ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಶದ ಅಂಚಿನಲ್ಲಿ ಕೊಳಲಾಟ

Last Updated 15 ಫೆಬ್ರುವರಿ 2012, 7:55 IST
ಅಕ್ಷರ ಗಾತ್ರ

ಕಾರವಾರ: ಅವರಿಬ್ಬರ ಬದುಕು ಅಂತ್ಯ ಗೊಂಡರೆ `ಕೊಳಲಾಟ~ ಎನ್ನುವ ಜನಪದ ಕಲೆಯ ಆಯುಷ್ಯವೂ ಮುಗಿಯಲಿದೆ. ಶಾಶ್ವತವಾಗಿ ಈ ಕಲೆ ಜನಮಾನಸ ದಿಂದ ಮರೆಯಲಾಗಲಿದೆ. ಹಳ್ಳಿಯ ಗಡಿಯನ್ನು ಬಿಟ್ಟು ಹೊರಗೆ ಬಾರದ ಈ ಜನಪದ ಬಗ್ಗೆ ತಿಳಿದವರೂ ವಿರಳ. ಯುವ ಪೀಳಿಗೆಗಂತೂ ಈ ಕಲೆಯ ಬಗ್ಗೆ ಏನೇನೂ ತಿಳಿದಿಲ್ಲ.

ಕೊಳಲಾಟ ಜನಪದ ಕಲೆಯನ್ನು ಬಲ್ಲ ಇಬ್ಬರೇ ಇಬ್ಬರು ವ್ಯಕ್ತಿಗಳು ರಾಜ್ಯದಲ್ಲಿದ್ದಾರೆ. ಶಿರಸಿ ತಾಲ್ಲೂಕಿನಿಂದ ಅಂದಾಜು 40 ಕಿ.ಮೀ ದೂರದಲ್ಲಿ, ಪಶ್ಚಿಮಘಟ್ಟದ ದಟ್ಟಡವಿಯಲ್ಲಿರುವ ಗ್ರಾಮ ಜಡ್ಡಿಗದ್ದೆಯ ಸರ್ವಾ ಶಿವು ಗೌಡ ಮತ್ತು ತಿಮ್ಮನಾಗು ಗೌಡ ಇವರೇ ಕೊಳಲಾಟದ ಕೊನೆಯ ಕೊಂಡಿ. ಇಬ್ಬರೂ ಎಪ್ಪತ್ತರ ಆಸುಪಾಸಿ ನಲ್ಲಿದ್ದಾರೆ.

ಕೊಳಲಾಟ ಒಂದು ಬಗೆಯ ವಿಶಿಷ್ಟ ಜನಪದ ಕಲೆ. ತಮಾಷೆಗಾಗಿ, ಬೇಸರ ಕಳೆಯಲು ಹುಟ್ಟಿಕೊಂಡ ಈ ಕಲೆ ಒಂದು ರೀತಿಯ ವಿಶಿಷ್ಟ ಅನುಭವ ನೀಡುತ್ತದೆ. ಇದೊಂದು ಜಾಣ್ಮೆ ಪ್ರದರ್ಶಿಸುವ ಆಟವೂ ಆಗಿದೆ. ಸರ್ಕಸ್ ಕಂಪೆನಿಗಳಲ್ಲಿ ಕತ್ತೆ, ಒಂಟೆಗಳನ್ನು ಬಳಸಿ ಉಂಗುರ ಸೇರಿದಂತೆ ಇನ್ನಿತರ ವಸ್ತು ಗಳನ್ನು ಹುಡುಕುವ ಪ್ರದರ್ಶನಗಳು ಇರುತ್ತವೆ. ಕೊಳಲಾಟವೂ ಅದೇ ರೀತಿಯದಾಗಿದ್ದು ಕೊಳಲಿನಿಂದ ಬರುವ ಶ್ರುತಿ ಆಧರಿಸಿ ವ್ಯಕ್ತಿಯೊಬ್ಬ ವಸ್ತುವನ್ನು ಎ್ಲ್ಲಲಿಯೇ ಇಟ್ಟರೂ ಅದನ್ನು ಹುಡುಕಿ ಕೊಂಡು ತರುತ್ತಾನೆ.

ಜಡ್ಡಿಗದ್ದೆಯ ಕರೆಒಕ್ಕಲ ಸಮು ದಾಯಕ್ಕೆ ಸೇರಿದ ಸರ್ವಾ ಮತ್ತು ತಿಮ್ಮ ಗೌಡರು ತಮ್ಮ ಹಿರಿಯರಿಂದ ಈ  ಕಲೆಯನ್ನು ಬಳುವಳಿಯಾಗಿ ಪಡೆದು ಕೊಂಡಿದ್ದಾರೆ. ಈ ಇಬ್ಬರು ಕಲಾ ವಿದರನ್ನು ಮಾತನಾಡಿಸಲು  `ಪ್ರಜಾ ವಾಣಿ~ ಪ್ರತಿನಿಧಿ ಅವರ ಮನೆಗೆ ಹೋದಾಗ ಕೊಳಲಾಟ ಕಲೆಯ ಪ್ರದರ್ಶನ ನೀಡಿದರು.

ತಿಮ್ಮ ಗೌಡರ ಸಂಬಂಧಿಯೊಬ್ಬರು ಪೆನ್ನಿನ ಕ್ಯಾಪ್ ಅನ್ನು (ಈ ಆಟಕ್ಕೆ ಯಾವುದೇ ವಸ್ತು ಬಳಸಬಹುದು) ಮರೆಯಲ್ಲಿ ಇಟ್ಟರು. ಬಲಗೈಯನ್ನು ಮುಂದಕ್ಕೆ ಚಾಚಿದ ಸರ್ವಾಗೌಡರು, ತಿಮ್ಮಗೌಡರು ಕೊಳಲ ನಾದವನ್ನು ಆಲಿಸುತ್ತ ಪೆನ್ ಕ್ಯಾಪ್  ಹುಡುಕಲು ಆರಂಭಿಸಿದರು. ಎರಡು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿಯೇ ಅದನ್ನು ಹುಡುಕಿ ಸರ್ವಾಗೌಡರು ಆಶ್ಚರ್ಯ ಮೂಡಿಸಿದರು.

ವಸ್ತುವನ್ನು ಬಚ್ಚಿಡುವಾಗ ಅದು ಕೊಳಲು ನುಡಿಸುವಾತನಿಗೆ ಕಾಣಬೇಕು. ಆದರೆ, ಅದನ್ನು ಹುಡುಕುವ ವ್ಯಕ್ತಿ ಆ ಸ್ಥಳ ನೋಡದಂತೆ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ವಸ್ತುಇಟ್ಟ ನಂತರ ಬಟ್ಟೆ ಬಿಚ್ಚಲಾಗುತ್ತದೆ. ಕೊಳಲಿನಿಂದ ಬರುವ ಶ್ರುತಿಯ ಆಧಾರದ ಮೇಲೆ ಹುಡುಕುವಾತ ವಸ್ತುವಿನ ಕಡೆಗೆ ಸಾಗುತ್ತಾನೆ. ಈತ ಸ್ವಲ್ಪ ದಿಕ್ಕು ತಪ್ಪಿದರೂ ಕೊಳಲಿನಿಂದಲೇ ಎಚ್ಚರಿಕೆ ನೀಡುವ ಪ್ರಯತ್ನಗಳು ಅಲ್ಲಿ ನಡೆ ಯುತ್ತದೆ.

ಈ ಆಟಕ್ಕೆ ಬಳಸುವ ಮೂರು ಕಣ್ಣಿನ, ಅಂದಾಜು ನಾಲ್ಕು ಅಡಿ ಉದ್ದದ ಕೊಳಲು ನುಡಿಸುವುದು ಸುಲಭವಲ್ಲ. ಅದಕ್ಕೆ ಕಠಿಣ ಅಭ್ಯಾಸ ಬೇಕು. ಬಚ್ಚಿಟ್ಟವಸ್ತು ಹುಡುಕಿ ತೆಗೆಯು ವವರೆಗೆ ಉಸಿರು ಬಿಗಿ ಹಿಡಿದುಕೊಂಡೇ ಕೊಳಲು ಊದುತ್ತಿರಬೇಕು. ಸಂಪೂರ್ಣ ಉಸಿರಾಟ ಮೂಗಿನಿಂದ. ಬಲಗೈ ಮುಂದಕ್ಕೆ ಚಾಚಿ ಬಚ್ಚಿಟ್ಟ ವಸ್ತು ಹುಡುಕುತ್ತ ಹೋಗುವ ವ್ಯಕ್ತಿ ಬುದ್ಧಿಶಕ್ತಿಯನ್ನು ಇಲ್ಲಿ ಪ್ರಯೋಗಿಸ ಬೇಕಾಗುತ್ತದೆ. ಕೊಳಲಿನ ನಾದ ಎಲ್ಲಿಯವರೆಗೆ ಕೇಳಿಸುತ್ತದೆಯೋ ಆ ವ್ಯಾಪ್ತಿಯಲ್ಲಿ ಮಾತ್ರ ಬಚ್ಚಿಟ್ಟಿರುವ ವಸ್ತುವನ್ನು ಹುಡುಕಲು ಸಾಧ್ಯ.

`ನಮ್ಮ ಅಜ್ಜ, ತಂದೆಯ  ಕಾಲದಲ್ಲಿ ನಡೆಯುತ್ತಿದ್ದ ಕೃಷಿ ಕಾರ್ಯ, ಹಬ್ಬ- ಹರಿದಿನ, ವಿಶೇಷ ಸಮಾರಂಭಗಳಲ್ಲಿ ತಮಾಷೆಗೆ, ಬೇಸರ ಕಳೆಯಲು ಮತ್ತು ಹತ್ತು, ಐದು ಪೈಸೆ ಆಸೆಗಾಗಿ ಕೊಳ ಲಾಟ ಆಡುತ್ತಿದ್ದೆವು. ಬಚ್ಚಿಟ್ಟ ಹಣ ಹುಡುಕಿ ತೆಗೆದವರಿಗೇ ಎನ್ನುವ ಷರತ್ತಿನ ಮೇಲೆ ಈ ಆಟ ಆಡುತ್ತಿದ್ದೆವು. ಈ ಕಲೆಯನ್ನು ಕಲಿಯಿರಿ ಎಂದರೆ ಯಾರೂ ಆಸಕ್ತಿ ವಹಿಸುತ್ತಿಲ್ಲ~ ಎನ್ನುತ್ತಾರೆ ಸರ್ವಾ ಗೌಡ ಮತ್ತು ತಿಮ್ಮ ಗೌಡ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT