ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪತ್ತು ನಿರ್ವಹಣೆಗೆ ಡಿಡಿಎಂಪಿ ಸೂಕ್ತ

ಜಿಐಎಸ್ ಮೂಲಕ ಸ್ವಯಂಚಾಲಿತ ವ್ಯವಸ್ಥೆ: ಮನೋಜ್‌
Last Updated 21 ಡಿಸೆಂಬರ್ 2013, 9:10 IST
ಅಕ್ಷರ ಗಾತ್ರ

ಮೈಸೂರು: ಪ್ರತಿ ಜಿಲ್ಲೆಯಲ್ಲಿಯೂ ವಿಪತ್ತು ನಿರ್ವಹಣೆ ಯೋಜನೆಯು ಈಗ ಕೇವಲ ಕಾಗದದ ಮೇಲಷ್ಟೇ ಉಳಿದಿದೆ. ಆದರೆ, ಮುಂದಿನ ದಿನ­ಗಳಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಮೂಲಕ ವಿಪತ್ತು ನಿರ್ವ­ಹಣೆಯ ಸ್ವಯಂಚಾಲಿತ ವ್ಯವಸ್ಥೆ­ಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೆಚ್ಚುವರಿ ಕಾರ್ಯಯೋಜನೆ ನಿರ್ದೇಶಕ ಆರ್. ಮನೋಜ್ ಹೇಳಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಆಡಳಿತ ನಿರ್ವಹಣಾ ಸಂಸ್ಥೆಯ ವಿಪತ್ತು ನಿರ್ವಹಣಾ ವಿಭಾಗದ ಆಶ್ರಯದಲ್ಲಿ ಆಯೋಜಿಸ ಲಾಗಿದ್ದ ‘ಮೈಸೂರು ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ಯೋಜನೆ (ಡಿಡಿಎಂಪಿ)’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಯೋಜನೆಯನ್ನು ಪ್ರಾಯೋಗಿಕ ವಾಗಿ ರಾಯಚೂರು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗಿದೆ. ಇದರಿಂದ ಉತ್ತಮ ದತ್ತಾಂಶ ಸಂಗ್ರಹವಾಗಿದ್ದು, ಯಾವುದೇ ಸಂದರ್ಭದಲ್ಲಿ ವಿಪತ್ತು ಎದುರಾದರೂ ಕೂಡಲೇ ವ್ಯವಸ್ಥಿತ ವಾದ ಪರಿಹಾರ ಕಾರ್ಯಾ ಚರಣೆ ಕೈಗೊಂಡು, ಜೀವ–ಆಸ್ತಿಪಾಸ್ತಿ ಹಾನಿಯನ್ನು ಹೆಚ್ಚಾಗದಂತೆ ತಡೆಗಟ್ಟಬಹುದು.

ವಿಪತ್ತು ಬಂದಾಗಲೇ ಸಂಪನ್ಮೂಲ ವ್ಯಕ್ತಿಗಳು, ಇಲಾಖೆಗಳು ಮತ್ತು ಸಹಾಯ ನೀಡುವ ಸಂಸ್ಥೆಗಳನ್ನು ಹುಡುಕುವುದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಎಲ್ಲ ಸರ್ಕಾರಿ ಇಲಾಖೆಗಳಿಗೂ ಅವರ ಪರಿಣಿತಿ ಮತ್ತು ವ್ಯಾಪ್ತಿಗೆ ಅನುಗುಣವಾಗಿ ಶೀಘ್ರಗತಿಯಲ್ಲಿ ಪರಿಹಾರ ಕಾರ್ಯಗಳ ಹಂಚಿಕೆಯಾಗ­ಬೇಕಾದರೆ, ಮೊದಲೇ ಸನ್ನದ್ಧರಾಗಿ ರುವುದು ಒಳಿತು. ಈ ಆಧಾರದ ಮೇಲೆ ಜಿಐಎಸ್‌ ತಂತ್ರಜ್ಞಾನದ ಮೂಲಕ ಸೆಲ್‌ಫೋನ್ ಮತ್ತು ಕಂಪ್ಯೂಟರ್ ಮೂಲಕ ಇಡೀ ವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಿದೆ’ ಎಂದರು.

‘ಸದ್ಯ ನಮ್ಮಲ್ಲಿರುವ ವಿಪತ್ತು ನಿರ್ವಹಣಾ ವ್ಯವಸ್ಥೆಯು ಔಪಚಾರಿಕ­ವಾದದ್ದಾಗಿದೆ. ಕೇವಲ ಕಾಗದದ ಮೇಲೆ ಇರುವ ಈ ಯೋಜನೆಯು ಯಾವುದಕ್ಕೂ ಪ್ರಯೋಜನವಿಲ್ಲ. ಮೈಸೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ, ಇಲ್ಲಿರುವ ವಿಪತ್ತು ನಿರ್ವಹಣಾ ಮಾಹಿತಿ ಪುಸ್ತಕವು 2010–11ನೇ ಸಾಲಿನದ್ದಾಗಿದೆ. ಅದರಲ್ಲಿರುವ ನಕಾಶೆಯೂ ರಾಜಕೀಯ ಮಾಹಿತಿ ಆಧಾರಿತವಾಗಿದೆ. ಆದರೆ, ಜಿಐಎಸ್ ತಂತ್ರಜ್ಞಾನದ ಮೂಲಕ ನಾವು ಸಿದ್ಧಪಡಿಸುವ ನಕ್ಷೆಯು ಬಹಳಷ್ಟು ಮುಂದುವರಿದಿದೆ. ನಿಖರ ಮಾಹಿತಿಯ ಛಾಯಾಚಿತ್ರಗಳು, ಸ್ಥಳ ವಿವರ, ಜಲಮೂಲಗಳು, ಆಸ್ಪತ್ರೆಗಳು, ಶಾಲೆಗಳು, ಎತ್ತರದ ಪ್ರದೇಶಗಳು, ಸಾರಿಗೆ ವ್ಯವಸ್ಥೆ, ರಸ್ತೆಗಳು ಮತ್ತಿತರ ಎಲ್ಲ ಮಾಹಿತಿಗಳು 4 ಟಿಯರ್ ಸರ್ವರ್‌ನಲ್ಲಿ ಸುರಕ್ಷಿತವಾಗಿ­ರುತ್ತವೆ’ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಪ್ರತಿಯೊಂದು ಇಲಾಖೆಯ ಅಧಿಕಾರಿ­ಗಳಿಗೆ 64 ನಮೂನೆಗಳ ಅರ್ಜಿಯನ್ನು ನೀಡಿ, ದತ್ತಾಂಶ ಸಂಗ್ರಹದ ಕುರಿತು ತಿಳಿವಳಿಕೆ ನೀಡಿದರು.

‘ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಎಲ್ಲ ಇಲಾಖೆಗಳ ಸಿಬ್ಬಂದಿ, ಸೌಲಭ್ಯ, ಸಾರಿಗೆ ಮತ್ತಿತರ ಮಾಹಿತಿಗಳನ್ನು ಈ ಮೂಲಕ ಸಂಗ್ರಹಿಸಲಾಗುತ್ತದೆ. ಇದಲ್ಲದೇ ವಿಪತ್ತು ನಿರ್ವಹಣೆಯಾದಾಗ ಮಾಡಿದ ಪರಿಹಾರ ಕಾರ್ಯಗಳು, ಆಗ ಎದುರಿಸಿದ ಸವಾಲು, ಸಮಸ್ಯೆಗಳನ್ನು ದಾಖಲಿಸಿಡಲಾಗುತ್ತದೆ. ಆ ತಪ್ಪುಗಳನ್ನು ಸರಿಪಡಿಸುವ ಕುರಿತು ಕ್ರಮ ಕೈಗೊಂಡು ಮತ್ತೆ ಅಗತ್ಯ ಬಿದ್ದಾಗ ತುರ್ತು ಪರಿಹಾರ ನೀಡುವ ಕಾರ್ಯ ಕೈಗೊಳ್ಳಲಾಗುತ್ತದೆ’ ಎಂದು ಮನೋಜ್ ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಗೋಪಾಲ್, ಮಹಾನಗರ ಪಾಲಿಕೆ ಆಯುಕ್ತ  ಪಿ.ಜಿ. ರಮೇಶ್, ಕಾರ್ಯಾಗಾರದ ಸಂಯೋಜಕ   ಡಾ.ಆರ್. ಧರ್ಮರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT