ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸ್ಪರ್ಶ: ಐವರ ಸಾವು

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹಾಸನ: ಕೃಷಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ಪ್ರಯಾಣ ಮಾಡುತ್ತಿದ್ದವರಿಗೆ ವಿದ್ಯುತ್ ತಂತಿ ತಗುಲಿ ಐದು ಮಂದಿ ಮೃತಪಟ್ಟಿರುವ ಘಟನೆ  ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಅಪ್ಪೇನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ರಾಜಸ್ತಾನ ಮೂಲದ ಲಾರಿ ಚಾಲಕ ರಸೂಲ್‌ಭಾಯ್ (53), ಹಾಸನದವರಾದ ಗೌರಮ್ಮ (65) ನಂದೀಶ್ (30), ಕುಮಾರ (31) ಹಾಗೂ ಸಂತೋಷ್ (20) ಮೃತಪಟ್ಟರು. ಲಾರಿಯಲ್ಲಿದ್ದ 16 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಅರಸೀಕೆರೆ ಹಾಗೂ ಹಾಸನದ ಸರ್ಕಾರಿ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಹಾಸನ ಮೂಲದ ವ್ಯಾಪಾರಿಯೊಬ್ಬರು ಉತ್ತರ ಭಾರತಕ್ಕೆ ಸಾಗಿಸಲು ಅರಸೀಕೆರೆಯ ರೈತರಿಂದ ಆಲೂಗೆಡ್ಡೆ, ಶುಂಠಿ ಮುಂತಾದ ವಸ್ತುಗಳನ್ನು ಖರೀದಿಸಿದ್ದರು. ಅವುಗಳನ್ನು ಎರಡು ಲಾರಿಗಳಲ್ಲಿ ತುಂಬಿಕೊಂಡು ರಾತ್ರಿ ಹಾಸನದತ್ತ ಹೊರಟ್ಟಿದ್ದರು. ಒಂದು ಲಾರಿ ಮುಂದೆ ಸಾಗಿತ್ತು. ಮತ್ತೊಂದು  ಲಾರಿಯಲ್ಲಿ ಉಳಿದ ಉತ್ಪನ್ನವನ್ನು ತುಂಬಲಾಗಿತ್ತು. ಇದರಲ್ಲಿ ಕೂಲಿ ಕಾರ್ಮಿಕರು ಸಹ ಇದ್ದರು.

ಈ ಲಾರಿಯಲ್ಲಿ ಇಬ್ಬರು ಕೂಲಿ ಕಾರ್ಮಿಕರು ಕ್ಯಾಬಿನ್ ಮೇಲೆ ಕುಳಿತುಕೊಂಡು ಪ್ರಯಾಣ ಮಾಡುತ್ತಿದ್ದರು. ರಾತ್ರಿ 11.30 ರ ಸುಮಾರಿಗೆ ಅಪ್ಪೇನಹಳ್ಳಿಗೆ ಬಂದಾಗ ರಸ್ತೆಗೆ ಅಡ್ಡವಾಗಿ ಹೋಗಿರುವ ವಿದ್ಯುತ್ ತಂತಿಗಳಿಗೆ ಇವರ ಸ್ಪರ್ಶವಾಗಿದೆ.

ಅವರಿಬ್ಬರು ಸ್ಥಳದಲ್ಲೇ ಮೃತಪಟ್ಟರು. ಜತೆಗೆ ವಿದ್ಯುತ್ ತಂತಿಯೊಂದು ತುಂಡಾಗಿ ಕ್ಯಾಬಿನ್ ಮೇಲೆ ಬಿತ್ತು. ಕ್ಯಾಬಿನ್‌ಗೆ ಅಳವಡಿಸಿದ್ದ ಲೋಹದ ವಸ್ತುಗಳ ಮೂಲಕ ವಿದ್ಯುತ್ ಪ್ರವಹಿಸಿ ಚಾಲಕ ಸಹಿತ ಒಳಗಿದ್ದ ಮೂವರೂ ಸಾವನ್ನಪ್ಪಿದರು.

ಲಾರಿಯ ಹಿಂಭಾಗದಲ್ಲಿ ಸುಮಾರು 17 ಕಾರ್ಮಿಕರು ಕುಳಿತಿದ್ದರು. ಮರದ ಬಾಡಿ ಇದ್ದುದರಿಂದ ಇವರು ಪ್ರಾಣಾಪಾಯದಿಂದ ಪಾರಾದರು. ಆದರೆ  ವಿದ್ಯುತ್ ಸ್ಪರ್ಶವಾಗಿರುವುದು ಮತ್ತು ತಂತಿಯಿಂದ ಕಿಡಿಗಳೆದ್ದಿರುವುದನ್ನು ಕಂಡು ಭಯಭೀತರಾದ ಇವರೆಲ್ಲ ಒಬ್ಬರ ಹಿಂದೆ ಒಬ್ಬರಂತೆ ಲಾರಿಯಿಂದ ಕೆಳಗೆ ಜಿಗಿದರು.

ಕತ್ತಲಲ್ಲಿಯೇ ಹಿಂದೆ-ಮುಂದೆ ನೋಡದೆ ಜಿಗಿದ ಪರಿಣಾಮ ಇವರಲ್ಲಿ ಕೆಲವರಿಗೆ ಕಾಲು, ಕೈ ಮೂಳೆಗಳು ಮುರಿದಿವೆ. ಇನ್ನೂ ಕೆಲವರಿಗೆ ದೇಹದ ವಿವಿಧ ಭಾಗಗಳಲ್ಲಿ ತರಚಿದ ಗಾಯಗಳಾಗಿವೆ. ಲಾರಿಯಲ್ಲಿದ್ದ 17 ಕಾರ್ಮಿಕರಲ್ಲಿ 13 ಮಂದಿ ಮಹಿಳೆಯರು. ಮೂಳೆ ಮುರಿತಕ್ಕೆ ಒಳಗಾದ ಐದು ಮಂದಿಯನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT