ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣದಲ್ಲಿ 'ಮಾಲ್ಗುಡಿ' ಸವಿರುಚಿ

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನಾಮಕರಣ ಮಹೋತ್ಸವಕ್ಕೆ ದಿನಗಣನೆ ಮಾಡುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಯಾವುದೇ ಮೂಲೆಗೆ ಈಗ ಕಣ್ಣು ಹಾಯಿಸಿದರೂ ಹೊಸ ಖದರು ಗೋಚರಿಸುತ್ತದೆ. ವಿಮಾನ ನಿಲ್ದಾಣ ಇನ್ನೂ ಕೆಲವು ಕಿ.ಮೀ. ದೂರವಿದೆ ಎನ್ನುವಾಗಲೇ ಹಾದಿಬೀದಿಯ ಅಕ್ಕಪಕ್ಕದ ಖಾಲಿ ಜಾಗಗಳು ಹಸಿರು ಹುಲ್ಲು ಹಾಸುಗಳನ್ನು ಹೊದ್ದು ಕಣ್ತಂಪು ಮಾಡುತ್ತಿವೆ.

ನಿಲ್ದಾಣದೊಳಗೆ ಎಂಟ್ರಿ ತೆಗೆದುಕೊಳ್ಳುವಾಗಲೂ ಹಳೆಯ ಡಿಪಾರ್ಚರ್‌ ಲಾಂಜ್ ಈಗ ಹೊಸ ನಿರ್ಮಾಣ ಕಾಮಗಾರಿಯ ತಾಣವಾಗಿ ಕಂಡುಬರುತ್ತಿದೆ. ಕಾರ್ಗೊ ಡೆಲಿವರಿ ಲಾಂಜ್ ಹೊರಗೆ ಕೆಮ್ಮಣ್ಣಿಗೆ ಹಸಿರು ಹುಲ್ಲುಹಾಸುಗೆಗಳನ್ನು ಹೊದಿಸುವ ತರಾತುರಿಯಲ್ಲಿದ್ದಾರೆ ಕಾರ್ಮಿಕರು.

ಹೀಗೆ ಹೊಸ ಗೆಟಪ್ಪಿನೊಂದಿಗೆ ಲಕಲಕ ಅನ್ನುತ್ತಿರುವ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ‘1ಎ’ ದೇಶಿ ವಿದೇಶಿ ಪ್ರಯಾಣಿಕರಿಗೆ, ಪ್ರವಾಸಿಗರಿಗೆ ಪಕ್ಕಾ ದಕ್ಷಿಣದ ಊಟೋಪಹಾರಗಳನ್ನು ಉಣಬಡಿಸುವ ಫುಡ್‌ ಲಾಂಜ್ ಕೂಡ  ಪ್ರಯೋಗ ಮತ್ತು ಪ್ರಾತ್ಯಕ್ಷಿಕೆಗಳಲ್ಲಿ ತೊಡಗಿದೆ. ದಕ್ಷಿಣ ಭಾರತದ ಊಟೋಪಹಾರಗಳಿಗೇ ಮೀಸಲಾದ ’ಮಾಲ್ಗುಡಿ ಎಕ್ಸ್‌ಪ್ರೆಸ್’ ಎಲ್ಲರ ಆಕರ್ಷಣೆಯ ಕೇಂದ್ರವಾಗಲಿದೆ.

ಡೊಮೆಸ್ಟಿಕ್ ಡಿಪಾರ್ಚರ್ ಏರಿಯಾದಲ್ಲಿ ಪ್ರಯಾಣಿಕರಿಗೆ ಮೊದಲು ಕಣ್ಣಿಗೆ ಬೀಳುವುದೇ ‘ಮಾಲ್ಗುಡಿ ಎಕ್ಸ್ ಪ್ರೆಸ್’. ‘ಕರ್ನಾಟಕ, ಕೇರಳ, ಆಂಧ್ರಪದೇಶ, ತಮಿಳುನಾಡಿನಲ್ಲಿ ಮನೆಮಾತಾಗಿರುವ ಮಸಾಲಾಗಳನ್ನು ಅದೇ ಮಾದರಿಯಲ್ಲಿ ಬಳಸಿ ಪದಾರ್ಥ, ಸಾಂಬಾರು, ಸಾರು, ರಸಂ, ಚಟ್ನಿ, ಮಾಂಸಾಹಾರಿ ಖಾದ್ಯಗಳನ್ನು ಸಿದ್ಧಪಡಿಸುತ್ತೇವೆ. ಬೆಂಗಳೂರಿನ ಬೇರೆಲ್ಲೂ ಸಿಗದಿರುವಂತಹ ಗುಣಮಟ್ಟದ ದಕ್ಷಿಣದ ಆಹಾರಕ್ಕೆ ಇದು ಪರ್ಯಾಯ ತಾಣವಾಗಬೇಕು ಎಂಬುದು ನಮ್ಮ ಮಹತ್ವಾಕಾಂಕ್ಷೆ’ ಎಂಬ ವಿವರಣೆ ನೀಡುತ್ತಾರೆ ‘ಮಾಲ್ಗುಡಿ’ಯ ಮುಖ್ಯ ಶೆಫ್
ಮುರಳಿ ಮೂರ್ತಿ ಜಿ.

ತರಹೇವಾರಿ ಥಾಲಿ
ಬುಧವಾರ ಅವರು ಉಣಬಡಿಸಿದ ತರಕಾರಿ ಊಟದ ಥಾಲಿಯ ಗಸಿ, ಸಾಂಬಾರು, ರಸಂ, ಹುಳಿ, ಹಸಿ ಇವೆಲ್ಲದರಲ್ಲಿಯೂ ಒಂದೊಂದು ಪ್ರದೇಶದ ಮಸಾಲೆಯ ಘಮಲು ಇತ್ತು. ಕರ್ನಾಟಕದವರ ಮೆಚ್ಚಿನ ನುಗ್ಗೇಕಾಯಿ ಸಾಂಬಾರಿಗೆ ಹುಣಸೆಹುಳಿಯ ಬದಲಿಗೆ ಕೇರಳದ ಮಾವಿನಕಾಯಿಯ ಸಣ್ಣ ಸಣ್ಣ ತುಂಡುಗಳನ್ನು ಹಾಕಿದ್ದರಿಂದ ಹುಳಿ, ಕಾರ,ಉಪ್ಪು ಹದವಾಗಿ ಬೆರೆತು ಚಳಿಗಾಲಕ್ಕೆ ಹೇಳಿಮಾಡಿಸಿದಂತಿತ್ತು.

ವಿಮಾನ ಯಾನಕ್ಕೆ ಬರುವ ಪ್ರಯಾಣಿಕರು ಪುರುಸೊತ್ತಿನಲ್ಲಿ ಬರುತ್ತಾರೋ, ಲಗುಬಗೆಯಲ್ಲಿರುತ್ತಾರೋ ಹೇಳಲಾಗದು. ತುರ್ತಾಗಿ ಏನೋ ಒಂದಿಷ್ಟು ತಿಂದುಕೊಂಡು ವಿಮಾನ ಏರಬೇಕು ಅನ್ನುವವರಿಗೆ 10 ನಿಮಿಷದೊಳಗೆ ಸರ್ವ್ ಮಾಡುವ ಥಾಲಿಗಳು ‘ಮಾಲ್ಗುಡಿ’ಯಲ್ಲಿ ಲಭ್ಯ ಎಂದರು ಮಾರುತಿ.

ಥಾಲಿಯಲ್ಲಿ ಸ್ಟಾರ್ಟರ್, ಮೇನ್ ಕೋರ್ಸ್, ಡೆಸರ್ಟ್ ಸೇರಿವೆ. ವೆಜ್ ಥಾಲಿಯಲ್ಲಿ ಆಂಧ್ರ ಚಿಲ್ಲಿಯ ಬಜ್ಜಿ, ಗೋಬಿ ಫ್ರೈ, ಈರುಳ್ಳಿ ಮತ್ತು ಹಸಿಮೆಣಸಿನ ಕಾಯಿ ಬೆರೆತ ಗುಳ್ಳಪ್ಪ (ಪಡ್ಡು) ಕೆಂಪು, ಹಸಿರು ಮತ್ತು ಬಿಳಿ ಬಣ್ಣದ ಮೂರು ಬಗೆಯ ಚಟ್ನಿಗಳೊಂದಿಗೆ ಸ್ಟಾರ್ಟರ್ ಆಗಿ ತಂದಿಟ್ಟರು ಮಾಲ್ಗುಡಿ ಸಿಬ್ಬಂದಿ ರಾಜಿ.

ಬಜ್ಜಿ ಪ್ರತಿನಿತ್ಯ ಸಾಯಂಕಾಲದ ಕಾಫಿ/ಚಹಾದ ಬಾಯಿಗೆ ಒಳ್ಳೆಯ ಕಾಂಬಿನೇಷನ್. ಆದರೆ ದಪ್ಪನೆಯ ಮಸಾಲಾದಲ್ಲಿ ಅದ್ದಿದ ಮೆಣಸಿನಕಾಯಿ ಸರಿಯಾಗಿ ಬೆಂದಿರುವುದಿಲ್ಲ. ಈ ಬಜ್ಜಿ ತಿಂದು ನೋಡಿ. ನಾವು ಮೊದಲು ಮೆಣಸನ್ನು ಸ್ಟಫ್ ಮಾಡಿ ಆಮೇಲೆ ಮಸಾಲಾದಲ್ಲಿ ಬೆರೆಸಿ ಕರಿಯುತ್ತೇವೆ ಎಂದರು ಮುರಳಿ.

ಥಾಲಿಯ ಮೇನ್ ಕೋರ್ಸ್, ಚಿತ್ರಾನ್ನ ಅಥವಾ ಇತರ ಯಾವುದಾದರೊಂದು ಭಾತ್, ಎರಡೇ ಬೆರಳಲ್ಲಿ ತುಂಡರಿಸಬಹುದಾದಷ್ಟು ಮೆತ್ತನೆ ಮತ್ತು ತೆಳ್ಳನೆಯ ಪರೋಟ, ಒತ್ತು ಶಾವಿಗೆ, ನಾಲ್ಕೈದು ಬಗೆಯ ಸಾಂಬಾರು, ಸಾರು, ಗಸಿಯನ್ನೊಳಗೊಂಡಿರುತ್ತದೆ.

ಮಾಂಸಾಹಾರಿಗಳಿಗೆ ಕಾಣೆ ರವಾ ಫ್ರೈ, ಆಂಧ್ರ ಶೈಲಿಯ ಚಿಕನ್, ಕೋರಿ ಗಸಿ, ಮೀನು ಸಾರು ಅದೇ ಪರೋಟ, ಶಾವಿಗೆ ಹಾಗೂ ಚಿತ್ರಾನ್ನದೊಂದಿಗೆ ಥಾಲಿಯಲ್ಲಿ ಲಭ್ಯ.

ಟಿಫನ್ ಬಾಕ್ಸ್
ಎರಡು, ಮೂರು ಚೇಂಬರ್ ಇರುವ ಸ್ಟೀಲ್‌ ಟಿಫನ್ ಬಾಕ್ಸ್ ‘ಮಾಲ್ಗುಡಿ’ಯ ವೈಶಿಷ್ಟ್ಯಗಳಲ್ಲಿ ಒಂದು. ಪರೋಟಾ ಆರ್ಡರ್ ಮಾಡುವ ಗ್ರಾಹಕರಿಗೆಂದೇ ವಿಶೇಷವಾಗಿ ವಿನ್ಯಾಸ ಮಾಡಿರುವ ಈ ಟಿಫನ್ ಬಾಕ್ಸ್ ಪರೋಟಾ ಮತ್ತು ಎರಡರಿಂದ ಮೂರು ಬಗೆಯ ಸಾಂಬಾರು, ಗಸಿಯನ್ನೊಳಗೊಂಡಿರುತ್ತದೆ.

ಮಾಲ್ಗುಡಿಯಲ್ಲಿ ಸರ್ವ್ ಮಾಡುವ ಯಾವುದೇ ತಿನಿಸು, ಖಾದ್ಯಗಳನ್ನು ಕತ್ತರಿಸಿ ತಿನ್ನಲು ಚಾಕು ಕೊಡಲಾಗುವುದಿಲ್ಲ. ಸುರಕ್ಷೆಯ ದೃಷ್ಟಿಯಿಂದ ಈ ಕ್ರಮ. ಕೊನೆಯಲ್ಲಿ ನೀಡುವ ಎಳೆ ತೆಂಗಿನಕಾಯಿ ತುರಿಯಿಂದ ತಯಾರಿಸಿದ ಡೆಸರ್ಟ್ ಕೇರಳದ ಸ್ವಾದವನ್ನು ಪರಿಚಯಿಸುತ್ತದೆ. ಅಕ್ಕಿ ನುಚ್ಚಿನ ಪಾಯಸವಂತೂ ತಿಂದಮೇಲೂ ಚಪ್ಪರಿಸುವಂತೆ ಮಾಡುತ್ತದೆ.

ಅಪ್ಪಟ ದಕ್ಷಿಣಾತ್ಯ ನೋಟ ನೀಡುವ ಉದ್ದೇಶದಿಂದ ಮಾಲ್ಗುಡಿಯ ಸರ್ವಿಂಗ್ ಏರಿಯಾವನ್ನು ಮರದ ಚೌಕಟ್ಟಿನೊಳಗೆ ಕಬ್ಬಿಣದ ಸರಳುಳ್ಳ ಕಿಟಕಿಗಳ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊರದೇಶದ ಪ್ರವಾಸಿಗರಿಗೆ ಈ ಗೆಟಪ್ಪೂ ಆಕರ್ಷಣೆಯಾಗಲಿದೆ ಎಂಬ ಲೆಕ್ಕಾಚಾರ ಸರಿಯಾಗಿದೆ ಬಿಡಿ.

ಅಂದಹಾಗೆ, ಮಾಲ್ಗುಡಿಯಲ್ಲಿ ಲಭ್ಯವಿರುವ ವೆಜ್ ಥಾಲಿ ಬೆಲೆ ರೂ.257, ನಾನ್ ವೆಜ್ ಥಾಲಿ ರೂ.350. ತೆರಿಗೆ ಪ್ರತ್ಯೇಕ.

ಆರು ತಿಂಗಳಲ್ಲಿ ಇನ್ನಷ್ಟು ಬಗೆ
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಪಂಚದ ಇತರ ಯಾವುದೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕಡಿಮೆಯಿಲ್ಲದಂತೆ ಸೇವೆ ನೀಡುತ್ತದೆ. ಅದರೊಂದಿಗೆ ನಮ್ಮತನವನ್ನು ನಾವು ಪರಿಚಯಿಸಿಕೊಡಬೇಕಾಗಿದೆ. ಹೀಗಾಗಿ ದಕ್ಷಿಣ ಭಾರತದ ಊಟೋಪಹಾರಗಳನ್ನು ಒದಗಿಸುವುದು ಅತ್ಯವಶ್ಯ. ದಕ್ಷಿಣ ಭಾರತದ ಹೆಬ್ಬಾಗಿಲು ಅಂತ ಗುರುತಿಸಿಕೊಂಡಿರುವ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರು, ಪ್ರಯಾಣಿಕರು ಕಳೆಯುವ ಪ್ರತಿಯೊಂದು ಕ್ಷಣವೂ ಸ್ಮರಣೀಯವಾಗಬೇಕಾದರೆ ಇಲ್ಲಿ ಸಿಗುವ ಆಹಾರ, ತಿನಿಸುಗಳ ಗುಣಮಟ್ಟವೂ ಅತ್ಯುತ್ತಮವಾಗಿರಬೇಕು ಎನ್ನುತ್ತಾರೆ ವಿಮಾನ ನಿಲ್ದಾಣದ ಕಾರ್ಯಾಚಾರಣೆ ವಿಭಾಗದ ಅಧ್ಯಕ್ಷ ಹರಿ ಕೆ. ಮರಾರ್.

ಈ ಲೆಕ್ಕಾಚಾರ ಈಗ ಇಲ್ಲಿ ಕೃತಿಗಿಳಿಯುತ್ತಿದೆ. ಆಲ್ಫಾ 1, 2 ಮತ್ತು 3 ಎಂಬ ಹೆಸರು ಹೊತ್ತು ವಿಮಾನ ನಿಲ್ದಾಣ ಪ್ರಾಧಿಕಾರ, ಕಾರ್ಯಾಚರಣೆಗಳು ಮತ್ತು ಸಿಬ್ಬಂದಿ ಸೇವೆಗೆ ಮೀಸಲಾದ ಪ್ರತ್ಯೇಕ ಕಾರ್ಪೊರೇಟ್‌ ಕಚೇರಿಗಳು ಟರ್ಮಿನಲ್ ‘1 ಎ’ರಲ್ಲಿವೆ. ಫುಡ್ ಕೋರ್ಟ್, ಜೀವನಶೈಲಿ ಹಾಗೂ ಫ್ಯಾಷನ್ ಸಂಬಂಧಿ ಮಳಿಗೆಗಳು ಇದಕ್ಕೆ ಪೂರಕ ಸೌಕರ್ಯಗಳು. ಡ್ಯೂಟಿ ಫ್ರೀ ಮಳಿಗೆಗಳು ಡೊಮೆಸ್ಟಿಕ್ ಮತ್ತು ಅಂತರರಾಷ್ಟ್ರೀಯ ಡಿಪಾರ್ಚರ್ ಲಾಂಜ್‌ ಬಳಿಯಿರುತ್ತವೆ.

ಮುಂದಿನ ಆರು ತಿಂಗಳಲ್ಲಿ ಫುಡ್ ಅಂಡ್‌ ಬೆವರೆಜಸ್ ವಿಭಾಗದಲ್ಲಿ ಫ್ರೆಂಚ್, ಚೈನೀಸ್, ಮೆಡಿಟರೇನಿಯನ್ ಆಹಾರ ಮಳಿಗೆಗಳು, ಕೆಎಫ್ ಸಿ ಮಳಿಗೆ, 380 ಡಿಗ್ರಿ ಮತ್ತು ಟೈಮ್ ಔಟ್ ಎಂಬ ಎರಡು ಬಾರ್, ಅರ್ಬನ್ ಫುಡ್ ಮಾರ್ಕೆಟ್ ಕಾರ್ಯಾರಂಭ ಮಾಡಲಿವೆ. ಕೆಳ, ಮಧ್ಯಮ ಮತ್ತು ಉನ್ನತ ವರ್ಗದ ಪ್ರಯಾಣಿಕರಿಗೆ ಸೂಕ್ತವೆನಿಸುವ ದರಗಳಲ್ಲಿ ಉತ್ಪನ್ನಗಳು ಈ ಮಳಿಗೆಗಳಲ್ಲಿ ಲಭ್ಯವಾಗಲಿವೆ.

ಇದಲ್ಲದೆ, ಅಂತರರಾಷ್ಟ್ರೀಯ ಡಿಪಾರ್ಚರ್ ಲಾಂಜ್ ಬಳಿ ‘ಸೆವೆನ್ ತವಾಸ್’, ನೂಡಲ್ ಬಾರ್ ರೆಸ್ಟೋರೆಂಟ್‌ ಕೂಡ ತೆರೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದರು ಹಣಕಾಸು/ ಪೂರಕ ಸೇವಾ ವಿಭಾಗದ ಹಿರಿಯ ನಿರ್ದೇಶಕ ಬಿ.ಭಾಸ್ಕರ್ ಹಾಗೂ ವಾಣಿಜ್ಯ ವಿಭಾಗದ ಉಪಾಧ್ಯಕ್ಷ ರೆನೆ ಬೋಮನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT