ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪತ್ತು ನಿರ್ವಹಣೆಗೆ ಹೈ ಅಲರ್ಟ್: ಜಿಲ್ಲಾಧಿಕಾರಿ

Last Updated 4 ಜೂನ್ 2013, 5:18 IST
ಅಕ್ಷರ ಗಾತ್ರ

ವಿಜಾಪುರ: `ಜಿಲ್ಲೆಯ ನದಿ ತೀರದ 108 ಗ್ರಾಮಗಳನ್ನು ವಿಪತ್ತಿಗೆ ತುತ್ತಾಗುವ ಗ್ರಾಮಗಳೆಂದು ಗುರುತಿಸಲಾಗಿದೆ. ಮುಂಗಾರು ಮಳೆಯಿಂದ ಉಂಟಾಗಬಹುದಾದ ಸಂಭವನೀಯ ಅವಘಡಗಳನ್ನು ತಕ್ಷಣ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹೈ ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ' ಎಂದು  ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.
ನಗರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.

`ಕೃಷ್ಣಾ ನದಿ ಪಾತ್ರದ 40, ಭೀಮಾ ನದಿ ಪಾತ್ರದ 48, ಡೋಣಿ ನದಿ ಪಾತ್ರದಲ್ಲಿ 20 ಗ್ರಾಮಗಳನ್ನು ವಿಪತ್ತಿಗೆ ತುತ್ತಾಗುವ ಗ್ರಾಮಗಳೆಂದು ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಗುರುತಿಸಿದೆ. ಈ ಗ್ರಾಮಗಳಲ್ಲಿ ವಿಪತ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸ್ಥಳೀಯ ಅಧಿಕಾರಿಗಳು, ನೌಕರರು, ಸಂಘ ಸಂಸ್ಥೆಗಳ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಬೇಕು' ಎಂದರು.

ಎಲ್ಲ ನಗರ ಸ್ಥಳೀಯ ಸಂಸ್ಥೆಗಳು, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆಯಲ್ಲಿ ವಿಪತ್ತು ನಿರ್ವಹಣೆ ಕುರಿತಂತೆ ಸಹಾಯವಾಣಿ ಆರಂಭಿಸಬೇಕು. ನಗರ ಹಾಗೂ ಗ್ರಾಮೀಣ ತಗ್ಗು ಪ್ರದೇಶಗಳನ್ನು ಗುರುತಿಸಿಕೊಳ್ಳಬೇಕು. ಕೃಷ್ಣಾ-ಭೀಮಾ, ಡೋಣಿ ನದಿ ಪಾತ್ರದ ಗ್ರಾಮಗಳಲ್ಲಿ ಮಳೆ ನೀರು ನುಗ್ಗುವುದು, ಪ್ರವಾಹ, ಸಂಪರ್ಕ ಕಡಿತ ವಿವರ ಹಾಗೂ ಪರ್ಯಾಯ ವ್ಯವಸ್ಥೆಯ ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದರು.

ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿ ಶಾಮಕದಳ, ನಗರಸಭೆ, ಪುರಸಭೆ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಇತರ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿ.ಪಂ. ಸಿಇಒ ಗುತ್ತಿ ಜಂಬುನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಜೆ. ಸಿದ್ದಪ್ಪ, ವಿಜಾಪುರ ಉಪವಿಭಾಗಾಧಿಕಾರಿ ಡಾ.ಬೂದೆಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಂಗೂಬಾಯಿ ಮಾನಕರ, ಪೌರಾಯುಕ್ತ ಎಸ್.ಜಿ. ರಾಜಶೇಖರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರ ಯಡಹಳ್ಳಿ, ಅಗ್ನಿಶಾಮಕ ದಳದ ಅಧಿಕಾರಿ ರಮೇಶ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ವಿರೂಪಾಕ್ಷಯ್ಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬರ: ಮಳೆ ವಿಷಯದಲ್ಲಿ ಯಥಾಸ್ಥಿತಿ ಮುಂದುವರೆದರೆ ಆಗಸ್ಟ್‌ವರೆಗೆ ಕುಡಿಯುವ ನೀರು, ಮೇವು, ಉದ್ಯೋಗ ಕುರಿತಂತೆ ಜಿಲ್ಲಾ ಆಡಳಿತ ಕ್ರೀಯಾಯೋಜನೆ ಸಿದ್ಧಪಡಿಸಿ ಸಂಭವನೀಯ ಬರ ಎದುರಿಸಲು ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ವಿವಿಧ ಸಮಸ್ಯೆಗಳ ಕುರಿತಂತೆ ಪರಿಶೀಲನೆ ನಡೆಸಿ,  ಜೂನ್, ಜುಲೈ, ಆಗಸ್ಟ್ ಮೂರು ತಿಂಗಳು ಮಳೆ ಬಾರದೆ ಇದ್ದರೆ, 54 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾಗುತ್ತದೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಪ್ರಸ್ತುತ ಆರ್ಥಿಕ ವರ್ಷದ ಕ್ರೀಯಾಯೋಜನೆಯನ್ನು 15 ದಿನಗಳೊಳಗಾಗಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಬೇಕು. ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜಿಗೆ ಪ್ರಸ್ತಾವ ಸಲ್ಲಿಸುವ ಮುನ್ನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಶಿಫಾರಸ್ಸು ಮಾಡಬೇಕು ಎಂದರು.

ಸಿ.ಆರ್.ಎಫ್. ಅಡಿ ನಿಯಮ ಸಡಿಲಿಸಿ ಕೊಳವೆ ಬಾವಿ ಕೊರೆಯಲು ಅವಕಾಶವಿದೆ. ಆದರೆ, ಕೇವಲ  ಸಿ.ಆರ್.ಎಫ್‌ದಿಂದ 1 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಈ ಹಣವನ್ನು ಕೊಳವೆ ಬಾವಿಗಳ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಸಲು ಅಗತ್ಯವಿರುವ ಕೈಪಂಪು ಅಳವಡಿಕೆ ಮಾಡಿ, ಕುಡಿಯಲು ನೀರು ದೊರಕುವತಾಗಬೇಕು. ಕೊರೆದ ಹಳೆಯ ಕೊಳವೆ ಬಾವಿಗಳಿಗೆ ಕೈಪಂಪು ಜೋಡಿಸಲು ಹಣ ಬಳಸಿಕೊಳ್ಳಿ ಎಂದು ಸೂಚಿಸಿದರು.

ಜಿ.ಪಂ. ಉಪಕಾರ್ಯದರ್ಶಿ ಅಮರೇಶ ನಾಯಕ, ಇಂಡಿ ಉಪವಿಭಾಗಾಧಿಕಾರಿ ಶಿವಕುಮಾರ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT