ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆ: ಮೊಗಸಾಲೆಯಲ್ಲಿ ದಕ್ಕಿದ ಗಾಂಧಿ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸೀತಾಪುರದಲ್ಲಿ ಗಾಂಧೀಜಿ
ಲೇ: ಡಾ. ನಾ. ಮೊಗಸಾಲೆ, ಪು: 196; ಬೆ: ರೂ. 100, ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ, ನಂ. 164/ಎ, ಎಂ.ಆರ್.ಎನ್. ಬಿಲ್ಡಿಂಗ್, ಕನಕಪುರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-4.

ನವ್ಯ ಮತ್ತು ಬಂಡಾಯ ಸಾಹಿತ್ಯದ ಔನ್ನತ್ಯದ ದಿನಗಳಲ್ಲಿ ಬಂದ ಗಾಂಧಿ, ಲೋಹಿಯಾ ಮತ್ತು ಅಂಬೇಡ್ಕರ್ ಅವರನ್ನು ರೂಪಕವಾಗಿಸಿ ಸಾಹಿತ್ಯಿಕ ಚಮತ್ಕಾರದಲ್ಲಿ ಸಂತೋಷ ಪಡುವ ಹಲವು ಕೃತಿಗಳನ್ನು ನಾವು ನೋಡಿದ್ದಿದೆ.

ಈ ತೆರನಾದ ರೂಪಕಾತ್ಮಕ ಚಿಂತನಕ್ರಮದ ಜಾಡಿನಿಂದ ಮುಕ್ತರಾಗಿ ಸಮಕಾಲೀನ ಭಾರತದ ವಾಸ್ತವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಗಾಂಧಿಯವರ ಚಿಂತನೆಗಳಿಂದ ಎರವಲು ಪಡೆಯಬಹುದಾದ ಸಂಗತಿಗಳನ್ನು ಹುಡುಕುವ ಧೈರ್ಯವನ್ನು ತೋರಿದ ಒಂದು ಪಂಕ್ತಿಯಲ್ಲಿ ಡಾ. ಮೊಗಸಾಲೆಯವರ ಮಹತ್ವಾಕಾಂಕ್ಷೆಯ `ಉಲ್ಲಂಘನೆ~ ಕಾದಂಬರಿಯನ್ನು ವಿಮರ್ಶಕ ಡಾ. ವಾಸುದೇವ ಶೆಟ್ಟಿಯವರು ಗುರುತಿಸಿದ್ದಿದೆ.
 
ಬೇಕಾದವರು, ಬೇಕಾದ್ದನ್ನು ತೆಗೆದುಕೊಂಡು ಇದೇ ಗಾಂಧಿ ಎನ್ನುವ ಸಾಧ್ಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಾಂಧೀಜಿ ಇಟ್ಟ ಕೊನೆಯ ಹೆಜ್ಜೆಗಳ ಗುರುತು ಹಿಡಿದು ಗಾಂಧಿಯನ್ನು ಪುನರ್ ರೂಪಿಸುವ ಅಲ್ಲಿನ ಕ್ರಮವನ್ನು ಅವರು ಶ್ಲಾಘಿಸಿದ್ದೂ ಇದೆ. ಮೊಗಸಾಲೆಯವರು ತಮ್ಮ ಮುಂದಿನ ಕಥಾಸಂಕಲನ `ಸೀತಾಪುರದಲ್ಲಿ ಗಾಂಧೀಜಿ~ಯಲ್ಲಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಗಾಂಧಿ ಅನ್ನುವುದು ನಾವು ಕಟ್ಟಿಕೊಂಡಿರುವುದು, ಮತ್ತೆಮತ್ತೆ ಕಟ್ಟಿಕೊಳ್ಳುತ್ತಲೇ ಇರಬೇಕಾದುದು ಹಾಗೂ ಮತ್ತೆ ಮತ್ತೆ ಕಟ್ಟಿಕೊಳ್ಳಬಹುದಾದುದು ಎಂಬ ವಿಶಿಷ್ಟಕಲ್ಪನೆಯೊಂದನ್ನು ನಮ್ಮ ಮುಂದಿಡುತ್ತಾರೆ.

ಅವರು ಪುನರ್ ರೂಪಿಸುವ ಗಾಂಧೀ ಆದರ್ಶ ಎಲ್ಲೋ ಒಂದಿಷ್ಟು ಅಂಬೇಡ್ಕರ್‌ರಿಂದಲೂ, ಲೋಹಿಯಾರಿಂದಲೂ ಪ್ರಭಾವಿತವಾಗಿ ಸ್ವಲ್ಪ ಜಾಸ್ತಿಯೇ ಆಕರ್ಷಕವಾದ ಸಮಾಜವಾದವಾಗಿ ಬಿಟ್ಟಂತಿದೆ. ಅವರು ಮನುಷ್ಯನ ಖಾಸಗಿತನದ ಮೇಲೆ, ಅವನ ಮೂಲ ಅಸ್ಮಿತೆಯ ಮೇಲೆ ಆಕ್ರಮಣ ಮಾಡದೆ ಸಮಾಜದ ಪುರ್ನನಿರ್ಮಾಣ ಸಾಧ್ಯ ಎಂಬ ನಂಬಿಕೆ ಹೊಂದಿದ ಸಮಾಜವಾದದ ಪರಿಕಲ್ಪನೆಗೆ ಮಾರುಹೋದವರೂ ಆಗಿರುವಂತೆ ಕಾಣಿಸುತ್ತಿರುವುದರಿಂದ ಈ ಕಥಾ ಸಂಕಲನವೊಂದು ಕುತೂಹಲ ಹುಟ್ಟಿಸುವ ಪ್ರಯೋಗವೆನ್ನಿಸುತ್ತದೆ.

ಈಗಂತೂ ನಮ್ಮ ಅನುಭವಗಳು ಸಂಕೀರ್ಣವಾಗುತ್ತಿವೆ ಎಂದು ಹೇಳಿಕೊಳ್ಳುವುದೂ ಕ್ಲೀಷೆ ಅನ್ನಿಸಿಬಿಟ್ಟಿದೆ. ಆದರೆ ನಮ್ಮ ಮೌಲ್ಯಗಳು ಒಂದರಲ್ಲಿ ಒಂದು ಕಲಸಿಹೋಗಿ, ಯಾವೊಂದು ಸಿದ್ಧಾಂತವೂ ಶುದ್ಧರೂಪದಲ್ಲಿ ಕಾಣಸಿಗುವುದು ಸಾಧ್ಯವೇ ಇಲ್ಲ ಎನ್ನಿಸಿದ ಹೊತ್ತೊಂದರಲ್ಲಿ ಇಲ್ಲಿನ ಕತೆಗಳ ಮೂಲಕ ಬದುಕನ್ನು ಮತ್ತೆ ಸುಂದರಗೊಳಿಸಬಲ್ಲ ಏನನ್ನೋ ಮೊಗಸಾಲೆಯವರು ಹುಡುಕತೊಡಗುತ್ತಾರೆ.
 
ಹಾಗೆ ಹುಡುಕುವ ನಿಟ್ಟಿನಲ್ಲಿ ಅವರು ಕತೆಯನ್ನು ಒಂದು ಚಿಟ್ಟಟಛ್ಠ್ಚಠಿ ಎಂದು ತಿಳಿದುಕೊಂಡವರಂತೆ ಕತೆಗಿಂತ ದೊಡ್ಡ ಕ್ಯಾನ್ವಾಸ್ ಒಂದನ್ನು ತುಂಬಲೆತ್ನಿಸುತ್ತಾರೆ. `ಇಷ್ಟೆಲ್ಲ ಅಗತ್ಯವೆ?~ ಎಂದು ಹಿಂದೊಮ್ಮೆ ವಿಮರ್ಶಕರೊಬ್ಬರು ಕೇಳಿದಾಗ `ಬದುಕಲ್ಲಿ ಬೇಡದ್ದನ್ನು ಬದಿಗೆ ತಳ್ಳುವ ಟ್ಟ್ಠ್ಞಜ್ಞಿಜ ಸಾಧ್ಯವುಂಟೆ?~ ಎಂದು ಅವರು ಕೇಳಿದ್ದಿದೆ.
`ಸೀತಾಪುರದಲ್ಲಿ ಗಾಂಧೀಜಿ~ಯಲ್ಲಿ ಯಾವುದನ್ನೂ ಅತಿಶಯಕ್ಕೊಯ್ಯದ ಒಂಬತ್ತು ನೀಳ್ಗತೆಗಳಿವೆ. ವಾಸ್ತವವಾಗಿ ಯಾವ ಕತೆಯಲ್ಲೂ ಗಾಂಧಿ ಬರುವುದೇ ಇಲ್ಲ.

`ಸೀತಾಪುರದಲ್ಲಿ ಗಾಂಧೀಜಿ~ ಎಂಬ ಹೆಸರಿನ ಮೊದಲ ಕತೆಯಲ್ಲಂತೂ `ಗಾಂಧಿ ಎನ್ನುವ ಶಬ್ದವನ್ನು ಹೇಳಲಿಕ್ಕೂ ಯೋಗ್ಯತೆ ಬೇಕು~ ಎಂಬರ್ಥದ ಮಾತೂ ಬರುತ್ತದೆ. ಆದರೆ ಆ ಕತೆಯಲ್ಲಿ ಸಹಿಷ್ಣುತೆಯ ಮೂಲಕ ಅರಸಬೇಕಾದ ಮಾರ್ಗವೊಂದನ್ನು ಗುರುತಿಸುವ ಕುಪ್ಪಣ್ಣಯ್ಯ ಎಲ್ಲೋ ಗಾಂಧೀಜಿಯವರ ಆದರ್ಶಗಳಿಗೆ ಹೊಸಭಾಷ್ಯ ಬರೆಯುತ್ತಿರುವಂತೆ ಕಾಣಿಸುತ್ತದೆ. ಇದರ ಮುಂದುವರಿಕೆ `ನುಗ್ಗೆಗಿಡ~ ಕತೆಯಲ್ಲಿ ಪ್ರೇಮಕ್ಕನ ಪಾತ್ರವಾಗಿ ಕಾಣಿಸುತ್ತದೆ.

ಸರ್ಪಸುತ್ತಿಗೆ ಮದ್ದು ಹುಡುಕಿಕೊಂಡು ಪ್ರೇಮಕ್ಕನಲ್ಲಿಗೆ ಬಂದ ಹಸನಬ್ಬ ಅವರ ಹಸುವನ್ನು ಕಸಾಯಿಖಾನೆಗೆಂದು ಖರೀದಿಸಿದ್ದು ತಿಳಿದೂ ಕಣ್ಣಲ್ಲಿ ನೀರುತುಂಬಿಕೊಂಡ ಪ್ರೇಮಕ್ಕ ನಿರ್ವಿಷದ ಬೇರು ಮತ್ತು ನೀರನ್ನು ಮಂತ್ರಿಸಿಕೊಡುವಲ್ಲಿ ನಂಬಿಕೆಗಳಾಚಿನ ಮನುಷ್ಯತ್ವದ ಹೊಳಲೊಂದು ಕಾಣಿಸುತ್ತದೆ.
 
ನುಗ್ಗೆಗಿಡದ ಹಾಗೆ ಮುರಿದಷ್ಟೇ ಬೇಗ ಚಿಗುರುವ ಮನುಷ್ಯಪ್ರೇಮವನ್ನೇ ಮೊಗಸಾಲೆಯವರು ಗಾಂಧಿಯೆಂಬ ರೂಪಕ ಆಗಿಸುತ್ತಿದ್ದಾರೆಯೇ?
`ಮಳೆಯಿಂದ ನೀರು ಮತ್ತೆ ಸಮುದ್ರಕ್ಕೆ~ ಎಂಬ ಕಥೆಯಲ್ಲಿ ಮಗನ ಅಂತರ್ಜಾತೀಯ ವಿವಾಹವನ್ನು ಬದುಕಿಡೀ ವಿರೋಧಿಸಿದ್ದ ಗಂಡನೊಡನೆ ಜೀವಮಾನವಿಡೀ ಇದ್ದ ತಾಯಿ, ಮೊಮ್ಮಗಳು ಕ್ರಿಶ್ಚಿಯನ್ ಹುಡುಗನನ್ನು ಮದುವೆಯಾಗ ಬಯಸಿದಾಗ ಅನುಮತಿ ನೀಡುತ್ತಾಳೆ, ಮಾತ್ರವಲ್ಲ, ಆಕೆಯನ್ನು ಅತ್ತೂರು ಚರ್ಚಿಗೆ ಕರೆದುಕೊಂಡು ಹೋಗಿ ಆಕೆಗೆ ಕ್ರಿಸ್ತನ ಆಶೀರ್ವಾದ ಕೊಡಿಸಲು ಮಗನಲ್ಲಿ ಹೇಳುತ್ತಾಳೆ.
 

ಬದುಕು ಮಾಗಿದಾಗಷ್ಟೇ ಸಾಧ್ಯವಾಗುವ ಸಹಿಷ್ಣುತೆಯ ಮತ್ತೊಂದು ಸ್ವರೂಪವನ್ನು `ದನಕರು~ ಕತೆಯಲ್ಲೂ ಕಾಣಬಹುದು. ಅಲ್ಲಿ ಕುಪ್ಪಣ್ಣಯ್ಯನ ಮಾತುಗಳಲ್ಲಿ ಗಾಂಧಿಯೊಂದಿಗೆ ಲೋಹಿಯಾ ಕೂಡಾ ಕಾಣಿಸಿಕೊಳ್ಳುತ್ತಾರೆ. `ಒದ್ದೆಯಾದ ಆಕಾಶ~ ಕತೆಯಲ್ಲಿ ಕಾಣಿಸಿಕೊಳ್ಳುವ ಕುಪ್ಪಣ್ಣಯ್ಯ ಮತ್ತು ಸುಂದರ ರಾಯರನ್ನು ಮಾಗಿಸಿದ ಬದುಕು ಗಾಂಧಿಗೆ ಋಣಿಯಾಗಿ ಕಾಣಿಸುತ್ತದೆ.

ಸಂಕಲನದ ಕೊನೆಯ ಕತೆ `ಚಾರಣ~ದಲ್ಲಿ ಅಂಬೇಡ್ಕರ್ ಪ್ರಭಾವಕ್ಕೆ ಒಳಗಾದಂತಹ ಗಾಂಧೀ ಸ್ಪರ್ಶ ಕಾಣಿಸುತ್ತದೆ. ಗಾಂಧಿಯನ್ನು ಹೀಗೆ ಮತ್ತೆಮತ್ತೆ ಕಟ್ಟಿಕೊಡುವ ಮೊಗಸಾಲೆಯವರ ಕತೆಗಳು ಈ ಕಾರಣದಿಂದಲೇ ಜಾಗತೀಕರಣದ ಹೊರಳುಹಾದಿಯಲ್ಲಿ ಬೆರಗಿನಿಂದ ನಿಂತ ಬದುಕಿಗೊಂದು ಅರ್ಥಪೂರ್ಣ ಕೈಗಂಬವೆನಿಸುತ್ತದೆ.

ಈ ಕತೆಗಳ ಶರೀರ ಎಷ್ಟು ಸೂಕ್ಷ್ಮವಾಗಿದೆಯೆಂದರೆ ಕತೆಯನ್ನೂ ಕತೆಯ ಮೂಲಕ ಮೊಗಸಾಲೆಯವರು ಹೇಳಬಯಸಿದ್ದನ್ನೂ ಪ್ರತ್ಯೇಕವಾಗಿ ತೋರಿಸುವುದೂ ಸಾಧ್ಯವಾಗುವುದಿಲ್ಲ. ಇಲ್ಲಿ ಕತೆ ಕವಿಯೊಬ್ಬನ ಪಾಲಿನ ಬದುಕಿನ ಅರ್ಥವಂತಿಕೆಯನ್ನು ಹುಡುಕುವ ಸಾಧನವಾಗಿಬಿಟ್ಟಂತಿದೆ. ಈ ಕತೆಗಳಲ್ಲಿ ಸರಳವಾದ ಬದುಕನ್ನು ಮುಂದಕ್ಕೊಡ್ಡುವ ಸೀತಾಪುರವೆಂಬ ಊರು, ಅಲ್ಲಿನ ರಥಬೀದಿ, ಕುಪ್ಪಣ್ಣಯ್ಯನ ಹೊಟೇಲು, ಇವೆಲ್ಲ ಹಲವು ಘಟನೆಗಳಿಗೆ ವೇದಿಕೆಯಾಗಿ ಬಂದು ಹೋಗುತ್ತವೆ.

ಅಲ್ಲಿ ತುಂಬ ಸರಳವಾದ ಜೀವನಾನುಭವವನ್ನು ಬದುಕಿನ ಅತಿ ಕ್ಲಿಷ್ಟವಾದ ಸಮಸ್ಯೆಗೆ ಸಂಜೀವಿನಿಯೆಂಬಂತೆ ಒಡ್ಡುವ ಮೂಲಕ ನಡೆವ ಗಹನವಾದ ಪ್ರಯೋಗಶಾಲೆಯ ಉಪಸ್ಥಿತಿಯೂ ಗಮನ ಸೆಳೆಯುತ್ತದೆ. ಅದನ್ನು ಪ್ರಯೋಗ ಎನ್ನುವುದೂ ತಪ್ಪೇ ಇದ್ದೀತು. ಸಾಹಿತ್ಯಿಕ ಚಮತ್ಕಾರಗಳ ಬಗ್ಗೆ ಯಾವತ್ತೂ ದಿವ್ಯನಿರ್ಲಕ್ಷ್ಯವನ್ನು ಹೊಂದಿರುವ ಮೊಗಸಾಲೆಯವರ ಬರಹವನ್ನು ಹತ್ತಿರದಿಂದ ಬಲ್ಲವರು ಅಂತಹ ಮಾತನ್ನು ಸುಲಭದಲ್ಲಿ ತಳ್ಳಿಹಾಕಿಯಾರು.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT