ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆ: ಮುಗ್ಧ ತಿಳಿವಿನ ಪ್ರಯೋಗಗಳು

Last Updated 26 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ಕಣ್ಣ ಹಿಂದಿನ ಕಣ್ಣು’ ಮೋಹನ ಕಳಸದ ಅವರ ಪ್ರಥಮ ಕಥಾಸಂಕಲನ. ಇದರಲ್ಲಿರುವ ಹತ್ತು ಕಥೆಗಳ ರಚನೆಯು 1971ರಿಂದ ಇಂದಿನವರೆಗೆ ಹರಡಿಕೊಂಡಿದೆ. ವಿಳಂಬವಾಗಿ ಮೊದಲ ಸಂಕಲನ ಹೊರತರುವ ಬರಹಗಾರರಿಗೆ ಇದೊಂದು ಗುಣ ನಿರ್ಣಾಯಕ ಅಂಶವಾಗಿಬಿಡುತ್ತದೆ.

ದೀರ್ಘ ಕಾಲಾಂತರದಲ್ಲಿ ಕಥಾ ಪರಿಕಲ್ಪನೆ ಮತ್ತು ನಿರ್ವಹಣಾ ರೀತಿಯು ಸಹಜವಾಗಿ ಬದಲಾಗುತ್ತಿದ್ದು ಹೊಸ ಕಾಲದ ಕಥಾಸಮಯದ ಜೊತೆ ಅವು ನಡೆಸುವ ಸೆಣಸಾಟ ಕುತೂಹಲಕರವಾಗಿರುತ್ತದೆ. ಒಂದು ಸಂದರ್ಭದ ಗಮನಾರ್ಹ ಪ್ರಯತ್ನವು ಇನ್ನೊಂದು ಸಂದರ್ಭದಲ್ಲಿ ಪೇಲವವಾಗಿ ಕಂಡುಬಿಡಬಹುದು. ಮುಖ್ಯವಾಹಿನಿಯ ಜೊತೆಗೆ ಗುರುತಿಸಲ್ಪಡುವ ಬರಹಗಳಿಗೆ ಇದೊಂದು ವರ  ಮತ್ತು ಶಾಪದ ಪ್ರಶ್ನೆ. ಕನ್ನಡ ಸಾಹಿತ್ಯ ಸಮಯದಲ್ಲಿ ಪ್ರಧಾನವಾಹಿನಿಗೆ ಸಮಾಂತರವಾಗಿ ಎಂದಿಗೂ ಸರಳ ಇಲ್ಲವೇ ಜನಪ್ರಿಯ ಮಾದರಿಯೊಂದು ಹರಿದು ಬಂದಿದೆ.

ಆಯಾಕಾಲದ ಸಾಮಾನ್ಯ ಓದುಗರ ಜೊತೆ ಮುಖಾಮುಖಿಯಾಗುವ ಇವು ಸಂವಾದದ ಉದ್ದೇಶ ಹೊಂದಿರುವುದಿಲ್ಲ. ಇಲ್ಲಿ ಓದಿನ ಅಗತ್ಯಕ್ಕೆ ಎಂಬಂತೆ ಬರಹದ ಅಗತ್ಯ ದುಡಿಯುತ್ತಿರುತ್ತದೆ. ಸಂವಾದಕ್ಕಿಂತಲೂ ಸಂದೇಶದ ಕಡೆಗೆ ಇವುಗಳ ಒಲವು ಅಧಿಕ. ಸಂದೇಶದ ಸನ್ನಿಧಾನದಲ್ಲಿ ಕಲಾತ್ಮಕತೆಯ ತುರ್ತು ಕಾಣಸಿಗುವುದಿಲ್ಲ.

ತಂತ್ರ ಮತ್ತು ಪ್ರಯೋಗಶೀಲತೆಯನ್ನು ಇವು ಒಳಗೊಂಡು ಮುಖ್ಯವೆನ್ನಿಸುವಂತೆ ಕಂಡರೂ ಬರಹಗಾರನ ತೀರ್ಮಾನಗಳು ದಟ್ಟ ಕೈಮರಗಳಂತೆ ಅಡ್ಡಿ ಉಂಟುಮಾಡುತ್ತಿರುತ್ತವೆ.  ಎರಡನೆಯ ಸರಳ ಮಾದರಿಯನ್ನು ಗೌರವಯುತವಾಗಿ ಭಾವಿಸಿರುವ ಮೋಹನ ಕಳಸದರು ಅತ್ಯಂತ ಪ್ರಾಮಾಣಿಕವಾಗಿ ತಮ್ಮ ಕಥೆಗಳನ್ನು ಹೆಣೆದಿದ್ದಾರೆ. ಹೀಗಾಗಿ ನಾಲ್ಕು ದಶಕಗಳ ವ್ಯಾಪ್ತಿಯ ಈ ರಚನೆಗಳು ಅವರ ನಿಲುವುಗಳ ವ್ಯತ್ಯಾಸವನ್ನೇನೂ ತೋರಗೊಡುವುದಿಲ್ಲ. ತಮ್ಮ ಕಥಾರುಚಿ ಮತ್ತು ನಂಬಿಕೆಗಳ ಒಂದು ಸಂತೃಪ್ತ ನಿಲುಗಡೆಯಲ್ಲಿ ಅವರು ಕಥೆಗಳನ್ನು ಬರೆಯುತ್ತಿದ್ದಾರೆ. 

ಎಪ್ಪತ್ತರ ದಶಕದ ನವ್ಯದ ಭರಾಟೆಯಲ್ಲಿ ಮೋಹನ ಕಳಸದರು ಬರೆಯಲು ಶುರುಮಾಡಿದರೂ ಅವರ ಮನಸ್ಸಿನಲ್ಲಿರುವುದು ನವೋದಯ ಹಾಗೂ ಪ್ರಗತಿಶೀಲ ಸಂದರ್ಭದ ಉದಾತ್ತ ಆದರ್ಶಗಳು. ಅನಕೃ, ತರಾಸು, ಆನಂದ, ಕಟ್ಟೀಮನಿ, ಕೃಷ್ಣಮೂರ್ತಿ ಪುರಾಣಿಕ ಮುಂತಾದವರ ಪ್ರಭಾವ ಅವರ ಮೇಲೆ ಇದ್ದಂತಿದೆ. ಕೆಲವು ಸರಳ, ನಾಟಕೀಯ ತಿರುವುಗಳಲ್ಲಿ ಬದುಕಿನ ಒಳಿತು ಕೆಡುಕುಗಳನ್ನು ನಿರ್ಧರಿಸುವ ಕೆಲಸವನ್ನು ಅವರು ಶ್ರದ್ಧೆಯಿಂದ ಮಾಡಿದ್ದಾರೆ. ‘ನಾನು-ಫ್ಯಾನು’ ಎಂಬ ಕಥೆಯನ್ನು ಇಲ್ಲಿ ಉದಾಹರಿಸಬಹುದು. ಕೇಂದ್ರವನ್ನು ಕಳೆದುಕೊಂಡ ಫ್ಯಾನಿನಂತಾದ ಸಂಸಾರದಲ್ಲಿ ಗಂಡ ಹೆಂಡತಿ ಎಂಬ ಎರಡು ‘ನಾನು’ಗಳು ಒಬ್ಬರಿಗೊಬ್ಬರು ತ್ಯಾಗ ಮಾಡಲು ಹವಣಿಸುವ ಆದರ್ಶದಲ್ಲಿ ಕಥೆಯು ಸಂಭ್ರಮಿಸುತ್ತದೆ.

ಆದರೆ ಮುಂದಲ ದಾರಿಯನ್ನು ಕುರಿತ ಪ್ರಶ್ನೆಯನ್ನು ಎದುರು ಹಾಕಿಕೊಳ್ಳುವುದಿಲ್ಲ. ‘ಪ್ರತಿಬಿಂಬ’ ಎಂಬ ಕಥೆಯು ಕಥಾಪಾತ್ರ ಮತ್ತು ಜೀವನ ಪಾತ್ರ ಸಾಮ್ಯದ ಕುರಿತ ನಂಬಿಕೆಯಲ್ಲಿಯೇ ಸಾಗಿ ಅತಾರ್ಕಿಕ ತಿರುವಲ್ಲಿ ಅದರ ರೋಚಕತೆಯನ್ನು ಆನಂದಿಸುತ್ತದೆ.

ಪ್ರತಿ ಕಥೆಗೂ ವೈವಿಧ್ಯ ತರುವ ಯತ್ನ ಹಾಗು ನಿರೂಪಣಾ ತಂತ್ರದ ಕುರಿತ ಕಾಳಜಿಯಿಂದ ಕಳಸದರು ನಮ್ಮ ಗಮನ ಸೆಳೆಯುತ್ತಾರೆ. ‘ಕಣ್ಣ ಹಿಂದಿನ ಕಣ್ಣು’ ಎಂಬ ಕಥೆಯಲ್ಲಿ ಬೀಗ ಹಾಕಿದ ಮನೆಯ ಸುತ್ತ ಕಳ್ಳ, ಸುಳ್ಳ ಮತ್ತು ಸಭ್ಯನ ಕಣ್ಣುಗಳಿಂದ ಓದುಗರನ್ನು ಸುತ್ತಿಸುವ ಅವರು ಕಥೆಯ ಉಳಿದ ಪಾತ್ರಗಳ ಮುಖಗಳನ್ನು, ಅನುಮಾನಗಳನ್ನು ಸೂಚ್ಯವಾಗಿ ಬಯಲುಗೊಳಿಸುತ್ತಾರೆ.

‘ಆಹುತಿ’ ಎಂಬ ನೀಳ್ಗತೆಯಲ್ಲಿ ಅಸಂಖ್ಯಾತ ಪಾತ್ರ ಹಾಗೂ ಸನ್ನಿವೇಶಗಳ ಮೂಲಕ ಕಥೆಯ ಹಳಿಯನ್ನು ಕಾಯ್ದುಕೊಂಡು ಹೋಗುವ ಸವಾಲು ಎದುರಿಸಿದ್ದಾರೆ. ಅದರ ಸಂಕ್ಷಿಪ್ತ ತಿರುವುಗಳಲ್ಲೇ ವಿಭಿನ್ನ ಭಾಷೆ, ಪ್ರಾದೇಶಿಕ ವಿವರಗಳ ಮೂಲಕ ವಂಚನೆಯ ಒಳಮುಖಗಳನ್ನು ಅನಾವರಣ ಮಾಡಿದ್ದಾರೆ. ‘ಕದ್ದು ತಂದ ಕಥೆ’ ಎಂಬ ಕಥೆಯಲ್ಲಿ ಕಥೆಯೊಳಗೊಂದು ಕಥೆ ಹುಟ್ಟಿಕೊಂಡು ಮೂಲಕಥೆಯ ಮೇಲೆ ದುರ್ಬೀನು ಇಟ್ಟಿದ್ದಾರೆ. ‘ಒಂದು ಸಂಭಾಷಣೆ’ ಎಂಬ ಕಥೆಯಂತೂ ಸಂಭಾಷಣೆಯಲ್ಲೇ ಮೊದಲಾಗಿ ಸಂಭಾಷಣೆಯಲ್ಲಿಯೇ ಮುಗಿಯುತ್ತದೆ. ಈ ಪ್ರಯೋಗಶೀಲತೆ ಕಳಸದರ ಕಥಾ ಹಂಬಲದಂತೆ ಕಾಣಿಸುತ್ತದೆ. ಈ ಪ್ರಯತ್ನಕ್ಕೆ ಬೇಕಾದ ಆಳ ಮತ್ತು ವ್ಯಾಪ್ತಿಯನ್ನು ತಮ್ಮ ಕಥೆಗಳ ಸಂವಿಧಾನಕ್ಕೆ ಅವರು ಒದಗಿಸಿದ್ದಲ್ಲಿ ಅದರ ಪರಿಣಾಮ ಬೇರೆ ಆಗಿರುತ್ತಿತ್ತು.

‘ನಾಸ್ತಿಕ’ ಮತ್ತು ‘ಪವಾಡ’ ಎಂಬ ಎರಡು ಬೇರೆ ರೀತಿಯ ಕಥೆಗಳು ಘಟನೆಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಂತೆ ಭಾಸವಾದರೂ ಕಥೆಗಾರರ ನಿಯಮಗಳಿಗೆ ಅಲ್ಲಿ ಸ್ಥಾನವಿಲ್ಲದೆ ಹೋಗಿದೆ. ಬರಹವನ್ನು ಒಂದು ಆದರ್ಶವೆಂಬಂತೆ ಪರಿಭಾವಿಸುವ ಈ ಕಥೆಗಾರರ ಅನೇಕ ಕಥೆಗಳ ನಾಯಕರೂ ಕಥೆಗಾರರೇ ಆಗಿದ್ದಾರೆ.

ಮೋಹನ ಕಳಸದರ ಕಥೆಗಳು ಮುಗ್ಧ ತಿಳಿವಿನಿಂದ ಕೂಡಿದ ಪ್ರಯೋಗಗಳಂತಿದ್ದು ಅವು ಸಮಕಾಲೀನತೆ ಹಾಗೂ ಔಚಿತ್ಯದ ಸ್ವರೂಪವನ್ನು ಬೇಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT