ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ವತ್‌ಪೂರ್ಣ ಗಾಯನ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ಶ್ರೀ ರಾಮ ಲಲಿತ ಕಲಾ ಸಂಸ್ಥೆಯವರು ಏರ್ಪಡಿಸಿದ್ದ ತಿಂಗಳ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ವಾರಿಜಶ್ರೀ ಅವರ ಸಂಗೀತ ಕಛೇರಿ ಮುದ ನೀಡಿತು.
`ಓಂ ನಮಃ ಪ್ರಣವಾರ್ಥಾಯ~ ಎಂಬ ಶ್ಲೋಕದಿಂದ ಪ್ರಾರಂಭಿಸಿದ ವಾರಿಜಶ್ರಿ ಸಾವೇರಿ ರಾಗದ `ಸರಸುಡ...~ ವರ್ಣವನ್ನು ಹಾಡಿದರು.

ಪಲ್ಲವಿ, ಅನುಪಲ್ಲವಿ, ಚಿಟ್ಟೆಸ್ವರಗಳನ್ನು ಮಧ್ಯಮ ಕಾಲದಲ್ಲಿ ಮಧ್ಯಮ ಗತಿಯಲ್ಲಿ ಹಾಡಿ, ಚರಣ ಎತ್ತುಗಡೆ ಸ್ವರಗಳನ್ನು ಮಧ್ಯಮ ಕಾಲದಲ್ಲೇ, ಧೃತ ಗತಿಯಲ್ಲಿ ಹಾಡಿದ್ದು ಸಂಪ್ರದಾಯವಲ್ಲದಿದ್ದರೂ ವಿಭಿನ್ನವಾಗಿತ್ತು. ನಂತರ ರುದ್ರಪ್ರಿಯ ರಾಗದ `ಗಣನಾಯಕಂ~ ಕೃತಿಯನ್ನು ಹಾಡಿ, ಸಂಕ್ಷಿಪ್ತವಾದರೂ ಪ್ರೌಢವಾದ ಸ್ವರಪುಂಜಗಳು ಕೇಳುಗರಿಗೆ ಉತ್ಸಾಹವನ್ನು ತುಂಬಿತು. ನಂತರ ಯದುಕುಲಕಾಂಭೋಜಿ ರಾಗದ ತ್ಯಾಗರಾಜರ ಕೃತಿಯಾದ `ದಯಚೇರಾಮ~ ಎಂಬ ಅಪರೂಪದ ರಚನೆಯನ್ನು ಬಹಳ ಚೆನ್ನಾಗಿ ಹಾಡಿದರು. ಮುಂದುವರಿಸುತ್ತಾ ಕಲಾವತಿ ರಾಗದ `ಒಕ್ಕಪರಿಜೂಡರಾದ~ ಎಂಬ ಕೃತಿ ಹಾಡಿ ಹಿತಮಿತವಾಗಿ ಸ್ವರಪ್ರಸ್ತಾರ ಮಾಡಿದರು.
ನಂತರ ಧನ್ಯಾಸಿ ರಾಗದ ಸಂಕ್ಷಿಪ್ತ ಆಲಾಪನೆ ಮಾಡಿ `ಬಾಲಕೃಷ್ಣಂ~ ಎಂಬ ತಮಿಳು ಕೀರ್ತನೆ ಹಾಡಿ ಸ್ವರವಿನ್ಯಾಸ ಮಾಡಿದ್ದು ಶ್ಲಾಘನೀಯವಾಗಿತ್ತು.
ರಾಗಾಲಾಪನೆಗೆ ಕ್ಲಿಷ್ಟವಾದಂತಹ ಬೇಹಾಗ್ ರಾಗದಲ್ಲಿ ತ್ರಿಸ್ಥಾಯಿಯಲ್ಲಿಯೂ ನಿರರ್ಗಳವಾಗಿ ಹಾಗೂ ಬಹಳ ಪ್ರೌಢವಾಗಿ ರಾಗವನ್ನು ವಿಸ್ತರಿಸಿ,~ಸ್ಮರಜನ ಶುಭ ಚರಿತ~ ಎಂಬ ಜಾವಳಿ ಹಾಡಿದರು. ಜಾವಳಿಗೆ ರಾಗಾಲಾಪನೆ ಮಾಡಿ ಕಛೇರಿಯ ಮಧ್ಯೆ ಜಾವಳಿ ಹಾಡಿರುವುದು ಗಮನಾರ್ಹ. ದೀರ್ಘವಾದ ಪಾಂಡಿತ್ಯಪೂರ್ಣ ಆಲಾಪನೆಯನ್ನು ಮಾಡಿ ಸಭಿಕರನ್ನು ರಂಜಿಸಿದರು. ಆದರೆ ಅಂಥ ಉತ್ತಮ, ಮನರಂಜಿಸುವ ರಾಗಕ್ಕೆ  ಕಲ್ಪನಾಸ್ವರ ಹಾಕದಿದ್ದುದು ಕೊಂಚ ನಿರಾಸೆ ತಂದಿತು.
ನಂತರ ತ್ಯಾಗರಾಜರ `ತತ್ವ ಮರಿಯ ತರಮಾ~ ಹಾಡಿ ಮುಂದುವರಿಸುತ್ತ, ಖರಹರಪ್ರಿಯ ರಾಗವನ್ನು ಎತ್ತಿಕೊಂಡು ವಿದ್ವತ್ಪೂರ್ಣ ವಿಸ್ತಾರವಾದ ರಾಗಲಾಪನೆಯನ್ನು ಮಾಡಿ, ತ್ಯಾಗರಾಜರ ಸೊಗಸಾದ ಕೃತಿ `ಚಕ್ಕನಿರಾಜ~ ಹಾಡಿ `ಕಂಟಿಕೀ ಸುಂದರ~ ನೆರವಲ್ ಮಾಡಿ ಸ್ವರವಿನ್ಯಾಸವನ್ನು ಮಾಡಿ ರಾಜಮಾರ್ಗವನ್ನು ಸಿಂಗರಿಸಿ, ಒಳ್ಳೆಯ ಅನುಭವ ಪಡೆದ ಗಾಯಕಿ ಎನಿಸಿಕೊಂಡರು.
ಪುರಂದರದಾಸರ `ವೆಂಕಟಾಚಲ ನಿಲಯಂ~ ದೇವರನಾಮ ಹಾಡಿ, ತಿಲ್ಲಾನದೊಂದಿಗೆ ಕಛೇರಿಗೆ ಮಂಗಳ ಹಾಡಿದರು. ಉತ್ತಮ ಕಂಠಸಿರಿ, ಸದಭಿರುಚಿಯಿರುವ ವಾರಿಜಶ್ರೀಯವರು ಉನ್ನತ ಮಟ್ಟದ ಗಾಯಕಿಯಾಗುವ ಲಕ್ಷಣಗಳು ಹೆಚ್ಚಾಗಿವೆ.
ಪಕ್ಕವಾದ್ಯದಲ್ಲಿ ವಿದ್ವಾನ್ ಜೆ.ಎನ್. ಶ್ರೀಧರ್ ಅವರು ವಾರಿಜಶ್ರೀಯವರ ಮನೋಧರ್ಮಕ್ಕೆ ಹೊಂದಿಕೊಂಡು ಅವರನ್ನು ಅನುಸರಿಸಿ ಬಹಳ ಚೆನ್ನಾಗಿ ಪಿಟೀಲು ಸಹಕಾರ ನೀಡಿದರು. ವಿದ್ವಾನ್ ರವಿಶಂಕರ್ ಅವರ ಮೃದಂಗ ಹಾಗೂ ವಿದ್ವಾನ್ ಶ್ರೀಶೈಲ ಅವರ ಘಟಂ ವಾದನ ಅದ್ಭುತವಾಗಿ ಮೂಡಿ ಬಂತು.                                                                                                                                                                                                                                                                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT