ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಸೌಲಭ್ಯದ ಐಷಾರಾಮಿ ಬಸ್

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿಯೇ ಇದೇ ಪ್ರಥಮ ಬಾರಿಗೆ  ಕಾಫಿ-ಟೀ, ಹಾಲು ಅಥವಾ ಆಹಾರ ಪದಾರ್ಥಗಳನ್ನು ಬಿಸಿ ಮಾಡಿಕೊಳ್ಳಲು ಬಸ್ಸಿನೊಳಗೇ ಅಡುಗೆ ಮನೆ ಸೌಲಭ್ಯವಿರುವ ಜತೆಗೆ ಶೌಚಾಲಯ ಇರುವ ವಿನೂತನ ಐರಾವತ ಬಸ್‌ಗಳ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯು ಬುಧವಾರ ಬೆಂಗಳೂರು-ತಿರುಪತಿ ಹಾಗೂ ಬೆಂಗಳೂರು ಚೆನ್ನೈ ನಡುವೆ ಪ್ರಾರಂಭಿಸಿತು.

ಸದ್ಯಕ್ಕೆ ಶೌಚಾಲಯ ಸೌಲಭ್ಯ ಇರುವ ನಾಲ್ಕು `ಐರಾವತ ಸುಪೀರಿಯ~; ಶೌಚಾಲಯ ಮತ್ತು ಅಡಿಗೆ ಕೋಣೆ ಸೌಲಭ್ಯಗಳೆರಡೂ ಹೊಂದಿರುವಂತಹ ಎರಡು `ಐರಾವತ ಬ್ಲಿಸ್~ ಬಸ್‌ಗಳ ಸೇವೆಯನ್ನು ಆರಂಭಿಸಲಾಗಿದೆ.
ನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಮುಂಭಾಗದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಆರ್. ಅಶೋಕ ಈ ವಿನೂತನ ಬಸ್‌ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಏನಿವುಗಳ ವಿಶೇಷತೆ?: `ಐರಾವತ ಬ್ಲಿಸ್~ ಬಸ್‌ನಲ್ಲಿ ಅಳವಡಿಸಲಾದ ಅಡಿಗೆ ಮನೆಯಲ್ಲಿ ಕಾಫಿ ಮೇಕರ್, ಅವನ್ ಹಾಗೂ ಫ್ರಿಜರ್ ಅನ್ನು ಅಳವಡಿಸಲಾಗಿದೆ. ಪ್ರಯಾಣಿಕರು ಈ ಅಡಿಗೆ ಮನೆಯಲ್ಲಿ ಮುಂಚಿತವಾಗಿ ಸಿದ್ಧಪಡಿಸಿದ ಆಹಾರ, ಕಾಫಿ, ಟೀ ಹಾಗೂ ಹಾಲಿನಂತಹ ಪೇಯಗಳನ್ನು ಬಿಸಿ ಮಾಡಿಕೊಳ್ಳಬಹುದು. ಅಲ್ಲದೆ, ಕೊಂಡು ತಂದಂತಹ ಆಹಾರವನ್ನೂ ಬಿಸಿ ಮಾಡಿಕೊಳ್ಳಬಹುದು. ಇದರಿಂದ ಪ್ರಯಾಣಿಕರು ಪ್ರಯಾಣ ಮಾಡುವ ಸಮಯದಲ್ಲಿ ಹೋಟೆಲ್ ಸಿಗುವವರೆಗೆ ಕಾಯದೆ ಬಸ್ಸಿನಲ್ಲಿಯೇ ಕಾಫಿ, ಟೀ ಅಥವಾ ಇತರೆ ಬಿಸಿ ಮಾಡಿದ ತಿಂಡಿ-ತಿನಿಸು ಸೇವಿಸಿ ಹಸಿವು ನೀಗಿಸಿಕೊಳ್ಳಬಹುದು.

ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ 125 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಿದಲ್ಲಿ ಕಾಫಿ-ಟೀ, ಹಣ್ಣಿನ ರಸ ಹಾಗೂ  ತಿಂಡಿಯನ್ನು ಪ್ರಯಾಣ ವೇಳೆಯಲ್ಲಿ ಒದಗಿಸಲಾಗುತ್ತದೆ. ಹಾಲು, ಕಾಫಿ, ಟೀ ಅಥವಾ ಆಹಾರ ಪದಾರ್ಥಗಳನ್ನು ಬಿಸಿ ಮಾಡಿಕೊಳ್ಳುವುದಕ್ಕೆ ಯಾವುದೇ ದರ ವಿಧಿಸುವುದಿಲ್ಲ.

ಬಸ್ಸಿನೊಳಗೇ ಮನರಂಜನೆ: ಇನ್ನು, ಬಸ್ಸಿನೊಳಗೆ ಪ್ರಯಾಣಿಕರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ 60ಕ್ಕೂ ಹೆಚ್ಚು ನೇರ ಪ್ರಸಾರವುಳ್ಳ ಚಾನೆಲ್‌ಗಳನ್ನು ವೀಕ್ಷಿಸಲು ಟಿವಿ ಸ್ಕ್ರೀನ್ ಹಾಗೂ ಇಂಟರ್‌ನೆಟ್ ಬಳಕೆಗೆ `ವೈ-ಫೈ~ ಸೇವೆಯೂ `ಐರಾವತ ಬ್ಲಿಸ್~ ಬಸ್‌ನಲ್ಲಿ ಲಭ್ಯ.

ಬಸ್ಸಿನ ಪ್ರತಿಯೊಂದು ಆಸನದಿಂದಲೂ ತಮಗಿಷ್ಟವಾದ ಚಾನೆಲ್‌ಗಳ ಮೂಲಕ ಚಲನಚಿತ್ರ ವೀಕ್ಷಿಸಲು ಅಥವಾ ಸಂಗೀತ ಆಸ್ವಾದಿಸುವಂತಹ ಸೌಲಭ್ಯ ಒದಗಿಸಲಾಗಿದೆ. ಏರ್‌ಟೆಲ್ ಮತ್ತು ಇಂಟೆಗ್ರ ಕನ್ಸಲ್ಟೆನ್ಸಿ ಸರ್ವೀಸಸ್‌ನಿಂದ ಈ ಸೌಲಭ್ಯ ಒದಗಿಸಲಾಗಿದೆ. ಇಂಟರ್‌ನೆಟ್ ಬಳಕೆಗೆ `ವೈ-ಫೈ~ ಸೌಲಭ್ಯ ಎರಡು ತಿಂಗಳು ಉಚಿತ. ಆನಂತರ 15 ರೂಪಾಯಿ ದರ ವಿಧಿಸಲಾಗುತ್ತದೆ.

ಬ್ರಾಂಡಿಂಗ್: ಅತಿ ನವೀನ ಅನುಕೂಲಗಳನ್ನು ಹೊಂದಿರುವ ಈ ವೋಲ್ವೊ ಮಲ್ಟಿ ಆಕ್ಸೆಲ್ ಬಸ್‌ಗಳಿಗೆ ತಮ್ಮದೇ ಆದ ವಿಶಿಷ್ಟ ಛಾಪನ್ನು ತಂದುಕೊಡಲು ಕೆಎಸ್‌ಆರ್‌ಟಿಸಿಯು ಅಂತರರಾಷ್ಟ್ರೀಯ ಬ್ರಾಂಡಿಂಗ್ ಏಜೆನ್ಸಿಯಾದ `ಓಗಿಲ್ವಿ ಅಂಡ್ ಮಾತರ್~ ಸಂಸ್ಥೆಯನ್ನು ನೇಮಿಸಿ, ಅವುಗಳಿಗೆ ನಂತರ `ಐರಾವತ ಸುಪೀರಿಯ~ ಹಾಗೂ `ಐರಾವತ ಬ್ಲಿಸ್~ ಎಂದು ನಾಮಕರಣ ಮಾಡಿದೆ. ಐರಾವತ ಬ್ಲಿಸ್ ಬಸ್‌ನ ಮೌಲ್ಯ ರೂ. 1.15 ಕೋಟಿ. ಐರಾವತ ಸುಪೀರಿಯ ಬಸ್‌ನ ಮೌಲ್ಯ ರೂ. 1.12 ಕೋಟಿ.

ರಾಸಾಯನಿಕ ಶೌಚಾಲಯ: `ಐರಾವತ ಸುಪೀರಿಯ~ ಬಸ್‌ನಲ್ಲಿ ರಾಸಾಯನಿಕ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ಶುದ್ಧ ನೀರಿನ ಸಮರ್ಪಕ ಬಳಕೆ ಹಾಗೂ ನೀರಿನ ಅನವಶ್ಯಕ ಬಳಕೆ ನಿಯಂತ್ರಿಸಲು ಈ ಶೌಚಾಲಯದಲ್ಲಿ ಅತ್ಯುತ್ತಮ ಪದ್ಧತಿಯನ್ನು ಅಳವಡಿಸಲಾಗಿದೆ.

ಶೌಚಾಲಯದ ಎಲ್ಲ ಯಾಂತ್ರಿಕ ಕ್ರಿಯೆಗಳು `ಡ್ಯಾಶ್ ಬೋರ್ಡ್~ನಿಂದ ನಿಯಂತ್ರಿತ. `ಖಾಲಿ ಇದೆ~, `ಬಳಕೆಯಲ್ಲಿದೆ~ ಮತ್ತು `ನಿಷ್ಕ್ರಿಯಗೊಳಿಸಿದೆ~ ಎಂದು ತೋರುದೀಪಗಳ ಮೂಲಕ ಮಾಹಿತಿ. ಪ್ರಯಾಣಿಕರು ಶೌಚಾಲಯ ಬಳಸಿ ಫ್ಲಶ್ ಮಾಡದಿದ್ದಲ್ಲಿ ಸ್ವಯಂಚಾಲಿತವಾಗಿ ಫ್ಲಶ್ ಮಾಡುವ ವ್ಯವಸ್ಥೆ ಅಳವಡಿಸಲಾಗಿದೆ. `10 ಸೆಕೆಂಡ್~ ನೀರು ಉಳಿತಾಯದ ಕಾರ್ಯಾಚರಣೆಯುಳ್ಳ ಕೈ ತೊಳೆಯುವ ವ್ಯವಸ್ಥೆ, ಸರಳ ಕಾರ್ಯನಿರ್ವಹಣೆಯ ಮಲಿನ ನಿರ್ಮೂಲನಾ ವ್ಯವಸ್ಥೆ ಕೂಡ ಶೌಚಾಲಯದಲ್ಲಿ ಲಭ್ಯ.

ಶಾಸಕ ಬಿ.ಎನ್. ವಿಜಯಕುಮಾರ್, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಬಿ. ರಾಮಮೂರ್ತಿ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್. ಮಂಜುನಾಥ ಪ್ರಸಾದ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT