ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧವೆಗೂ ಬಂತು ಮುತ್ತೈದೆ ಭಾಗ್ಯ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಳೆ ಮುಗಿದು ವಾರ ಕಳೆದಿತ್ತು. ಮೋಡ ಮರೆಯಾಗಿತ್ತು. ಆಗ ತಾನೇ ಸೂರ್ಯ ಮೇಲೆದ್ದು ಬರುತ್ತಿದ್ದ. ಅಷ್ಟೊತ್ತಿಗಾಗಲೇ ಸಾಲು ಸಾಲಾಗಿ ಮಹಿಳೆಯರು ಅಲ್ಲಿಗೆ ಬರಲಾರಂಭಿಸಿದ್ದರು.ಗುಂಪು ಗುಂಪಾಗಿ ಬರುತ್ತಿದ್ದವರ ಸಂಖ್ಯೆ ಗಂಟೆಯೊಳಗೆ ಸಾವಿರ ದಾಟಿತ್ತು.ಮತ್ತೊಂದು ಗಂಟೆಯಲ್ಲಿ ಎರಡೂವರೆ ಸಾವಿರ ಮೀರಿತ್ತು.

ಮಂಗಳೂರು ದಸರಾ ಸಂದರ್ಭದಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆದ `ವಿಧವಾ ವಿಮೋಚನೆ~ ಕಾರ್ಯಕ್ರಮದ ದೃಶ್ಯವಿದು. ಗಂಡನನ್ನು ಕಳೆದುಕೊಂಡ ಮಹಿಳೆ ಶುಭ ಕಾರ್ಯಕ್ರಮಗಳಲ್ಲಿ ದೂರ ನಿಲ್ಲುವುದು ಏಕೆ? ತನ್ನ ಮನೆಯೊಳಗೆಯೇ ಆಕೆಗೆ ಯಾವುದೇ ಸ್ವಾತಂತ್ರ್ಯವೂ ಇಲ್ಲ ಏಕೆ? ಇಂತಹ ಕಂದಾಚಾರವನ್ನು ಕಿತ್ತೊಗೆಯಬೇಕು ಎಂಬ ಸುದುದ್ದೇಶದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಇವರೆಲ್ಲ ಬರುತ್ತಿದ್ದರು. ಹಣೆಯಲ್ಲಿ ಕುಂಕುಮ ಇರಲಿಲ್ಲ ನಿಜ, ಹೆಚ್ಚಿನವರ ಹಣೆಯಲ್ಲಿ ಕಪ್ಪು ಬೊಟ್ಟು ಇತ್ತು. ಇದು ಅವರ ಜೀವನಕ್ಕೆ ಸಮಾಜ ಅಂಟಿಸಿದ ಕಪ್ಪುಚುಕ್ಕೆಯೂ ಆಗಿತ್ತು.

ಗಂಡನನ್ನು ಕಳೆದುಕೊಂಡಾಕೆ ಸಮಾಜಕ್ಕೆ ಹೊರೆಯಲ್ಲ, ಎಲ್ಲಾ ಶುಭ ಕಾರ್ಯಕ್ರಮಗಳಲ್ಲೂ ಆಕೆ ಪಾಲ್ಗೊಳ್ಳಲು ಅರ್ಹಳು ಎಂಬ ಸಂದೇಶ ಸಾರುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಅದು ಸಾಕಾರಗೊಳ್ಳಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಚಂಡಿಕಾ ಹೋಮವನ್ನು ಅವರೇ ಮಾಡಿಬಿಟ್ಟರು. ಹೋಮಕ್ಕೆ ತುಪ್ಪ ಸುರಿದರು. ಆರತಿ ಬೆಳಗಿದರು. ಆ ಮೂಲಕ ವಿಧವೆ ದೇವರಿಗೆ ಸಲ್ಲಿಸುವ ಹೋಮದಲ್ಲಿ ಪಾಲ್ಗೊಳ್ಳಬಾರದು ಎಂಬ ಕಂದಾಚಾರ ಹೋಮದಲ್ಲಿ ಸುಟ್ಟ ಸೀರೆಯಂತೆಯೇ ಭಸ್ಮವಾಗಿತ್ತು.

ಬಳಿಕ ಅವರು ಕೈಜೋಡಿಸಿದ್ದು ದೇವರ ಮೂರ್ತಿ ಇದ್ದ ಬೆಳ್ಳಿರಥದ ಹಗ್ಗಕ್ಕೆ. ವಿಧವೆಯರು ದೇವರನ್ನು ಮುಟ್ಟಬಾರದು ಎಂಬ ಕಟ್ಟುಪಾಡು ಆ ಕ್ಷಣದಲ್ಲಿ ಕರಗಿತ್ತು. ಗರ್ಭಗುಡಿ ಬಾಗಿಲಲ್ಲೇ ನಿಂತು ಗೋಕರ್ಣನಾಥನಿಗೆ ಆರತಿ ಬೆಳಗಿದರು.

ವಿಧವೆ ಕುಂಕುಮ, ಹೂ, ಗಾಜಿನ ಬಳೆ ತೊಡಬಾರದು ಎಂಬ ಸಂಪ್ರದಾಯದ ಬೇಲಿ ಕೆಡವಿ ಅವರು ಹೊಸಿಲು ದಾಟಿದ್ದರು. ಕುಂಕುಮ ಹಣೆಗಿಟ್ಟರು. ಮಲ್ಲಿಗೆ ಮುಡಿದರು. ಹಸಿರು ಗಾಜಿನ ಬಳೆ ತೊಟ್ಟರು. ಅಲ್ಲಿ ನೆನಪುಗಳ ಮಹಾಪೂರ ಹರಿದಿತ್ತು. ದೂರವಾಗಿದ್ದ ಪತಿಯನ್ನು ನೆನೆದು ದುಃಖ ಮಡುಗಟ್ಟಿತ್ತು.

ಸಮಾಜ ಹೀಯಾಳಿಸುತ್ತಿದ್ದುದನ್ನು ಕಂಡು ಅವರು ಇನ್ನಷ್ಟು ಬೇಸರಗೊಂಡಿದ್ದರು. ಎಲ್ಲಾ ಜನರೆದುರು ಕುಂಕುಮ ಹಚ್ಚಿಕೊಂಡು, ಮಲ್ಲಿಗೆ ಮುಡಿಗೇರಿಸಿದಾಗ ಮೊಗದಲ್ಲಿ ಆತ್ಮವಿಶ್ವಾಸದ ಬೆಳಕು.

`ಸಾಮಾಜಿಕ ಪರಿವರ್ತನೆ ಹರಿಕಾರ ಶ್ರೀ ನಾರಾಯಣ ಗುರುಗಳು ಗೋಕರ್ಣನಾಥನನ್ನು ಸ್ಥಾಪಿಸಿದ ಕುದ್ರೋಳಿಯಲ್ಲೇ ಈ ವಿಮೋಚನೆ ನಡೆಯಬೇಕು. ಅದಕ್ಕೆ ಯಾವ ದೋಷ ಬಂದರೂ ನಾನೇ ಹೊಣೆ ಹೊರುತ್ತೇನೆ~ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಎರಡು ವಾರದ ಹಿಂದೆ ನೀಡಿದ್ದ ಕರೆಗೆ ಭಾರಿ ಸ್ಪಂದನ ವ್ಯಕ್ತವಾಯಿತು.

ಕಾಸರಗೋಡು, ಉಡುಪಿ ಸಹಿತ ದೂರದ ಊರುಗಳಲ್ಲಿ ಮನೆ ಮೂಲೆಯಲ್ಲಿ, ಕತ್ತಲೆ ಕೂಪದಲ್ಲಿ ಕುಳಿತಿದ್ದ ಮಹಿಳೆಯರೂ ಮಂಗಳೂರಿಗೆ ಧಾವಿಸಿ ಬಂದಿದ್ದರು. ಅಲ್ಲೊಂದು ಸ್ಪಷ್ಟ ಸಂದೇಶ ಇತ್ತು. ಮಗನಿಗೋ-ಮಗಳಿಗೋ ವಿವಾಹವಾದರೆ ವಿಧವೆ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೆ ಸಮಾಜ ಬಿಡುವುದಿಲ್ಲ. ಅದನ್ನು ಎದುರಿಸಿ ನಿಂತವರು ಬಹಳ ಕಡಿಮೆ. ವಿಧವೆಗೂ ಒಂದು ಮನಸಿದೆ, ಭಾವನೆಗಳಿವೆ ಎಂದು ಜನ ಗಟ್ಟಿ ಧ್ವನಿಯಲ್ಲಿ ಸಾರಿದಾಗ ಬರಡು ನೆಲದಲ್ಲೂ ಚಿಗುರೊಡೆದ ಭಾವ ವಿಧವೆಯರಲ್ಲಿ ಮೂಡಿತ್ತು.

`ಇದೊಂದು ವಿಧವಾ ವಿಮೋಚನೆ ಕಾರ್ಯಕ್ರಮ, ನಿಮಗೆ ಏನನಿಸಿತು?~ ಎಂಬ ಪ್ರಶ್ನೆಗೆ ಉತ್ತರ ನೀಡುವುದು ಬಹಳ ಭಾವುಕರಾಗಿದ್ದ ಹಲವರಿಗೆ ಕಷ್ಟವಾಯಿತು. ಅದೆಷ್ಟೋ ಮಂದಿಯ ಕಣ್ಣುಗಳಲ್ಲಿ ಸ್ಪಷ್ಟ ಉತ್ತರವಿತ್ತು. ಆದರೆ, ಬಾಯಿಗೆ ಮಾತ್ರ ಬರುತ್ತಿರಲಿಲ್ಲ.
`ಮಹಿಳೆ ಇಂದು ಕಾಲಿಡದ ಕ್ಷೇತ್ರ ಇಲ್ಲ, ಇಂತಹ ಕೆಲಸ ಮೊದಲೇ ನಡೆಯಬೇಕಿತ್ತು.

ಈಗಲಾದರೂ ಅಂತಹ ಪ್ರಯತ್ನವೊಂದು ಆರಂಭವಾಗಿದೆ, ನಾನು 25ನೇ ವರ್ಷದಲ್ಲಿ ವಿಧವೆಯಾದೆ, ಹಲವು ನೋವು ನುಂಗಿಕೊಂಡು ಬದುಕಿದೆ. ನನ್ನಂತಹವರಿಗೆ ಮುಂದಿನ ದಿನಗಳು ಆಶಾದಾಯಕ ಆಗಿರುವುದರಲ್ಲಿ ಸಂಶಯವಿಲ್ಲ~ ಎಂಬ ಸಾಮಾಜಿಕ ಕಾರ್ಯಕರ್ತೆ ಕೃಪಾ ಆಳ್ವ ಅವರ ಮಾತಲ್ಲಿ ಸೂಕ್ಷ್ಮ ಸಂದೇಶವೊಂದು ಅಡಗಿತ್ತು.

`ಪೂಜಾರಿ ಅವರಿಗೆ ಅರಳು-ಮರಳು, ಇಂತಹ ಕಾರ್ಯಕ್ರಮಗಳಿಗೆ ಯಾರು ಬರುತ್ತಾರೆ~ ಎಂದು ಇದಕ್ಕೂ ಮುನ್ನ ಮೂಗು ಮುರಿದವರೇ ಅಧಿಕವಾಗಿದ್ದರು. ಆದರೆ ವಾಸ್ತವ ಮಾತ್ರ ಬೇರೆಯೇ ಆಗಿತ್ತು. ಬಂದವರು ಸಮಾಜ ಕಟ್ಟಳೆಯ ಗೋಡೆಗಳನ್ನು ಕೆಡವಿದ್ದರು.

ಕಟ್ಟುಪಾಡಿನ ಹೊಸಿಲು ದಾಟಿ ಆತ್ಮವಿಶ್ವಾಸದಿಂದ ಮುನ್ನಡೆದಿದ್ದರು. ಪಾಲ್ಗೊಂಡಿದ್ದ 2500 ವಿಧವೆಯರ ಮೊಗದಲ್ಲೂ ಕೃತಾರ್ಥ ಭಾವವಿತ್ತು. ನಾಳೆಗಳನ್ನು ಇನ್ನು ನೆಮ್ಮದಿಯಿಂದ ಕಳೆಯಬಹುದು ಎಂಬ ವಿಶ್ವಾಸವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT