ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆಯ ಮತ್ತೊಂದು ಮುಖ: ಪ್ರಶಂಸೆ

Last Updated 8 ಜೂನ್ 2012, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಎಂಜಿನಿಯರಿಂಗ್ ಕಾಲೇಜೊಂದರ ಮೊದಲ ಮಹಿಳಾ ಪ್ರಾಂಶುಪಾಲರು ಎಂಬ ಹೆಗ್ಗಳಿಕೆ ಡಾ ಎಂ.ಎಸ್.ಇಂದಿರಾ ಅವರದು. ಬೆಂಗಳೂರಿನ  `ಸರ್.ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ~ಯ ಪ್ರಾಚಾರ್ಯೆ ಅವರು. ಸುಮಾರು 24 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿದ್ದಾರೆ.
 
ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುವಾಗಲೇ ಶೈಕ್ಷಣಿಕ ಕ್ಷೇತ್ರದತ್ತ ಒಲವು ಬೆಳೆದಿತ್ತು. ಖ್ಯಾತ ವೈದ್ಯರಾಗಿದ್ದ ತಂದೆ ಡಾ.ಎಂ.ಶಂಕ್ರಪ್ಪ ಅವರಂತೆ ವೈದ್ಯೆಯಾಗಿ ಜೀವದಾನ ಮಾಡುವ ಅಭಿಲಾಷೆ ಇದ್ದರೂ ಅದಕ್ಕಿಂತ ಮಿಗಿಲಾದ ವಿದ್ಯಾದಾನಕ್ಕೆ ಮನಸ್ಸು ತುಡಿಯಿತು.

ಅಂತೆಯೇ ಈಗ ಸುಮಾರು 3500 ವಿದ್ಯಾರ್ಥಿಗಳು, 180 ಶಿಕ್ಷಕರು ಹಾಗೂ 150ರಷ್ಟು ಶಿಕ್ಷಕೇತರ ಸಿಬ್ಬಂದಿ ಇರುವ ಬೃಹತ್ ವಿದ್ಯಾಸಂಸ್ಥೆಯೊಂದನ್ನು ಮುನ್ನಡೆಸುತ್ತಿರುವ ಹಿರಿಮೆ ಅವರದು. ತಂದೆಯಿಂದ ಕಲಿತ ಶಿಸ್ತು, ಮುಂದಾಲೋಚನೆ ಹಾಗೂ ಪತಿ,ಮಕ್ಕಳ ಸಹಕಾರ ತಮಗೆ ಈ ಕೆಲಸನ್ನು ಸುಲಭವಾಗಿಸಿದೆ ಎನ್ನುತ್ತಾರೆ ಡಾ.ಇಂದಿರಾ.

ಬೆಳೆದದ್ದು ವೈದ್ಯೆಯಾಗುವ ಕನಸು ಹೊತ್ತು. ಆದರೆ ವೈದ್ಯಕೀಯ ಸೀಟು ಸಿಕ್ಕಿದ್ದು ಬೇರೆ ರಾಜ್ಯದಲ್ಲಿ. ಕುಟುಂಬ ಬಿಟ್ಟು ದೂರ ಹೋಗುವ ಇಚ್ಛೆ ಇರದಿದ್ದರಿಂದ ಎಂಜಿನಿಯರಿಂಗ್ ನನ್ನ ಆಯ್ಕೆಯಾಯಿತು.

ಅದರಲ್ಲೂ ಅತೀ ಹೆಚ್ಚು ಸಂಬಳವಿರುವ ಆಕರ್ಷಣೆ ಹೊತ್ತ ತಾಂತ್ರಿಕ ಕ್ಷೇತ್ರವನ್ನರಸಿ ಎಲ್ಲರೂ ವಿವಿಧ ಕಂಪೆನಿ ಸೇರುವಾಗ ಶಿಕ್ಷಕ ವೃತ್ತಿಯತ್ತ ಮನಸ್ಸು ಹರಿಯಿತು. ಮದುವೆ-ಕುಟುಂಬ-ಮಕ್ಕಳ ಭವಿಷ್ಯಕ್ಕೂ ಇದರಿಂದ ಅನುಕೂಲ. ಜೊತೆಗೆ ಸಾವಿರಾರು ಮಕ್ಕಳಿಗೆ ವಿದ್ಯಾದಾನ, ಮಾರ್ಗದರ್ಶನ ನೀಡುವ ಭಾಗ್ಯವೂ ದೊರೆಯಿತು.

`ಮಲ್ಟಿ ಟಾಸ್ಕಿಂಗ್~ ಎನ್ನುವುದು ಹೆಣ್ಣಿಗೆ ದೈವದತ್ತವಾಗಿ ಬಂದ ಕೊಡುಗೆ. ಅಂತಹ ನಮ್ಮ ಸಾಮರ್ಥ್ಯವನ್ನು ನಾವು ಸದ್ವಿನಿಯೋಗ ಮಾಡಿಕೊಳ್ಳಬೇಕು. ಕ್ರಮಬದ್ಧವಾದ ಯೋಜನೆಯಿಂದ ಶಿಸ್ತುಬದ್ಧ ಜೀವನ ಸಾಧ್ಯ.
 
ಮನೆಯಲ್ಲಿಯೇ ಆಗಲಿ, ಕಚೇರಿಯಲ್ಲಿಯೇ ಆಗಲಿ ಅವತ್ತಿನ ಕೆಲಸವನ್ನು ಅವತ್ತೇ ಮಾಡುವುದು ಮತ್ತು ಆಯಾ ಕೆಲಸವನ್ನು ಆದ್ಯತೆಯ ಮೆರೆಗೆ ಮಾಡುವುದು ಒಳ್ಳೆಯದು. ಕಚೇರಿ ವಿಚಾರವನ್ನು ಮನೆಗೆ ಒಯ್ಯುವುದು ಅಥವಾ ಮನೆಯ ವಿಚಾರವನ್ನು ಕಚೇರಿಗೆ ತರುವುದು ಯಾವತ್ತಿದ್ದರೂ ಅಪಾಯವೇ.
 
ಕಚೇರಿಯಲ್ಲಿರುವಾಗ ನಾವು ಆ ಹುದ್ದೆಗೇ ಸಮರ್ಪಿಸಿಕೊಂಡು ಆ ಕರ್ತವ್ಯಕ್ಕೆ ನಿಷ್ಠೆಯಿಂದಿರಬೇಕು. ಹಾಗೆಯೇ ಮನೆಯಲ್ಲಿನ ಜವಾಬ್ದಾರಿಗಳನ್ನೂ ಅಷ್ಟೇ ಅಕ್ಕರೆಯಿಂದ ನಿರ್ವಹಿಸಬೇಕು. ಕಾಲೇಜಿನಲ್ಲಿರುವಾಗ ನಾನು ಪ್ರಾಚಾರ್ಯೆ. ಸಂಸ್ಥೆ, ವಿದ್ಯಾರ್ಥಿಗಳ ಬಗ್ಗೆ ಆಲೋಚಿಸುವುದು ಇಲ್ಲಿ ನನ್ನ ಕರ್ತವ್ಯ.
 
ಆದರೆ ಮನೆಯಲ್ಲಿದ್ದಾಗ ನಾನು ಪ್ರಾಚಾರ್ಯೆ ಅಲ್ಲ, ಅಮ್ಮ-ಪತ್ನಿ. ಅಲ್ಲಿ ನನ್ನ ಪತಿ-ಮಕ್ಕಳು-ಕುಟುಂಬದ ಬಗ್ಗೆ ಗಮನ ಹರಿಸಬೇಕು. ಹೀಗೆ ನಿರ್ದಿಷ್ಟ ರೇಖೆಗಳೊಳಗೆ ಕಾರ್ಯನಿರ್ವಹಿಸಿದಾಗ ಮಾತ್ರ ಈ ಎರಡೂ ಕಡೆ ಸಮನ್ವಯ ಸಾಧಿಸುವುದು ಸುಲಭ.

ಸಮಯ ಹೊಂದಾಣಿಕೆ
ಎಲ್ಲರಿಗೂ ಇರುವುದು ಒಂದೇ ಸಮಯ. ಒಬ್ಬರಿಗೆ ಹೆಚ್ಚು-ಒಬ್ಬರಿಗೆ ಕಡಿಮೆ ಎಂದೇನೂ ಇಲ್ಲವಲ್ಲ... ಆದರೆ ಆ ಸಮಯವನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಯಶಸ್ಸು ಅಡಗಿರುತ್ತದೆ. ಒಂದು ನಿರ್ದಿಷ್ಟ ಗುರಿ (ಟಾರ್ಗೆಟ್), ಗುರಿಗೆ ತಕ್ಕ ಯೋಜನೆ, ಯೋಜನೆಗೆ ಸೂಕ್ತ ವೇಳಾಪಟ್ಟಿ...
 
ಹೀಗೆ ಸಮಯವನ್ನು ಹೊಂದಿಸಿಕೊಂಡು ಎರಡೂ ಕೆಲಸವನ್ನು ನಿರ್ವಹಿಸಬೇಕು. ಈ ಎರಡೂ ಕೆಲಸಗಳ ನಡುವೆ ನಮ್ಮ ವ್ಯಕ್ತಿತ್ವವನ್ನು ನಾವು ಮರೆಯಬಾರದು. ಕಚೇರಿಗಿಷ್ಟು-ಮನೆಗಿಷ್ಟು ಎಂದು ಸಮಯವನ್ನು ಎತ್ತಿಡುವಾಗ ನಮಗಾಗಿ ಒಂದಿಷ್ಟು ಸಮಯವನ್ನು ಮರೆಯದೇ ಇಟ್ಟುಕೊಂಡಿರಬೇಕು...

ಸಿಬ್ಬಂದಿಯ ವಿಶ್ವಾಸ
ಕಚೇರಿಯಲ್ಲಿ ಆಹ್ಲಾದಕರ ವಾತಾವರಣ ಇರುವುದು ಅಗತ್ಯ. ಅದರಲ್ಲೂ ಹೆಣ್ಣು ಉನ್ನತ ಹುದ್ದೆಯಲ್ಲಿರುವಾಗ ಆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸ್ತರದ ಕೆಲಸಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
 
ನಾವು ಮೊದಲು ನಿಷ್ಠೆಯಿಂದ ಕೆಲಸ ಮಾಡುವ ಮೂಲಕ ಅವರಿಗೆ ಅದರ ಮಹತ್ವವನ್ನು ತಿಳಿಸಬೇಕು. ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ವರ್ತಿಸಬೇಕು. ಆದರೆ ಅಗತ್ಯ ಬಿದ್ದಾಗ ಶಿಸ್ತು ಕ್ರಮ ಕೈಗೊಳ್ಳುವುದನ್ನು ಮರೆಯಬಾರದು.

ಈ ಹುಮ್ಮಸ್ಸಿಗೆ ಪ್ರೇರಣೆ
ವಿದ್ಯಾರ್ಥಿಗಳೇ ನನ್ನ ಈ ಹುಮ್ಮಸ್ಸಿಗೆ ಪ್ರೇರಣೆ ಎಂದು ಹೇಳಬಹುದು. ಈ ವೃತ್ತಿಗಿಂತ ಹೆಚ್ಚು ತೃಪ್ತಿ ತರುವ ಕೆಲಸ ಮತ್ತೊಂದಿದೆ ಎಂದು ನನಗೆ ಅನಿಸುವುದೇ ಇಲ್ಲ. ಪ್ರತಿ ವರ್ಷ ಹೊಸ ಹೊಸ ವಿದ್ಯಾರ್ಥಿಗಳು ಬರುತ್ತಾರೆ ಅವರ ಚೈತನ್ಯ, ಅವರ ಸ್ಟಿರಿಟ್ ನೋಡಿದರೆ ನಮ್ಮಳಗೂ ಅದು ಸಂಚಲನ ಹುಟ್ಟಿಸಿದ ಅನುಭವವಾಗುತ್ತದೆ.
 
ಅವರಿಗೆ ಕಲಿಸುತ್ತಕಲಿಸುತ್ತ ನಾವೂ ಕಲಿಯುತ್ತೇವೆ. ಇಷ್ಟು ವರ್ಷ ಅನುಭವವಾದರೂ ನಾನು ಪ್ರತಿ ತರಗತಿಗೆ ತೆರಳುವ ಮುನ್ನ ತಯಾರಿ ಮಾಡಿಕೊಳ್ಳುತ್ತೇನೆ. ಏಕೆಂದರೆ ತಾಂತ್ರಿಕ ಕ್ಷೇತ್ರದಲ್ಲಿ ಪ್ರತಿವರ್ಷ ಸಾಕಷ್ಟು ಬದಲಾವಣೆ ಆಗಿರುತ್ತದೆ. ವಿದ್ಯಾರ್ಥಿಗಳಿಗೆ ತಂಗಳನ್ನು ಬಡಿಸಿದರೆ ಹೇಗೆ?

ಹವ್ಯಾಸ-ಮನರಂಜನೆ
ಇಷ್ಟೆಲ್ಲದರ ನಡುವೆಯೂ ಮನರಂಜನೆ, ಹವ್ಯಾಸಗಳನ್ನಂತೂ ನಾನು ಯಾವತ್ತೂ ಮರೆಯುವುದಿಲ್ಲ. ಓದುವುದು ನನ್ನ ಹವ್ಯಾಸ. ಅದು ನನ್ನ ತಾಯಿಯಿಂದ ಬಂದ ಬಳುವಳಿ. ಬೇಂದ್ರೆ, ಕುವೆಂಪು ಪುಸ್ತಕಗಳನ್ನು ಓದಿದ್ದೇನೆ. ಕಥೆ, ಕಾದಂಬರಿ ಇಷ್ಟ.
 
ಅಲ್ಲದೇ ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ಹೆಚ್ಚು ಉತ್ಸುಕಳಾಗಿದ್ದೇನೆ. ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು, ನಿಯತಕಾಲಿಕೆಗಳನ್ನು ತರಿಸುತ್ತೇನೆ. ಇನ್ನು ಮನರಂಜನೆಗಾಗಿ ಟಿವಿ ಇದ್ದೇ ಇದೆ. ಒಳ್ಳೆಯ ಸಿನಿಮಾ ಬಂದರೆ ತಪ್ಪದೇ ಹೋಗುತ್ತೇನೆ.

ಮನೆಗೆ ಬರುವ ಅತಿಥಿಗಳನ್ನು ಪ್ರೀತಿಯಿಂದ ಸತ್ಕರಿಸುವುದು ಭಾರತೀಯರ ಸಂಪ್ರದಾಯ. ನಮಗೆ ಸಮಯ ಇಲ್ಲ ಎನ್ನುವ ಕಾರಣದಿಂದ ಅವರಿಗೆ ಬರಬೇಡ ಎಂದು ಹೇಳಲು ಆಗುವುದಿಲ್ಲ. ಸಮಯ ಹೊಂದಾಣಿಕೆ ಮಾಡಿಕೊಂಡು ಮನೆಗೆ ಬಂದವರನ್ನು ಸತ್ಕರಿಸುತ್ತೇನೆ. ಇನ್ನು ಸಭೆ-ಸಮಾರಂಭಗಳಿಗೆ ಹಾಜರಾಗುವುದು ಕೂಡ ಅಷ್ಟೆ. ಅವುಗಳ ಆದ್ಯತೆಯನ್ನು ನೋಡುತ್ತೇನೆ.

ಟೀಕೆ-ವಿಮರ್ಶೆ
ಟೀಕೆ-ವಿಮರ್ಶೆ ಎನ್ನುವುದು ಸಮಾಜದ ಒಂದು ಸಹಜ ಪ್ರತಿಕ್ರಿಯೆ. ಅದನ್ನು ಸಹಜವಾಗಿಯೇ ಸ್ವೀಕರಿಸಬೇಕು. ಅಷ್ಟಕ್ಕೂ ಆರೋಗ್ಯಕರ ವಿಮರ್ಶೆಯನ್ನು ನಾನು ಸ್ವಾಗತಿಸುತ್ತೇನೆ. ಅದು ಒಂದು ರೀತಿಯ ಪ್ರಶಂಸೆ ಇದ್ದಂತೆಯೇ. ಮೊದಲು ಟೀಕೆ ಅಥವಾ ವಿಮರ್ಶೆ ಮಾಡುವ ವ್ಯಕ್ತಿ ಯಾರು ಹಾಗೂ ಅವರು ಏನನ್ನು ಹೇಳಲು ಬಯಸುತ್ತಿದ್ದಾರೆ ಎಂಬುದನ್ನು ನೋಡಬೇಕು.

ಅದರಲ್ಲಿ ಏನಾದರೂ ಹುರುಳಿದ್ದರೆ, ಅದರಿಂದ ಏನಾದರೂ ಕಲಿಯುವುದಿದ್ದರೆ ಖಂಡಿತ ಕಲಿಯೋಣ, ಏನಾದರೂ ತಿದ್ದಿಕೊಳ್ಳುವುದಿದ್ದರೆ ತಪ್ಪದೇ ತಿದ್ದಿಕೊಳ್ಳೋಣ. ಆದರೆ ಕೆಲವರಿಗೆ ಯಾವುದೇ ಅರ್ಥವಿಲ್ಲದೇ ವಿನಾಕಾರಣ ಕಾಲೆಳೆಯುವ ಚಟವಿರುತ್ತದೆ.
ಅಂಥವರನ್ನು ಕಡೆಗಣಿಸುವುದೇ ಉತ್ತಮ ಮಾರ್ಗ.
 
ಅಂದಹಾಗೆ ಟೀಕೆ-ವಿಮರ್ಶೆಗೆ ಹೆಣ್ಣು ಗಂಡೆಂಬ ವ್ಯತ್ಯಾಸವಿಲ್ಲ. ಮಾಡುವವರು ಎಲ್ಲರ ಮೇಲೂ ಆರೋಪ ಮಾಡುತ್ತಾರೆ. ನಾನು ಹೆಣ್ಣು ಅದಕ್ಕೇ ಹೀಗೆ ಮಾಡುತ್ತಿದ್ದಾರೆ ಎಂದು ನೊಂದುಕೊಳ್ಳುವ ಅಗತ್ಯವಿಲ್ಲ. ಅದನ್ನು ಸರಿಯಾದ ಕ್ರಮದಲ್ಲಿ ನಿಭಾಯಿಸಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT