ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಯಕ ದರ್ಶನಕ್ಕೆ ಮಳೆ ವಿಘ್ನ

ಬೀದಿಬೀದಿಯಲ್ಲಿ ಬೆಳಕಿನ ವಿನ್ಯಾಸ; ಭಕ್ತಿಯ ಸಂಚಲನ
Last Updated 11 ಸೆಪ್ಟೆಂಬರ್ 2013, 7:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಎಲ್ಲ ಪ್ರಮುಖ ರಸ್ತೆಗಳು ಹಾಗೂ ಓಣಿಗಳು ಈಗ ವಿದ್ಯುತ್‌ ದೀಪಗಳಿಂದ ಜಗಮಗಿ­ಸು­ತ್ತಿವೆ. ಗಣೇಶ ಹಬ್ಬದ ಅಂಗವಾಗಿ ಅಲ್ಲಲ್ಲಿ ಸ್ಥಾಪಿಸಿರುವ ಗಣೇಶ ಮೂರ್ತಿಗಳ ಬಳಿ ಭಕ್ತಿ ಸಂಗೀತ ಅಲೆ ಅಲೆಯಾಗಿ ಕೇಳುತ್ತಿದ್ದರೆ ಜನರು ಗಣಪನಿಗೆ ನಮಿಸಿ ಧನ್ಯರಾಗುತ್ತಿದ್ದಾರೆ. ಇದೆಲ್ಲದರ ನಡುವೆ ಮಂಗಳವಾರ ಸುರಿದ ಮಳೆ ಭಕ್ತರ ಉತ್ಸಾಹಕ್ಕೆ ತಣ್ಣೀರೆರಚಿದೆ.

ನಗರದ ದಾಜಿಬಾನ ಪೇಟೆಯಲ್ಲಿ ಶ್ರೀ ಸಾರ್ವ­ಜನಿಕ ಗಜಾನನೋತ್ಸವ ಸಮಿತಿ ಸ್ಥಾಪಿಸಿ­ರುವ 21 ಅಡಿ ಎತ್ತರದ ‘ಹುಬ್ಬಳ್ಳಿ ಕಾ ರಾಜಾ’ ಪ್ರಮುಖ ಆಕರ್ಷಣೆಯಾಗಿದ್ದು ವಿವಿಧ ಓಣಿಗಳಲ್ಲಿ ಸ್ಥಾಪಿಸಿ­ರುವ ವಿವಿಧ ಗಾತ್ರದ ಮತ್ತು ಬಗೆಬಗೆಯ ವಿನ್ಯಾ­ಸದ ಗಣಪತಿ ಕೂಡ ಜನರ ಗಮನ ಸೆಳೆಯುತ್ತಿವೆ.

ದುರ್ಗದ ಬೈಲ್‌ನಲ್ಲಿ ಶ್ರೀ ಗಜಾನನ ಉತ್ಸವ ಸಮಿತಿ ದೊಡ್ಡ ಅಂಗಣದಲ್ಲಿ ಸ್ಥಾಪಿಸಿರುವ ದೊಡ್ಡ ಗಾತ್ರದ ಗಣಪತಿಯ ಮುಂದೆ ಶಿವಲಿಂಗ ಉದ್ಭ­ವದ ದೃಶ್ಯ ಗಮನ ಸೆಳೆಯುತ್ತಿದೆ. ಇದಕ್ಕೆ ಹೊರ­ಭಾಗ­ದಲ್ಲಿ ಕೇದಾರನಾಥ ದೇವಾಲಯ ಮಾದರಿ­ಯಲ್ಲಿ ದೊಡ್ಡ ಗೋಪುರವನ್ನು ನಿರ್ಮಿಸಲಾಗಿದೆ.

ಸ್ಟೇಷನ್‌ ರಸ್ತೆಯ ಶ್ರೀ ಗಣೇಶೋತ್ಸವ ಮಂಡಳಿ ಎತ್ತರದ ವೇದಿಕೆಯ ಮೇಲೆ ಮಾಡಿರುವ ಕಾಮದಹನ ರೂಪಕ ಮನಮೋಹಕವಾಗಿದೆ. ಚಲಿಸುವ ಮೂರ್ತಿಗಳ ಮೇಲೆ ಬಣ್ಣ ಬಣ್ಣದ ವಿದ್ಯುತ್‌ ದೀಪಗಳ ಬೆಳಕು ಬಿದ್ದಾಗ ವಿಶೇಷ ಅನುಭವವಾಗುತ್ತದೆ.

ಮರಾಠ ಗಲ್ಲಿಯ 21 ಅಡಿ ಉದ್ದದ ಗಣೇಶ, ಶಿಂಪಿಗಲ್ಲಿಯ ಫಂಡರಾಪುರ ವಿಠಲ ಮಂದಿರ ಮಾದರಿಯ ಒಳಗಿನ ಬೆಳ್ಳಿ ಗಣಪ, ಶೀಲವಂತರ ಓಣಿಯ ಬಂಗಾರ ಆಭರಣಳಿಂದ ಅಲಂಕೃತ ಗಣೇಶ, ಸರಾಫಗಟ್ಟಿಯ 121 ಕೆಜಿ ಬೆಳ್ಳಿ ಗಣಪ, ಆತನ ತಲೆ ಮೇಲಿನ ಬೆಳ್ಳಿಯ ಛತ್ರಿ, ಮುಂಭಾಗದ ಬೆಳ್ಳಿಯ ಇಲಿ, ಲಂಕಾ ವಿಜಯೋತ್ಸವವನ್ನು ಚಿತ್ರಿಸುವ ಬೊಂಬೆಗಳು ವಿಶೇಷ ಗಮನ ಸೆಳೆಯುತ್ತವೆ. ದೊಡ್ಡ, ಆಕರ್ಷಕ ಗಣಪತಿ ವಿಗ್ರಹಗಳ ಮುಂದೆ ಮಳೆಯ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರೆ ಗಲ್ಲಿಗಳಲ್ಲಿ ಸ್ಥಾಪಿಸಿರುವ ಗಣಪತಿ ಮೂರ್ತಿಗಳ ಮುಂದೆಯೂ ಜನರ ಸಾಲು ಕಂಡುಬರುತ್ತಿತ್ತು.

ಕಮಿಷನರ್‌ ಮನವಿಗೆ ಸ್ಪಂದನೆ
ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಜೋರಾಗಿ ಹಾಡು ಹಾಕುವುದು, ಅಸಭ್ಯವಾಗಿ ವರ್ತಿಸುವುದು ಇತ್ಯಾದಿ ಮಾಡಬಾರದು ಎಂದು ನಗರ ಪೊಲೀಸ್‌ ಆಯುಕ್ತರು ಮಾಡಿರುವ ಮನವಿಗೆ ಬಹುತೇಕ ಗಣೇಶೋತ್ಸವ ಸಮಿತಿಯವರು ಪೂರಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಹೆಚ್ಚಿನ ಜಾಗದಲ್ಲಿ ಗಣೇಶನ ಹಬ್ಬ ಸದ್ದು ಗದ್ದಲವಿಲ್ಲದೆ ನಡೆಯುತ್ತಿದೆ.

ಮಂಗಳವಾರ ಸಂಜೆ ವಿವಿಧ ಭಾಗಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿದ ಡಿಸಿಪಿ ಸುಭಾಷ ಗುಡಿಮನಿ, ದುರ್ಗದ ಬೈಲ್ ಸರ್ಕಲ್‌ನಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡಿ ಎಲ್ಲ ಕಡೆಗಳಲ್ಲೂ ಶಾಂತಿಯುತವಾಗಿ ಗಣೇಶ ಹಬ್ಬ­ವನ್ನು ಆಚರಿಸಲಾಗುತ್ತಿದ್ದು ಪೊಲೀಸರ ಮನ­ವಿಗೆ ಸಾರ್ವಜನಿಕರು ಪೂರಕವಾಗಿ ಸ್ಪಂದಿಸಿ­ರುವುದು ಸಂತಸದ ವಿಷಯ ಎಂದು ಹೇಳಿದರು.

‘ವಿನಾಯಕ’ ಪುಸ್ತಕ ಬಿಡುಗಡೆ
ನಗರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಸಿದ್ಧಪಡಿಸಿದ ’ವಿನಾಯಕ’ ಎಂಬ ಕಿರು ಕೃತಿಯನ್ನು ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಈಚೆಗೆ ಬಿಡುಗಡೆ ಮಾಡಿದರು.

ಪುಸ್ತಕಗಳನ್ನು ಓದಿ, ಸಾಹಿತ್ಯದ ಚಿಂತನೆ ಮಾಡುವುದರಿಂದ ಯುವ ಜನಾಂಗದಲ್ಲಿ ಒಳ್ಳೆಯ ಗುಣಗಳು ಮೇಳೈಸಲು ಸಾಧ್ಯ ಎಂದು ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು.

ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಆರೂರು ಲಕ್ಷ್ಮಣ ಶೇಟ್‌ ಮಾತನಾಡಿ ಮೂರ್ತಿ ಕಲೆ, ಜಾನಪದ ಕಲೆ ಹಾಗೂ ಸಾಹಿತ್ಯವನ್ನು ಪಸರಿಸಲು ಗಣೇಶೋತ್ಸವ ನೆರವಾಗುತ್ತದೆ ಎಂದರು.

ಮಹಾಮಂಡಳದ ಗೌರವ ಅಧ್ಯಕ್ಷ ಮೋಹನ ಲಿಂಬಿಕಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಂತರಾಜ, ಪಿ.ಎಸ್‌.ಧರಣೆಪ್ಪನವರ, ಶೇಖರ ಹುಬ್ಬಳ್ಳಿಚಂದ್ರಶೇಖರ ಹೊರಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT