ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಾಗೀಯ ಆಯುಕ್ತರಿಂದ ತನಿಖೆ

Last Updated 7 ಫೆಬ್ರುವರಿ 2012, 20:10 IST
ಅಕ್ಷರ ಗಾತ್ರ

ಬೆಂಗಳೂರು: ಉಡುಪಿ ಜಿಲ್ಲೆ ಮಲ್ಪೆಯ ಸೇಂಟ್ ಮೇರೀಸ್ ದ್ವೀಪದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಸಂಗೀತ ಉತ್ಸವದಲ್ಲಿ ಅಕ್ರಮ ಚಟುವಟಕೆಗಳು ನಡೆದಿವೆ ಎಂಬ ಆರೋಪದ ಬಗ್ಗೆ ವಿಭಾಗೀಯ ಆಯುಕ್ತರಿಂದ ತನಿಖೆ ನಡೆಸಲಾಗುವುದು. ಆರೋಪಗಳು ನಿಜವೆಂದು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ  ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸದಾನಂದ ಗೌಡ ಉಭಯ ಸದನಗಳಲ್ಲಿ ತಿಳಿಸಿದರು.

ವಿಧಾನ ಸಭೆಯ್ಲ್ಲಲಿ ಮಂಗಳವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಯು.ಟಿ.ಖಾದರ್, ಗೋಪಾಲ ಭಂಡಾರಿ ಅವರು ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
`ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿ ಅಶ್ಲೀಲ ಕಾರ್ಯಕ್ರಮ ನಡೆಸಿದರೆ ಕ್ರಮ ಕೈಗೊಳ್ಳುತ್ತೇವೆ.

ಇತಿಮಿತಿಗಳನ್ನು ಮೀರಿ ಕಾರ್ಯಕ್ರಮ ನಡೆಸಿದ್ದಾರೆ ಎಂದು ಮಾಧ್ಯಮಗಳ ವರದಿಗಳಿಂದ ಗೊತ್ತಾಗುತ್ತದೆ. ನಿಷ್ಪಕ್ಷಪಾತ ತನಿಖೆ ಆಗಬೇಕು ಎಂಬ ದೃಷ್ಟಿಯಿಂದ ಪ್ರಾದೇಶಿಕ ಆಯುಕ್ತರಿಗೆ ತನಿಖೆ ಜವಾಬ್ದಾರಿ ವಹಿಸಲಾಗಿದೆ~ ಎಂದು ಸದಾನಂದಗೌಡ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ವಿರೋಧಪಕ್ಷದ ನಾಯಕಿ ಮೋಟಮ್ಮ, ಕಾಂಗ್ರೆಸ್ ಸದಸ್ಯರಾದ ವಿ.ಆರ್.ಸುದರ್ಶನ್, ಆರ್.ವಿ.ವೆಂಕಟೇಶ್ ಮತ್ತು ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಮುಖ್ಯಮಂತ್ರಿ, ಪ್ರಕರಣದ ಬಗ್ಗೆ ಮೈಸೂರು ವಿಭಾಗೀಯ ಆಯುಕ್ತರಿಂದ ತನಿಖೆ ನಡೆಸುವ ನಿರ್ಧಾರ ಪ್ರಕಟಿಸಿದರು.

ಸೇಂಟ್ ಮೇರೀಸ್ ದ್ವೀಪದಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಪುರಾತತ್ವ ಇಲಾಖೆಯ ಅನುಮತಿ ಪಡೆಯಬೇಕು. ಈ ಪ್ರಕರಣದಲ್ಲಿ ಅನುಮತಿ ಇತ್ತೇ ಎಂಬುದನ್ನು ಸರ್ಕಾರ ತಿಳಿಸಬೇಕು ಎಂದು ಮೋಟಮ್ಮ ಕೇಳಿದರು.

ಎಸ್.ಆರ್.ಪಾಟೀಲ್ ಮಾತನಾಡಿ, `ಜೆ.ಎಚ್.ಪಟೇಲ್ ಮುಖ್ಯಮಂತ್ರಿಗಳಾಗಿದ್ದಾಗ ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೆಸಲು ಮುಂದಾದಾಗ ಬಿಜೆಪಿ ಭಾರಿ ಹೋರಾಟ ನಡೆಸಿತ್ತು. ಈಗ ಅದೇ ಪಕ್ಷದ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಅರೆಬೆತ್ತಲೆ ನೃತ್ಯ, ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿದೆ~ ಎಂದು ಟೀಕಿಸಿದರು.

ಪ್ರತಾಪಚಂದ್ರ ಶೆಟ್ಟಿ, ಆರ್.ವಿ.ವೆಂಕಟೇಶ್ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ತನಿಖೆಗೆ ಆಗ್ರಹಿಸಿದರು. ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. `ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಕ್ರಮ ಚಟುವಟಿಕೆ ನಡೆದಿಲ್ಲ. ಮುಂದೆ ಯಾವುದೇ ಅಕ್ರಮ ನಡೆಯದಂತೆ ನಿಯಂತ್ರಿಸುತ್ತೇವೆ~ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಉತ್ತರಿಸಿದರು.

ಆದರೆ, ಆಚಾರ್ಯ ಅವರ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷಗಳ ಸದಸ್ಯರು, ತನಿಖೆಗೆ ಆದೇಶಿಸುವಂತೆ ಪಟ್ಟು ಹಿಡಿದರು. ಆಗ ಮುಖ್ಯಮಂತ್ರಿಯವರು ವಿಭಾಗೀಯ ಆಯುಕ್ತರಿಂದ ತನಿಖೆಗೆ ಆದೇಶಿಸುವುದಾಗಿ ಪ್ರಕಟಿಸಿದರು.

ಇದು ಉತ್ತೇಜನದ ಪರಿಯೇ?: ಖರ್ಗೆ

ಬೆಂಗಳೂರು: ಸೇಂಟ್ ಮೇರಿಸ್ ದ್ವೀಪದಲ್ಲಿ ನಡೆದ `ಸ್ಟ್ರಿಂಗ್ ಝೂಕ್ ಐಲ್ಯಾಂಡ್ ಫೆಸ್ಟ್~ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, `ವಿದೇಶಿ ಪ್ರವಾಸಿಗರನ್ನು ಕರೆಸಿ ನೃತ್ಯ ಮಾಡಿಸುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆಯೇ~ ಎಂದು ಪ್ರಶ್ನಿಸಿದರು.

`ಸ್ಟ್ರಿಂಗ್ ಝೂಕ್~ ಕಾರ್ಯಕ್ರಮದ ಕುರಿತು ಇಲ್ಲಿನ `ಕುಮಾರಕೃಪಾ~ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ, `ಬಿಜೆಪಿಯವರು ತಲೆಬಾಗುವ ಮಠಾಧೀಶರೇ ಕಾರ್ಯಕ್ರಮದ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಹೇಳಲು ಏನಿದೆ~ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಉತ್ತಮ ಸೇವೆ ನೀಡುವ ಹೋಟೆಲ್, ವಸತಿಗೃಹಗಳನ್ನು ಸರ್ಕಾರವೇ ನಿರ್ಮಿಸಲಿ.  ಆದರೆ ಭಾರತೀಯ ಸಂಸ್ಕೃತಿಯ ಕುರಿತು ಮಾತನಾಡುವವರೇ `ಸ್ಟ್ರಿಂಗ್ ಝೂಕ್~ನಂಥ ಕಾರ್ಯಕ್ರಮ ನಡೆಸುತ್ತಾರೆ ಎಂದು ಟೀಕಿಸಿದರು.

`ಅಧಿಕಾರಕ್ಕೆ ಧಕ್ಕೆ ಇಲ್ಲ~: ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ನಾಲ್ವರು ಕೇಂದ್ರ ಸಚಿವರನ್ನು ಕಾಂಗ್ರೆಸ್ ಉಸ್ತುವಾರಿಗಳನ್ನಾಗಿ ನೇಮಕ ಮಾಡಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರ ಅಧಿಕಾರಕ್ಕೆ ಧಕ್ಕೆ ಆಗುವುದಿಲ್ಲ. ಇದು ಅವರ ಕೈ ಬಲಪಡಿಸುವ ಪ್ರಯತ್ನದ ಒಂದು ಭಾಗ ಎಂದರು.
ಕಾಗೋಡು ತಿಮ್ಮಪ್ಪ, ಪ್ರೊ.ಬಿ.ಕೆ. ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT