ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಹಾರಾಟಕ್ಕಾಗಿ ಗೇಟ್ ಪರೀಕ್ಷೆ ತ್ಯಾಗ!

Last Updated 13 ಫೆಬ್ರುವರಿ 2011, 19:55 IST
ಅಕ್ಷರ ಗಾತ್ರ

ಯಲಹಂಕ ವಾಯುನೆಲೆ: ನಗರದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಸ್ವೀಡನ್ ದೇಶದ ಯುದ್ಧವಿಮಾನವನ್ನು ಯಲಹಂಕ ವಾಯುನೆಲೆಯ ಬಾನಂಗಳದಲ್ಲಿ ಲೀಲಾಜಾಲವಾಗಿ ಹಾರಿಸುವ ಮೂಲಕ ಭಾನುವಾರ ವೀಕ್ಷಕರ ಗಮನ ಸೆಳೆದರು.

‘ಸಾಬ್’ ಕಂಪೆನಿಯು ನಿರ್ಮಿಸಿರುವ ಗ್ರಿಪೆನ್ ಯುದ್ಧ ವಿಮಾನವನ್ನು 22 ವರ್ಷದ  ಶಶಾಂಕ್ ಸಹ ಚಾಲಕರಾಗಿ ಹಾರಿಸಿದರು. ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಶಾಂಕ್ ಅಂತಿಮ ವರ್ಷದ ಮೆಕ್ಯಾನಿಕಲ್ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಚಿಕ್ಕಂದಿನಿಂದಲೂ ವಿಮಾನ ಹಾರಾಟದ ಬಗ್ಗೆ ಕನಸು ಕಂಡವರು ಇವರು. ಈ ಕನಸು ನನಸಾದ ಬಗ್ಗೆ ಸಂತೋಷ, ಸಂತೃಪ್ತಿ ಅವರ ಮುಖದಲ್ಲಿ ಎದ್ದು ಕಾಣಿಸುತ್ತಿತ್ತು. ವಿಶೇಷವೆಂದರೆ ಈ ಸಾಧನೆಗಾಗಿ ಅವರು ಮಾಡಿರುವ ‘ತ್ಯಾಗ’ವೂ ದೊಡ್ಡದು. ಎಂಜಿನಿಯರಿಂಗ್ ಉನ್ನತ ಶಿಕ್ಷಣ ಪಡೆಯಲು ಅಗತ್ಯವಾದ ಗೇಟ್ (ಗ್ರ್ಯಾಜುಯೇಟ್ ಅಪ್ಟಿಟ್ಯುಡ್ ಟೆಸ್ಟ್ ಇನ್ ಎಂಜಿನಿಯರಿಂಗ್) ಪ್ರವೇಶ ಪರೀಕ್ಷೆ ಈ ದಿನವೇ (ಫೆ.13) ನಡೆಯುತ್ತಿದ್ದರೂ, ಅದಕ್ಕೆ ಗೈರುಹಾಜರಾಗಿ ವಿಮಾನ ಹಾರಾಟ ಪರೀಕ್ಷೆಗೆ ಹಾಜರಾದರು.

ಇದರ ಬಗ್ಗೆ ಅವರಿಗಾಗಲಿ ಅವರ ಕುಟುಂಬದವರಿಗಾಗಲಿ ಪಶ್ಚಾತಾಪವಿರಲಿಲ್ಲ. ಬದಲಾಗಿ, ತಮ್ಮ ಪುತ್ರನ ಸಂತೋಷವೇ ಮುಖ್ಯ ಎಂದು ಪೋಷಕರು ತಿಳಿಸಿದರು. ಮಂಡ್ಯದ ಕೃಷಿ ವಿವಿ ಕಾಲೇಜಿನಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿರುವ ಎಚ್.ಎಸ್.ರಮೇಶ್ ಮಗನ ಆಸೆಗೆ ಒತ್ತಾಸೆಯಾಗಿ ನಿಂತವರು.

‘ಮುಂದಿನ ಆರು ತಿಂಗಳಲ್ಲಿ ಗೇಟ್ ಪರೀಕ್ಷೆ ಮತ್ತೊಮ್ಮೆ ನಡೆಯಲಿದ್ದು, ಆಗ ಮಗನಿಗೆ ಅವಕಾಶ ಸಿಗುತ್ತದೆ. ಇದರಿಂದ ಅವನ ಶೈಕ್ಷಣಿಕ ವರ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.  ಕೇವಲ ವಿದ್ಯಾಭ್ಯಾಸದ ಬಗ್ಗೆ ಒತ್ತಡ ಹೇರದೇ, ಅವರ ಹವ್ಯಾಸ, ಆಸಕ್ತಿಗಳನ್ನು ಬೆಳೆಸುವ ಜವಾಬ್ದಾರಿ ಕೂಡ ಪಾಲಕರದ್ದಲ್ಲವೇ?’ ಎಂದರು.

‘ಏರೊ ಇಂಡಿಯಾ’ ಪ್ರದರ್ಶನದ ಹಿನ್ನೆಲೆಯಲ್ಲಿ ‘ಸಾಬ್’ ಕಂಪೆನಿಯು ಯುದ್ಧವಿಮಾನವನ್ನು ಸಹ-ಚಾಲಕರಾಗಿ ಹಾರಿಸಲು ಹಲವು ಸ್ಪರ್ಧೆಗಳನ್ನು ನಡೆಸಿತ್ತು. ಇದರಲ್ಲಿ ಸುಮಾರು 75 ದೇಶಗಳ ಲಕ್ಷಾಂತರ ಯುವಕರು ಭಾಗವಹಿಸಿದ್ದರು. ಇವರ ಪೈಕಿ ಶಶಾಂಕ್ ಅಂತಿಮವಾಗಿ ಜಯಗಳಿಸಿದರು. ಯುದ್ಧವಿಮಾನವನ್ನು ಹಾರಿಸುವ ಮೂಲಕ ತಮ್ಮ ಕನಸು ನನಸಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT