋಗಿದೆ. ಇದರಿಂದ ಜಾನುವಾರು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ವಿದ್ಯುತ್ ಇದ್ದರೆ ಮಾತ್ರವೇ ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತದೆ. ಇಲ್ಲವಾದರೆ ಸಂಕಷ್ಟ ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT