ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾ ಕಿಟ್ ವಿತರಣೆ ವಿಳಂಬ ಸಹಿಸಲಾಗದು

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯ ಅಂಗವಾಗಿ ಜೀವ ವಿಮಾ ಕಂಪನಿಯು ಬೆಂಗಳೂರು ನಗರ ಜಿಲ್ಲೆಗೆ ಅಗತ್ಯವಿರುವ 50 ಕಿಟ್‌ಗಳನ್ನು ಕೂಡಲೇ ಅಳವಡಿಸಿ ಫೆಬ್ರವರಿ ಅಂತ್ಯದೊಳಗೆ ಎಲ್ಲಾ ಫಲಾನುಭವಿಗಳ ನೋಂದಣಿಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು~ ಎಂದು  ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ಅವರು ಸೂಚಿಸಿದರು.

ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಅನುಷ್ಠಾನ ಕುರಿತಂತೆ ಗುರುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಅವರು, `ನಿಗದಿಪಡಿಸಿದಂತೆ ವಿಮಾ ಕಂಪನಿಯು 50 ಕಿಟ್ಟುಗಳನ್ನು ಒದಗಿಸುವಲ್ಲಿ ವಿಳಂಬ ಮಾಡುತ್ತಿರುವುದನ್ನು ಸಹಿಸಲಾಗುವುದಿಲ್ಲ. ಆನೇಕಲ್ ತಾಲ್ಲೂಕಿಗೆ 20 ಕಿಟ್‌ಗಳು ಮತ್ತು ಬೆಂಗಳೂರು ಉತ್ತರ ತಾಲ್ಲೂಕಿಗೆ 10 ಕಿಟ್‌ಗಳನ್ನು ಕೂಡಲೇ ಒದಗಿಸಬೇಕು~ ಎಂದು ಅವರು ಕಾತೀತು ಮಾಡಿದರು.

`ಈಗಾಗಲೇ ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 2,05,003 ಫಲಾನುಭವಿಗಳಿದ್ದು, ಬಿಬಿಎಂಪಿಯ ಉತ್ತರ, ದಕ್ಷಿಣ ಮತ್ತು ಬೊಮ್ಮನಹಳ್ಳಿ ಸೇರಿದಂತೆ ಮೂರೂ ವಲಯಗಳ 57,294 ಫಲಾನುಭವಿಗಳಲ್ಲಿ 12,337 ಫಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 13,466 ಫಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳಲಾಗಿದೆ.

ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು 59 ಆಸ್ಪತ್ರೆಗಳನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ಆಸ್ಪತ್ರೆಗಳ ಅಗತ್ಯವಿದ್ದು, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಸೌಲಭ್ಯವನ್ನು ಪಡೆಯಲಾಗುವುದು~ ಎಂದು ಅವರು ತಿಳಿಸಿದರು.

`ತಾಲ್ಲೂಕುಗಳಲ್ಲಿ ಯೋಜನೆಯ ಫಲಾನುಭವಿಗಳ ನೋಂದಣಿ ಮತ್ತು ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸೌಲಭ್ಯಗಳನ್ನು ದೊರಕಿಸಿಕೊಡುವುದರ ಮೂಲಕ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು~ ಎಂದು ಬೆಂಗಳೂರು ನಗರ ವ್ಯಾಪ್ತಿಯ ತಹಶೀಲ್ದಾರರಿಗೆ ಅವರು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT