ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಮಂಡಲಕ್ಕೆ ವಜ್ರದ ಒಡವೆ : ಪ್ರಜಾತಂತ್ರ - ಪಾಳೇಗಾರಿಕೆ ನಡುವೆ

Last Updated 16 ಜೂನ್ 2012, 19:30 IST
ಅಕ್ಷರ ಗಾತ್ರ

ವಿಧಾನಮಂಡಲದ ಉಭಯ ಸದನಗಳ ಪೀಠಸ್ಥಾನವಾದ ವಿಧಾನಸೌಧದ ಕಟ್ಟಡಕ್ಕೆ ಕಲಶ ಗೋಪುರಗಳೂ, ರಾಜವೈಭವವನ್ನು ಸಾರುವ ಕಂಬಗಳೂ ಇರುವುದು ಯಾಕೆ ಎಂಬ ಅರ್ಥದ ಒಂದು ಪ್ರಶ್ನೆಯನ್ನು ಒಮ್ಮೆ ಮಹಾನ್ ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಕೇಳಿದ್ದರು.

ಅದಕ್ಕೆ ವಿಧಾನಸೌಧದ ರೂವಾರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರ ಪ್ರತಿಕ್ರಿಯೆ- `ರಾಜಮಹಾರಾಜರ ಸಾರ್ವಭೌಮ ಅಧಿಕಾರ ಪ್ರಜೆಗಳ ಕೈಗೆ ಬಂದಿದೆ. ಇದನ್ನು ಸಾರುವುದಕ್ಕೆ ಒಂದು ವೈಭವೋಪೇತವಾದ ಲೆಜಿಸ್ಲೇಚರ್ (ಶಾಸಕಾಂಗ) ಕಟ್ಟಡದ ಅಗತ್ಯವಿತ್ತು~ ಎನ್ನುವುದಾಗಿತ್ತು.

ಶಾಂತವೇರಿ ಗೋಪಾಲಗೌಡರು ಮತ್ತೆ ಕೆಣಕುತ್ತಾರೆ: `ಮಹಾರಾಜರು ಬೊಟ್ಟಂಗಿ, ಪೇಟ, ನವಿಲುಗರಿ ಮುಂತಾದುವುಗಳನ್ನು ಹಾಕಿಕೊಂಡರೆ ಒಪ್ಪುತ್ತದೆ. ನಾನೂ ಅಧಿಕಾರವಿದೆ ಅಂತ ಬೊಟ್ಟಂಗಿ ಮುಂತಾದುವುಗಳನ್ನು ಹಾಕಿಕೊಂಡು ಹೋಗುತ್ತೇನೆ ಎಂದರೆ ಅದು ಒಪ್ಪುವಂತದ್ದೇ?~. ಮತ್ತೂ ಮುಂದುವರಿದು, `ಮಹಾರಾಜರ ಬದಲು ಮತ್ತೊಮ್ಮೆ ಮಹಾರಾಜರನ್ನು ಪಡೆಯಲು ನಾವು ಪ್ರಜಾಪ್ರಭುತ್ವಕ್ಕಾಗಿ ಹೋರಾಡಲಿಲ್ಲ.
 
ರಾಜರುಗಳಿಗೂ ಮತ್ತು ಜನಗಳಿಗೆ ಸಮಾನವಾದ ಹಕ್ಕುಗಳು ದೊರೆಯುವಂತಹ ಪ್ರಜಾಪ್ರಭುತ್ವವನ್ನು ಗಳಿಸಲು ನಾವು ಹೋರಾಡಿದೆವು~ ಎಂದಿದ್ದರು.
ಮಾರ್ಚ್ 23, 1957ರಂದು ವಿಧಾನಸಭೆಯಲ್ಲಿ ನಡೆದ ಈ ಚರ್ಚೆಯ ಮೂಲದಲ್ಲಿ ಎರಡು ಮನೋಸ್ಥಿತಿಗಳ ಸಂಘರ್ಷವಿದೆ.

ಅದು ವಿಧಾನಮಂಡಲದ 60 ವರ್ಷಗಳ ಚರಿತ್ರೆಯುದ್ದಕ್ಕೂ ಕಂಡು ಬಂದ ಸಂಘರ್ಷ. ಇನ್ನೊಂದರ್ಥದಲ್ಲಿ ಈ ಸಂಘರ್ಷವೇ ವಿಧಾನಮಂಡಲದ ಚರಿತ್ರೆ. ಅದು ನಮಗೆ ರಕ್ತಗತವಾಗಿ ಬಂದ ಪಾಳೇಗಾರಿ ಮನೋಸ್ಥಿತಿ ಮತ್ತು ನಾವು ಒಪ್ಪಿ ಹೊರಗಿನಿಂದ ಆಮದು ಮಾಡಿಕೊಂಡ ಪ್ರಜಾತಂತ್ರ ಮೌಲ್ಯಗಳ ನಡುವಣ ಸಂಘರ್ಷ. 

ಪ್ರಜಾತಂತ್ರದ ಮೇಲೆ ಅಪಾರ ಗೌರವ ಇರಿಸಿಕೊಂಡಿದ್ದರೂ ಕೆಂಗಲ್ ಹನುಮಂತಯ್ಯ ಅವರಿಗೆ ಅಧಿಕಾರದ ಸುತ್ತ ವೈಭವೋಪೇತವಾದ ಸಂಕೇತಗಳಿರುವುದು ಅಸಂಗತ ಎನ್ನಿಸುವುದಿಲ್ಲ. ಮಹಾರಾಜರು ಅನುಭವಿಸಿದ ವೈಭವ ಈಗ ಪ್ರಜೆಗಳು ಅಥವಾ ಅವರ ಪ್ರತಿನಿಧಿಗಳಿಗೆ ಇರಲಿ ಎಂಬುದು ಅವರ ನಿಲುವು. ಆದರೆ ವಾಸ್ತವದಲ್ಲಿ ಪ್ರಜೆಗಳಿಗೆ ಬಂದ ಅಧಿಕಾರ ಮಹಾರಾಜರ ಅಧಿಕಾರ ಅಲ್ಲ.
 
ಮಹಾರಾಜರ ಅಧಿಕಾರದ ಕಲ್ಪನೆಗೆ ಭಾರತದ ಸಂವಿಧಾನ ಅದಾಗಲೇ ಚರಮಗೀತೆ ಹಾಡಿ ಆಗಿತ್ತು. ಹಾಗಾದರೆ ಪ್ರಜೆಗಳಿಗೆ ಬಂದ ಅಧಿಕಾರ ಯಾವುದು? ಅದು ಮಹಾರಾಜರ ಅಧಿಕಾರಕ್ಕಿಂತ ಮಿಗಿಲಾದದ್ದು. ಪ್ರಜೆಗಳಿಗೆ ಬಂದದ್ದು `ಅಧಿಕಾರವನ್ನು ಪ್ರಶ್ನಿಸುವ ಅಧಿಕಾರ~.

ಅಧಿಕಾರವನ್ನು ಆರಾಧಿಸುವ ಭಾರತೀಯ ಕಲ್ಪನೆಗೆ ಅದು ಹೊಸದು. ನಮ್ಮ ವಿಧಾನ ಮಂಡಲ ಆ `ಅಧಿಕಾರವನ್ನು ಪ್ರಶ್ನಿಸುವ ಅಧಿಕಾರದ ಸಂಕೇತ~. ಆದುದರಿಂದ ಪ್ರಜಾತಂತ್ರದ ಸಾಂಸ್ಥಿಕ ಅಭಿವ್ಯಕ್ತಿಯಾದ ವಿಧಾನ ಮಂಡಲದ ಸುತ್ತ ಅರಮನೆಯ ಭವ್ಯತೆಯೂ ದೇವಾಲಯದ ಪ್ರಾವಿತ್ರ್ಯವೂ ಸೇರಿಕೊಂಡರೆ ಕೆಂಗಲ್ ಅವರಷ್ಟು ಉದಾತ್ತರಲ್ಲದ ಮುಂದಿನ ತಲೆಮಾರಿನ  ಶಾಸಕರು ಮತ್ತು ನಾಯಕರು ಅರಸೊತ್ತಿಗೆಯ ಮಂಪರಿನಿಂದ ಹೊರಬರಲಾರರು ಎಂಬುದು ಗೋಪಾಲ ಗೌಡರನ್ನು ಕಾಡಿದ ಆತಂಕ.

ವಿಧಾನ ಮಂಡಲದ ಆರು ದಶಕಗಳ ಚರಿತ್ರೆಯೆಂದರೆ ಗೋಪಾಲಗೌಡರನ್ನು ಅಂದು ಕಾಡಿದ ಆತಂಕ ಬಹುತೇಕ ನಿಜವಾಗಿ ಹೋದ ಕತೆ. ವಿಧಾನಮಂಡಲವಿರುವುದೇ ಅಧಿಕಾರವನ್ನು ಪ್ರಶ್ನಿಸುವುದಕ್ಕೆ ಎಂಬ ಸತ್ಯವನ್ನು ಮರೆತು ತಾನೇ ಅಧಿಕಾರ ಚಲಾಯಿಸುತ್ತ ಸಾಗುತ್ತಿರುವ ಕತೆ.

ಪ್ರಜಾತಂತ್ರದಲ್ಲಿ ಸರಕಾರದ ಆರೋಗ್ಯಕ್ಕೆ ಅಗತ್ಯವಾಗಿರುವ ವಿಧಾನಮಂಡಲದ ಭಯ ಬರಬರುತ್ತಾ ಕುಸಿಯುತ್ತಿರುವ ಕತೆ. ಜತೆಗೆ ಇವೆಲ್ಲವುಗಳ ನಡುವೆಯೂ ಆಗೊಮ್ಮೆ ಈಗೊಮ್ಮೆ ಅದ್ಭುತವಾದ ಸಂಸದೀಯ ಪಟುಗಳು ಕಾಣಿಸಿಕೊಂಡು ಅಧಿಕಾರದ ಅಹಂಕಾರವನ್ನು ಗಾಳಿಗೆ ಹಿಡಿದ ತೂರಿದ ಕತೆ ಕೂಡಾ.
 
ಕರ್ನಾಟಕದ ವಿಧಾನ ಮಂಡಲದ ಕತೆ ಹೆಚ್ಚು ಕಡಿಮೆ ದೇಶದ ಇತರ ರಾಜ್ಯಗಳ ವಿಧಾನ ಮಂಡಲದ ಕತೆಯೂ ಹೌದು. ಅದು ಹೆಚ್ಚು ಕಡಿಮೆ ಸಂಸತ್ತಿನ ಕತೆಯೆಂದರೂ ಸರಿಯೇ. ಆದರೆ ಇದು `ಹಿಂದೆ ವಿಧಾನ ಮಂಡಲದಲ್ಲಿ ಎಲ್ಲವೂ ಸರಿ ಇತ್ತು; ಈಗ ಎಲ್ಲವೂ ಕೆಟ್ಟು ಹೋಗಿದೆ~ ಎನ್ನುವ ಸರಳೀಕೃತ ಸಂಕಥನವಂತೂ ಖಂಡಿತಾ ಅಲ್ಲ.

ಮೊದಲ ತಲೆಮಾರಿನ ದ್ವಂದ್ವಗಳು
ಕೆಂಗಲ್ ಹನುಮಂತಯ್ಯ ಅವರಿಂದ ತೊಡಗಿ ವೀರೇಂದ್ರ ಪಾಟೀಲರ ಮೊದಲ ಸರ್ಕಾರ (1969-1972) ಕುಸಿಯುವ ತನಕದ ಅವಧಿ ಮೊದಲ ತಲೆಮಾರಿನ ನಾಯಕರ ಮತ್ತು ಜನಪ್ರತಿನಿಧಿಗಳ ಕಾಲ. ಈ ಅವಧಿಯ ಶಾಸಕರಲ್ಲಿ ಶೇಕಡಾ 60ಕ್ಕಿಂತಲೂ ಹೆಚ್ಚು ಮಂದಿಯ ಸರಾಸರಿ ವಯಸ್ಸು 40 ವರ್ಷ ಮೀರಿತ್ತು.

ಅಂದರೆ ಇವರೆಲ್ಲಾ ಸ್ವಲ್ಪ ಮಟ್ಟಿಗಾದರೂ ದೇಶದ ಸ್ವಾತಂತ್ರ್ಯ ಚಳವಳಿಯ ಮತ್ತು ಮೈಸೂರಿನಲ್ಲಿ `ಜವಾಬ್ದಾರಿ ಸರ್ಕಾರ~ಕ್ಕಾಗಿ  ನಡೆದ ಚಳವಳಿಯ ಕಾವಿನಲ್ಲಿ ಸಿದ್ಧಗೊಂಡವರು. ಸ್ವಾತಂತ್ರ್ಯ ಸಮರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸಿದವರಿಗೆ ಅಥವಾ ಅದನ್ನು ಬೆಂಬಲಿಸಿದವರಿಗೆಲ್ಲಾ ಪ್ರಜಾತಂತ್ರ ಅರ್ಥವಾಗಿತ್ತು ಅಂತೇನೂ ಇಲ್ಲ.

ಜವಾಬ್ದಾರಿ ಸರ್ಕಾರಕ್ಕೆ ಕೈಯೆತ್ತಿದವರಿಗೆಲ್ಲಾ ಅದರ ಅರ್ಥ ತಿಳಿದಿತ್ತು ಅಂತಲೂ ಹೇಳಲಾಗುವುದಿಲ್ಲ. ಹೆಚ್ಚಿನವರಿಗೆ ಸ್ವರಾಜ್ಯ ಎಂದರೆ ಬ್ರಿಟಿಷರನ್ನು ಕಾಲ್ದೆಗೆಯುವಂತೆ ಮಾಡುವುದು ಎಂಬ ಸೀಮಿತವಾದ ಕಲ್ಪನೆಯಷ್ಟೇ ಇತ್ತು. ಜವಾಬ್ದಾರಿ ಸರ್ಕಾರ ಎಂದರೆ ಮಹಾರಾಜರ ಬದಲಿಗೆ ಕಾಂಗ್ರೆಸ್ ಅಧಿಕಾರ ಪಡೆಯುವುದು ಎಂದಾಗಿತ್ತು.
 
ಮೇಲಾಗಿ ಅಂದಿನ ಬಹುತೇಕ ಕಾಂಗ್ರೆಸ್ ನಾಯಕರು ಜಮೀನ್ದಾರಿ ಹಿನ್ನೆಲೆಯಿಂದ ಬಂದವರು. ಶಾಸಕರಾಗುವುದು ಎಂದರೆ ಅವರ ಪಾಲಿಗೆ ಜಮೀನ್ದಾರಿಕೆ ನಡೆಸುವುದಕ್ಕೆ ಶಾಸನದ ಶ್ರಿರಕ್ಷೆ ಪಡೆದಂತೆ. ಪ್ರಜಾತಂತ್ರಕ್ಕೆ ಮನಸ್ಸು ಸಿದ್ಧವಾಗುವುದಕ್ಕೆ ಮೊದಲೇ ಅದನ್ನು ಸಂವಿಧಾನ ಹೇರಿತ್ತು.
 
ಗಾಂಧೀ, ನೆಹರೂ ಅವರಿಂದ ಪ್ರೇರಿತರಾದ ಮೊದಲ ಶ್ರೇಣಿಯ ರಾಜ್ಯ ಕಾಂಗ್ರೆಸ್ ನಾಯಕರು ಕೂಡಾ ಈ ದ್ವಂದ್ವದಿಂದ ಪೂರ್ತಿ ಹೊರಬಂದಂತೆ ಇರಲಿಲ್ಲ. ಒಂದು ವೇಳೆ ಅಂತಹ ದ್ವಂದ್ವ ಇಲ್ಲದೇ ಹೋಗಿದ್ದರೆ ಕೆಂಗಲ್ ಹನುಮಂತಯ್ಯ ವಿಧಾನಸೌಧದ ವಾಸ್ತುಶಿಲ್ಪವನ್ನು ಇನ್ಯಾವುದೋ ರೀತಿಯಲ್ಲಿ ಕಲ್ಪಿಸಿಕೊಳ್ಳುತ್ತಿದ್ದರು. ಗೊಪಾಲಗೌಡರ ಪ್ರಶ್ನೆಗೆ ಅಲ್ಲಿ ಅವಕಾಶ ಇರುತ್ತಿರಲಿಲ್ಲ.

ಎಷ್ಟಾದರೂ ಒಂದು ಕಾಲದ ವಾಸ್ತುಶಿಲ್ಪ ಆ ಕಾಲದ ಆಳುವವರ ಮನೋಸ್ಥಿತಿಗೆ ಹಿಡಿದ ಕನ್ನಡಿಯೇ ಅಲ್ಲವೇ? ಮೊದಲ ತಲೆಮಾರು ಕಂಡ ವಿಧಾನ ಮಂಡಲದಲ್ಲಿ ವಿರೋಧ ಪಕ್ಷಗಳ ಬಲ ಹೇಳಿಕೊಳ್ಳುವಷ್ಟು ಇರಲಿಲ್ಲ. ಸಂಖ್ಯೆಯಲ್ಲಿ ವಿರೋಧ ಪಕ್ಷದ ಸದಸ್ಯರಿಗಿಂತ ಹೆಚ್ಚು ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದರು.

ವಿರೋಧ ಪಕ್ಷಗಳಿಲ್ಲದೇ ಹೋದರೆ ವಿಧಾನ ಮಂಡಲದಿಂದ ದೊಡ್ಡ ಕೊಡುಗೆಯನ್ನು ನಿರೀಕ್ಷಿಸುವಂತಿಲ್ಲ. 1952 ಮೊದಲ ವಿಧಾನ ಸಭೆಯ ಒಟ್ಟು 99 ಮಂದಿ ಸದಸ್ಯರಲ್ಲಿ ವಿವಿಧ ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆ ಕೇವಲ 14. ಎರಡನೇ ವಿಧಾನಸಭೆಯಲ್ಲಿದ್ದ ಒಟ್ಟು 206 ಮಂದಿ ಸದಸ್ಯರ ಪೈಕಿ ವಿರೋಧಪಕ್ಷದ ಸದಸ್ಯರ ಸಂಖ್ಯೆ ಕೇವಲ 22 ಆದರೆ 38 ಮಂದಿ ಪಕ್ಷೇತರ ಶಾಸಕರಿದ್ದರು.
 
ವಿರೋಧ ಪಕ್ಷಗಳ ಶಾಸಕರ ಸಂಖ್ಯೆ ಗಣನೀಯವಾಗಿ ಏರುವುದು 1967ರ ನಂತರ. ಮೊದಲ ಮೂರು ವಿಧಾನ ಸಭೆಯಲ್ಲಿ ಕಾಂಗ್ರೆಸ್‌ನೊಳಗಣ ವಿರೋಧಿ ಬಣಗಳು ಅನಧಿಕೃತ ವಿರೊಧಪಕ್ಷಗಳಂತೆ ವರ್ತಿಸಿದ್ದವು.

1958ರಲ್ಲಿ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ನಡೆದ ಲಾಕಪ್ ಸಾವಿನ ಪ್ರಕರಣವೊಂದು ವಿಧಾನಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಲಾಕಪ್‌ನಲ್ಲಿ ಮೃತಪಟ್ಟ ಮಹಿಳೆ ಮುನಿಯಮ್ಮನನ್ನು ಆಕೆ ಕೆಲಸ ಮಾಡುತ್ತಿದ ಶ್ರಿಮಂತರ ಮನೆಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಸಾಯಹೊಡೆಯಲಾಗಿತ್ತು.

ಆಳುಗಳನ್ನು ಹೇಗಾದರೂ ಬಡಿಯಬಹುದು ಎಂಬ ಪೊಲೀಸ್ ಮನಸ್ಥಿತಿ ಅಂದಿಗೂ ಇಂದಿಗೂ ಒಂದೇ. ಅಧಿಕಾರದ ಅಂತಹ ಅತಿಕ್ರಮಣಗಳನ್ನು ಹದ್ದುಬಸ್ತಿನಲ್ಲಿಡುವುದಕ್ಕಲ್ಲವೇ ವಿಧಾನಮಂಡಲ ಇರುವುದು. ವಿಧಾನ ಸಭೆಯಲ್ಲಿ ನಿಜಲಿಂಗಪ್ಪ ಹೇಳಿದರು: `ಪೊಲೀಸರು ಉದ್ದೇಶಪೂರ್ವಕವಾಗಿ ಆಕೆಯನ್ನು ಕೊಲೆ ಮಾಡಿಲ್ಲ.

ಏನೋ ಅಚಾತುರ್ಯ ನಡೆದುಹೋಗಿದೆ. ಇನ್ನು ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳೋಣ~. ಇದನ್ನು ಕೇಳಿ ಸದನಕ್ಕೆ ಸದನವೇ ಕೆರಳಿತು. ಹೆಚ್ಚು ಕೆರಳಿದವರು ಕಾಂಗ್ರೆಸ್ ಒಳಗಿನ ಭಿನ್ನಮತೀಯರು. ಅವರಿಗೆ ನಿಜಲಿಂಗಪ್ಪನವರ ಉತ್ತರ ಹೊಸ ಅಸ್ತ್ರ ಒದಗಿಸಿತು.

ನಿಜಲಿಂಗಪ್ಪ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು. ನಿಜಲಿಂಗಪ್ಪನವರು ನೀಡಿದ ಉತ್ತರ ಅವರ ಮುಗ್ಧತೆ ಮತ್ತು ಒಳ್ಳೆಯತನದ ಪ್ರತೀಕವೇ ಇರಬಹುದು. ಅದು ಪ್ರಜಾತಂತ್ರಕ್ಕೆ ಒಪ್ಪುವ ಉತ್ತರ ಆಗಿರಲಿಲ್ಲ. ಅದು ಮೊದಲ ತಲೆಮಾರಿನ ದ್ವಂದ್ವಕ್ಕೊಂದು ನಿದರ್ಶನ.

ಅರಸು ಮತ್ತು ಆಳರಸುಗಳು
1972ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗುವುದರೊಂದಿಗೆ ವಿಧಾನಮಂಡಲದಲ್ಲಿ ಎರಡನೇ ತಲೆಮಾರಿನ ಅಧಿಪತ್ಯ ಆರಂಭವಾಗುತ್ತದೆ. ದೇವರಾಜ ಅರಸು ರಾಜ್ಯ ರಾಜಕೀಯದ ಮೇಲೆ ಪ್ರಬಲ ಕೋಮುಗಳಿಗೆ ಇದ್ದ ಹಿಡಿತ ಸಡಿಲಿಸಿ ಅಧಿಕಾರ ಹಿಂದುಳಿದವರತ್ತ ಪ್ರವಹಿಸುವ ಹಾಗೆ ಮಾಡಿದರು ಮತ್ತು ಆ ಮೂಲಕ ವಿಧಾನಮಂಡಲದ ಚಹರೆ ಬದಲಿಸಿದರು ಎಂದು ಇತಿಹಾಸ ದಾಖಲಿಸುತ್ತದೆ.

ವಿಧಾನ ಮಂಡಲಕ್ಕೆ ಸಂಬಂಧಪಟ್ಟಂತೆ ಅರಸುಯುಗ ಕಂಡ ಬದಲಾವಣೆ ಇಷ್ಟು ಮಾತ್ರವಲ್ಲ. ಅರಸು ಅವರ ಕಾಲಕ್ಕೆ ವಿಧಾನ ಮಂಡಲದಲ್ಲಿ ಒಂದು ಸದೃಢವಾದ ವಿರೋಧಪಕ್ಷ ತಲೆ ಎತ್ತಿತ್ತು. ಜಮೀನ್ದಾರೇತರ ಹಿನ್ನೆಲೆಯಿಂದ ಬಂದ ಹಲವರು ಅದಾಗಲೇ ವಿಧಾನಸಭೆಯಲ್ಲಿದ್ದರು.

ಅರಸು ಅವರು ಕರೆತಂದ ಹಿಂದುಳಿದ ಶಾಸಕರ ಗಡಣ ವಿಧಾನಮಂಡಲದ ಪ್ರಜಾತಾಂತ್ರಿಕ ಮೌಲ್ಯಗಳನ್ನು ಹೆಚ್ಚಿಸಲಿಲ್ಲ. ಅದು ಬಹುಬೇಗ ಆಳರಸುತನದ ಹಾದಿ ಹಿಡಿಯಿತು. ಅರಸು ಕಾಲದ ಘಟನಾವಳಿಗಳನ್ನು ಹತ್ತಿರದಿಂದ ನೋಡಿ ದಾಖಲಿಸಿದ ಪತ್ರಕರ್ತ ದಿ. ವಡ್ಡರ್ಸೆ ರಘುರಾಮ ಶೆಟ್ಟಿಯವರು ಹೇಳುವಂತೆ ಆಗ ಆಡಳಿತ ಪಕ್ಷದಲ್ಲಿದ್ದ ಸುಮಾರು 160 ಶಾಸಕರಲ್ಲಿ ಅರಸು ಅವರ ಕನಸನ್ನು ಅರ್ಥಮಾಡಿಕೊಂಡವರ ಸಂಖ್ಯೆ ಹೆಚ್ಚೆಂದರೆ 20 ಮಂದಿ ಮಾತ್ರ.
 
ಅರಸು ಭರವಸೆಯಿಂದ ಕರೆತಂದವರು ಅರಸು ಅವರಿಗೇ ಹೊರೆಯಾದರು ಎನ್ನುತ್ತಾರೆ ರಘುರಾಮ ಶೆಟ್ಟಿ. ಆದರೆ ಅರಸು ಕಾಲದ ವಿರೋಧಪಕ್ಷ ಸಂಪೂರ್ಣ ವಿಜೃಂಭಿಸಿತು. ವಿಧಾನಮಂಡಲದ ಕಾರ್ಯಕ್ಷಮತೆ ಹೆಚ್ಚಿತು. ಅದಕ್ಕೆ ಒಂದು ಉದಾಹರಣೆ, ಅರಸು ಕಾಲದ ಭೂಸುಧಾರಣಾ ಕಾಯ್ದೆ.

ಅರಸು ಅವರನ್ನು ಇಂದಿಗೂ ರಾಜ್ಯ ನೆನೆಯುವುದು ಅವರು ಜಾರಿಗೆ ತಂದ ಕ್ರಾಂತಿಕಾರಿ ಭೂಸುಧಾರಣಾ ಕಾಯ್ದೆಗಾಗಿ. ಆದರೆ ಆ ಕಾಯ್ದೆಯನ್ನು ಕ್ರಾಂತಿಕಾರಿಯನ್ನಾಗಿ ಮಾಡಿದ್ದು ಅಂದಿನ ವಿಧಾನ ಮಂಡಲ ಎನ್ನುವುದು ಎಲ್ಲೂ ದಾಖಲಾಗದ ಸತ್ಯ. ಆಗ ವಿಧಾನಸಭೆಯ ಸದಸ್ಯರಾಗಿದ್ದ ಬಿ.ವಿ. ಕಕ್ಕಿಲ್ಲಾಯ (ಸಿಪಿಐ) ತಮ್ಮ ಆತ್ಮಚರಿತೆಯಲ್ಲಿ ಬರೆದಂತೆ ಅರಸು ಸರಕಾರ ಮಂಡಿಸಿದ ಭೂಸುಧಾರಣಾ ಕಾಯ್ದೆ ಸಪ್ಪೆಯಾಗಿತ್ತು.
 
ಹಿಂದಿನ ಕಾಯ್ದೆಗಳಿಗಿಂತ ಏನೇನೂ ಭಿನ್ನವಾಗಿರಲಿಲ್ಲ. ವಿಧಾನ ಸಭೆಯಲ್ಲಿ ಇದನ್ನು ಕಕ್ಕಿಲ್ಲಾಯ ಅವರ ಜತೆ ಸಮಾಜವಾದಿ ಪಕ್ಷದ ಎಸ್.ಬಂಗಾರಪ್ಪ, ಕೋಣಂದೂರು ಲಿಂಗಪ್ಪ ಮತ್ತು ಕಾಗೋಡು ತಿಮ್ಮಪ್ಪ ತೀವ್ರವಾಗಿ ವಿರೋಧಿಸುತ್ತಾರೆ. ಸರಕಾರ ಅದನ್ನು ವಿಧಾನಮಂಡಲದ ಜಂಟಿ ಸದನಕ್ಕೊಪ್ಪಿಸುತ್ತದೆ.

ಸಮಿತಿಯ ಶಿಫಾರಸ್ಸುಗಳು ಅದನ್ನು ಕ್ರಾಂತಿಕಾರಿ ಕಾಯ್ದೆಯನ್ನಾಗಿಸುತ್ತದೆ. ಸಮಿತಿಯಲ್ಲಿದ್ದ ಹೊಸಬಗೆಯ ಚಿಂತನೆಯುಳ್ಳ ಕೆಲ ಶಾಸಕರಿಂದ ಇದು ಸಾಧ್ಯವಾಯಿತು ಎಂದು ಬರೆಯುತ್ತಾರೆ ಕಕ್ಕಿಲ್ಲಾಯ. ಅಂದರೆ ವಿಧಾನಮಂಡಲವನ್ನು ಪಾಳೇಗಾರಿಕೆಯ ಮನೋಭಾವದಿಂದ ಮುಕ್ತಿಗೊಳಿಸುವ ಹೊಸ ಚಿಂತನೆಯೊಂದು ಆಗ ಕಾಣಿಸಿಕೊಂಡಂತಿತ್ತು.

ದುರಂತ ಎಂದರೆ ದೇವರಾಜ ಅರಸು ತನ್ನ ಸಾಮಾಜಿಕ ಕ್ರಾಂತಿಗೆ ಬೇಕಾದ ರಾಜಕೀಯ ಬೆಂಬಲಗಳಿಸಲು ವಿಧಾನಮಂಡಲದಲ್ಲಿ ಆಗಷ್ಟೇ ಮೇಲೆದ್ದ ಆ ಹೊಸ ಅಲೆಯನ್ನು ಹೊಸಕಿದರು. ಅಧಿಕಾರ ಮತ್ತು ಅಧಿಕಾರವನ್ನು ಪ್ರಶ್ನಿಸುವ ಅಧಿಕಾರ ಇವೆರಡರ ವ್ಯತ್ಯಾಸ ತಿಳಿದಿದ್ದ ವಿರೋಧ ಪಕ್ಷದ ನಾಯಕರನ್ನು ಅರಸು ಅಧಿಕಾರ ನೀಡಿ ಸೆಳೆದುಕೊಂಡರು.

ಶಾಸಕರನ್ನು ರಾಜಕೀಯ ಉದ್ಯಮಿಗಳನ್ನಾಗಿ ಮಾಡುವ ಹೊಸ ಪರ್ವ ಕೂಡಾ ಅರಸು ಅವರ ಕಾಲದಲ್ಲಿ ಪ್ರಾರಂಭವಾಗುತ್ತದೆ. ಇದು ಕೇವಲ ಭ್ರಷ್ಟಾಚಾರದ ವಿಚಾರವಲ್ಲ. ಭ್ರಷ್ಟಾಚಾರ ಹಿಂದಿನಿಂದಲೂ ಇತ್ತು.

ದೇವರಾಜ ಅರಸು ಒಂದು ಹೆಜ್ಜೆ ಮುಂದೆ ಹೋಗಿ ಶಾಸಕರೆಲ್ಲಾ ಆಳುವ ಪಕ್ಷದ ಬಾಲಂಗೋಚಿಗಳಾಗಿರುವಂತೆ ಮಾಡುವ ಹೊಸ ವಿಧಾನಗಳನ್ನು ಅವಿಷ್ಕರಿಸಿದರು. ಸ್ವತಃ ಅರಸು ಅವರೇ ಇದನ್ನು ಒಪ್ಪಿಕೊಂಡದ್ದನ್ನು ಲಂಡನ್ ವಿಶ್ವವಿದ್ಯಾನಿಲಯದ ಜೇಮ್ಸ ಮೇನರ್ ಮತ್ತು ಎಕಾನಾಮಿಕ್ಸ್ ಟೈಮ್ಸನ ಮಾಜಿ ಸಂಪಾದಕ ಇ. ರಾಘವನ್ ಕರ್ನಾಟಕ ರಾಜಕೀಯದ ಮೇಲೆ ಇತ್ತೀಚೆಗೆ ಹೊರತಂದ ಪುಸ್ತಕದಲ್ಲಿ ದಾಖಲಿಸುತ್ತಾರೆ.

 ದೇವರಾಜ ಅರಸರ ಈ ಹೇಳಿಕೆಯನ್ನು ನೋಡಿ:ಭ್ರಷ್ಟಾಚಾರ ನಾನು ಹುಟ್ಟು ಹಾಕಿದ್ದಲ್ಲ. ಅದು ಹಿಂದಿನಿಂದಲೂ ಇತ್ತು. ಆದರೆ ಒಂದು ವಿಚಾರ ಒಪ್ಪಿಕೊಳ್ಳುತ್ತೇನೆ.
ನಾನು ಶಾಸಕರಿಗೆ ಮಾಮೂಲಿ ನೀಡುವಂತೆ ಕೆಲ ಅಧಿಕಾರಿಗಳಿಗೆ ತಾಕೀತು ಮಾಡಿದ್ದೆ. ಅವರೆಲ್ಲಾ ಹೇಗಿದ್ದರೂ ಭ್ರಷ್ಟರೇ.

ಆ ಭ್ರಷ್ಟ ಹಣದ ಒಂದಂಶವನ್ನು ನಾನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡೆ. ನಿಮಗೆ ಇದು ಅಸಂಗತ ಎನ್ನಿಸಬಹುದು. ನನಗೂ ಹಾಗೆಯೇ ಎನಿಸುತ್ತದೆ. ಆದರೆ ನನಗದು ಅನಿವಾರ್ಯವಾಗಿತ್ತು. ರಾಜಕೀಯದ ಸ್ಥಾಪಿತ ಹಿತಾಸಕ್ತಿಗಳನ್ನು ಮಟ್ಟಹಾಕಲು ನನಗೆ ಶಾಸಕರ ಬೆಂಬಲದ ಅಗತ್ಯ ಇತ್ತು.

ಎಲ್ಲಾ ಶಾಸಕರೂ ನನ್ನ ತತ್ವಾದರ್ಶ ಅರ್ಥಮಾಡಿಕೊಂಡು ನನಗೆ ಬೆಂಬಲ ನೀಡುವವರು ಅಲ್ಲ ನೋಡಿ.” ದೇವರಾಜ ಅರಸರ ಕಾಲದಲ್ಲಿ ವಿಧಾನ ಮಂಡಲದ ಮೇಲೆ ಆ ತನಕ ಇದ್ದ ಒಂದಷ್ಟು ಗಾಂಧಿ-ನೆಹರು ಪ್ರಭಾವ ಕೊನೆಗೊಂಡು ಇಂದಿರಾ ರಾಜಕೀಯದ ಪ್ರಭಾವ ಪ್ರಾರಂಭವಾಗುತ್ತದೆ. ಮುಂದಕ್ಕೆ ಇದು ಉಳಿದಿದ್ದ ಅಲ್ಪಸ್ವಲ್ಪ ಲೋಹಿಯಾ ಪ್ರಭಾವವನ್ನು ಕೊಲ್ಲುತ್ತದೆ.

ಪ್ರಜಾತಂತ್ರದ ಸಾಂಸ್ಥಿಕ ಶಕ್ತಿಗಳನ್ನೆಲ್ಲಾ ಒಳಗಿನಿಂದ ದುರ್ಬಲಗೊಳಿಸಿದ ಇಂದಿರಾ ಗಾಂಧಿಯವರ ರಾಜಕೀಯ ದೇವರಾಜ ಅರಸರ ಮೂಲಕ ಗುಪ್ತಗಾಮಿನಿಯಾಗಿ ಕರ್ನಾಟಕ ವಿಧಾನ ಮಂಡಲ ಪ್ರವೇಶಿಸಿದ್ದು ಇನ್ನೂ ಅಲ್ಲೇ ಉಳಿದಿದೆ.
 
ಜೇಮ್ಸ ಮೇನರ್ ಪುರೋಗಾಮಿ ವ್ಯಾವಹಾರಿಕತೆ (progressive pragmatism)  ಎಂದು ಕೊಂಡಾಡಿದ ಅರಸು ರಾಜಕೀಯದ ಪ್ರಭಾವ ವಿಧಾನಮಂಡಲದಲ್ಲಿ ಅರ್ಥಿಕವಾಗಿ ಪ್ರಬಲವಾದ ಹೊಸ ಪಾಳೇಗಾರಿಕೆಯೊಂದನ್ನು ಸೃಷ್ಟಿಸಿತು. ಮುಂದಿನ ತಲೆಮಾರಿನವರಿಗೆ ಈ ಪ್ರಭಾವದಿಂದ ಹೊರ ಬರಲು ಸಾಧ್ಯವಾಗಿಲ್ಲ.

ಶಾಸಕ ಶಾಸಕನಾಗದೆ ಕೇವಲ ಜನಪ್ರತಿನಿಧಿಯಾಗಿ ಉಳಿಯುವ ಶಕೆಯೊಂದು ಅಂದಿನಿಂದ ಬಲಗೊಳ್ಳತೊಡಗಿತು.ಶಾಸನ ಮಾಡುವ ಪ್ರಕಿಯೆಯಲ್ಲಿ ಭಾಗಿಯಾಗದೆ, ತನಗಿರುವ ಪ್ರಶ್ನಿಸುವ ಅಧಿಕಾರವನ್ನು ಬಳಸಿಕೊಳ್ಳದೆ ಸರಕಾರದೊಂದಿಗೆ ಶಾಮೀಲಾಗುವ ಶಾಸಕ ಕೇವಲ ಜನಪ್ರತಿನಿಧಿ ಎಂದು ಮಾತ್ರ ಕರೆಯಬಹುದಾದ ದಲ್ಲಾಳಿ.

ಇಂತಹ ಜನಪ್ರತಿನಿಧಿಗಳು ಸರ್ಕಾರದಿಂದ ಸಿಕ್ಕಷ್ಟು ಬಾಚಿ ತನ್ನ ಕ್ಷೇತ್ರದಲ್ಲಿ `ತನ್ನವರಿಗೆ~ ಹಂಚುತ್ತಾರೆ. ಅದನ್ನೇ `ಅಭಿವೃದ್ಧಿ ಕೆಲಸ~ ಅಂತ ಕರೆಯುತ್ತಾರೆ. ಹಾಗಾದರೆ ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಕೆಲಸಗಳಿಗೂ ಸಂಬಂಧ ಇಲ್ಲವೆ? ಖಂಡಿತಾ ಇದೆ. ಸಂಪನ್ಮೂಲಗಳು ಎಂದಿಗೂ ಸಾಕಷ್ಟಿರುವುದಿಲ್ಲ ಎನ್ನುವ ಸ್ಥಿತಿಯಲ್ಲಿ ಯಾವ ಕ್ಷೇತ್ರದಲ್ಲಿ ಏನಾಗಬೇಕು ಎನ್ನುವುದು ಆದ್ಯತೆಯ ಮೇಲೆ ನಿರ್ಣಯವಾಗಬೇಕು.

ಆದ್ಯತೆಯನ್ನು ಸ್ಪಷ್ಟಪಡಿಸುವ ನಿಯಮಗಳಿರಬೇಕು. ಜನಪ್ರತಿನಿಧಿಗಳಾದವರು ಅಂತಹ ನಿಯಮಗಳಿಗೆ ಒತ್ತಾಯಿಸಿ- ಅವುಗಳ ಅನುಷ್ಠಾನವಾದಾಗ ಸರ್ಕಾರದ ಮೇಲೆ ಪ್ರಹಾರ ಮಾಡಿದರೆ ಶಾಸಕರಾಗುತ್ತಾರೆ. ಇದು ಆಗುತ್ತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಶಿವಮೊಗ್ಗ-ಶಿಕಾರಿಪುರಕ್ಕೆ ಆದ್ಯತೆ ನೀಡುತ್ತಾರೆ.

ಕುಮಾರಸ್ವಾಮಿ ಎಲ್ಲವನ್ನೂ ರಾಮನಗರದೆಡೆಗೆ ಒಯ್ಯುತ್ತಾರೆ. ರೇವಣ್ಣ ಸಿಕ್ಕಿದ್ದೆಲ್ಲವನ್ನೂ ಹೊಳೆನರಸೀಪುರಕ್ಕೆ ಸಾಗಿಸುತ್ತಾರೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಸಚ್ಚಾರಿತ್ರ್ಯದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ನಡೆಸಿದ ಆಪರೇಶನ್ ಕಮಲದ ಫಲಾನುಭವಿ ಶಾಸಕರು `ವಿರೋಧ ಪಕ್ಷದಲ್ಲಿದ್ದರೆ ನಮ್ಮ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಆಡಳಿತ ಪಕ್ಷ ಸೇರಿದ್ದೇವೆ~ ಎಂದದ್ದಿದೆಯಲ್ಲಾ, ಅದು ಕರ್ನಾಟಕ ವಿಧಾನಮಂಡಲ 60 ವರ್ಷಗಳಲ್ಲಿ ಕಂಡ ಅತ್ಯಂತ ನಿಕೃಷ್ಟ ಕ್ಷಣ.

ಇದರಲ್ಲಿ ಒಂದಿನಿತು ಸತ್ಯಾಂಶ ಇದ್ದರೂ ವಿಧಾನಮಂಡಲಕ್ಕೆ ಲಕ್ವ ಬಡಿದಿದೆ ಎಂತಲೇ ಭಾವಿಸಬೇಕಾಗುತ್ತದೆ. ಒಂದು ನೀತಿ, ನಿಯಮ ಇಲ್ಲದೆ ತನಗೆ ಓಟು ನೀಡುವವರಿಗೆ ಮಾತ್ರ ಹಂಚುವುದು ಪಾಳೇಗಾರಿಕೆಯ ಇನ್ನೊಂದು ಮುಖ. ಇಂಗ್ಲಿಷ್‌ನಲ್ಲಿ patronage, clientelism ಇತ್ಯಾದಿ ಶಬ್ದಗಳಿಂದ ಕರೆಯಲ್ಪಡುವ ಈ ಮನಸ್ಥಿತಿಗೆ ಪ್ರಜಾತಂತ್ರದಲ್ಲಿ ಸ್ಥಾನ ಇರಬಾರದು.

ವಿಧಾನಮಂಡಲ ಸದಸ್ಯರ ಅನುದಾನ ಎಂಬ ಅಸಂಗತ, ಅಸಂವಿಧಾನಿಕ ಯೋಜನೆ ಕೂಡಾ ಪಾಳೇಗಾರಿಕೆಯ ಮೂರ್ತರೂಪ. ಸರ್ಕಾರ ಮಾಡಬೇಕಾದುದನ್ನು ಶಾಸಕಾಂಗವೇ ಮಾಡುತ್ತಿರುವ ವಿಕೃತಿ. ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸೋತ ಪ್ರದೇಶಗಳಿಗೆ ಮತ್ತೆ ಕಾಲಿಡಲಾರೆ ಎನ್ನುವ ಯಡಿಯೂರಪ್ಪನವರಲ್ಲಿ, ನಿಮ್ಮ ಬೇಡಿಕೆ ಈಡೇರದಿದ್ದರೆ ವಿಶ್ವವಿದ್ಯಾನಿಲಯಕ್ಕೆ ಬೀಗಹಾಕಿಬಿಡಿ ಎಂದು ಮುಷ್ಕರ ನಿರತ ಮೈಸೂರು

ಮುಕ್ತ ವಿ.ವಿ.ಯ ನೌಕರರಿಗೆ ತಾಕೀತು ಮಾಡಿದ ಎಚ್.ಡಿ. ಕುಮಾರಸ್ವಾಮಿಯವರಲ್ಲಿ, ನಿಯಮ ಪ್ರಕಾರ ಕರ್ತವ್ಯ ನಿರ್ವಹಿಸಿದ ವಿಧಾನಸಭೆಯ ಮಾರ್ಶಲ್ ಮೇಲೆ ಕೈಮಾಡಿದ ಸಿದ್ದರಾಮಯ್ಯನವರಲ್ಲಿ ನಾವು ಕಾಣುವುದು ಪ್ರಜಾತಂತ್ರದ ಮುಖವಾಡ ತೊಟ್ಟುಕೊಂಡ ಹೊಸ ಪಾಳೇಗಾರಿಕೆಯ ಮನೋಸ್ಥಿತಿಯನ್ನು.

ಹಳ್ಳಿಗಾಡಿನಿಂದ ಬಂದ ದೇವೇಗೌಡರಿಗಾಗಲೀ, ಜೆ.ಹೆಚ್. ಪಟೇಲರಿಗಾಗಲೀ ಅರ್ಥವಾದಷ್ಟಾದರೂ ಪ್ರಜಾತಂತ್ರ, ನಂತರದ ತಲೆಮಾರಿನ ಕುಮಾರಸ್ವಾಮಿಯವರಿಗಾಲೀ, ಸಿದ್ದರಾಮಯ್ಯ ಅವರಿಗಾಗಲೀ ಅರ್ಥವಾಗಿಲ್ಲ. ಗೌಡ-ಪಟೇಲರು ಪ್ರಜಾತಂತ್ರದ ಹಳೇ ಪಳೆಯುಳಿಕೆಗಳಂತೆಯೂ, ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಮುಂತಾದವರು ಹೊಸ ಪಾಳೇಗಾರಿಕೆ ಮನೋಸ್ಥಿತಿಯ ತುಂಡುಗಳಂತೆಯೂ ಕಂಡು ಬರುತ್ತಾರೆ.

ಉದಾರಿಕರಣೋತ್ತರ ವಿಧಾನಮಂಡಲ
ಮಾಜೀ ಮಂತ್ರಿ, ಸಂಸತ್ ಸದಸ್ಯ ಎಚ್. ವಿಶ್ವನಾಥ್ ತಮ್ಮ ಆತ್ಮಚರಿತ್ರೆಯಲ್ಲಿ (ಹಳ್ಳಿಹಕ್ಕಿಯ ಹಾಡು) ಎರಡು ಬಾರಿ ಮಧುಗಿರಿ ಶಾಸಕರಾಗಿ ನಿಧನ ಹೊಂದಿದವರೊಬ್ಬರ ಮಗ ಶಾಸಕರ ಭವನದಲ್ಲಿ ಕಾರು ತೊಳೆದು ಜೀವನ ಸಾಗಿಸುತ್ತಿದ್ದ ವಿಚಾರ ಬರೆದಿದ್ದಾರೆ.

ಇದು ಮುಂದೆ ಮಾಜೀ ಶಾಸಕರಿಗೆ ಪಿಂಚಣಿ ಸೌಲಭ್ಯ ಜಾರಿಗೆ ತರಲು ಪ್ರೇರೇಪಣೆ ನೀಡುತ್ತದೆ. `ಈಗಂತೂ ಚುನಾಯಿತ ಪ್ರತಿನಿಧಿಗಳ ಸೇವೆಗಾಗಿ ಕೊಡುತ್ತಿದ್ದ ಗೌರವಧನ ಸಂಬಳವಾಗಿದೆ. ಅತಿಯೆನಿಸುವಷ್ಟು ಸವಲತ್ತುಗಳಿವೆ...~ ಎಂದು ವಿಶ್ವನಾಥ್ ಬರೆಯುತ್ತಾರೆ.
 
ಅದು ನಿಜ. ಇತ್ತೀಚೆಗೆ ಬಿಜೆಪಿಯ ಎಂಎಲ್‌ಎ ಸಂಪಂಗಿಯವರಿಗೆ ಲಂಚ ಪ್ರಕರಣದಲ್ಲಿ ಜೈಲಾದಾಗ ಟೈಮ್ಸ ಆಫ್ ಇಂಡಿಯಾ ಪ್ರಕಟಿಸಿದ ವರದಿಯಲ್ಲಿ ಒಂದು ಸಾಲು ಗಮನ ಸೆಳೆಯಿತು: `ಈ ತನಕ ಶಾಸಕರಾಗಿ ಸಂಪಂಗಿ ದಿನಕ್ಕೆ ರೂ. 6667 ಸಂಬಳ ಪಡೆಯುತಿದ್ದರು (ತಿಂಗಳಿಗೆ 2 ಲಕ್ಷ ರುಪಾಯಿ). ಇನ್ನು ಮುಂದೆ ಜೈಲಿನಲ್ಲಿ ಕೈದಿಯಾಗಿ ಅವರು ದಿನಕ್ಕೆ 30 ರೂ. ಸಂಪಾದಿಸಲಿದ್ದಾರೆ.~

ಒಂದು ಕಾಲಕ್ಕೆ ಪಿಂಚಣಿಯನ್ನೂ ಪಡೆಯದ ಶಾಸಕರು ಇಂದು ಆಧುನಿಕ ಕಾರ್ಪೋರೇಟ್ ಶೈಲಿಯ ಸಂಬಳ ಸೇರಿದಂತೆ ಲ್ಯಾಪ್ ಟಾಪ್, ಐ ಪ್ಯಾಡ್ ಮುಂತಾದ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಅನುಭವಿಸುತ್ತಾ ಉದಾರಿಕರಣೋತ್ತರ ಭಾರತವನ್ನು ಪೂರ್ಣಪ್ರಮಾಣದಲ್ಲಿ ಪ್ರತಿನಿಧಿಸುತ್ತಾರೆ.

ಜತೆಗೆ ಉದಾರ ಅರ್ಥನೀತಿ ತೆರೆದಿರಿಸಿದ ಅವಕಾಶಗಳನ್ನು ಬಳಸಿ ಭೂವ್ಯವಹಾರ, ಗಣಿವ್ಯವಹಾರ ಇತ್ಯಾದಿ ಆರ್ಥಿಕ ವ್ಯವಹಾರಗಳಲ್ಲಿ ದಲ್ಲಾಳಿಗಿರಿ ನಡೆಸುತ್ತಾರೆ. ಹೀಗೆ ಆರ್ಥಿಕವಾಗಿ ಕಾಲದೊಂದಿಗೆ ಹೆಜ್ಜೆ ಹಾಕಲು ಕಲಿತ ವಿಧಾನಮಂಡಲದ ಬಹುತೇಕ ಸದಸ್ಯರು ರಾಜಕೀಯವಾಗಿ ಮಾತ್ರ 16ನೇ ಶತಮಾನದ ಮೊಗಲರ ಕಾಲದಲ್ಲಿ ಸ್ತಬ್ಧವಾಗಿ ನಿಂತು ಬಿಟ್ಟಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ನಡೆದು ಹೋದದ್ದು ಮುಂದುವರಿದರೆ ವಿಧಾನ ಮಂಡಲದ ಭವಿಷ್ಯ ಇರುವುದು ಎಲ್ಲವನ್ನೂ ಖರೀದಿಸಬಹುದು ಮತ್ತು ಎಲ್ಲವನ್ನೂ ಮಾರಬಹುದು ಎಂಬ ಹೊಸ ರಾಜಕೀಯ ಉಪಭೋಗಿ ಸಂಸ್ಕೃತಿಯನ್ನು (political consumerism) ಮೈಗೂಡಿಸಿಕೊಂಡಿರುವ ತಲೆಮಾರೊಂದರ ಕೈಯ್ಯಲ್ಲಿ.

ವಿಧಾನಮಂಡಲ ಆಂತರಿಕವಾಗಿ ಶಿಥಿಲವಾಗುತ್ತಿರುವುದು ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಎಲ್ಲಾ ವಿಕಾರಗಳ ನಡುವೆಯೂ ಸದನ ಸೇರುತ್ತದೆ, ಚರ್ಚೆಗಳು ನಡೆಯುತ್ತಿವೆ. ವಿರೋಧ ಪಕ್ಷಗಳು ಜೀವಂತವಾಗಿರುವಂತೆ ಕಾಣುತ್ತಿವೆ.

ಎಲ್ಲ ಮುಗಿದೇ ಹೋಯಿತು ಎನ್ನುವಾಗ ಅಲ್ಲೊಬ್ಬ ಇಲ್ಲೊಬ್ಬ ಎಂ.ಸಿ. ನಾಣಯ್ಯ, ಎಚ್.ಕೆ. ಪಾಟೀಲ್, ಡಿ.ಬಿ.ಚಂದ್ರೇಗೌಡ, ವೈ.ಎಸ್.ವಿ.ದತ್ತ, ಬಿ.ಎಲ್. ಶಂಕರ್, ರಮೇಶ್ ಕುಮಾರ್, ಮಾಧುಸ್ವಾಮಿ, ಎಸ್. ಸುರೇಶ್ ಕುಮಾರ್, ಬಿ. ಸೋಮಶೇಖರ್, ವಾಟಾಳ್ ನಾಗರಾಜ್, ಜಿ.ವಿ. ಶ್ರಿರಾಮ್ ರೆಡ್ಡಿ ಅಂಥವರು ಕಾಣಿಸಿಕೊಂಡು ಭರವಸೆ ಹುಟ್ಟಿಸುತ್ತಾರೆ.
 
ಆದರೆ ದುರ್ಬಲವಾಗುತ್ತಿರುವ ವಿಧಾನಮಂಡಲದ ಅಂತಸ್ಸತ್ವವನ್ನು ವ್ಯಕ್ತಿಗತ ಕ್ಷಮತೆ ಮತ್ತು ಕಳಕಳಿ ರಕ್ಷಿಸಲಾರದು. ದೇವೇಗೌಡರು ವಿರೋಧಪಕ್ಷದ ನಾಯಕರಾಗಿದ್ದಾಗ ಮೂರುಗಂಟೆಯ ಅವಧಿಯ ಚರ್ಚೆಯಲ್ಲಿ ಅರಸು ಸರಕಾರದ ಹದಿಮೂರು ಹಗರಣಗಳನ್ನು ಪುರಾವೆ ಸಹಿತ ಬಹಿರಂಗ ಪಡಿಸಿದ್ದರಂತೆ.
 
ಈಗ ವಿರೋಧ ಪಕ್ಷಗಳು ಈ ಕೆಲಸಗಳನ್ನು ಮಾಧ್ಯಮಗಳಿಗೆ ಮತ್ತು ಮಾಹಿತಿಹಕ್ಕು ಹೋರಾಟಗಾರರಿಗೆ ಹೊರಗುತ್ತಿಗೆ ನೀಡಿದಂತೆ ಭಾಸವಾಗುತ್ತದೆ. ಶಾಸಕರು ಸದನದೊಳಗೆ ಚರ್ಚಿಸುವುದಕ್ಕಿಂತ ಹೆಚ್ಚು ಟಿವಿ ಸ್ಟುಡಿಯೋಗಳಲ್ಲಿ ಚರ್ಚಿಸುತ್ತಾರೆ.

ಸಂಸತ್ತಿನ (ಇಲ್ಲಿ ವಿಧಾನಮಂಡಲದ ಎಂದು ಓದಿಕೊಳ್ಳಿ) ಮಾಧ್ಯಮೀಕರಣ (media-isation of parliament) ಅಂತ ಕರೆಯಲಾಗುವ ಈ ವಿದ್ಯಮಾನವೂ ಸೇರಿದಂತೆ ಸಂಸದೀಯ ಪರಂಪರೆಯ ವಿವಿಧ ರೀತಿಯ ಅಧಃಪತನ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ ಎನ್ನುವುದು ನಿಜ. ಆದರೆ ಜಾಗತಿಕವಾದ ಒಂದು ಸಮಸ್ಯೆಗೆ ಸ್ಥಳೀಯವಾಗಿ ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಮಹತ್ವದ ವಿಚಾರ. 
 
ಲೇಖಕರು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT