ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನ್ಯಾಸ ಸುಂದರ, ಪ್ರಯಾಣ ದುರ್ಭರ

ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ರೈಲು * ನಿರ್ವಹಣೆ ಕೊರತೆ * ಪ್ರಯಾಣಿಕರ ಅಸಮಾಧಾನ
Last Updated 2 ಜೂನ್ 2013, 19:58 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮತ್ತು ಚೆನ್ನೈ ನಗರಗಳ ನಡುವೆ ಏಪ್ರಿಲ್ 25ರಿಂದ ಆರಂಭವಾಗಿರುವ ಹವಾನಿಯಂತ್ರಿತ ಡಬಲ್ ಡೆಕ್ಕರ್ ರೈಲಿನ (ಒಂದೇ ಬೋಗಿಯಲ್ಲಿ ಮೇಲೆ ಮತ್ತು ಕೆಳಗೆ ಆಸನಗಳಿರುವ ರೈಲು) ನಿರ್ವಹಣೆ ಸರಿಯಾಗಿಲ್ಲ ಎಂಬ ದೂರುಗಳು ಹೆಚ್ಚಾಗಿವೆ. ರೈಲು ಸೇವೆ ಆರಂಭಗೊಂಡ ಕೆಲವೇ ವಾರಗಳಲ್ಲಿ ಡಬಲ್ ಡೆಕ್ಕರ್ ರೈಲಿನ ಬಗ್ಗೆ ಪ್ರಯಾಣಿಕರ ಅಸಮಾಧಾನ ಹೊರಬಿದ್ದಿದೆ.

ಡಬಲ್ ಡೆಕ್ಕರ್ ರೈಲಿನಲ್ಲಿ ಆರಾಮದಾಯಕ ಪ್ರಯಾಣದ ನಿರೀಕ್ಷೆ ಹೊಂದಿದ್ದ ಪ್ರಯಾಣಿಕರು ರೈಲಿನ ಅಸಮರ್ಪಕ ನಿರ್ವಹಣೆಯ ಬಗ್ಗೆ ಬೇಸರಗೊಂಡಿದ್ದಾರೆ.

`ಇತರೆ ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ಡಬಲ್ ಡೆಕ್ಕರ್ ರೈಲು ವಿನ್ಯಾಸದ ದೃಷ್ಟಿಯಿಂದ ಚೆನ್ನಾಗಿದೆ. ಆದರೆ, ಈ ರೈಲಿನ ವ್ಯವಸ್ಥೆಯೂ ಬೇರೆ ಸಾಮಾನ್ಯ ರೈಲುಗಳಂತೆಯೇ ಇದೆ. ನಿರೀಕ್ಷೆಗೆ ತಕ್ಕಂತೆ ರೈಲಿನ ಒಳಭಾಗ ಪ್ರಯಾಣಿಕ ಸ್ನೇಹಿಯಾಗಿಲ್ಲ. ಹೊಸ ರೈಲಿನ ನಿರ್ವಹಣೆಯೂ ಸರಿಯಾಗಿಲ್ಲ' ಎಂಬುದು ನಿವೃತ್ತ ಉದ್ಯೋಗಿ ರಾಜಶೇಖರ್ ಅವರ ದೂರು.

`ರೈಲಿನ ಆಸನಗಳ ರಚನೆ ಆರಾಮದಾಯಕವಾಗಿಲ್ಲ. ಕಾಲುಗಳನ್ನು ಚಾಚಲು ಸ್ಥಳವಿಲ್ಲದಂತೆ ಇಕ್ಕಟ್ಟಾಗಿ ಆಸನಗಳನ್ನು ಅಳವಡಿಸಲಾಗಿದೆ. ವೃದ್ಧರು ಈ ರೈಲಿನಲ್ಲಿ ಪ್ರಯಾಣಿಸಿದರೆ ಮೊಣಕಾಲು ನೋವು ಇನ್ನು ಹೆಚ್ಚಾಗುತ್ತದೆ' ಎಂದು ಅವರು ಹೇಳಿದರು.

`ಡಬಲ್ ಡೆಕ್ಕರ್ ರೈಲಿನ ನಿರ್ವಹಣೆಯನ್ನು ಇನ್ನೂ ಉತ್ತಮಗೊಳಿಸಬೇಕು. ರೈಲಿನಲ್ಲಿ ಲಗೇಜ್ ಇಡಲು ಸರಿಯಾದ ವ್ಯವಸ್ಥೆಯೇ ಇಲ್ಲ. ಆಸನಗಳ ಮೇಲ್ಭಾಗದಲ್ಲಿ ಸ್ಥಳಾವಕಾಶವಿದ್ದರೂ ಅದನ್ನು ಅತಿ ಚಿಕ್ಕದಾಗಿ ಮಾಡಲಾಗಿದೆ. ಇದರಿಂದ, ಲಗೇಜ್ ಇಡಲಾಗದೆ ಪರದಾಡುವಂತಾಗುತ್ತದೆ. ಶೌಚಾಲಯದ ನಿರ್ವಹಣೆಯೂ ಸರಿಯಾಗಿಲ್ಲ.

ರೈಲಿನೊಳಗೆ ಊಟವೂ ಚೆನ್ನಾಗಿಲ್ಲ. ಮೇಲೆ ಕೆಳಗೆ ಆಸನಗಳಿವೆ ಎಂಬುದನ್ನು ಬಿಟ್ಟರೆ ಇತರೆ ಸಾಮಾನ್ಯ ರೈಲಿಗೂ, ಈ ರೈಲಿಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ' ಎಂಬುದು ಚೆನ್ನೈನಿಂದ ಬೆಂಗಳೂರಿಗೆ ಡಬಲ್ ಡೆಕ್ಕರ್ ರೈಲಿನಲ್ಲಿ ಮೊದಲ ಬಾರಿಗೆ ಪ್ರಯಾಣಿಸಿದ ಗೃಹಿಣಿ ನಿರ್ಮಲಾ ಅವರ ಅಭಿಪ್ರಾಯ.

`ರೈಲಿನ ಶೌಚಾಲಯದಲ್ಲಿ ಸ್ವಚ್ಛತೆಯನ್ನು ಕಾಪಾಡಿಲ್ಲ. ಹವಾನಿಯಂತ್ರಣ ವ್ಯವಸ್ಥೆಯೂ ಸರಿಯಾಗಿಲ್ಲ. ಕೆಲವು ಕಡೆ ಹೆಚ್ಚು ಚಳಿಯಾದರೆ ಕೆಲವೆಡೆ ಸೆಕೆಯಾಗುತ್ತದೆ. ಬೇಸಿಗೆಯ ಸಂದರ್ಭದಲ್ಲಿ ಹವಾನಿಯಂತ್ರಣ ರೈಲಿನಲ್ಲಿ ಆರಾಮವಾಗಿ ಪ್ರಯಾಣಿಸಬಹುದೆಂದು ಭಾವಿಸಿದ್ದೆ. ಆದರೆ, ನನ್ನ ನಿರೀಕ್ಷೆ ಹುಸಿಯಾಗಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಡಬಲ್ ಡೆಕ್ಕರ್ ರೈಲಿನ ಬಗ್ಗೆ: ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರು- ಚೆನ್ನೈ ನಡುವಿನ ಹವಾನಿಯಂತ್ರಿತ ಡಬಲ್ ಡೆಕ್ಕರ್ ರೈಲಿಗೆ ಚಾಲನೆ ನೀಡಲಾಗಿದೆ. ಹನ್ನೊಂದು ಬೋಗಿಗಳ ಡಬಲ್ ಡೆಕ್ಕರ್ ರೈಲು 362 ಕಿ.ಮೀ. ದೂರದ ಚೆನ್ನೈಗೆ ಆರು ಗಂಟೆ ಅವಧಿಯಲ್ಲಿ ತಲುಪಲಿದೆ. ಪ್ರತಿ ಬೋಗಿಯಲ್ಲಿ 120 ಆಸನಗಳಿದ್ದು, ಒಟ್ಟು 1,320 ಆಸನಗಳಿವೆ. ಟಿಕೆಟ್‌ನ ಬೆಲೆಯು  ರೂ 470.

ರೈಲಿನ ಬೋಗಿಯಲ್ಲಿ ಕೆಳಗಿನ ಆಸನಗಳು ಪ್ಲಾಟ್‌ಫಾರ್ಮ್‌ಗೆ ಸಮಾನಾಂತರದಲ್ಲಿವೆ. ಮೇಲಿನ ಆಸನಗಳು ಕೆಳಗಿನ ಆಸನಗಳಿಂದ ಮೂರು ಅಡಿ ಎತ್ತರದಲ್ಲಿವೆ. ಈ ರೈಲು ಸಾಮಾನ್ಯ ರೈಲುಗಳಿಗಿಂತ 11 ಮಿ.ಮೀ ಎತ್ತರದಲ್ಲಿದೆ.
***

`ಪುಣೆಯಲ್ಲಿರುವ ಡಬಲ್ ಡೆಕ್ಕರ್ ರೈಲಿನ ವ್ಯವಸ್ಥೆ ಮತ್ತು ನಿರ್ವಹಣೆಯು ಉತ್ತಮವಾಗಿದೆ. ಅಲ್ಲಿ ಹಲವು ಬಾರಿ ನಾನು ಮತ್ತು ನನ್ನ ಪತ್ನಿ ಪಯಣಿಸಿದ್ದೇವೆ. ಬೆಂಗಳೂರು - ಚೆನ್ನೈ ಡಬಲ್ ಡೆಕ್ಕರ್ ರೈಲಿನಲ್ಲಿ ಮೊದಲ ಬಾರಿ ಪ್ರಯಾಣಿಸಿದೆ. ರೈಲಿನಲ್ಲಿ ಮುಖ್ಯವಾಗಿ ಶೌಚಾಲಯ ಮತ್ತು ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿಲ್ಲ. ಇದನ್ನು ಸರಿಪಡಿಸುವತ್ತ ಅಧಿಕಾರಿಗಳು ಗಮನ ನೀಡಬೇಕು'
-ಅಶೋಕ ಕುಮಾರ್, ನಿವೃತ್ತ ಮಿಲಿಟರಿ ಅಧಿಕಾರಿ

`ಡಬಲ್ ಡೆಕ್ಕರ್ ರೈಲಿನ ಬಗ್ಗೆ ಜನರ ಸ್ಪಂದನೆ ಚೆನ್ನಾಗಿದೆ. ಹೊಸ ರೈಲು ಸೇವೆಯ ಬಗ್ಗೆ  ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ರೈಲಿನ ವಿನ್ಯಾಸದ ಬಗ್ಗೆ ರೈಲ್ವೆ ಮಂಡಳಿಯು ಕ್ರಮ ಕೈಗೊಳ್ಳಬೇಕು. ಶೌಚಾಲಯ ಹಾಗೂ ಹವಾನಿಯಂತ್ರಣ ವ್ಯವಸ್ಥೆ ಸರಿಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಆಸನ ವ್ಯವಸ್ಥೆಯ ದೂರನ್ನು ರೈಲ್ವೆ ಮಂಡಳಿ ಗಮನಕ್ಕೆ ತರಲಾಗುವುದು'

-ಅನಿಲ್‌ಕುಮಾರ್ ಅಗರವಾಲ್, ವ್ಯವಸ್ಥಾಪಕ, ನೈರುತ್ಯ ರೈಲ್ವೆ ವಿಭಾಗ


ಪ್ರತಿ ದಿನ ಸೇವೆ
22625/26 ಸಂಖ್ಯೆಯ ಡಬಲ್ ಡೆಕ್ಕರ್ ರೈಲು ಪ್ರತಿ ದಿನ ತನ್ನ ಸೇವೆಯನ್ನು ಒದಗಿಸುತ್ತಿದೆ. ಚೆನ್ನೈಯಿಂದ ಬೆಳಿಗ್ಗೆ 7.25 ಕ್ಕೆ ಹೊರಟು ಬೆಂಗಳೂರು ನಗರವನ್ನು ಮಧ್ಯಾಹ್ನ 1.30ಕ್ಕೆ ತಲುಪುತ್ತದೆ ಮತ್ತು ಬೆಂಗಳೂರಿನಿಂದ ಮಧ್ಯಾಹ್ನ 2.40ಕ್ಕೆ ಹೊರಟು ಚೆನ್ನೈಯನ್ನು ರಾತ್ರಿ 8.45ಕ್ಕೆ ತಲುಪುತ್ತದೆ.

ಚೆನ್ನೈನಿಂದ ಹೊರಟ ರೈಲು ಪೆರಂಬೂರು, ಅರಕೋಣಂ, ಕಾಟ್ಪಾಡಿ, ಜೋಲಾರ್‌ಪೇಟೆ, ಕೆ.ಆರ್.ಪುರ, ದಂಡು ರೈಲು ನಿಲ್ದಾಣದಲ್ಲಿ ನಿಲುಗಡೆ ಹೊಂದಿ ನಗರ ರೈಲು ನಿಲ್ದಾಣ ತಲುಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT