ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಮಂಡಲದಲ್ಲಿ ನನ್ನ ತಾತ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

1967ರ ಅಕ್ಟೋಬರ್ 16 ವಿಜಯಲಕ್ಷ್ಮಿ ಹಬ್ಬದ ದಿನ. ಅಂದು ಇಡೀ ಕರ್ನಾಟಕ ರಾಜ್ಯ ಹಬ್ಬ ಆಚರಿಸುವುದರ ಜೊತೆಗೆ ತಮ್ಮ ನಾಯಕ ಎಲ್. ಸಿದ್ದಪ್ಪ ಅವರ ಸಾವಿನ ಶೋಕವನ್ನೂ ಆಚರಿಸುತ್ತಿದ್ದರು.


ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದ ಸಿದ್ದಪ್ಪನವರು ಹುಬ್ಬಳ್ಳಿಯ ಕೆಎಂಸಿ (ಈಗ ಕಿಮ್ಸ) ಸರ್ಕಾರಿ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಕೊನೆಯುಸಿರೆಳೆದರು. ಅವರಿಗೆ ಔಷಧೀಯ ವಿಭಾಗದ ಪ್ರೊಫೆಸರ್‌ಗಳಾದ ಡಾ. ಎಚ್. ಗುರುಪಾದಪ್ಪ ಮತ್ತು ಡಾ. ನಾಗರಾಜ್ ಶೆಟ್ಟಿ ಚಿಕಿತ್ಸೆ ನೀಡುತ್ತಿದ್ದರು.

ಅವರ ಹಿರಿ ಮಗಳು ಗಿರಿಜಮ್ಮ ಅವರ ಪಕ್ಕದಲ್ಲಿ ಕುಳಿತಿದ್ದರು. ಸಿದ್ದಪ್ಪನವರು ತಮ್ಮ ಕೊನೆಯ ಕ್ಷಣಗಳಲ್ಲಿ `ಪ್ರಜಾವಾಣಿ~ ಪತ್ರಿಕೆ ಓದುತ್ತಿದ್ದರು. ಅದು ಕೈಜಾರಿ ಕೆಳಗೆ ಬಿದ್ದಾಗ, ಮಗಳು ಪತ್ರಿಕೆ ಎತ್ತಿಕೊಡುವ ಹೊತ್ತಿಗೆ ಅವರು ಸ್ವರ್ಗದ ತಮ್ಮ ನಿವಾಸದತ್ತ ತೆರಳಿದ್ದರು.

ತಾತ ತೀರಿಕೊಂಡಿದ್ದು ಕಿರಿ ವಯಸ್ಸಿನಲ್ಲಿ. ಆಗ ಅವರಿಗೆ 60 ವರ್ಷ. ಬಡ ಕೃಷಿಕರಾದ ಈಶ್ವರಪ್ಪ ಮತ್ತು ಗೌರಮ್ಮ ದಂಪತಿಯ ಏಕೈಕ ಸಂತಾನ ಅವರು.ಮನೆಯಲ್ಲಿ ಒಬ್ಬನೇ ಮಗನಾಗಿ ಏಕಾಂಗಿಯಂತೆ ಬೆಳೆದ ಅವರು ಮುಂದೆ ಬಿಎ, ಎಲ್‌ಎಲ್‌ಬಿ ಪೂರೈಸಿ ವಕೀಲಿಕೆ ವೃತ್ತಿ ಪ್ರಾರಂಭಿಸಿದರು.
 
ಒಡೆಯರ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ರಾಜಪ್ರತಿನಿಧಿಯಾಗಿದ್ದ ಸಿದ್ದರಾಮಪ್ಪ ಅವರ ಸಹಾಯವಿಲ್ಲದಿದ್ದರೆ ಅವರು ಅಕ್ಷರಸ್ಥರಾಗುವುದು ಸಾಧ್ಯವೇ ಇರಲಿಲ್ಲ. ಲಿಂಗದಹಳ್ಳಿಗೆ ಭೇಟಿ ನೀಡಿದ್ದ ಅವರು, ತಾತನ ಬುದ್ಧಿಮತ್ತೆ ಗುರುತಿಸಿ ಬೆಂಗಳೂರಿಗೆ ಕರೆತಂದು ಉನ್ನತ ಶಿಕ್ಷಣ ಕೊಡಿಸಿದರು. ಅದು ಅವರ ಜೀವನದ ಮಹತ್ತರ ತಿರುವು.
 
ಸಿದ್ದರಾಮಪ್ಪ ಆಗಿನ ಕಾಲಘಟ್ಟದಲ್ಲಿ ಪ್ರಸಿದ್ಧ ಹೃದ್ರೋಗ ತಜ್ಞ ಮತ್ತು ಶಿಕ್ಷಕರೂ ಆಗಿದ್ದ ಡಾ. ಕೆ.ಎಸ್. ಷಡಕ್ಷರಪ್ಪ ಅವರ ತಂದೆ. ಮುಂದೆ ತಾತ ಮಧುಮೇಹಿ ರೋಗಿಯಾದಾಗ ಅವರಿಗೆ ಷಡಕ್ಷರಪ್ಪ ಖಾಸಗಿ ವೈದ್ಯರೂ ಆಗಿದ್ದರು. ಅವರು ಬೆಂಗಳೂರಿಗೆ ಬಂದಾಗಲ್ಲ್ಲೆಲ ಈಗ ಅಸ್ತಿತ್ವದಲ್ಲಿಲ್ಲದ ಭಾರತ್ ಟಾಕೀಸಿನ ಹಿಂಭಾಗದಲ್ಲಿದ್ದ ಗಂಗಾಧರ್ ಅವರ (ಕೆ.ಎಸ್. ಷಡಕ್ಷರಪ್ಪ ಅವರ ಮಾವ) ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು.

ತಾತನ ಸಹಾಯದಿಂದ ಗಂಗಾಧರ್ ಕರ್ನಾಟಕದ ಮುಖ್ಯ ಎಂಜಿನಿಯರ್ ಆದರು (ತಮಗೆ ಸಹಾಯ ಮಾಡಿದವರಿಗೆ ಪ್ರತಿ ಸಹಾಯ ಮಾಡಲು ಅವರು ಸದಾ ಹಂಬಲಿಸುತ್ತಿದ್ದರು).

ಲಿಂಗದಹಳ್ಳಿಯ ನಮ್ಮ ಪೂರ್ವಿಕರ ಮನೆಯ ವರಾಂಡದಲ್ಲಿ ತಾತ, ಸಿದ್ದರಾಮಪ್ಪ ಅವರೊಂದಿಗೆ ಇರುವ ದೊಡ್ಡ ಫ್ರೇಮಿನ ಫೋಟೊ ಅಲಂಕೃತವಾಗಿದೆ.
`ಪ್ರಜಾವಾಣಿ~ ಪತ್ರಿಕೆಯ `ಸಾಪ್ತಾಹಿಕ ಪುರವಣಿ~ಯ ವಿಧಾನ ಮಂಡಲದ ವಿಶೇಷ ಸಂಚಿಕೆಯಲ್ಲಿ (ಜೂನ್ 17, 2012, ಪುಟ ಸಂಖ್ಯೆ 4) ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರೊಂದಿಗೆ ತಾತ ಇದ್ದ ಚಿತ್ರವನ್ನು ನೋಡಿದಾಗ, ದುಃಖ ಹಾಗೂ ಸಂತಸದಿಂದ ನನ್ನ ಕಣ್ಣುಗಳಿಂದ ಹನಿಗಳು ಜಿನುಗಿದವು. ರಾಜ್ಯದ ವ್ಯವಹಾರ ಹಾಗೂ ಶಕ್ತಿಯ ಚುಕ್ಕಾಣಿ ಹಿಡಿದಿದ್ದ ನನ್ನ ತಾತ ಅವರದ್ದು ಎಂಥಾ ಮಹಾನ್ ವ್ಯಕ್ತಿತ್ವ.

ಅಸಂತುಷ್ಟ ವ್ಯಕ್ತಿಯಾಗಿಯೇ ಅವರು ಮರಣ ಹೊಂದಿದರು. ಅವರ ಬದುಕು ಹೊಣೆಗಾರಿಕೆ, ದುರಂತ ಮತ್ತು ವ್ಯಥೆಗಳಿಂದಲೇ ತುಂಬಿತ್ತು. ತಮ್ಮ ಮಕ್ಕಳ ಬಗ್ಗೆಯೂ ಅವರು ನಿರಾಶೆಗೊಂಡಿದ್ದರು.

ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಜೆ.ಸಿ. ಒಡೆಯರ್ ರಾಜ್ಯದ ಮುಖ್ಯಸ್ಥರಾಗಿದ್ದರು. ಆರ್ಕಾಟ್ ಮುದಲಿಯಾರ್ ದಿವಾನರಾಗಿ, ತಂಬೂ ಚೆಟ್ಟಿ ಆಪ್ತ ಕಾರ್ಯದರ್ಶಿಯಾಗಿ ಮತ್ತು ತಾತ ಕೃಷಿ, ರೈಲ್ವೇ, ಲೋಕೋಪಯೋಗಿ ಸಚಿವ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳನ್ನು ದೇಶದ ಸ್ವಾತಂತ್ರ್ಯದವರೆಗೂ ನಿರ್ವಹಿಸಿದ್ದರು.

ಭಾರತ ಸ್ವತಂತ್ರಗೊಂಡು ಮಹಾರಾಜರ ಆಳ್ವಿಕೆಯ ಸಂಪುಟವನ್ನು ವಿಸರ್ಜನೆ ಮಾಡಿದಾಗ, ತಾತನ ರಾಜಕೀಯ ಜೀವನ ಅಂತ್ಯಕಂಡಿತು. ಮಹಾರಾಜರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ನೀಡಿದ ಹಣದಿಂದ ಲಿಂಗದಹಳ್ಳಿಯಲ್ಲಿ (ಶಿವಮೊಗ್ಗ ಜಿಲ್ಲೆ) ಕೃಷಿ ಭೂಮಿ ಕೊಂಡು ಅಲ್ಲಿಗೇ ಸ್ಥಳಾಂತರಗೊಂಡರು.

ಪತ್ನಿ ನಂಜಮ್ಮ ಜೊತೆಗೆ ಅವರಿಗಿದ್ದದ್ದು ನಾಲ್ಕು ಮಕ್ಕಳು- ಗಿರಿಜಮ್ಮ, ಎಲ್.ಎಸ್. ಶಿವಮೂರ್ತಿ, ಎಲ್.ಎಸ್. ಸದಾಶಿವ (ಈಗ ಇವರ‌್ಯಾರೂ ಬದುಕಿಲ್ಲ) ಮತ್ತು ನನ್ನ ತಾಯಿ ಸುವರ್ಣ. ಅಮ್ಮ ಹುಟ್ಟಿದ್ದು 1937ರ ಜೂನ್ 21ರಂದು. ಅವರು ಜನಿಸಿದ ಕೂಡಲೇ ಅಜ್ಜಿ ರಕ್ತಸ್ರಾವದಿಂದ ತೀರಿಕೊಂಡರು.

ಸ್ಪುರದ್ರೂಪಿ, ಎತ್ತರದ ನಿಲುವಿನ ನನ್ನ ತಾತ ನಾಲ್ಕು ಪುಟ್ಟಮಕ್ಕಳ ಯುವ ವಿಧುರನಾದರು. ಮರುಮದುವೆಯನ್ನು ಖಡಾಖಂಡಿತವಾಗಿ ನಿರಾಕರಿಸಿದರು. ಅವರ ಮೊದಲನೇ ಮಗಳು ಗಿರಿಜಮ್ಮ ತನ್ನ ಮದುವೆಯಾಗುವವರೆಗೂ ಅವರ ಯೋಗಕ್ಷೇಮಗಳ ಜವಾಬ್ದಾರಿ ಹೊತ್ತುಕೊಂಡಿದ್ದರು.
 
ಅವರು ವಿವಾಹವಾಗಿದ್ದು ಪ್ರಾಮಾಣಿಕ ಆದಾಯ ತೆರಿಗೆ ಅಧಿಕಾರಿ ಜಿ. ಮಾದಪ್ಪ ಅವರನ್ನು. ಅವರು ಮೈಸೂರಿನಲ್ಲಿ ತೆರಿಗೆ ವಂಚಿಸಿದ ಅನೇಕ ಶ್ರೀಮಂತ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ಈ ದಾಳಿಗಳಿಂದಾಗಿ ಅವರಿಗೆ ಅನೇಕ ಜೀವಬೆದರಿಕೆಗಳು ಬಂದಿದ್ದವು. ಇಂಥ ಘಟನೆಗಳಿಂದಾಗಿ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಮನೆ ಬಿಟ್ಟರು.
 
ಎರಡು ಮಕ್ಕಳ ಈ ಕುಟುಂಬ ತಾತನ ಮನೆಗೆ ಸ್ಥಳಾಂತರಗೊಂಡಿತು. ಹೀಗೆ ದೊಡ್ಡಮ್ಮನ ಸಾಂಸಾರಿಕ ಬದುಕು ಮೂರೇ ವರ್ಷಕ್ಕೆ ಅಂತ್ಯ ಕಂಡಿತು.
ಶಿಸ್ತಿನ ಸಿಪಾಯಿ ಹಾಗೂ ನೀತಿಪರಿಪಾಲಕರಾಗಿದ್ದ ತಾತ ತಮ್ಮ ನಾಲ್ಕು ಮಕ್ಕಳನ್ನು ಬೆಳೆಸುವಾಗ ಸಾಕಷ್ಟು ಕಷ್ಟಪಟ್ಟರು. ಅಜ್ಜಿಯ ಕಡೆಯವರಾದ ವಯಸ್ಸಾದ ವಿಧವೆಯೊಬ್ಬರನ್ನು ತಾಯಿಯಿಲ್ಲದ ಈ ಮಕ್ಕಳನ್ನು ನೋಡಿಕೊಳ್ಳಲು ಕಳುಹಿಸಲಾಯಿತು.

ನಾಲ್ವರಲ್ಲಿ ಅಮ್ಮ ಒಳ್ಳೆಯ ಆರೈಕೆ ಪಡೆಯಲಿಲ್ಲ. ಕಾರಣ ಅವರ ಜನನ ಆಕೆಯ ತಾಯಿಯ ಮರಣಕ್ಕೆ ಕಾರಣವಾಗಿತ್ತು. ಹೀಗಾಗಿ ಎಲ್ಲರಿಂದಲೂ ಆಕೆ ಮೂದಲಿಕೆ, ಬೈಗುಳ ಮತ್ತು ಹಿಂಸೆಯನ್ನು ಅನುಭವಿಸುತ್ತಲೇ ಬೆಳೆಯಬೇಕಾಯಿತು. ಮನೆಗೆಲಸದ ಕಾರ್ಯಗಳಿಗೆ ಆಕೆಯನ್ನು ದೂಡಲಾಯಿತು. ಅಡುಗೆ ಮನೆಯ ಕಾಯಕವನ್ನು ಅಮ್ಮ ಎಂಟನೇ ವಯಸ್ಸಿಗೇ ಪ್ರಾರಂಭಿಸಿದ್ದರು. ಈಗ ಅವರಿಗೆ 75 ವರ್ಷ.
 
`ನನಗೆ ಓದಬೇಕೆಂಬ ಆಸೆ ಇತ್ತು. ಆದರೆ ನನ್ನನ್ನು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಬಿಡುತ್ತಿರಲಿಲ್ಲ. ಹೀಗಾಗಿ ಪ್ರತಿದಿನವೂ ಬೆಂಚಿನ ಮೇಲೆ ನಿಲ್ಲುವ ಶಿಕ್ಷೆ ಅನುಭವಿಸಬೇಕಾಗುತ್ತಿತ್ತು~ ಎಂದು ನೆನಪಿಸಿಕೊಳ್ಳುತ್ತಾರೆ. ಜೊತೆಗೆ ಅವರು ಖ್ಯಾತರಾದ ತಮ್ಮ ಸಹಪಾಠಿಗಳನ್ನು ನೆನಪಿಸಿಕೊಳ್ಳುತ್ತಾರೆ. ಪಿ.ಲಂಕೇಶ್ ಅವರ ಸಹಪಾಠಿಯಾಗಿದ್ದರೆ, ಪ್ರೇಮಾ ಕೃಷ್ಣ (ಎಸ್.ಎಂ. ಕೃಷ್ಣರ ಪತ್ನಿ) ಅವರ ಸಮಕಾಲೀನ ಹಾಗೂ ಕಿರಿಯರಾಗಿದ್ದರು. ಮತ್ತು ಪ್ರೇಮಾರ ಹಿರಿಯಣ್ಣ ತಾರಾನಾಥ್ ಹಿರಿಯರಾಗಿದ್ದರು.

ಕೆ.ವಿ. ಪುಟ್ಟಪ್ಪ ಅವರ ಕುಟುಂಬಕ್ಕೆ ಸೇರಿದ ದೇವಂಗಿ ಕುಟುಂಬವು ತನ್ನ ಸ್ನೇಹಿತೆ ಸತ್ಯವತಿ ಅವರಿಂದಾಗಿ ತಮಗೂ ತುಂಬಾ ಹತ್ತಿರವಾಗಿತ್ತು ಎಂದವರು ನೆನೆಸಿಕೊಳ್ಳುತ್ತಾರೆ. ಸತ್ಯವತಿ, ದೇವಂಗಿ ಪ್ರಫುಲ್ಲ ಅವರನ್ನು ಮದುವೆಯಾಗಿದ್ದರು.

ತಾತ ತಮ್ಮ ಕೊನೆಯ ಮಗಳು ಸುವರ್ಣಾರ ಮದುವೆಯನ್ನು 1957ರ ಜೂನ್‌ನಲ್ಲಿ ತಮ್ಮ ಸೋದರಿಕೆ ತಂಗಿಯ ಮಗನಾದ ಡಾ. ಡಿ.ಜಿ. ಬೆನಕಪ್ಪ ಅವರೊಂದಿಗೆ ನೆರವೇರಿಸಿದರು. ಆಗ ಅಮ್ಮನಿಗೆ ಕೇವಲ 20 ವರ್ಷ. ಮದುವೆಯಾದರೆ ತನಗೆ ಅಡುಗೆಮನೆಯಿಂದ ಮುಕ್ತಿ ಸಿಗುತ್ತದೆ ಎಂಬ ಕಾರಣಕ್ಕೇ ಅಮ್ಮ ಮದುವೆಯಾಗಲು ಒಲವು ತೋರಿದ್ದು. ಮುಗ್ಧೆ ಅಮ್ಮ.

ಒಮ್ಮಮ್ಮೆ ನಾವು ಅಪರೂಪಕ್ಕೆ ಜಗಳ ಕಾದಾಗ ನಾನು ಆಕೆಯ ತಾಯ್ತನದ ಬಗ್ಗೆ ಪ್ರಶ್ನಿಸುತ್ತಿದ್ದೆ. ಆಗ ಅವರು ತಕ್ಷಣವೇ- ನನಗೆ ತರಬೇತಿ ಇಲ್ಲ ಮತ್ತು ನನ್ನ ಅಮ್ಮ ಹೇಗೆ ಇದ್ದಳೆಂಬುದೇ ಗೊತ್ತಿಲ್ಲ (ನಮ್ಮ ಕುಟುಂಬದಲ್ಲಿ ಅಜ್ಜಿಯ ಒಂದು ಫೋಟೊ ಕೂಡ ಇಲ್ಲ) ಎನ್ನುತ್ತಿದ್ದರು. ಕೂಡಲೇ ನಾನು ಭಾವುಕಳಾಗಿ ಅವರೊಂದಿಗೆ ರಾಜಿಮಾಡಿಕೊಳ್ಳುತ್ತೇನೆ.

ಯುಕೆನಲ್ಲಿ ಓದುತ್ತಿದ್ದ ಅಪ್ಪಾಜಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಲೇ ಇದ್ದವರು, ವಾಪಸು ಬರಲು ನಿರ್ಧರಿಸಿದ್ದರು. ತಾತ ಹೇಗೋ ದುಡ್ಡು ಹೊಂದಿಸಿ ಅಮ್ಮನನ್ನು ಯುಕೆಗೆ ಕಳುಹಿಸಿದರು. ಹೊರಡುವಾಗ, `ನಿನ್ನ ಪತಿ ಎಲ್ಲಾ ಪರೀಕ್ಷೆಗಳನ್ನೂ ಪಾಸು ಮಾಡಬೇಕು. ಆನಂತರವೇ ಮರಳಿ ಭಾರತಕ್ಕೆ ಬರಬೇಕು~ ಎಂದಿದ್ದರು. ಅಮ್ಮನ ನೈತಿಕ ಬೆಂಬಲ ಮತ್ತು ತಾತ ಹೇಳಿದ `ಸಹನೆ ಮಂತ್ರ~ ಅಪ್ಪಾಜಿಗೆ ನೆರವಾಯಿತು.

ಲಿಂಗದಹಳ್ಳಿಯಲ್ಲಿ ವಾಸವಾಗಿದ್ದ ತಾತ ವಕೀಲಿ ವೃತ್ತಿ ಮಾಡುತ್ತಿದ್ದರು. ಅವರ ಕಚೇರಿ `ಅಟಾರ ಕಚೇರಿ~ಯಲ್ಲಿತ್ತು. ತಮ್ಮ ಹಳ್ಳಿಯ ಬಗ್ಗೆ ತೀವ್ರ ಕಳಕಳಿ ಹೊಂದಿದ್ದ ಅವರು, ಅಲ್ಲಿ ಶಿಕ್ಷಿತರಾಗಿ, ಪ್ರಭಾವಶಾಲಿ ಹುದ್ದೆಯಲ್ಲಿದ್ದ ಕೆಲವೇ ಮಂದಿಯಲ್ಲಿ ಒಬ್ಬರಾಗಿದ್ದರು. ಅವರಿಂದಾಗಿ ಹಳ್ಳಿಯಲ್ಲಿ ರಸ್ತೆಗಳು ನಿರ್ಮಾಣವಾಗಿ ಸಂಪರ್ಕ ವ್ಯವಸ್ಥೆ ಬೆಳೆಯಿತು. ಬಸ್‌ಗಳ ಓಡಾಟ ಪ್ರಾರಂಭವಾಯಿತು.
 
ಹೀಗೆ ಪ್ರತ್ಯೇಕವಾಗಿದ್ದ ಗ್ರಾಮ ಶಿವಮೊಗ್ಗ ಹಾಗೂ ದಾವಣಗೆರೆಯೊಂದಿಗೆ ಸಂಪರ್ಕ ಪಡೆದುಕೊಂಡಿತು. ತಮ್ಮ ಊರಿಗೆ ಭದ್ರಾ ಕಾಲುವೆ, ಕೆಇಬಿ ಉಪಕೇಂದ್ರ ಮತ್ತು ಲಂಬಾಣಿಯರಿಗೆ ಪ್ರತ್ಯೇಕ ತಾಂಡಾ ದೊರಕಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.

ಬಸ್ ಸೇವೆ ದುರ್ಬರವಾಗಿದ್ದರಿಂದ ತಾತ ಸಭೆಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬರಬೇಕಾದ ಸಂದರ್ಭಗಳಲ್ಲಿ (ಅವರು ರೆಮ್ಕೊದ ನಿರ್ದೇಶಕರಾಗಿದ್ದ ಕಾಲದಲ್ಲಿ) ಬಿಆರ್‌ಕೆ ಬಸ್ ಸರ್ವಿಸ್‌ನ ಮಾಲೀಕ ಇಸ್ಮಾಯಿಲ್ ಸಾಹೇಬರು ಈ ಏಕೈಕ ಪ್ರಯಾಣಿಕನನ್ನು ಕರೆದೊಯ್ಯಲು ಬಸ್ ಕಳುಹಿಸುತ್ತಿದ್ದರು.

ರೆಮ್ಕೊ ಸಭೆಗಳಿದ್ದ ಸಂದರ್ಭಗಳಲ್ಲಿ ತಾತ ಶಂಕರಪುರಂನಲ್ಲಿ ನನ್ನ ತಂದೆತಾಯಿಗಳಿದ್ದ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ತಾತಾ ಅವರ ಭೇಟಿಯ ಆ ದಿನಗಳು ನನ್ನ ಪೋಷಕರಿಗೆ ದಿಗಿಲಿನ ಸಂಗತಿಯಾಗಿತ್ತು. ಏಕೆಂದರೆ ಅವರು ವಿಪರೀತ ದುಬಾರಿಯಾಗಿದ್ದರು! ಅವರ ಮಧುಮೇಹದ ವಿಶೇಷ ಪಥ್ಯ ಮತ್ತು ಪ್ರಯಾಣ ವೆಚ್ಚ ಹೆಚ್ಚು ಹಣ ತೆರುವಂತೆ ಮಾಡುತ್ತಿತ್ತು.

ತಾತ ತಮ್ಮ ಕಚೇರಿ ವಾಹನವನ್ನು ಕಚೇರಿಯಿಂದ ಮನೆಗೆ ಓಡಾಡಲು ಬಳಸುತ್ತಿದ್ದರೇ ವಿನಾ ರೈಲ್ವೆ ನಿಲ್ದಾಣಕ್ಕೆ ಹೋಗುವುದಕ್ಕಲ್ಲ. ಹೀಗಾಗಿ ಅಪ್ಪಾಜಿ ತಮ್ಮ ಬೈಸಿಕಲ್‌ನಲ್ಲಿ ಅವರನ್ನು ಗಾಂಧಿ ಬಜಾರ್‌ನಲ್ಲಿದ್ದ ಟ್ಯಾಕ್ಸಿ ನಿಲ್ದಾಣಕ್ಕೆ ಕರೆದೊಯ್ದು, ಅವರಿಗೆ ಟ್ಯಾಕ್ಸಿ ಹಿಡಿದುಕೊಡಬೇಕಿತ್ತು. 

ಬಡ ಹಳ್ಳಿಗರ ಅನೇಕ ಸಮಸ್ಯೆಗಳ ಪರವಾಗಿ ಅವರು  ಕಾನೂನು ಹೋರಾಟ ನಡೆಸಿದ್ದರು. ಅಲ್ಲದೆ ನನ್ನ ತಂದೆಯ ಸಂಬಂಧಿ ಬೆನಕನಹಳ್ಳಿಯ ಶಂಕರಪ್ಪಾಜಿ ಅವರಿಗೂ ಸಹಾಯ ಮಾಡಿದ್ದರು. ಜನ ಅವರಿಗೆ ಶುಲ್ಕ ನೀಡುತ್ತಿದ್ದದ್ದೇ ಕಡಿಮೆ. ಕೊಡಲು ಅವರ ಬಳಿ ಹಣವೂ ಇರುತ್ತಿರಲಿಲ್ಲ. ಸಚಿವ ಸ್ಥಾನಮಾನ ಹೊಂದಿದ್ದವರಾದರೂ, ಅವರು ಮೊದಲಿನಿಂದಲೂ ಆರ್ಥಿಕ ಸಂಕಷ್ಟದಲ್ಲಿಯೇ ಇದ್ದರು. ಇದು ಅವರ ಶುದ್ಧ ಹಸ್ತದ ಪ್ರತೀಕ.

ತಮ್ಮ ನಿಲುವುಗಳಿಗೆ ಅವರು ಬದ್ಧರಾಗಿರುತ್ತಿದ್ದರು. ತಮ್ಮ ಚಟುವಟಿಕೆ ಮತ್ತು ಲೆಕ್ಕಾಚಾರಗಳನ್ನೆಲ್ಲಾ ಒಂದು ಡೈರಿಯಲ್ಲಿ ನಮೂದಿಸುತ್ತಿದ್ದರು. ಅದರಲ್ಲಿ ತಮ್ಮ ಕುಟುಂಬಕ್ಕೆ ಸಂದ ಕಾಣಿಕೆಗಳ ವಿವರಗಳೂ ಇರುತ್ತಿದ್ದವು.

ಬಿಆರ್‌ಕೆ ಬಸ್‌ನ ಮಾಲೀಕ ತಮ್ಮ ಮೊಮ್ಮಗಳಿಗೆ ಏನಾದರೂ ಕಾಣಿಕೆ ಕೊಟ್ಟಿದ್ದರೂ ಅದು ಡೈರಿ ಪುಟಗಳಲ್ಲಿ ದಾಖಲಾಗುತ್ತಿತ್ತು ಮತ್ತು ಅದಕ್ಕೆ ಪ್ರತಿಯಾಗಿ ಆ ಕುಟುಂಬದ ಮುಂದಿನ ಸಮಾರಂಭದಲ್ಲಿ ಅವರಿಗೆ ಕಾಣಿಕೆ ಸಂದಾಯವಾಗುತ್ತಿತ್ತು. ಕಾಣಿಕೆ ತೆಗೆದುಕೊಂಡಷ್ಟೇ ಕಾಳಜಿಯಿಂದ ಅದನ್ನು ಕಡ್ಡಾಯವಾಗಿ ಹಿಂತಿರುಗಿಸುತ್ತಿದ್ದರು.

ನನ್ನ ತಂದೆ-ತಾಯಿ ಯುಕೆನಲ್ಲಿದ್ದಾಗ ದೊಡ್ಡಮ್ಮ ನನ್ನನ್ನು ನೋಡಿಕೊಳ್ಳುತ್ತಿದ್ದರು. ಆಗ ಬಂದ ನನ್ನ ಜನ್ಮದಿನವನ್ನು ತಾತನಿಗೆ ನೆನಪಿಸಿದ್ದರು. ಉಡುಗೊರೆ ಕೊಳ್ಳಲು ತಾತನ ಬಳಿ ಹಣವಿರಲಿಲ್ಲ. ತಮಗೆ ಒಡೆಯರು ನೀಡಿದ್ದ ಚಿನ್ನದ ಪದರವಿರುವ ಶಲ್ಯವನ್ನು ನೀಡಿ ಲಂಗ ಹೊಲಿದುಕೊಡುವಂತೆ ದೊಡ್ಡಮ್ಮನಿಗೆ ಹೇಳಿದರು. ಅವರು ಲಂಗ ಹೊಲಿಯದೇ ತಾತಾ ನೀಡಿದ ಉಡುಗೊರೆ, ಹೀಗೆಯೇ ಇಟ್ಟುಕೋ ಎಂದು  ಕೊಟ್ಟಿದ್ದರು. ಅದು ಇಂದಿಗೂ ನನ್ನ ಬಳಿ ಜೋಪಾನವಾಗಿ ಇದೆ.

ತಾತನ ಕುರಿತ ಕಥೆಗಳಿಗೆ ನನಗೆ ಹೆಚ್ಚಿನ ಮಾಹಿತಿ ದೊರೆತದ್ದು ಅಪ್ಪಾಜಿ ಮತ್ತು ನಮ್ಮ ಹಳೆಯ ಕೆಲಸಗಾರ ವೀರಭದ್ರರಿಂದ (ಈಗ ಅವರಿಗೆ 65 ವರ್ಷ). ತಾತನ ದಿನಚರಿ ಅವರಿಗೆ ಸ್ಪಷ್ಟವಾಗಿ ನೆನಪಿದೆ. ಅವರ ದಿನ ಶುರುವಾಗುತ್ತಿದ್ದದ್ದು ತಮ್ಮ ಕೃಷಿ ಜಮೀನಿನಲ್ಲಿ ಮುಂಜಾನೆ ವಾಯು ವಿಹಾರಕ್ಕೆ ಹೊರಡುವುದರೊಂದಿಗೆ. ವಾಪಸು ಬಂದೊಡನೆ ಬಿಸಿ ನೀರ ಸ್ನಾನ.

ದೊಡ್ಡಮ್ಮ ಅಷ್ಟರೊಳಗೆ ಅವರ ಪೂಜೆಗೆ ಮತ್ತು ಪಥ್ಯಾಹಾರಕ್ಕೆ ಸಿದ್ಧಪಡಿಸಿರುತ್ತಿದ್ದರು. ಒಂದು ಗಾಜಿನ ಸಿರಿಂಜ್ ಹಾಗೂ ಕುದಿಯುವ ನೀರಿನಲ್ಲಿ ಶುದ್ಧಗೊಳಿಸಿದ ಸೂಜಿ ಬಳಸಿ ತಾತ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರು. ಅವರು ಧರಿಸುತ್ತ್ದ್ದಿದುದು ಬಿಳಿ ಬಣ್ಣದ ಕಾಲರ್‌ಪಟ್ಟಿಯಿಲ್ಲದ ಮಸ್ಲಿನ್ ಬಟ್ಟೆಯ ಜುಬ್ಬಾ (ರೆಮ್ಕೊ ನಿರ್ದೇಶಕರ ಸಭೆಗಳಲ್ಲಿ ಅದಕ್ಕೆ ಕಾಲರ್ ಅಳವಡಿಸಿಕೊಳ್ಳುತ್ತಿದ್ದರು).
 
ತಮ್ಮ ನೆಚ್ಚಿನ `ಪ್ರಜಾವಾಣಿ~ ಓದಲು `ರೇಡಿಯೋ ರೂಮ್~ನ ಒಳಹೊಕ್ಕು ಏಕಾಂತದಲ್ಲಿ ಕುಳಿತುಕೊಳ್ಳುತ್ತಿದ್ದರು. ಅಲ್ಲಿ ಕುಳಿತು ವಿವಿಧ ಭಾರತಿಯನ್ನು ಆಲಿಸುತ್ತಿದ್ದರು. ಬಹುಶಃ ಪತ್ರಿಕೆ ಮತ್ತು ಆಕಾಶವಾಣಿಗೆ ಸರಿಸಮವಾದ ಸಮಕಾಲೀನ ಸಹವರ್ತಿಗಳು ಅವರಿಗೆ ಇರಲಿಲ್ಲವೆನಿಸುತ್ತದೆ.

ಅಪಾರ ಧಾರ್ಮಿಕ ನಂಬಿಕೆಯುಳ್ಳವರಾಗಿದ್ದ ಅವರು ಶೃಂಗೇರಿ ಮಠದ ಹಿರಿಯ ಸ್ವಾಮೀಜಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರು ಆಗಾಗ್ಗೆ ಲಿಂಗದಹಳ್ಳಿಗೆ ಬಂದು ಪೂಜಾ ಕಾರ್ಯಕ್ರಮಗಳಲ್ಲಿ ಮತ್ತು `ತರಳಬಾಳು ಹುಣ್ಣಿಮೆ~ಗಳಲ್ಲಿ ಭಾಗವಹಿಸುತ್ತಿದ್ದರು.

ಒಮ್ಮೆ ನಾನು ರಾಗಿ ಚೀಲವನ್ನು ತೂತು ಮಾಡಿ ರಾಗಿಯನ್ನು ಊರಿನ ಶೆಟ್ಟಿ ಅಂಗಡಿಯಲ್ಲಿ `ಕರದ ಉಂಡೆ~ ಜೊತೆ ವಿನಿಮಯ ಮಾಡಿಕೊಂಡಿದ್ದೆನಷ್ಟೇ! ಆಗ ಅವರ ವಾಕಿಂಗ್ ಸ್ಟಿಕ್‌ನಿಂದ ಪೆಟ್ಟು ತಿಂದು ನನ್ನ ದೇಹದ ಮೇಲೆ ಕಪ್ಪು-ನೀಲಿ ಗುರುತುಗಳು ಮೂಡಿದ್ದವು. `ಕಳಬೇಡ ಕೊಲಬೇಡ...~ ವಚನದ ಮೇಲೆ ಅವರು ಅಪಾರ ನಂಬಿಕೆ ಹೊಂದಿದ್ದರು.

ಅವರ `ಸಮಾರಾಧನೆ~ ನನ್ನ ನೆನಪಿನಲ್ಲಿ ಅಚ್ಚೊತ್ತಿದೆ. ಸಚಿವರು, ಸ್ವಾಮೀಜಿಗಳು ಮುಂತಾದ ಗಣ್ಯರು ಸೇರಿದಂತೆ ದೂರದೂರುಗಳಿಂದ ಜನರು ಅದಕ್ಕೆ ಆಗಮಿಸಿದ್ದರು. ಲಿಂಗದಹಳ್ಳಿಗೆ ಬರುವ ಮೂರು ಕಿ.ಮೀ. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಸಾಲು ಕಿಕ್ಕಿರಿದಿತ್ತು. ಅಲ್ಲಿ ಸ್ವಾಮೀಜಿ ಹೇಳಿದ್ದ ಮಾತು, `ಶರಣರ ಮಹಿಮೆಯನ್ನವರ ಮರಣದಲ್ಲಿ ನೋಡು~.

ಅವರು ಸಾಯುವ ಕೆಲವೇ ತಿಂಗಳುಗಳ ಮೊದಲು ಮೊಮ್ಮಗಳು ಹೇಮಾಳ (ಅವರು ಈಗಿಲ್ಲ) ವಿವಾಹ ನೆರವೇರಿಸಿದ್ದರು. ದೊಡ್ಡಮ್ಮನಿಗೆ ಈ ಹೊರೆ ಇರಬಾರದೆಂಬುದು ಅವರ ಉದ್ದೇಶವಾಗಿತ್ತು. ತಮ್ಮ ದೇಹವನ್ನು ಎಲ್ಲಿ ಮಣ್ಣುಮಾಡಬೇಕೆಂಬುದನ್ನು ಅವರು ಮೊದಲೇ ಸೂಚಿಸಿದ್ದರು.

ಇಂದಿಗೂ ತಾತನ ವಿಧವೆ ಸೊಸೆ ಲಲಿತಮ್ಮ ಮತ್ತು ಅವರ ಸೊಸೆ ಪುಷ್ಪಾ ಪುಣ್ಯತಿಥಿಯನ್ನು ಆಚರಿಸುತ್ತಾರೆ. ಅವರ ಮೊಮ್ಮಗ ಎಲ್.ಎಸ್. ಪ್ರಸನ್ನ ಕುಮಾರನ ಬದುಕು ದುರಂತ ಅಂತ್ಯ ಕಂಡಿತ್ತು. ತನ್ನ ಸ್ಯಾಂಟ್ರೋ ಕಾರನ್ನು ಚಾಲನೆ ಮಾಡುತ್ತಿರುವಾಗ ಅದರೊಳಗೇ ಅವರು ಜೀವಂತ ದಹನಗೊಂಡರು.

ನಮ್ಮ ಪೀಳಿಗೆಯ ಕೊನೆಯ ವಿವಾಹ ಉತ್ಸವಕ್ಕಾಗಿ ಲಿಂಗದಹಳ್ಳಿಯಲ್ಲಿ ನಾವೆಲ್ಲರೂ ಮೊನ್ನೆಯಷ್ಟೇ ಸೇರಿದ್ದೆವು. ಅ.18ರಂದು ದಿವಂಗತ ಪ್ರಸನ್ನ ಅವರ ಮಗ ಸಿದ್ಧಾರ್ಥನ ಮದುವೆ. ತಾತನ 45ನೇ ಪುಣ್ಯತಿಥಿಯ ದಿನದಂದು (ಅ.16, 2012) ಪುಸ್ತಕವೊಂದನ್ನು ಹೊರತರಲು ನಮ್ಮ ಕುಟುಂಬ ನಿರ್ಧರಿಸಿತು.

ಆದರೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಅವರ ಛಾಯಾಚಿತ್ರಗಳು ನಮ್ಮ ಬಳಿ ಇರುವುದು ತುಂಬಾ ಕಡಿಮೆ. ಮತ್ತು ಅವರ ಬದುಕಿನ ಬಗ್ಗೆ ಸರಿಯಾದ ಮಾಹಿತಿಗಳು ಇಲ್ಲ, ಎಲ್ಲವೂ ಅಪೂರ್ಣ ವಿವರಗಳೇ.

ಅಪ್ಪಾಜಿ ತೆಗೆದಿದ್ದ ಸ್ಲೈಡ್ ಫಾರ್ಮ್ಯಾಟ್‌ನಲ್ಲಿದ್ದ ಕೆಲವು ಛಾಯಾಚಿತ್ರಗಳನ್ನು ತುಂಬಾ ಕಷ್ಟಪಟ್ಟು ಮಾರ್ಪಡಿಸುವಲ್ಲಿ ಯಶಸ್ವಿಯಾದೆ. ಒಮ್ಮೆ ಜಾನಪದ ಲೋಕಕ್ಕೆ ಭೇಟಿ ನೀಡಿದಾಗ ಸಚಿವ ಸಹೋದ್ಯೋಗಿಗಳ ಜೊತೆಗೆ ಇದ್ದ ತಾತನ ಛಾಯಾಚಿತ್ರ ನೋಡಿ ರೋಮಾಂಚಿತಳಾದೆ.

ತಾತನ ತತ್ವಗಳನ್ನು ನಾನು ಇಂದಿಗೂ ಪಾಲಿಸುತ್ತೇನೆ-
ಕಾಯಿಲೆ ಬಿದ್ದ ರೋಗಿಯನ್ನು ನೋಡುವುದನ್ನು ತಡಮಾಡಬಾರದು.
ದುಃಖತಪ್ತ ಕುಟುಂಬಕ್ಕೆ ಸಾಂತ್ವಾನ ಹೇಳುವ ಕೆಲಸವನ್ನು ಮುಂದೂಡಬಾರದು.
ದಿನಚರಿ ಬರೆ- ಅದು ಹಲವು ಬಗೆಗಳಲ್ಲಿ ನೆರವಾಗಬಲ್ಲದು.

ನಿನಗೆ ಸಾಧ್ಯವಾದಾಗಲೆಲ್ಲಾ ಸಹಾಯ ಮಾಡು ಮತ್ತು ಯಾವ ನಿರೀಕ್ಷೆಗಳಿಲ್ಲದೆ ಸಹಾಯ ಮಾಡು.ನಿನ್ನ ತಲೆ, ಹೃದಯ ಮತ್ತು ಕೈಗಳು ಶುದ್ಧವಾಗಿದ್ದರೆ- ನೀನು ದೇವರಿಗೂ ಹೆದರಬೇಕಾಗಿಲ್ಲ.

ಹಲವು ನೋವು, ಆಘಾತ ಮತ್ತು ಹಣಕಾಸಿನ ಸಂಕಷ್ಟದ ನಡುವೆಯೂ ನನ್ನ ತಾತ ತನ್ನ ತತ್ವಾದರ್ಶ, ನೈತಿಕತೆ ಮತ್ತು ಶುದ್ಧಹಸ್ತದಿಂದ ಆರಡಿ ಎತ್ತರದವರೆಗೆ ಬೆಳೆದು ನಿಂತರು.
ಈ ಅಂಕಣದ ಮೂಲಕ ನಾನು ಓದುಗರಲ್ಲಿ  ಮನವಿ ಮಾಡಿಕೊಳ್ಳುತ್ತಿದ್ದೇನೆ. ತಾತನ ಬಗ್ಗೆ ಐ.ಜಿ. ಚಂದ್ರಶೇಖರಯ್ಯ (094813 29313) ಅವರು ಜೀವನಚರಿತ್ರೆ ಬರೆಯುತ್ತಿದ್ದಾರೆ. ತಾತನನ್ನು ಬಲ್ಲವರು, ಪುಸ್ತಕದಲ್ಲಿ ಖಾಲಿ ಜಾಗಗಳನ್ನು ಭರ್ತಿ ಮಾಡಲು ಸಹಕರಿಸಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT