ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆಗಿಲ್ಲ ಪ್ರಾತಿನಿಧ್ಯ

ಯಾದಗಿರಿ: ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ
Last Updated 4 ಏಪ್ರಿಲ್ 2013, 7:59 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾಗಿ ಮೂರು ವರ್ಷ ಕಳೆದು ನಾಲ್ಕನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಜಿಲ್ಲೆ, ಚೊಚ್ಚಲ ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸಾಗಿದ್ದು, ಎಲ್ಲೆಡೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತುಗಳು ಆರಂಭವಾಗಿವೆ. ಕೆಲವು ಪಕ್ಷಗಳು ಈಗಾಗಲೇ ಪ್ರಚಾರ ಕಾರ್ಯವನ್ನೂ ಆರಂಭಿಸಿವೆ.

ಜಿಲ್ಲೆಯಾದ ನಂತರ ಪ್ರಥಮ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಮಹಿಳಾ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ, ಯಾವ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.
1957 ರಿಂದ ಇಲ್ಲಿಯವರೆಗೆ ನಡೆದ 12 ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಮಹಿಳೆಯರ ಸ್ಪರ್ಧೆ ಅತ್ಯಲ್ಪ.

2004 ರಲ್ಲಿ ನಡೆದ ಚುನಾವಣೆಯಲ್ಲಿ ಗುರುಮಠಕಲ್ ಮತಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಮಂಗಲಾ ಕೊರಳ್ಳಿ ಸ್ಪರ್ಧಿಸಿದ್ದರು. 3405 ಮತಗಳನ್ನು ಪಡೆದಿದ್ದರು. 2008 ರಲ್ಲಿ ನಡೆದ ಚುನಾವಣೆಯಲ್ಲಿ ಸುರಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗಿರಿಜಮ್ಮ ಸ್ಪರ್ಧಿಸಿದ್ದರು.

ಆದರೆ ಈ ಬಾರಿಯ ಚುನಾವಣೆಯಲ್ಲಾದರೂ ಮಹಿಳೆಯರು ಸ್ಪರ್ಧೆ ಮಾಡಲಿದ್ದಾರೆಯೇ ಎಂಬ ಚಿಂತನೆಗಳು ವ್ಯಾಪಕವಾಗಿ ನಡೆಯುತ್ತಿವೆ. ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಪ್ರತಿಯೊಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಬ್ಬ ಮಹಿಳೆಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಮಾಡಿದ್ದು, ಜಿಲ್ಲೆಯ ಒಂದು ಕ್ಷೇತ್ರದಲ್ಲಾದರೂ ಮಹಿಳೆಯರಿಗೆ ಟಿಕೆಟ್ ಸಿಗಬಹುದೇ ಎನ್ನುವ ಕುತೂಹಲ ಮೂಡಿದೆ.

ಮಹಿಳಾ ಪಾರುಪತ್ಯ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ಶೇ. 50 ರಷ್ಟು ಮೀಸಲಾತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯಾದಗಿರಿ ಜಿಲ್ಲಾ ಪಂಚಾಯಿತಿ ಒಟ್ಟು 22 ಸದಸ್ಯರ ಪೈಕಿ, 13 ಸದಸ್ಯರು ಮಹಿಳೆಯರಾಗಿದ್ದಾರೆ. ಯಾದಗಿರಿ ತಾಲ್ಲೂಕು ಪಂಚಾಯಿತಿಯ 26 ಸ್ಥಾನಗಳ ಪೈಕಿ, 14 ಮಹಿಳೆಯರ ಪಾಲಾಗಿವೆ. ಶಹಾಪುರ ತಾಲ್ಲೂಕು ಪಂಚಾಯಿತಿಯ 25 ಸ್ಥಾನಗಳ ಪೈಕಿ, 13 ರಲ್ಲಿ ಮಹಿಳೆಯರು ಆಯ್ಕೆಯಾಗಿದ್ದಾರೆ. ಸುರಪುರ ತಾಲ್ಲೂಕು ಪಂಚಾಯಿತಿಯ 30 ಸ್ಥಾನಗಳ ಪೈಕಿ 16 ರಲ್ಲಿ ಮಹಿಳೆಯರು ಜಯಭೇರಿ ಬಾರಿಸಿದ್ದಾರೆ.

ಜಿಲ್ಲಾ ಪಂಚಾಯಿತಿ, ಮೂರು ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಸ್ಥಾನ ಮಹಿಳೆಯ ಪಾಲಾಗಿವೆ. ಅಲ್ಲದೇ ಯಾದಗಿರಿ ನಗರಸಭೆ, ಶಹಾಪುರ, ಸುರಪುರ ಪುರಸಭೆ, ಗುರುಮಠಕಲ್ ಪಟ್ಟಣ ಪಂಚಾಯಿತಿಗಳಲ್ಲೂ ಕಳೆದ ಅವಧಿಯಲ್ಲಿ ಮಹಿಳೆಯರೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮಹಿಳೆಯ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ.

ಯಾದಗಿರಿ ನಗರಸಭೆಯ 31 ವಾರ್ಡ್‌ಗಳ ಪೈಕಿ 11 ರಲ್ಲಿ ಮಹಿಳೆಯರು ಜಯಗಳಿಸಿದ್ದಾರೆ. ಸುರಪುರ ಪುರಸಭೆಯ 27 ಸ್ಥಾನಗಳಲ್ಲಿ 9 ರಲ್ಲಿ ಮಹಿಳೆಯರು ಆಯ್ಕೆಯಾಗಿದ್ದಾರೆ. ಶಹಾಪುರದ 23 ವಾರ್ಡ್‌ಗಳ ಪೈಕಿ 9 ವಾರ್ಡ್‌ಗಳನ್ನು ಮಹಿಳೆಯರು ಪ್ರತಿನಿಧಿಸುತ್ತಿದ್ದಾರೆ. ಗುರುಮಠಕಲ್ ಪಟ್ಟಣ ಪಂಚಾಯಿತಿಯ 17 ವಾರ್ಡ್‌ಗಳ ಪೈಕಿ, 8 ರಲ್ಲಿ ಮಹಿಳೆಯರು ಜಯಗಳಿಸಿದ್ದಾರೆ.

ಇದರ ಜೊತೆಗೆ ಜಿಲ್ಲೆಯಾದ ಒಂದು ವರ್ಷದ ನಂತರ ಆಡಳಿತದಲ್ಲಿ ಮಹಿಳೆಯರದ್ದೇ ಚಕ್ರಾಧಿಪತ್ಯವಿತ್ತು. ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರರು ಹೀಗೆ ಆಯಕಟ್ಟಿನ ಸ್ಥಾನಗಳಲ್ಲಿ ಮಹಿಳೆಯರೇ ನೇಮಕಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT