ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಜಕಕ್ಕೆ ವಾಹನ ಗುದ್ದಿ ವ್ಯಕ್ತಿ ಸಾವು

Last Updated 8 ಜುಲೈ 2013, 19:50 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ರಮೇಶ್‌ಬಾಬು (46) ಎಂಬುವರು ಸಾವನ್ನಪ್ಪಿದ್ದಾರೆ.

ಕುರುಬರಹಳ್ಳಿ ನಿವಾಸಿಯಾದ ರಮೇಶ್‌ಬಾಬು, ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಬೈಕ್‌ನಲ್ಲಿ ರಾತ್ರಿ ಮನೆಗೆ ಬರುತ್ತಿದ್ದ ಅವರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದ್ದಾರೆ. ಈ ವೇಳೆ ಬೈಕ್‌ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯನಗರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಅನುಮಾನಾಸ್ಪದ ಸಾವು
ಬಸವೇಶ್ವರನಗರ ಸಮೀಪದ ಶಿವನಗರದಲ್ಲಿ ವ್ಯಕ್ತಿಯೊಬ್ಬರು ಸೋಮವಾರ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಶಿವನಗರ ಸರ್ವಿಸ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅವರ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯ ವಯಸ್ಸು ಸುಮಾರು 30 ವರ್ಷ. ಆದರೆ, ಅವರ ಗುರುತು ಪತ್ತೆಯಾಗಿಲ್ಲ. ಆ ವ್ಯಕ್ತಿಯ ಗಲ್ಲದ ಭಾಗದಲ್ಲಿ ಗಾಯದ ಗುರುತು ಇದ್ದು, ಕಿವಿಯಿಂದ ರಕ್ತಸ್ರಾವವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಯೇ ಅಥವಾ ಅವರನ್ನು ಕೊಲೆ ಮಾಡಲಾಗಿದೆಯೇ ಎಂಬುದು ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಬಸವೇಶ್ವರನಗರ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧನ
ಕಂಪ್ಯೂಟರ್‌ಗಳನ್ನು ಬಾಡಿಗೆಗೆ ಪಡೆದು ಬೇರೆಯವರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಆರೋಪದ ಮೇಲೆ ಕಮ್ಮನಹಳ್ಳಿಯ ಜೋಸೆಫ್ ಎಂ.ಆಲ್ಫೋನ್ಸ್ (36) ಎಂಬಾತನನ್ನು ಬಂಧಿಸಿರುವ ಮಡಿವಾಳ ಪೊಲೀಸರು ್ಙ 27 ಲಕ್ಷ ಮೌಲ್ಯದ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ಮೂಲದ ಜೋಸೆಫ್, ಫ್ರೇಜರ್‌ಟೌನ್‌ನಲ್ಲಿ `ಜೆ.ಎಂ.ಜೆ.ಇನ್ಫೋಟೆಕ್' ಮತ್ತು `ಜೆ.ಎಂ.ಜೆ.ಎನ್ವಿರಾನ್‌ಮೆಂಟ್ ಸರ್ವಿಸಸ್' ಹೆಸರಿನ ಕಚೇರಿಗಳನ್ನು ನಡೆಸುತ್ತಿದ್ದ. ಬಿ.ಇ ಓದಿದ್ದ ಆತ ಸಾಫ್ಟ್‌ವೇರ್ ಕಂಪೆನಿಗಳಿಗೆ ಲ್ಯಾಪ್‌ಟಾಪ್, ಕಂಪ್ಯೂಟರ್ ಹಾಗೂ ಸರ್ವರ್‌ಗಳನ್ನು ಬಾಡಿಗೆಗೆ ಕೊಡಿಸುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬೊಮ್ಮನಹಳ್ಳಿಯ ಕೆ.ಆರ್.ಲೇಔಟ್‌ನಲ್ಲಿರುವ ಕೌಂಟರ್ ಪಾಯಿಂಟ್ ಪ್ರೈವೇಟ್ ಲಿಮಿಟೆಡ್‌ನಿಂದ ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದ ಆತ ಅವುಗಳನ್ನು ಹಿಂದಿರುಗಿಸದೆ ಬೇರೆಯವರಿಗೆ ಮಾರಾಟ ಮಾಡಿದ್ದ.
ಈ ಸಂಬಂಧ ಕೌಂಟರ್ ಪಾಯಿಂಟ್ ಪ್ರೈವೇಟ್ ಲಿಮಿಟೆಡ್‌ನ ಜೋಬಿ ಕುರಿಯನ್ ಅವರು ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಆತನನ್ನು ಬಂಧಿಸಿ 39 ಕಂಪ್ಯೂಟರ್, 23 ಲ್ಯಾಪ್‌ಟಾಪ್ ಹಾಗೂ 8 ಸರ್ವರ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯು ಫ್ರೇಜರ್‌ಟೌನ್, ಬಸವನಗುಡಿ ಠಾಣೆ ವ್ಯಾಪ್ತಿಯ 19ಕ್ಕೂ ಹೆಚ್ಚು ಕಂಪೆನಿಗಳಿಗೆ ಇದೇ ರೀತಿ ವಂಚಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT