ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾ ಯೋಜನೆ ಜಾರಿಗೆ ಚಿಂತನೆ: ಕಾಗೇರಿ

Last Updated 6 ಜೂನ್ 2011, 20:15 IST
ಅಕ್ಷರ ಗಾತ್ರ

ಬೆಂಗಳೂರು: `ಅನುದಾನಿತ/ ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರಿಗೆ ವೈದ್ಯಕೀಯ ಭತ್ಯೆ ನೀಡುವ ಬದಲಿಗೆ ವಿಮಾ ಯೋಜನೆ ಸಿದ್ಧಪಡಿಸಿ ಜಾರಿಗೆ ತರಲು ಸರ್ಕಾರ ಪರಿಶೀಲಿಸಲಿದೆ~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ವೈ.ಎ. ನಾರಾಯಣಸ್ವಾಮಿ, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ನೀಡುತ್ತಿರುವ ವೈದ್ಯಕೀಯ ಭತ್ಯೆಯನ್ನು ಅನುದಾನಿತ ಶಾಲೆಗಳ ಅಧ್ಯಾಪಕರಿಗೂ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕಾಗೇರಿ, `ಅನುದಾನಿತ ಶಾಲೆಗಳ ಅಧ್ಯಾಪಕರಿಗೆ ವೈದ್ಯಕೀಯ ಭತ್ಯೆ ನೀಡುವ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ವಿಮಾ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಸರ್ಕಾರದ ಪ್ರೀಮಿಯಂ ಮೊತ್ತವನ್ನು ಭರಿಸಲು ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದರೆ, ಅಧ್ಯಾಪಕರಿಂದಲೂ ಅರ್ಧದಷ್ಟು ಪ್ರೀಮಿಯಂ ಸಂಗ್ರಹಿಸಿ ವಿಮಾ ಯೋಜನೆ ಜಾರಿಗೊಳಿಸಬಹುದಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು~ ಎಂದು ಸಚಿವರು ಭರವಸೆ ನೀಡಿದರು.

`ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮಾಸಿಕ ಕೇವಲ 50 ರೂಪಾಯಿ ವೈದ್ಯಕೀಯ ಭತ್ಯೆ ನೀಡಲಾಗುತ್ತಿದೆ. ವಾರ್ಷಿಕ ಕೇವಲ 600 ರೂಪಾಯಿ ವೈದ್ಯಕೀಯ ಸಿಗುತ್ತಿದೆ. ಇದು ಅಂತಹ ದೊಡ್ಡ ಮೊತ್ತವೇನಲ್ಲ. ಆದರೂ, ಮಾನಸಿಕವಾಗಿ ಈ ವಿಷಯ ಅನುದಾನಿತ ಶಾಲೆಗಳ ಶಿಕ್ಷಕರನ್ನು ಕಾಡುತ್ತಿದೆಯಷ್ಟೇ~ ಎಂದರು.

ಇದಕ್ಕೂ ಮುನ್ನ ಚರ್ಚೆಯಲ್ಲಿ ಪಾಲ್ಗೊಂಡ ಸದಸ್ಯರಾದ ಶಶಿಲ್ ನಮೋಶಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ. ಶಿವಯೋಗಿ ಸ್ವಾಮಿ ಮತ್ತಿತರರು, `ಹೃದಯ ತೊಂದರೆಗೆ ಒಳಗಾಗಿ ಶಸ್ತ್ರ ಚಿಕಿತ್ಸೆ ಪಡೆಯಬೇಕಾದ ಶಿಕ್ಷಕರಿಗೆ 3ರಿಂದ 4 ಲಕ್ಷ ರೂಪಾಯಿ ಖರ್ಚಾಗಲಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ನೀಡುವ `ಯಶಸ್ವಿನಿ~ ಮಾದರಿಯಲ್ಲಿ ಶಿಕ್ಷಕರಿಗೂ ಆಯ್ದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಲು ವಿಮಾ ಆರೋಗ್ಯ ಕಾರ್ಡ್‌ಗಳನ್ನು ನೀಡಬೇಕು~ ಎಂದು ಆಗ್ರಹಿಸಿದರು.

ಈ ಮಧ್ಯೆ, ಅನುದಾನಿತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರು, ಉಪನ್ಯಾಸಕರ ಪೈಕಿ ಕೆಲವರಿಗೆ ಕಾಲ್ಪನಿಕ ವೇತನ ಬಡ್ತಿ ನೀಡಿ 10, 15 ಮತ್ತು 20 ವರ್ಷಗಳಿಂದ ಕಾಲಮಿತಿ ಬಡ್ತಿ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, `ಆದಷ್ಟು ಶೀಘ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಯತ್ನ ನಡೆಸಲಿದೆ. ಅಲ್ಲದೆ, ಈ ಶಿಕ್ಷಕರಿಗೆ ನೀಡಿರುವ ಸವಲತ್ತುಗಳನ್ನು ವಾಪಸು ಪಡೆಯುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಶಿಕ್ಷಕರಿಗೆ ಯಾವುದೇ ರೀತಿಯ ಆತಂಕ ಬೇಡ~ ಎಂದು ಅಭಯ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT