ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ಗಾಗಿ ಶಾಸಕರ ಜತೆ ವಾಗ್ದಾದ

Last Updated 1 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಕುಣಿಗಲ್: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿದ ಮೂವತ್ತಕ್ಕೂ ಹೆಚ್ಚು ಗ್ರಾಮಗಳ ನೂರಾರು ರೈತರು ಶುಕ್ರವಾರ ವಾಜರಪಾಳ್ಯ ಗ್ರಾಮದ ಕೆಪಿಟಿಸಿಎಲ್ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರಾಜ್ಯ ಹೆದ್ದಾರಿ 33ರಲ್ಲಿ ಪ್ರಯಾಣಿಸುತ್ತಿದ್ದ ಶಾಸಕ, ತಹಶೀಲ್ದಾರರನ್ನು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನ ಸಂತೇಮಾವತ್ತೂರು ಸಮೀಪದ ವಾಜರಪಾಳ್ಯದ ವಿದ್ಯುತ್ ವಿತರಣಾ ಕೇಂದ್ರದಿಂದ ಕಸಬಾ, ಹುತ್ರಿದುರ್ಗ, ಹುಲಿಯೂರುದುರ್ಗ ಹೋಬಳಿಯ ಎಪ್ಪತ್ತಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಪೂರೈಸಲಾಗುತ್ತದೆ. ಕಳೆದ ಒಂದು ತಿಂಗಳಿನಿಂದಲೂ ಕನಿಷ್ಠ ಒಂದು ಗಂಟೆ ಮೂರು ಫೇಸ್, ಒಂದು ಗಂಟೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಯಾಗುತ್ತಿರಲಿಲ್ಲ ಎಂದು ದೂರಿದರು.

ಬೆಳೆಗಳಿಗೆ ನೀರು ಪೂರೈಸಲಾಗುತ್ತಿಲ್ಲ, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಉಂಟಾಗಿದೆ. ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಯಾಗದೆ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ತೊಂದರೆಯಾಗುತ್ತಿದೆ. ಈ ಬಗ್ಗೆ ಕೆಪಿಟಿಸಿಎಲ್ ಸಿಬ್ಬಂದಿ ಪ್ರಶ್ನಿಸಿದರೆ ಮೇಲಧಿಕಾರಿಗಳ ಸೂಚನೆ ಮೇರೆಗೆ ಲಭ್ಯತೆ ಆಧಾರದಲ್ಲಿ ವಿದ್ಯುತ್ ವಿತರಿಸಲಾಗುತ್ತಿದೆ ಎನ್ನುತ್ತಾರೆ ಎಂದರು. ಆದರೆ ದಾಖಲೆಗಳಲ್ಲಿ ವಿದ್ಯುತ್ ಸರಬರಾಜು ಆಗಿರುವಂತೆ ನಮೂದಿಸಲಾಗಿದ್ದರೂ; ಕ್ರಷರ್- ಕೈಗಾರಿಕೆಗಳಿಗೆ ವಿದ್ಯುತ್ ಸರಬರಾಜಾಗಿದೆ ಎಂದು ಗ್ರಾಮಸ್ಥರಾದ ಕೃಷ್ಣೇಗೌಡ, ಕುಮಾರ, ತಮ್ಮಣ್ಣ, ವೆಂಕಟೇಶ ಆರೋಪಿಸಿದರು.

ವಿತರಣಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಾಬು ಸಮರ್ಪಕ ಉತ್ತರ ನೀಡದ ಕಾರಣ ಬೇಸತ್ತ ಗ್ರಾಮಸ್ಥರು, ರೈತರು, ಇಲಾಖಾ ಮೇಲಧಿಕಾರಿಗಳು ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕೇಂದ್ರದ ಮುಂಭಾಗದಲ್ಲಿದ್ದ ರಾಜ್ಯ ಹೆದ್ದಾರಿ 33ರಲ್ಲಿ ಮರದ ದಿಮ್ಮಿ ಇಟ್ಟು ರಸ್ತೆ ತಡೆ ನಡೆಸಿದರು.

ಇದೇ ಮಾರ್ಗವಾಗಿ ಆಗಮಿಸಿದ ತಹಶೀಲ್ದಾರ್ ಜಗದೀಶ್, ಶಾಸಕ ಬಿ.ಬಿ.ರಾಮಸ್ವಾಮಿಗೌಡ ವಾಹನ ಅಡ್ಡಗಟ್ಟಿ ಸಮಸ್ಯೆ ಪರಿಹರಿಸಿ ಮುಂದೆ ಹೋಗುವಂತೆ ಆಗ್ರಹಿಸಿದರು. ಈ ನಡುವೆ ಶಾಸಕರು, ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಗೊಂದಲಮಯವಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT