ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆಗೆ ಚುನಾವಣೆ ಶೀಘ್ರ : ಸಿದ್ದು ಭವಿಷ್ಯ

Last Updated 8 ಫೆಬ್ರುವರಿ 2011, 9:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕಾಂಗ್ರೆಸ್ ಕಾರ್ಯ ಕರ್ತರ ಶ್ರಮ ಮತ್ತು ಹೋರಾಟದ ಫಲವಾಗಿ ಕಾಂಗ್ರೆಸ್ ಪಕ್ಷ ಹನೂರು ಕ್ಷೇತ್ರದಲ್ಲಿ ಬಹುಮತ ಪಡೆದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ಹನೂರು ಮತ್ತು ರಾಮಾಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಆರ್.ಎಂ.ಸಿ ಆವರಣದಲ್ಲಿ ನಡೆದ ಹನೂರು ಕಾಂಗ್ರೆಸ್‌ನಿಂದ ವಿಜೇತರಾದ ನೂತನ ಜಿ.ಪಂ. ಹಾಗೂ ತಾ.ಪಂ. ಸದಸ್ಯರು, ಪಕ್ಷದ ಮುಖಂಡರು, ಮತದಾರರಿಗೆ ಸೋಮವಾರ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿರೋಧಪಕ್ಷ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿದೆ ಎಂದು ಮುಖ್ಯ ಮಂತ್ರಿಗಳು ಆರೋಪಿಸಿದ್ದಾರೆ. ನಾವು ಯಾವ ಕೆಲಸಕ್ಕೆ ಅಡ್ಡಿ ಪಡಿಸಿದ್ದೇವೆ ಎಂಬುದನ್ನು ಮೊದಲು ಹೇಳಲಿ. ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ. ಸುಳ್ಳನ್ನು ಸತ್ಯತ ತಲೆಗೆ ಹೊಡೆದಂತೆ ಹೇಳುತ್ತಾರೆ. 2009-10 ಮತ್ತು 2010-11ನೇ ಸಾಲಿನಲ್ಲಿ ಆಶ್ರಯ ಯೋಜನೆಯಡಿ ಒಂದು ಮನೆಯನ್ನಾದರೂ ಕಟ್ಟಿಕೊಟ್ಟಿ ದ್ದಾರೆಯೇ.

ಇದು ಸುಳ್ಳು ಅಂತ ಸಾಬೀತುಪಡಿಸಿದರೆ ಮತ್ತೆ ಮುಖ ತೋರಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಶೂನ್ಯ ಎಂದ ಅವರು, ಬಿಜೆಪಿ ಹೆಚ್ಚು ಕಾಲ ಅಧಿಕಾರದಲ್ಲಿ ಇದ್ದರೆ ದೇಶವನ್ನು ಸಾವಿರ ವರ್ಷಗಳ ಹಿಂದಕ್ಕೆ ಹೊಗುತ್ತದೆ ಎಂದು ಹೇಳಿದರು.ಬಿಜೆಪಿ ಸರ್ಕಾರ ಲೂಟಿಯಲ್ಲಿ ತೊಡಗಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ರಾಜ್ಯದ ಸಂಪತ್ತು ಉಳಿಸಲು ಸಾಧ್ಯ. 2011ರ ಮೇ, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವುದು ಗ್ಯಾರೆಂಟಿ ಎಂದದು ಭವಿಷ್ಯ ನುಡಿದರು.

ಜಿ.ಪಂ ಹಾಗೂ ತಾ.ಪಂ. ಸದಸ್ಯರುನ್ನು ಸನ್ಮಾನಿಸಿ ಸಂಸದ ಮಾತನಾಡಿದ ಆರ್.ಧ್ರುವನಾರಾಯಣ್, ಚಾಮರಾಜನಗರ ಕಾಂಗ್ರೆಸ್‌ನ ಭದ್ರಕೋಟೆ. ಈ ಕೋಟೆ ಉಳಿಯ ಬೇಕಾದರೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯ ಕರ್ತರು ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕಿದೆ. ಸಾಮಾಜಿಕ ನ್ಯಾಯದ ಪ್ರತಿಪಾದನೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಧನೆಗೆ ಕಾರಣ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಹದೇವ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯಿಂದ ಅಭಿವೃದ್ಧಿ ಕೆಲಸ ನಡೆದಿಲ್ಲ. ಲೂಟಿ ಹಣ ನೀಡಿ ಮತದಾರ ರನ್ನು ಭ್ರಷ್ಟರನ್ನಾಗಿ ಮಾಡಲಾಗಿದೆ ಎಂದು ಟೀಕಿಸಿದರು.

ಹನೂರು ಶಾಸಕ ಆರ್. ನರೇಂದ್ರ ಮಾತನಾಡಿ, ಪಕ್ಷದ ಜೊತೆಗಿದ್ದವರೇ ಬೆನ್ನಿಗೆ ಚೂರಿಹಾಕಿದ್ದರಿಂದ 2 ಜಿ.ಪಂ. ಸ್ಥಾನ ಕಳೆದು ಕೊಳ್ಳಬೇಕಾಯಿತು, ಯಾವುದೇ ಸಮಯ ದಲ್ಲಾದರೂ ಚುನಾವಣೆ ಬರಬಹುದು. ಆದ್ದರಿಂದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಸಿ. ಗುರುಸ್ವಾಮಿ, ಎಸ್. ಜಯಣ್ಣ, ಜಿ.ಪಂ. ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಮರಾಜು, ಜಿ.ಪಂ. ಮಾಜಿ ಸದಸ್ಯ ಎಸ್. ಶಿವಕುಮಾರ್, ಚುಡಾ ಮಾಜಿ ಅಧ್ಯಕ್ಷ ರಾಮಚಂದ್ರ, ಹನೂರು ಪ.ಪಂ. ಅಧ್ಯಕ್ಷೆ ಶ್ರೀಮತಿ ಪುಟ್ಟಮ್ಮ, ಸದಸ್ಯೆ ಪೂರ್ಣಿಮಾ ರಾಜು, ಕಾಡಾ ಮಾಜಿ ಅಧ್ಯಕ್ಷ ಹನುಮಂತಶೆಟ್ಟಿ, ಕೊಳ್ಳೇಗಾಲಬ್ಲಾಕ್  ಅಧ್ಯಕ್ಷ ತೋಟೇಶ್, ಚಾಮರಾಜನಗರ ಬ್ಲಾಕ್ ರವಿಕುಮಾರ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ರಾಚೇಗೌಡ, ಕೆಪಿಸಿಸಿ ಸದಸ್ಯ ಎಸ್. ಬಸವರಾಜು, ಅಶೋಕ್, ಪುಟ್ಟರಾಜು, ವೆಂಕಟರಮಣನಾಯ್ಡು, ದೊರೆಸ್ವಾಮಿನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಆಸ್ತಿ: ಸಿಬಿಐ ತನಿಖೆಗೆ ಆಗ್ರಹ
ಕೊಳ್ಳೇಗಾಲ:
ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರಾಗಿ ಆಯ್ಕೆಗೊಂಡ ದಿನದಿಂದ ಇಲ್ಲಿಯ ವರೆಗೆ ಸಂಪಾದಿಸಿದ ಆಸ್ತಿ ಎಷ್ಟಿದೆ ಎಂಬುದರ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಹನೂರು ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಮತ್ತು ಕೃತಜ್ಞತಾ ಸಮಾರಂಭಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಗಳಿಸಿರುವ ಆಸ್ತಿ, ಮುಖ್ಯಮಂತ್ರಿಯಾದ ನಂತರ ತಮ್ಮ ಮಕ್ಕಳು, ಅಳಿಯ ಸೇರಿದಂತೆ ಎಲ್ಲರಿಗೆ ಎಷ್ಟು ಆಸ್ತಿಮಾಡಿಕೊಟ್ಟಿದ್ದಾರೆ  ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಡೀ ಕುಟುಂಬದ ಆಸ್ತಿ ಹಾಗೂ ಡಿನೋಟಿಫೈನಿಂದ ಬಂದ ಅಕ್ರಮ ಆಸ್ತಿ ಕುರಿತು ಮಾಹಿತಿ ನೀಡಿಲ್ಲ. ಈ ಎಲ್ಲವೂ ಇಲ್ಲ ಎಂದ ಮೇಲೆ ಸಂಪೂರ್ಣ ಆಸ್ತಿವಿವರ ಹೇಗೆ ಆಗುತ್ತದೆ ಎಂದು ಅವರು ಪ್ರಶ್ನಿಸಿದರು. ಯಡಿಯೂರಪ್ಪ ಪ್ರಾಮಾಣಿಕರಾಗಿದ್ದರೆ ಒಟ್ಟಾರೆ ಸಂಪಾದಿಸಿರುವ ಆಸ್ತಿಯನ್ನು ಪ್ರಾಮಾಣಿಕವಾಗಿ ಬಹಿರಂಗಪಡಿ ಸಬೇಕು ಎಂದು ಒತ್ತಾಯಿಸಿದರು.
ವಿಧಾನಸೌಧದ ಮುಂದೆ ಮತ್ತೆ ವಾಮಾಚಾರ ನಡೆದಿ ರುವುದು ಮೂಢನಂಬಿಕೆ ಗಟ್ಟಿಗೊಳಿಸುತ್ತದೆ. ಇದೊಂದು ಹೀನ ಕೃತ್ಯ.  ಸಿಎಂ.ಪಾಪ ಪ್ರಜ್ಞೆ ಕಾಡುತ್ತಿದೆ. ಈ ವಾಮಾಚಾರ ಅವರೇ ಮಾಡಿಸಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT