ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನ್ಯಾಸ ಕ್ಷೇತ್ರದ ದಂತಕತೆ ಕೆನ್ಯಾ ಹರ ಜತೆ...

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಿನ್ಯಾಸ ಕ್ಷೇತ್ರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಮಾತನಾಡುವಾಗ ಜಪಾನ್‌ನ ಕೆನ್ಯಾ ಹರ ಅವರನ್ನು ಹೊರಗಿಟ್ಟರೆ ಅಲ್ಲಿ ವಿನ್ಯಾಸಗಳು ರೂಪುಗೊಳ್ಳಲು ಸಾಧ್ಯವೇ ಇಲ್ಲ. ಗ್ರಾಫಿಕ್ ಡಿಸೈನರ್ ಆಗಿದ್ದ ವ್ಯಕ್ತಿಯೊಬ್ಬ ತನ್ನ ಅಸಾಮಾನ್ಯ ಚಿಂತನೆ, ಸಿದ್ಧಾಂತ ಮತ್ತು ದೂರದೃಷ್ಟಿಗಳ ಪರಿಣಾಮವಾಗಿ ಜಗತ್ತಿನ ವಿನ್ಯಾಸ ಕ್ಷೇತ್ರಕ್ಕೇ ಮಾಸ್ಟರ್ ಆಗಿ ಹೊರಹೊಮ್ಮಿದ್ದಲ್ಲದೆ, ಹಲವಾರು ಗ್ರಂಥಗಳ ಕರ್ತೃವಾಗಿ, ಡಿಸೈನಿಂಗ್ ಗುರುವಾಗಿ ಬೆಳೆದ ಬಗೆ ಅನೂಹ್ಯ.

ಹಲವು ಆಯಾಮಗಳ ವಿವರಣೆ ಕೊಡಬೇಕಾದ ವ್ಯಕ್ತಿತ್ವ ಅವರದು. ಒಂದೇ ಮಾತಿನಲ್ಲಿ ಹೇಳುವುದಾದರೆ ಡಿಸೈನಿಂಗ್ ಕ್ಷೇತ್ರದ ಪಾರುಪತ್ಯಗಾರ, ನಡೆದಾಡುವ ದಂತಕತೆ.

ವಿನ್ಯಾಸ ಕ್ಷೇತ್ರದ ಹರಹು ಬಹಳ ದೊಡ್ಡದು. ಅಷ್ಟರಲ್ಲೂ ಕೆನ್ಯಾ ಹರ ಹೆಜ್ಜೆ ಗುರುತುಗಳ ದಾಖಲೆಯಿದೆ. ವಾಸ್ತುಶಿಲ್ಪ, ಕಟ್ಟಡ ವಿನ್ಯಾಸ, ಕಾರು, ಸುಗಂಧದ್ರವ್ಯ, ಆಲಂಕಾರಿಕ/ ಉಡುಗೊರೆ ವಸ್ತುಗಳು, ಕರಕುಶಲ ವಸ್ತು ಹೀಗೆ ಏನಕೇನ ಸಂಬಂಧವೇ ಇಲ್ಲದ ಕ್ಷೇತ್ರಗಳಲ್ಲಿ ತಮ್ಮ ಪರಿಕಲ್ಪನೆಯನ್ನು, ಅದರ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಜಗತ್ತೇ ಇವರ ಕಡೆ ಹುಬ್ಬೇರಿಸಿ ನೋಡಿದ್ದು `ಮ್ಯುಜಿ~ ತನ್ನ ಮೊದಲ ಮಳಿಗೆಯನ್ನು ಅಮೆರಿಕದಲ್ಲಿ ತೆರೆದಾಗ. ಕೆನ್ಯಾ ಹರ ಯಾವ್ಯಾವ ಕ್ಷೇತ್ರಗಳಲ್ಲಿ ಪ್ರಯೋಗಗಳನ್ನು ಮಾಡಿದ್ದಾರೋ ಅವುಗಳ ಮಾಸ್ಟರ್‌ಪೀಸ್‌ಗಳು `ಮ್ಯುಜಿ~ಯಲ್ಲಿವೆ.
 
2005 ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭೋತ್ಸವ ಮತ್ತು ಸಮಾರೋಪ ಸಮಾರಂಭಗಳ ವಿನ್ಯಾಸವೂ ಇವರದೇ ಕನಸಿನ ಕೂಸು. ನಗರದಲ್ಲಿ `ಗಂಜಾಂ~ನವರು ಏರ್ಪಡಿಸಿದ್ದ ಉಪನ್ಯಾಸಕ್ಕೆ ಆಗಮಿಸಿದ್ದ ಅವರು `ಮೆಟ್ರೊ~ದೊಂದಿಗೆ ಮಾತನಾಡಿದರು.

ಬೆಂಗಳೂರಿಗೆ ಮೊದಲ ಭೇಟಿಯೇ?
ಹೌದು. ಬೆಂಗಳೂರು ಬಗ್ಗೆ ಬಹಳ ಕೇಳಿದ್ದೆ. ಓದಿದ್ದೆ. ಬಂದಿರಲಿಲ್ಲ. ಬಹಳ ಸುಂದರವಾದ ನಗರ. ಬಹುಶಃ ಇಲ್ಲಿನ ವಾತಾವರಣ ತುಂಬಾ ಇಷ್ಟವಾಯಿತು. 34 ವರ್ಷಗಳ ಹಿಂದೆ ಮೊದಲ ಬಾರಿಗೆ ಭಾರತಕ್ಕೆ ಅಂದರೆ ಚಂಡೀಗಡಕ್ಕೆ ಭೇಟಿ ನೀಡಿದೆ. ಅಮೃತಸರ, ಮುಂಬೈ, ಚೆನ್ನೈಗೂ ಭೇಟಿ ನೀಡಿದ್ದೇನೆ.

ಬೆಂಗಳೂರಿನ ಮೂಲಸೌಕರ್ಯ, ನಗರ ಸೌಂದರ್ಯ, ವಾಸ್ತುಶಿಲ್ಪದ ಬಗ್ಗೆ?
ಬೆಂಗಳೂರು ಬುದ್ಧಿವಂತರ ನಗರ. ಮುಂಬೈ, ಚೆನ್ನೈ ಅಥವಾ ದೆಹಲಿಗಿಂತ ಬೆಂಗಳೂರು ಸುಂದರವಾಗಿದೆ. ವಿಮಾನ ನಿಲ್ದಾಣದಿಂದ ಇಲ್ಲಿಗೆ ಬರುವ ಹಾದಿಯುದ್ದಕ್ಕೂ ಅದನ್ನು ಕಂಡುಕೊಂಡೆ. ಅಲ್ಲಿಂದ ಇಲ್ಲಿವರೆಗೂ ಬರುವಾಗ ಕಟ್ಟಡಗಳನ್ನು ಗಮನಿಸಿದಾಗ ವಾಸ್ತುಶಿಲ್ಪ ಮುಂಬೈ ಮತ್ತು ಚೆನ್ನೈಗಿಂತ ಉತ್ತಮವಾಗಿದೆ ಅನಿಸಿತು. ಆದರೆ ವಿದೇಶಿ ವಿನ್ಯಾಸಕ್ಕೆ ಮೊರೆಹೋದಂತಿದೆ.

ನಿಮ್ಮ ದೃಷ್ಟಿಯಲ್ಲಿ ನಗರ ಸೌಂದರ್ಯೀಕರಣ ಎಂದರೇನು?
`ಮೆಟ್ರೊ~ ಓಡುತ್ತಿರುವುದನ್ನು ಕಂಡೆ. ಭೂ ಸಾರಿಗೆಯಲ್ಲಿ ಇದು ಮಹತ್ವದ ಹೆಜ್ಜೆ. ಆದರೆ ನಗರೀಕರಣ, ಅದರ ಸೌಂದರ್ಯೀಕರಣ, ಸೌಂದರ್ಯಪ್ರಜ್ಞೆ ಕಾರಣದಿಂದ ನಮ್ಮದೇ ಪರಂಪರೆಯನ್ನು, ಪರಂಪರಾಗತ ವಾಸ್ತುಶಿಲ್ಪವನ್ನು ಕಡೆಗಣಿಸಬಾರದು. `ಮೆಟ್ರೊ~ವನ್ನು ಎಲ್ಲಾ ಕಡೆ ಅಂಡರ್‌ಗ್ರೌಂಡ್ ಮಾಡಿದ್ದರೆ ಎಷ್ಟೊಂದು ಮರಗಳು, ಕಟ್ಟಡಗಳು ನೆಲಸಮವಾಗುವುದು ತಪ್ಪುತ್ತಿತ್ತು. ನಗರ ನಿರ್ಮಾಣ ಯೋಜನೆಗೆ ದೂರದೃಷ್ಟಿ ಅಗತ್ಯ.

ನಗರವನ್ನು ಸ್ವಚ್ಛವಾಗಿಡುವುದು ಎಂದರೆ ಹೇಗೆ?
ಇದು ಬದ್ಧತೆಯ ಮಾತು. ನಮ್ಮ ಜಪಾನ್ ಹೇಗಿದೆ ಗೊತ್ತಾ? ಅಲ್ಲಿ ಎಲ್ಲರೂ ಇದು ನಮ್ಮ ಸಿಟಿ, ಇದು ನಮ್ಮ ನಗರ ಅಂತ ಪ್ರೀತಿಯಿಂದ ಒಂದು ಸಣ್ಣ ಕಸವನ್ನೂ ಎತ್ತಿ ಡಬ್ಬಕ್ಕೆ ಹಾಕುತ್ತಾರೆ. ಇಡೀ ಜಪಾನ್ ಸ್ವಚ್ಛವಾಗಿ, ಕಸ, ಕೊಳೆಯಿಲ್ಲದೆ ಹೊಳೆಯುತ್ತಿದೆ.

ಒಬ್ಬ ವ್ಯಕ್ತಿ ಜೀವನಪ್ರೀತಿಯನ್ನು ಇಷ್ಟೊಂದು ವ್ಯಾಪಕವಾಗಿ ವಿವಿಧ ಕ್ಷೇತ್ರಗಳಲ್ಲಿ
ವಿಸ್ತರಿಸಲು ಸಾಧ್ಯವೇ?

ನಿಮ್ಮಲ್ಲಿ ಪ್ರತಿಭೆಯಿದ್ದು, ಅದನ್ನು ದುಡಿಸಿಕೊಳ್ಳುವ ಹಂಬಲವಿದ್ದು, ಜೀವನಪ್ರೀತಿಯೂ ಜತೆಗಿದ್ದರೆ ಖಂಡಿತ ಸಾಧ್ಯ. ಸದಾ ಪ್ರಯೋಗಶೀಲವಾಗಿರುವ ಮನಸ್ಸು ಹೊಸತುಗಳತ್ತ ತುಡಿಯುತ್ತಲೇ ಇರುತ್ತದೆ.

ನಿಮ್ಮ ಕೈಯಲ್ಲಿ ವಿನ್ಯಾಸವೊಂದು ಮೂಡಿಬರುವ ಬಗೆ ಹೇಗೆ?
ಅನುಭವ ಮತ್ತು ವಸ್ತುವಿನ ಸಮಪಾಕ ವಿನ್ಯಾಸವಾಗಿ ಮೂಡಿಬರುತ್ತದೆ! ಶೂನ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ರೂಪ ಕೊಡುತ್ತಾ ಹೋಗುತ್ತೇನೆ. ಅಂತಿಮವಾಗಿ ನನ್ನ ಪರಿಕಲ್ಪನೆ ಪಡಿಮೂಡುತ್ತದೆ.

ಯಾವುದೋ ರಾಷ್ಟ್ರಕ್ಕಾಗಿ ನೀವು ನಿರ್ಮಿಸುವ ವಿನ್ಯಾಸದಲ್ಲಿ ಆ ನೆಲದ ಸೊಗಡು, ಸಂಸ್ಕೃತಿಯ ಪ್ರಾತಿನಿಧ್ಯವಿರುತ್ತದೆಯೇ?
ನಿರ್ದಿಷ್ಟ ಪ್ರದೇಶದ ಪರಿಸ್ಥಿತಿ ಅರಿಯದೆ ನೀವು ಯಾವುದೇ ಸ್ಥಳದಲ್ಲಿ ಕೆಲಸ ಮಾಡಲಾಗದು. ಯಾವತ್ತೂ, ಸಂಸ್ಕೃತಿ ವಿಚಾರ ಬಂದಾಗ ಸ್ಥಳೀಯತೆಗೇ ಆದ್ಯತೆ. ಸಂಸ್ಕೃತಿ ಸ್ಥಳೀಯವಾಗಿ ಹುಟ್ಟಿಕೊಳ್ಳುವಂಥದ್ದು. ಜಾಗತಿಕ ಸಂಸ್ಕೃತಿ ಎಂಬುದೇ ಇಲ್ಲ.

ಹತ್ತಾರು ನೂರಾರು ಸ್ಥಳೀಯ ಸಂಸ್ಕೃತಿಗಳು ಸಮನ್ವಯಗೊಂಡಾಗ ಅದು ಜಾಗತಿಕ ಸಂಸ್ಕೃತಿ ಎಂದು ಗುರುತಿಸಿಕೊಳ್ಳುತ್ತದೆ. ಆದರೆ ಈ ಪರಿಕಲ್ಪನೆಯೇ ತಪ್ಪು. ಹಾಗಾಗಿ ನಾನು ಯಾವ ದೇಶಕ್ಕಾಗಿ ಕೆಲಸ ಮಾಡುತ್ತೇನೋ ಆ ನೆಲದ ಸಂಸ್ಕೃತಿ, ಸಂಪ್ರದಾಯ, ಪರಂಪರೆಯನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT