ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ: ಎಕರೆಗೆ 3.50 ಲಕ್ಷ ದರ ನಿಗದಿ

Last Updated 25 ಫೆಬ್ರುವರಿ 2011, 9:40 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಅಗತ್ಯವಿರುವ ಬಾದಾಮಿ ತಾಲ್ಲೂಕಿನ ಮೂರು ಗ್ರಾಮಗಳ ಒಟ್ಟು 155 ಎಕರೆ ಜಮೀನನ್ನು ಪ್ರತಿ ಎಕರೆಗೆ 3.50 ಲಕ್ಷ ದರದಂತೆ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.ವಿಮಾನ ನಿಲ್ದಾಣ ಸ್ಥಾಪನೆಗೆ ಒಟ್ಟು 269 ಎಕರೆ ಜಮೀನು ಅಗತ್ಯವಿದ್ದು, ಅದರಲ್ಲಿ 155 ಎಕರೆ ಸ್ವಾಧೀನ ಪ್ರಕ್ರಿಯೆ ಈಗಾಗಲೇ ಐತೀರ್ಪು ಹಂತಕ್ಕೆ ಬಂದಿರುವುದರಿಂದ ಸಂಧಾನದ ಮೂಲಕ ಒಪ್ಪಂದದ ದರ ನಿಗದಿಪಡಿಸುವುದಕ್ಕಾಗಿ ಗುರುವಾರ ಕರೆಯಲಾಗಿದ್ದ ಭೂಮಾಲೀಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬಾದಾಮಿ ತಾಲ್ಲೂಕಿನ ಗುಬ್ಬೇರಕೊಪ್ಪ, ಹಲಕುರ್ಕಿ ಹಾಗೂ ಕೊಂಕಣಕೊಪ್ಪದ ಒಟ್ಟು 81 ರೈತರಿಂದ 155 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. 81 ರೈತರ ಪೈಕಿ ಗುಬ್ಬೇರಕೊಪ್ಪ ಹಾಗೂ ಹಲಕುರ್ಕಿ ಗ್ರಾಮದ 61 ಜನರು ಪ್ರತಿ ಎಕರೆ ಜಮೀನನ್ನು 3.50 ಲಕ್ಷ ದರದಲ್ಲಿ ಮಾರಾಟಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ ಕೊಂಕಣಕೊಪ್ಪದ 21 ರೈತರು ಪ್ರತಿ ಎಕರೆಗೆ 12 ಲಕ್ಷ ನೀಡುವಂತೆ ಪಟ್ಟುಹಿಡಿದಿದ್ದಾರೆ.

61 ಜನರ ಜಮೀನನ್ನು ಪ್ರತಿ ಎಕರೆಗೆ 3.50 ಲಕ್ಷ ದರದಲ್ಲಿ ಐತೀರ್ಪು ಮೂಲಕ ಹಾಗೂ ಉಳಿದ 21 ಜನರ ಜಮೀನನ್ನು ಸಾಮಾನ್ಯ ಐತೀರ್ಪು ಮೂಲಕ ಖರೀದಿಗೆ ಅನುಮತಿ ಕೋರಿ ತಕ್ಷಣವೇ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಉಪ ವಿಭಾಗಾಧಿಕಾರಿ ಗೋವಿಂದರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ರೂ. 12 ಲಕ್ಷ ಬೇಡಿಕೆ: ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ಎಕರೆಗೆ 12 ಲಕ್ಷದಂತೆ ಜಮೀನು ಖರೀದಿಸಿರುವುದರಿಂದ ಇಲ್ಲಿಯೂ ಅದೇ ದರ ನಿಗದಿಪಡಿಸಬೇಕು ಎಂದು ಕೊಂಕಣಕೊಪ್ಪ ಗ್ರಾಮದ ರೈತರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಜಿಲ್ಲೆಯಲ್ಲಿ ಪ್ರತಿ ಎಕರೆಗೆ 3.50 ಲಕ್ಷ ರೂಪಾಯಿ ಯೋಗ್ಯ ದರವಾಗಿದ್ದು, ರೈತರು ಇದನ್ನು ಒಪ್ಪಿಕೊಂಡು ಐತೀರ್ಪು ಮೂಲಕ ಹಣ ಪಡೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

ಒಂದು ವೇಳೆ ಸಾಮಾನ್ಯ ಐತೀರ್ಪು ಮೂಲಕ ಪರಿಹಾರ ಪಡೆದುಕೊಂಡರೆ ನ್ಯಾಯಾಲಯದಿಂದ ಹೆಚ್ಚಿನ ಪರಿಹಾರ ಪಡೆಯಲು ಹತ್ತಾರು ವರ್ಷಗಳು ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಆದರೆ ಜಿಲ್ಲಾಧಿಕಾರಿಗಳ ಸಲಹೆ ಯನ್ನು ಒಪ್ಪಿಕೊಳ್ಳದ ರೈತರು ಪಟ್ಟು ಸಡಿಲಿಸಲಿಲ್ಲ.

ಐತೀರ್ಪು ಹಂತದಲ್ಲಿರುವ 155 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇನ್ನುಳಿದ 114 ಎಕರೆ ಜಮೀನುಗಳ ಮಾಲೀಕರ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಗೋವಿಂದರೆಡ್ಡಿ ಹೇಳಿದರು.ಬಾದಾಮಿ ತಹಸೀಲ್ದಾರ ಮಹೇಶ ಕರ್ಜಗಿ, ಭೂಮಾಲೀಕರಾದ ನಿಜಲಿಂಗಪ್ಪ ತಡಸಗೇರಿ, ಬಸಯ್ಯ ಹೊಲ್ದೂರ, ಗದಿಗೆಪ್ಪ ಧರೆನ್ನವರ, ಬಸಪ್ಪ ಗಾಣಿಗೇರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT