ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ್ ಉಲ್ಲಂಘನೆ ದೂರು: ಅರ್ಜಿ ವಜಾ

Last Updated 21 ಸೆಪ್ಟೆಂಬರ್ 2011, 6:45 IST
ಅಕ್ಷರ ಗಾತ್ರ

ಕಾರವಾರ: ವಿಪ್ ಮತ್ತು ಪಕ್ಷಾಂತರ ನಿಷೇಧ ಕಾಯಿದೆ ಉಲ್ಲಂಘನೆಯಡಿ ನಗರಸಭೆಯ ಅಧ್ಯಕ್ಷರೂ ಸೇರಿದಂತೆ 12 ಜನ ಕಾಂಗ್ರೆಸ್ ಸದಸ್ಯರು ಮತ್ತು 6 ಜನ ಪಕ್ಷೇತರ ಸದಸ್ಯರ ವಿರುದ್ಧ ಸಲ್ಲಿಸಿದ ದೂರು ಅರ್ಜಿಯನ್ನು ಜಿಲ್ಲಾ ದಂಡಾಧಿಕಾರಿ ಬಿ.ಎನ್. ಕೃಷ್ಣಯ್ಯ ವಜಾಗೊಳಿಸಿ ತೀರ್ಪು ನೀಡಿದರು.

ಕಳೆದ ವರ್ಷ ಆ. 21ರಂದು ಅಧ್ಯಕ್ಷರ ಆಯ್ಕೆ ನಡೆದಿತ್ತು. ಕಾಂಗ್ರೆಸ್ ಪಕ್ಷದಿಂದ ಸಂದೀಪ ತಳೇಕರ್ ಅಧ್ಯಕ್ಷ ಸ್ಥಾನಕ್ಕೆ ಮತ್ತು ರಮೀಜಾ ಶೇಖ್ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ಬಿಜೆಪಿಯಿಂದ ಹಾಲಿ ಅಧ್ಯಕ್ಷ ಗಣಪತಿ ಉಳ್ವೆಕರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಯನಾ ಮಾಳ್ಸೇಕರ್ ನಾಮಪತ್ರ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಗಣಪತಿ ಉಳ್ವೇಕರ್ ಸೇರಿದಂತೆ ತನ್ನ 16 ಮಂದಿ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಕಾಂಗ್ರೆಸ್‌ನ 16 ಸದಸ್ಯರ ಪೈಕಿ 12 ಮಂದಿ ಸದಸ್ಯರು ವಿಪ್ ಉಲ್ಲಂಘಿಸಿ ಬಿಜೆಪಿಯಿಂದ ಸ್ಪರ್ಧಿಸಿದ ಗಣಪತಿ ಉಳ್ವೆಕರ್‌ಗೆ ಮತ ಚಲಾಯಿಸಿದರು.

ಚುನಾವಣೆ ಪ್ರಕ್ರಿಯೆ ಆರಂಭವಾಗುವುದಕ್ಕೂ ಮುನ್ನ ಕಾಂಗ್ರೆಸ್‌ನ ಸಂದೀಪ ತಳೇಕರ ಅವರು ಚುನಾವಣಾಧಿಕಾರಿಗಳೂ, ಉಪವಿಭಾಗಾಧಿಕಾರಿಗಳೂ ಆಗಿರುವ ಕಿಶನ್‌ಚಂದ್ ಅವರಿಗೆ ದೂರು ಅರ್ಜಿ ಸಲ್ಲಿಸಿ, ಗಣಪತಿ ಉಳ್ವೆಕರ್ ಸೇರಿದಂತೆ ಒಟ್ಟು 16 ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಗಣಪತಿ ಉಳ್ವೆಕರ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಕೋರಿದ್ದರು.

ಅರ್ಜಿ ಸ್ವೀಕರಿಸಿದ ಚುನಾವಣಾಧಿಕಾರಿಗಳು, ವಿವಾದಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಿ ಎಂದು ತಿಳಿಸಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಂದಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶಿಗೇಹಳ್ಳಿ ಮತ್ತು ಸದಸ್ಯ ಸಂದೀಪ ತಳೇಕರ ಅವರು ವಿಪ್ ಮತ್ತು ಪಕ್ಷಾಂತರ ನಿಷೇಧ ಕಾಯಿದೆ ಕಲಂ 3(1)(ಅ) ಉಲ್ಲಂಘನೆ ಮಾಡಿರುವ 12 ಕಾಂಗ್ರೆಸ್ ಸದಸ್ಯರ ವಿರುದ್ಧ ಜಿಲ್ಲಾ ದಂಡಾಧಿಕಾರಿಗಳಿಗೆ ದೂರು ನೀಡಿದ್ದರು.

ಪಕ್ಷಾಂತರ ನಿಷೇಧ ಕಾಯಿದೆ ಉಲ್ಲಂಘನೆ ಕುರಿತು ಆರು ಮಂದಿ ಪಕ್ಷೇತರ ವಿರುದ್ಧವೂ ಸಂದೀಪ ತಳೇಕರ ಜಿಲ್ಲಾ ದಂಡಾಧಿಕಾರಿಗಳಿಗೆ ದೂರು ನೀಡಿದ್ದರು.

ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ್, ಉಪಾಧ್ಯಕ್ಷೆ ನಯನಾ ಮಾಳ್ಸೇಕರ್, ಗಿರೀಶ ರಾವ್, ರಂಜು ಮಾಸೇಲಕರ್, ರಾಜಾಬಾಬು ಗೌಡ, ನಾಗೇಶ ಪಡಾಳಕರ್, ಆನಂದ ಶಿರೋಡ್ಕರ್, ದಿವ್ಯಾ ನಾಯ್ಕ, ಸ್ನೇಹಾ ಬಾಡ್ಕರ, ಮಾಲಾ ಹುಲಸ್ವಾರ ಮತ್ತು ದಿಗಂಬರ ಗುನಗಿ ಇವರ ವಿರುದ್ಧ ವಿಪ್ ಮತ್ತು ಪಕ್ಷಾಂತರ ನಿಷೇಧ ಕಾಯಿದೆ ಉಲ್ಲಂಘನೆ.  ಪಕ್ಷೇತರ ಸದಸ್ಯರಾದ ದೇವಿದಾಸ ನಾಯ್ಕ, ರತ್ನಾಕರ ನಾಯ್ಕ, ಮಹೇಶ ಥಾಮಸೆ, ಘನಶ್ಯಾಮ್ ಸುರಂಗೇಕರ್, ಸ್ಮೀತಾ ಪವಾರ, ಗಣಪತಿ ನಾಯ್ಕ ವಿರುದ್ಧ ಪಕ್ಷಾಂತರ  ನಿಷೇಧ ಕಾಯಿದೆ ಉಲ್ಲಂಘನೆ ದೂರು ನೀಡಲಾಗಿತ್ತು.

ಪ್ರಕರಣದ ಕುರಿತು ಒಂದುವರೆ ವರ್ಷಗಳ ಕಾಲ ನಡೆದ ಸುದೀರ್ಘ ವಿಚಾರಣೆಯ ಬಳಿಕ ತೀರ್ಪು ಪ್ರಕಟಗೊಂಡಿದ್ದು, ಪಕ್ಷೇತರ ಅಭ್ಯರ್ಥಿಗಳು ಬಿಜೆಪಿಗೆ ಸೇರ್ಪಡೆಗೊಂಡಿರುವ ಕುರಿತು ಸರಿಯಾದ ದಾಖಲೆಗಳಿಲ್ಲ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ವಿಪ್ ಜಾರಿ ಮಾಡುವ ಅಧಿಕಾರ ನೀಡಿರುವ ಕುರಿತು ಸೂಕ್ತ ಪುರಾವೆಗಳಿಲ್ಲದೆ ಇರುವುದರಿಂದ ದೂರು ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳು ತೀರ್ಪಿನಲ್ಲಿ ತಿಳಿಸಿದ್ದಾರೆ.

ಹೈಕೋರ್ಟ್‌ಗೆ ದೂರು: ವಿಪ್ ಉಲ್ಲಂಘನೆ ಮತ್ತು ಪಕ್ಷಾಂತರ ನಿಷೇಧ ಕಾಯಿದೆ ಉಲ್ಲಂಘನೆ ಕುರಿತು 12 ಕಾಂಗ್ರೆಸ್ ಮತ್ತು ಆರು ಪಕ್ಷೇತರರ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ವಕೀಲ ಕೆ.ಆರ್.ದೇಸಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT