ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧಕ್ಕೂ ಸಂಸತ್ ಮಾದರಿ ಭದ್ರತೆ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ವಿವಿಧೆಡೆ ನಡೆಯುತ್ತಿರುವ ಉಗ್ರರ ದಾಳಿ ಹಿನ್ನೆಲೆಯಲ್ಲಿ ವಿಧಾನಸೌಧ ಮತ್ತು ವಿಕಾಸಸೌಧದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ.

ಸಂಸತ್ ಭವನ ಪ್ರವೇಶ ಸಂದರ್ಭದಲ್ಲಿ ಇರುವ ಭದ್ರತಾ ವ್ಯವಸ್ಥೆಯನ್ನೇ ವಿಧಾನಸೌಧದಲ್ಲೂ ಜಾರಿ ಮಾಡಲು ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಮತ್ತಷ್ಟು ನಿರ್ಬಂಧ ಹೇರಲು ಯೋಜಿಸಲಾಗಿದೆ. ಪ್ರತಿಯೊಂದು ವಾಹನ ಮತ್ತು ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಭದ್ರತೆ ಸಲುವಾಗಿ ಯೋಜನೆ ರೂಪಿಸಿ, ವರದಿ ನೀಡಲು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದು ವಿಧಾನಸೌಧದ ಎಲ್ಲ ಗೇಟ್‌ಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿತು. ಒಂದೆರಡು ದಿನಗಳಲ್ಲಿ ಈ ಸಮಿತಿ, ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ವರದಿ ನೀಡಲಿದ್ದು, ನಂತರ ಅನೇಕ ನಿರ್ಬಂಧಗಳು ಜಾರಿಗೆ ಬರಲಿವೆ.

ವಿಧಾನಸೌಧದ ಒಳಗೆ ಪ್ರವೇಶ ಮಾಡಿದ ನಂತರ ಈಗ ವಾಹನಗಳನ್ನು ತಪಾಸಣೆ ಮಾಡುತ್ತಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ವಿಧಾನಸೌಧ ಪ್ರವೇಶಕ್ಕೂ ಮುನ್ನವೇ ವಾಹನಗಳನ್ನು ಸ್ಕ್ಯಾನ್ ಮಾಡಲು ಮತ್ತು ಅದರಲ್ಲಿ ಕುಳಿತಿರುವ ಎಲ್ಲರನ್ನೂ ತಪಾಸಣೆ ಮಾಡಲು ನಿರ್ಧರಿಸಲಾಗಿದೆ.

ಕಾರಿನಲ್ಲಿ ಕುಳಿತವರು ಕಡ್ಡಾಯವಾಗಿ ಇಳಿದು ಭದ್ರತಾ ತಪಾಸಣೆಗೆ ಒಳಗಾಗಬೇಕು. ಈ ಸಲುವಾಗಿ ವಿಕಾಸಸೌಧದ ಪಶ್ಚಿಮ ದ್ವಾರದ (ಮಹಾಲೇಖಪಾಲರ ಕಚೇರಿ ಹಿಂಭಾಗ) ಬಾಗಿಲು ತೆರೆಯಲು ಭದ್ರತಾ ತಂಡ ಸಲಹೆ ನೀಡಿದ್ದು, ಅಲ್ಲಿಯೇ ತಪಾಸಣೆ ಸಲುವಾಗಿ ಪ್ರತ್ಯೇಕ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ವಿಕಾಸಸೌಧದ ಪಶ್ಚಿಮ ದ್ವಾರದಲ್ಲಿ ಭದ್ರತಾ ತಪಾಸಣೆ ಹಿನ್ನೆಲೆಯಲ್ಲಿ ನಿರ್ಮಾಣ ಕೆಲಸ ಮಾಡಬೇಕಿದ್ದು, ಅದು ಹೇಗಿರಬೇಕು ಎಂಬ ಬಗ್ಗೆ ಸರ್ಕಾರದ ಪ್ರಧಾನ ವಾಸ್ತುಶಿಲ್ಪಿ ಉದಯ್ ಅವರಿಂದ ಸಲಹೆ ಪಡೆಯಲಾಗಿದೆ. ಅವರು ನಕ್ಷೆಯೊಂದನ್ನು ಸಿದ್ಧಪಡಿಸಿ ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಗೊತ್ತಾಗಿದೆ. ಶಾಸಕರ ಭವನದ ಕಡೆಯಿಂದ ಗೇಟ್ ನಂ. 1ರಿಂದಲೇ ಬಹುತೇಕ ಎಲ್ಲ ವಾಹನಗಳು ವಿಧಾನಸೌಧ ಪ್ರವೇಶ ಮಾಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ.

ಈ ಗೇಟ್‌ನಲ್ಲಿ  ಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ಸರ್ಕಾರದ ಕಾರ್ಯದರ್ಶಿಗಳ ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶ ನೀಡುವುದು. ವಿಕಾಸಸೌಧದ ಪಶ್ಚಿಮ ದ್ವಾರದಲ್ಲಿ ಪಾಸ್ ಇರುವ ಇತರ ಸಾರ್ವಜನಿಕ ವಾಹನಗಳನ್ನು ಬಿಡಲು ನಿರ್ಧರಿಸಲಾಗಿದೆ. ವ್ಯಕ್ತಿಗಳ ಜತೆಗೆ, ವಾಹನಗಳನ್ನೂ ಸ್ಕ್ಯಾನ್ ಮಾಡಲು ಅತ್ಯಾಧುನಿಕ ತಂತ್ರಜ್ಞಾನದ ವೊರೆ ಹೋಗಲು ತೀರ್ಮಾನಿಸಲಾಗಿದೆ. ಸಚಿವರು, ಶಾಸಕರು ಮತ್ತು ಕಾರ್ಯದರ್ಶಿಗಳ ಕಾರುಗಳಲ್ಲಿ ಇರುವ ಇತರ ಜನರು ಕೂಡ ಭದ್ರತೆ ತಪಾಸಣೆ ಸಲುವಾಗಿ ಕಾರಿನಿಂದ ಇಳಿದು, ಮೆಟಲ್ ಡಿಟೆಕ್ಟರ್ ಮೂಲಕ ಹಾದು ಹೋಗಬೇಕು. ಇದನ್ನು ಕಡ್ಡಾಯ ಮಾಡಲು ಸೂಚಿಸಲಾಗಿದೆ.

ವಿಕಾಸಸೌಧದ ಪಶ್ಚಿಮ ದ್ವಾರದ ಪಕ್ಕದಲ್ಲಿ ವಾಹನ ನಿಲುಗಡೆಗೆ ಹೆಚ್ಚು ಜಾಗ ಇದ್ದು, ಅಲ್ಲೇ ಎಲ್ಲ ಸಾರ್ವಜನಿಕ ವಾಹನಗಳನ್ನು ನಿಲ್ಲಿಸಬೇಕು. ಆದರೆ, ಇನ್ನು ಮುಂದೆ ವಿಕಾಸಸೌಧದ ನೆಲಮಹಡಿ ಪಾರ್ಕಿಂಗ್ ಜಾಗದಲ್ಲಿ ಸಾರ್ವಜನಿಕ ವಾಹನಗಳಿಗೆ ಪ್ರವೇಶ ಇಲ್ಲ. ಅಲ್ಲಿ ಏನಿದ್ದರೂ ಸರ್ಕಾರಿ ವಾಹನ ಮತ್ತು ವಿಧಾನಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವಾಹನಗಳಿಗೆ ಮಾತ್ರ ಅವಕಾಶ.

ವಾಹನಗಳಿಗೆ ಎಲೆಕ್ಟ್ರಾನಿಕ್ ರೀಡಿಂಗ್ ಪಾಸ್‌ಗಳನ್ನು ವಿತರಿಸಲು ನಿರ್ಧರಿಸಿದ್ದು, ಇದರ ಜಾರಿ ಸ್ವಲ್ಪ ವಿಳಂಬವಾಗಲಿದೆ. ಸದ್ಯಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕೊಟ್ಟ ಪಾಸ್‌ಗಳನ್ನೇ ಬಳಸಬಹುದು.

ಗುರುತಿನ ಚೀಟಿ ಕಡ್ಡಾಯ: ವಿಧಾನಸೌಧಕ್ಕೆ ಬರುವ ಸಾರ್ವಜನಿಕರು ಇನ್ನು ಮುಂದೆ ಕಡ್ಡಾಯವಾಗಿ ಭಾವಚಿತ್ರ ಇರುವ ಯಾವುದಾದರೂ ಗುರುತಿನ ಚೀಟಿ ತರಬೇಕು. ಇಲ್ಲದಿದ್ದರೆ ಪ್ರವೇಶಕ್ಕೆ ಅವಕಾಶ ಇಲ್ಲ. ಪಾಸ್ ಕೂಡ ನೀಡುವುದಿಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ.

ಸಿಬ್ಬಂದಿಗೇ ಪ್ರತ್ಯೇಕ ಗೇಟ್: ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಲುವಾಗಿಯೇ ಗೇಟ್ ನಂಬರ್ 2ರ ಪಕ್ಕದಲ್ಲಿ ಪ್ರತ್ಯೇಕ ಗೇಟ್ ನಿರ್ಮಿಸಲು ನಿರ್ಧರಿಸಲಾಗಿದೆ.

ಸಾರ್ವಜನಿಕರ ಹಾಗೆ ಸಿಬ್ಬಂದಿಯನ್ನೂ ತಪಾಸಣೆ ಮಾಡಿ ಒಳ ಬಿಡಲಾಗುತ್ತದೆ. ಕಡ್ಡಾಯವಾಗಿ ಅವರು ಕೂಡ ಗುರುತಿನ ಚೀಟಿ ತೋರಿಸಿಯೇ ಒಳ ಬರಬೇಕಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸುನಿಲ್ ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು. ಸುರಕ್ಷತೆ ದೃಷ್ಟಿಯಿಂದ ಅನೇಕ ಸಲಹೆಗಳನ್ನು ನೀಡುತ್ತಿದ್ದು, ಜಾರಿ ಅನಿವಾರ್ಯ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT