ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನ್ಯಾಸ ಗುರಿ ಫ್ಯಾಷನ್ ಗರಿ

Last Updated 4 ಜನವರಿ 2013, 19:59 IST
ಅಕ್ಷರ ಗಾತ್ರ

ಹೊಂಬಣ್ಣದ ಹುಡುಗಿಯ ಮಾತಿನ ವೈಖರಿ ಹುಣ್ಣಿಮೆಯ ದಿನ ಕಾಣುವ ಕಡಲ ತೊರೆಗಳಂತಿತ್ತು. ಆತ್ಮವಿಶ್ವಾಸದ ಬೆನ್ನಲ್ಲಿಯೇ ಯಶಸ್ಸಿನ ಮೆಟ್ಟಿಲೇರುತ್ತಿರುವ ಈ ಸುಂದರಿಗೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಬೇಕೆಂಬ ಬಯಕೆ.

ಹಿರಿತೆರೆಯಲ್ಲಿ ಯಶಸ್ವಿಯಾಗಬೇಕೆಂಬ ತವಕದಲ್ಲಿರುವ ಈ ನೀಳಕಾಯದ ಸುಂದರಿ 2012ರ `ಗ್ಲಾಮ್ ಹಂಟ್'ನ ವಿಜೇತ ರೂಪದರ್ಶಿ ರೂಪಾ ಹೆಗಡೆ. ಕಡಲ ತಡಿಯಲ್ಲಿರುವ ಕಾರವಾರ ಇವರ ಹುಟ್ಟೂರು. ತಂದೆ ಗಣೇಶ್ ನಿವೃತ್ತ ಸೈನಿಕ. ತಾಯಿ ಶುಭಾ.

ಪ್ರೌಢ ಶಾಲೆಯಲ್ಲಿರುವಾಗಲೇ ಫ್ಯಾಷನ್ ವಸ್ತ್ರ ವಿನ್ಯಾಸಕಿಯಾಗಬೇಕೆಂಬ ಕನಸಿನ ಗೋಪುರ ಕಟ್ಟಿಕೊಂಡ ರೂಪಾ, ಪಿಯುಸಿ ನಂತರ ಮಾಡಿದ್ದು ಫ್ಯಾಷನ್ ಪದವಿ. ಆಮೇಲೆ ಖಾಸಗಿ ಕಂಪೆನಿಯಲ್ಲಿ ಉದ್ಯೋಗವೂ ಸಿಕ್ಕಿತು. ವಿನ್ಯಾಸಕಿಯಾಗಬೇಕು ಎಂದುಕೊಂಡಿದ್ದ ಅವರ ರೂಪಕ್ಕೆ ಸ್ನೇಹಿತರಿಂದ ಮೆಚ್ಚುಗೆ ವ್ಯಕ್ತಗೊಂಡಿದ್ದೇ ತಡ

ರೂಪದರ್ಶಿಯಾಗಬೇಕೆಂಬ ಆಸೆ ಮೊಳಕೆಯೊಡೆಯಿತು. ಕೇರಳದಲ್ಲಿ ನಡೆದ ಜೋಯಾಲೂಕಾಸ್ ಫ್ಯಾಷನ್ ಶೋನಲ್ಲಿ ಮೊದಲ ಬಾರಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಅಲ್ಲಿಂದ ಆರಂಭವಾದ ಫ್ಯಾಷನ್ ಪಯಣ ಕಳೆದ ವರ್ಷ `ಆಸ್ಪೈರ್' ಹಾಗೂ `ಬೈಟು ಕಾಫಿ' ಆಯೋಜಿಸಿದ್ದ ಗ್ಲಾಮ್ ಹಂಟ್ ಫ್ಯಾಷನ್ ಶೋನಲ್ಲಿ ವಿಜೇತೆಯಾಗುವ ಮಟ್ಟಿಗೆ ಬೆಳೆಯಿತು.

ಎರಡು ವರ್ಷಗಳಿಂದ ಫ್ರೀಲಾನ್ಸ್ ಮಾಡೆಲ್ ಆಗಿ ವೃತ್ತಿ ಬದುಕು ಆರಂಭಿಸಿರುವ ರೂಪಾ ಅವರು `ವಿವೆಲ್ ಮಿಸ್ ಸೌತ್ ಇಂಡಿಯಾ 2011' ಸೇರಿದಂತೆ ಕೇರಳ, ಚೆನ್ನೈಗಳಲ್ಲಿ ನಡೆದ ಶೋಗಳಲ್ಲಿ ರ‌್ಯಾಂಪ್ ವಾಕ್ ಮಾಡಿದ್ದಾರೆ. ಸಮೀರ್ ಖಾನ್, ಗೌತಮ್ ಪವಾಟೆ ಹಾಗೂ ರಾಜೇಶ್ ಶೆಟ್ಟಿ ಸೇರಿದಂತೆ ಖ್ಯಾತ ವಿನ್ಯಾಸಕಾರರ ಉಡುಪುಗಳಿಗೆ ವಾಕ್ ಮಾಡಿದ್ದಾರೆ. ಇವಿಷ್ಟೇ ಅಲ್ಲದೇ `ಸೆಂಟ್ರಲ್', `ನೂತನ್' ಬ್ರಾಂಡ್‌ಗಳ ಹೋರ್ಡಿಂಗ್‌ಗಳಿಗೂ ರೂಪದರ್ಶಿಯಾದ ಅನುಭವವಿದೆ.
ಕ್ಯಾಲರಿ ಲೆಕ್ಕದಲ್ಲಿ ಆಹಾರ

ಮಾಡೆಲಿಂಗ್‌ಗೆ ದೇಹ ಸೌಂದರ್ಯ ಕಾಪಿಟ್ಟುಕೊಳ್ಳುವ ಬಗ್ಗೆ ಕೆಲವು ಟಿಪ್ಸ್‌ಗಳನ್ನು ರೂಪಾ ನೀಡುತ್ತಾರೆ. `ಪ್ರತಿದಿನ ಬೆಳಿಗ್ಗೆ ಓಟ್ಸ್ ತಿನ್ನಬೇಕು. ಅನ್ನ ಕಡಿಮೆ ಹಾಗೂ ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು. ನಾನು ದಿನಕ್ಕೆ 1600ರಿಂದ 1800 ಕ್ಯಾಲರಿಯಷ್ಟು ಶಕ್ತಿ ಕೊಡುವಂಥ ಆಹಾರ ಸೇವಿಸುತ್ತೇನೆ. ಮಾಂಸಾಹಾರ ಹಾಗೂ ಜಂಕ್ ಫುಡ್‌ನಿಂದ ದೂರ' ಎಂದು ಮುಗುಳ್ನಗುತ್ತಾರೆ.

`ದೇಹ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುವ ನಾನು, ರ‌್ಯಾಂಪ್ ಶೋಗಳಲ್ಲಿ ವಿನ್ಯಾಸಕರು ಹೇಳಿದ ಬಟ್ಟೆಗಳನ್ನೇ ಧರಿಸುತ್ತೇನೆ. ಆದರೆ ಕಾರ್ಯಕ್ರಮಕ್ಕೂ ಮೊದಲೇ ನಿರ್ಧರಿಸಿರುತ್ತೇನೆ. ಹಾಗಂತ ಅತ್ಯಂತ ಕಡಿಮೆ ಬಟ್ಟೆಯನ್ನೂ ಧರಿಸುವುದಿಲ್ಲ. ಮಾಡೆಲಿಂಗ್‌ಗೆ ಅಪ್ಪ, ಅಮ್ಮನೂ ಒಪ್ಪಿಗೆ ನೀಡಿರುವುದರಿಂದ ಅವರಿಗೂ ಮುಜುಗರ ಆಗದ ರೀತಿ ನಡೆದುಕೊಳ್ಳಬೇಕು. ಮಾಡೆಲಿಂಗ್ ಕ್ಷೇತ್ರದಲ್ಲಿ ಇಂದು ಸ್ಪರ್ಧೆ ಹೆಚ್ಚಾಗಿದೆ. ಸವಾಲುಗಳೂ ಕಡಿಮೆ ಏನಿಲ್ಲ. ಇಲ್ಲಿ ಒಳ್ಳೆಯವರು ಇರುವಂತೆ ಕೆಟ್ಟವರೂ ಇದ್ದಾರೆ. ಆದರೆ ನಾವು ಆತ್ಮಸ್ಥೈರ್ಯದಿಂದ ಮುನ್ನುಗ್ಗಬೇಕು, ಯಶಸ್ಸು ಗಳಿಸುವವರೆಗೂ ಬಿಡದೇ ಪ್ರಯತ್ನ ಮಾಡಬೇಕು' ಎಂದು ಸಲಹೆ ನೀಡುತ್ತಾರೆ ರೂಪಾ.

ಯಾವುದೇ ಉಡುಪು ಧರಿಸಿದರೂ ಅದೇ ಫ್ಯಾಷನ್ ಆಗಬೇಕು ಎಂದು ಹೇಳುವ ರೂಪಾ ಅವರಿಗೆ ಕನಸಿನ ಹುಡುಗ ಹೀಗೆಯೇ ಇರಬೇಕು ಎಂಬ ಕಲ್ಪನೆ ಏನೂ ಇಲ್ಲವಂತೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಒಂದು ಹಂತ ಮುಗಿದ ಮೇಲೆ ವಿನ್ಯಾಸಕಿಯಾಗಿ ವೃತ್ತಿ ಜೀವನ ಮುಂದುವರಿಸಬೇಕು ಎಂಬ ಗುರಿಯನ್ನು ಹೊಂದಿದ್ದಾರೆ. ವಿನ್ಯಾಸಕ ಮನೀಷ್ ಅರೋರಾ ಅವರ ಸಂಗ್ರಹಗಳನ್ನು ಹೆಚ್ಚಾಗಿ ಇಷ್ಟಪಡುವ ರೂಪಾಗೆ ಮಾಡೆಲಿಂಗ್ ಹೊರತಾಗಿ ಊರು ಸುತ್ತುವ ಹವ್ಯಾಸವಿದೆ. ಸದ್ಯ ಮಾಡೆಲಿಂಗ್‌ನಲ್ಲಿ ಮಿಂಚುತ್ತಿರುವ ಈ ಚೆಲುವೆ ಹಿರಿತೆರೆಯಲ್ಲಿ ಮಿಂಚಲು ತುದಿಗಾಲಲ್ಲಿ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT