ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ 8 ನಾಮಪತ್ರ ಸಲ್ಲಿಕೆ

Last Updated 13 ಏಪ್ರಿಲ್ 2013, 5:58 IST
ಅಕ್ಷರ ಗಾತ್ರ

ವಿಜಾಪುರ: ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಕೋರಿ ಜಿಲ್ಲೆಯಲ್ಲಿ ಶುಕ್ರವಾರ ಏಳು ನಾಮಪತ್ರ ಸಲ್ಲಿಕೆಯಾಗಿದ್ದು, ಈ ವರೆಗೆ ಒಟ್ಟಾರೆ ಎಂಟು ನಾಮಪತ್ರ ಸಲ್ಲಿಕೆಯಾಗಿವೆ.

ಮುದ್ದೇಬಿಹಾಳ ಮತಕ್ಷೇತ್ರದಿಂದ ಎರಡು, ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಒಂದು, ಬಬಲೇಶ್ವರ ಮತಕ್ಷೇತ್ರದಿಂದ ಎರಡು, ಇಂಡಿ, ಸಿಂದಗಿ ಮತಕ್ಷೇತ್ರದಿಂದ ತಲಾ ಒಂದು ನಾಮಪತ್ರ ಸಲ್ಲಿಕೆಯಾದವು.

ಬಬಲೇಶ್ವರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ, ಮುದ್ದೇಬಿಹಾಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ನಾಡಗೌಡ, ಬಸವನ ಬಾಗೇವಾಡಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ವೀರನಗೌಡ ಮ. ಪರಣ್ಣನವರ, ಇಂಡಿ ಮತಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಬಾಬುರಾವ ಮೇತ್ರಿ, ಸಿಂದಗಿ ಮತಕ್ಷೇತ್ರ ದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಣಗಾರ ಶರಣಪ್ಪ ತಿಪ್ಪಣ್ಣ ನಾಮಪತ್ರ ಸಲ್ಲಿಸಿದರು.

ದೇವರ ಹಿಪ್ಪರಗಿ, ವಿಜಾಪುರ ನಗರ, ನಾಗಠಾಣ ಮತಕ್ಷೇತ್ರದಿಂದ ಶುಕ್ರವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ವಿಜಾಪುರ ನಗರ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ವಿಶ್ವನಾಥ ಭಾವಿ ಬುಧವಾರವೇ ನಾಮಪತ್ರ ಸಲ್ಲಿಸಿದ್ದಾರೆ.

ಶಾಸಕ ಎಂ.ಬಿ. ಪಾಟೀಲರು ಎರಡು ಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು. ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿ.ಪಂ. ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಕೆ. ಪಾಟೀಲ, ವಕೀಲ ಎಸ್.ಕೆ. ಹಕ್ಕಿ ಈ ಸಂದರ್ಭದಲ್ಲಿದ್ದರು.

ಚಿತ್ರೀಕರಣಕ್ಕೆ ನಿಷೇಧ: ಭಾರತ ಚುನಾವಣಾ ಆಯೋಗದ ನೀತಿ ಸಂಹಿತೆ ಅನ್ವಯ ಚುನಾವಣಾಧಿಕಾರಿಗಳ ಕಚೇರಿಗೆ ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಸೇರಿದಂತೆ 5 ಜನರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇವರನ್ನು ಹೊರತುಪಡಿಸಿ ಯಾರಿಗೂ ಚುನಾವಣಾ ಅಧಿಕಾರಿಗಳ ಕೊಠಡಿ ಯೊಳಗೆ ಪ್ರವೇಶಕ್ಕೆ ಅವಕಾಶ ಇಲ್ಲ. ಛಾಯಾಚಿತ್ರ ಮತ್ತು ವಿಡಿಯೋ ಚಿತ್ರಿಕರಣಕ್ಕೂ ಅವಕಾಶವಿಲ್ಲ ಎಂದು ಚುನಾವಣಾ ಆಯೋಗದ ಪಂಕಜ್‌ಕುಮಾರ ಪಾಂಡೆ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳ ಛಾಯಾಚಿತ್ರ ಹಾಗೂ ವಿಡಿಯೋಗ್ರಾಫಿ ಯನ್ನು ಚುನಾವಣಾ ಆಯೊಗದ ನಿಯಮದಂತೆ ಕೊಠಡಿ ಯಿಂದ ಹೊರಭಾಗದಲ್ಲಿ ಅನುಮತಿ ಪಡೆದು ಚಿತ್ರೀಕರಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುದ್ದೇಬಿಹಾಳ ವರದಿ
ಮತಕ್ಷೇತ್ರದಿಂದ ಈಗಾಗಲೇ ಸತತ ಮೂರು ಬಾರಿ ವಿಧಾನಸಭಾ ಚುನಾ ವಣೆಯಲ್ಲಿ ಜಯ ಗಳಿಸಿ  ಸಾಧನೆ ಮಾಡಿರುವ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರು ಶುಕ್ರವಾರ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಇಲ್ಲಿನ ಮಿನಿ ವಿಧಾನಸೌಧಕ್ಕೆ ಆಗಮಿಸಿ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾಗಿ ನಾಮಪತ್ರವನ್ನು ಸಲ್ಲಿಸಿದರು.

ಪಟ್ಟಣದ ಇಂದಿರಾ ವೃತ್ತದಿಂದ ಸಾವಿರಾರು ಬೆಂಬಲಿಗರೊಂದಿಗೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ನಾಮಪತ್ರವನ್ನು ಎರಡು ಸೆಟ್‌ಗಳಲ್ಲಿ  ಚುನಾವಣಾಧಿಕಾರಿ ಲಕ್ಷ್ಮಣರಾವ ಅವರಿಗೆ ಸಲ್ಲಿಸಿದರು.

ಕಾಂಗ್ರೆಸ್‌ಗೆ ಜಯ ಖಂಡಿತ: ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮತ ಕ್ಷೇತ್ರದಲ್ಲಿ ಸಾಕಷ್ಟು ಬಲ ಹೊಂದಿದ್ದು ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ಖಚಿತ. ಮತಕ್ಷೇತ್ರದಲ್ಲಿ ತಮಗೆ  ಯಾರೂ ಎದುರಾಳಿಲ್ಲ ಎಂದ ಅವರು ಜೆ.ಡಿ.ಎಸ್. ಮುಖಂಡರಾದ ವಿಮಲಾ ಬಾಯಿ ದೇಶಮುಖ ಅವರು ಮಾತ್ರ ಬಲವಾದ ಸ್ಪರ್ಧೆ ನೀಡಬಲ್ಲರಾದರೂ ತಮ್ಮ ಜಯ ಕಟ್ಟಿಟ್ಟ ಬುತ್ತಿ. ಈ ಸಲ  ಕಾಂಗ್ರೆಸ್ ಪಕ್ಷಕ್ಕೆ ಎದುರಾಳಿಗಳೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆ: ನಾಮಪತ್ರ ಸಲ್ಲಿಸಲು ನಾಡಗೌಡರ ಜೊತೆಯಾಗಿ ಅವರ ಪತ್ನಿ ಸುವರ್ಣ, ಮಗಳು ಪಲ್ಲವಿ, ಸೇರಿದಂತೆ  ಸಾವಿರಾರು ಬೆಂಬಲಿಗರು ಮೆರವಣಿಗೆ ಉದ್ದಕ್ಕೂ ಕಾಂಗ್ರೆಸ್ ಪಕ್ಷಕ್ಕೆ, ಸಿ.ಎಸ್. ನಾಡಗೌಡರಿಗೆ ಜೈಕಾರ ಹಾಕುತ್ತಾ ನಡೆದರು.  ನಾಮಪತ್ರ ಸಲ್ಲಿಸುವ ಅವಧಿ ಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಸಿಆರ್‌ಪಿಎಫ್‌ನ ತುಕಡಿ  ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿ  ಸಂಪೂರ್ಣ ರಕ್ಷಣೆಯ ಭರವಸೆ ನೀಡಿದರು.

ಮಾಜಿ ಶಾಸಕ ಎಂ.ಎಂ.ಸಜ್ಜನ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ ಮಕಾನದಾರ, ಡಾ.ಎಂ.ಆರ್. ನಾಡ ಗೌಡ, ಶೃಂಗಾರಗೌಡ ಪಾಟೀಲ, ಎಂ.ಎಂ. ಮುದ್ದೇಬಿಹಾಳ ವಕೀಲರು, ಬಸವರಾಜ ಸುಕಾಲಿ, ಬಿ.ಎಸ್.ಪಾಟೀಲ ಯಾಳಗಿ, ಗುರು ತಾರನಾಳ, ನೀಲಕಂಠ ರಾವ ದೇಶಮುಖ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಲಾಡ್ಲೇ ಮಶಾಕ್ ಅವಟಿ, ಅಶೋಕ ನಾಡಗೌಡ, ಪ್ರಕಾಶ ಕಶೆಟ್ಟಿ, ಹುರಕಡ್ಲಿ,  ಮಹಿಬೂಬ ಎಲಿಗಾರ, ಮನೋಹರ ಕೊಣ್ಣೂರ ಮೊದಲಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣಾ ಲೆಕ್ಕ ವೀಕ್ಷಕರ ನೇಮಕ

ವಿಜಾಪುರ: ವಿಧಾನಸಭೆ ಚುನಾವಣೆಗೆ ಲೆಕ್ಕ ವೀಕ್ಷಕರನ್ನು ನೇಮಿಸಲಾಗಿದೆ. ಮುದ್ದೇಬಿಹಾಳ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ ಮತಕ್ಷೇತ್ರಗಳಿಗೆ ಕೇಂದ್ರ ಸರ್ಕಾರದ  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಲೆಕ್ಕಪತ್ರ ನಿಯಂತ್ರಕ ಭಾಸ್ಕರ್ ವರ್ಮಾ ಹಾಗೂ  ಇಂಡಿ ಮತ್ತು ಸಿಂದಗಿ ಮತಕ್ಷೇತ್ರಗಳಿಗೆ ಅಶೋಕ ಸಿನ್ಹಾ, ಬಬಲೇಶ್ವರ ವಿಜಾಪುರ, ನಾಗಠಾಣ ಮತಕ್ಷೇತ್ರಗಳಿಗೆ ಪ್ರವೀರ ಕುಮಾರ ಅವರನ್ನು ನಿಯೋಜಿಸಲಾಗಿದೆ.


ಅಭ್ಯರ್ಥಿಗಳ ವೆಚ್ಚಕ್ಕೆ ಸಂಬಂಧಿಸಿದಂತೆ ದೂರುಗಳಿಗಾಗಿ ಭಾಸ್ಕರ್ ವರ್ಮಾ ಅವರನ್ನು ಮೊ: 9483876619, ಫ್ಯಾಕ್ಸ್ :08352-270180, ಮುದ್ದೇಬಿಹಾಳ ಕ್ಷೇತ್ರಕ್ಕೆ ದೂ:08356-224540, ಬಸವನ ಬಾಗೇವಾಡಿ ದೂ: 08358-277293, ದೇವರಹಿಪ್ಪರಗಿ ದೂ: 08359-225306.

ಇಂಡಿ ಹಾಗೂ ಸಿಂದಗಿ ವೆಚ್ಚ ವೀಕ್ಷಕರಾದ ಅಶೋಕ ಸಿನ್ಹಾ ಅವರನ್ನು ಮೊ: 9483910487, ದೂ: 08352- 270150, ಬಬಲೇಶ್ವರ, ವಿಜಾಪುರ ನಾಗಠಾಣ ಮತಕ್ಷೇತ್ರದ ಲೆಕ್ಕ ವೀಕ್ಷಕರಾದ ಪ್ರವೀರ ಕುಮಾರ ಅವರನ್ನು ಮೊ: 9483877946 ಫ್ಯಾಕ್ಸ್ ನಂ. 08352- 270188ಗೆ ಸಂಪರ್ಕಿಸಿ ದೂರು ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

ನಿಷೇಧಾಜ್ಞೆ ಜಾರಿ
ವಿಜಾಪುರ:
ನಿರ್ವಾಚನಾಧಿಕಾರಿಗಳ ಕಚೇರಿಯ 100 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶಿವಯೋಗಿ ಕಳಸದ ಆದೇಶ ಹೊರಡಿಸಿದ್ದಾರೆ.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಒಟ್ಟಾರೆ 5ಜನರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ನಾಮಪತ್ರ ಸ್ವೀಕರಿಸುವ ನಿರ್ವಾಚನಾಧಿಕಾರಿಗಳ ಕಚೇರಿಯ ಸ್ಥಳದಿಂದ 100 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಉಮೇದುವಾರರ ಮೂರು ವಾಹನಗಳಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ. ಅವರನ್ನು ಹೊರತುಪಡಿಸಿ ಬೇರೆಯವರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT