ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪತ್ತು ನಿರ್ವಹಣೆ: ಅಣಕು ಪ್ರದರ್ಶನ

Last Updated 14 ಡಿಸೆಂಬರ್ 2013, 9:23 IST
ಅಕ್ಷರ ಗಾತ್ರ

ಹಾಸನ: ‘ಪೆಟ್ರೋಲ್, ಎಲ್.ಪಿ.ಜಿ. ಹಾಗೂ ಇತರ ರಾಸಾಯನಿಕಗಳನ್ನು ಬಳಸುವ ಅನೇಕ ಅಪಾಯಕಾರಿ ಕಾರ್ಖಾನೆಗಳು ಜಿಲ್ಲೆಯಲ್ಲಿದ್ದು, ಇಂಥ ಕಡೆ ಸೂಕ್ತ ಸುರಕ್ಷತೆಯ ಕ್ರಮ ಕೈಗೊಳ್ಳಬೇಕು. ಇದನ್ನು ನೋಡಿ­ಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ತಂಡ ರಚಿಸಲಾಗಿದೆ’ ಎಂದು ಕೈಗಾರಿಕಾ ಸಹಾಯಕ ನಿರ್ದೇಶಕ ಸೋಮಶೇಖರ್ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಎಚ್.ಪಿ.ಸಿ.ಎಲ್.ಕಂಪೆನಿ ಆವರಣದಲ್ಲಿ ಏರ್ಪಡಿಸಿದ್ದ ರಾಸಾಯನಿಕ ದುರಂತಗಳ ನಿವಾರಣಾ ದಿನ ಹಾಗೂ ಅಣುಕು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘1986ರ ಪರಿಸರ ಸಂರಕ್ಷಣೆ ಕಾಯ್ದೆಯಡಿ 1996ರಲ್ಲಿ ರಾಸಾ­ಯನಿಕ ದುರಂತ ನಿಯಮಗಳನ್ನು ರೂಪಿಸಲಾಗಿದೆ. ಜಿಲ್ಲೆಯಲ್ಲಿ 2006­ರಲ್ಲಿ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಅಪಾಯಕಾರಿ ಕಾರ್ಖಾನೆಯಲ್ಲಿ ತುರ್ತು ಸ್ಥಿತಿ ನಿರ್ವಹಣೆ, ಸನ್ನಡತೆ ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ಅವರು ತಿಳಿಸಿದರು.

ಎಚ್.ಪಿ.ಸಿ.ಎಲ್ ಜಿಲ್ಲೆಯಲ್ಲಿರುವ ಅತಿ ಹೆಚ್ಚು ಅಪಾಯಕಾರಿ ಸಂಸ್ಥೆ. ಉಳಿದಂತೆ ಹಿಮ್ಮತ್‌ಸಿಂಗ್‌, ಪೆಟ್ರೋನೆಟ್, ಕುಮಾರ್ ಆರ್ಗಾನಿಕ್ಸ್‌, ಕರ್ನಾಟಕ ನೂಟ್ರಾ ಸುಟಿಕಲ್ಸ್, ಮುಂತಾದವು ರಾಸಾಯನಿಕ ವಿಪತ್ತು ಆತಂಕ ಎದುರಿಸುತ್ತಿರುವ ಕಂಪನಿಗಳು. ಇಲ್ಲಿಯ ಅಧಿಕಾರಿ, ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕವಾಗಿ ತುರ್ತು ನಿರ್ವಹಣೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಸೋಮಶೇಖರ್ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಮಂಜುನಾಥ್, ‘ಅಪಘಾತಗಳು ಆಕಸ್ಮಿಕವಾಗಿ ಸಂಭವಿಸುತ್ತವೆ ಆದರೆ ಅದನ್ನು ನಿಯಂತ್ರಿಸಲು ಮತ್ತು ಅಪಾಯಗಳನ್ನು ಶಮನಗೊಳಿಸಲು ಸನ್ನಧ್ದರಾಗಿರಬೇಕು’ ಎಂದರು.

‘ವಿಕೋಪಗಳನ್ನು ಹೇಗೆ ನಿರ್ವಹಿಸಿ ಹಾನಿಯನ್ನು ಕಡಿಮೆ ಮಾಡಬೇಕೆಂಬ ಬಗ್ಗೆ ನಿರಂತರ ತರಬೇತಿ, ಜಾಗೃತಿ ಅಗತ್ಯ’ ಎಂದ ಅವರು ಭೋಪಾಲ್ ಅನಿಲ ದುರಂತದ ಸಂದರ್ಭದಲ್ಲಿ ತಾವು ಅಲ್ಲಿ ಮಾಡಿದ್ದ ಕೆಲಸದ ಅನುಭವ ಹಂಚಿಕೊಂಡರು.

ಪರಿಸರ ಅಧಿಕಾರಿ ಬಸವರಾಜ್ ರಾಸಾಯನಿಕ ವಿಕೋಪ ನಿಯಂತ್ರಣ ತಂಡದ ಸದಸ್ಯರ ಕರ್ತವ್ಯ, ಸಾರ್ವಜನಿಕರ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು.

ಎಚ್.ಪಿ.ಸಿ.ಎಲ್ ಮುಖ್ಯಸ್ಥ ಪ್ರಸಾದ್ ತಮ್ಮ ಸಂಸ್ಥೆಯಲ್ಲಿರುವ ಅಪಾಯದ ಸಾಧ್ಯತೆಗಳು ಅದಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ರಶ್ಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ರೇಮಂಡ್ ಡಿ. ಅಲ್ಮೇಡಾ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ರುದ್ರೇಗೌಡ, ಡಿ.ವೈ.ಎಸ್.ಪಿ. ಪರಮೇಶ್ವರಪ್ಪ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಹೋಂ ಗಾರ್ಡ್‌ ಮುಖ್ಯಸ್ಥ ಸತೀಶ್ ಮತ್ತಿತರರು ಹಾಜರಿದ್ದರು.

ಇದೇ ವೇಳೆ ಎಚ್.ಪಿ.ಸಿ.ಎಲ್. ಆವರಣದಲ್ಲಿರುವ ವಿಪತ್ತು ನಿರ್ವಹಣೆ ಕ್ರಮಗಳ ಬಗ್ಗೆ ಅಣುಕು ಪ್ರದರ್ಶನ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT