ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ಕ್ಷೇತ್ರ ಅರಸಿ ವೃತ್ತಿಬದುಕು

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಿ ಮಾ ಕ್ಷೇತ್ರ (ಇನ್ಶೂರೆನ್ಸ್) ಕಳೆದ ಕೆಲವು ವರ್ಷ­ಗಳಿಂದ ಒಂದು ಉದ್ಯಮವಾಗಿ ಅಭಿವೃದ್ಧಿ ಹೊಂದಿದೆ. ವಿದೇಶಿ ಹೂಡಿಕೆದಾರರ ಪ್ರವೇಶದೊಂದಿಗೆ ಅಪೇಕ್ಷಿತ ಮಟ್ಟ­ವನ್ನೂ ತಲುಪಿದೆ. ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾದಂತೆ ಹೊಸ ಹೊಸ ಉತ್ಪನ್ನಗಳು, ಅತ್ಯುತ್ತಮ ಪ್ಯಾಕೇಜ್, ಸುಧಾ­ರಿತ ಗ್ರಾಹಕ ಸೇವೆಗಳು ಲಭ್ಯವಾಗುತ್ತಿವೆ. ಅದರ ಫಲಿತಾಂಶ­ವಾಗಿ ಕ್ಷೇತ್ರದಲ್ಲಿನ ಉದ್ಯೋಗಾವಕಾಶವೂ ದುಪ್ಪಟ್ಟಾಗಿದೆ. ವಿಮಾ ಕಂಪೆನಿಗಳು ತರಹೇವಾರಿ ಉತ್ಪನ್ನಗಳೊಂದಿಗೆ ಗ್ರಾಹ­ಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ಇದಕ್ಕೆ ಕಾರಣ.

2000ನೇ ವರ್ಷಕ್ಕೆ ಮುನ್ನ ಕೇವಲ ಸಾರ್ವಜನಿಕ ಸ್ವಾಮ್ಯದ ವಿಮಾ ಮಾರುಕಟ್ಟೆ ಮಾತ್ರ ಲಭ್ಯ­ವಿದ್ದಾಗ ಈ ಕ್ಷೇತ್ರದ ಉದ್ಯೋಗ ಸರ್ಕಾರಿ ನೌಕರಿಗೆ ಸಮನಾ­ಗಿತ್ತು. ಹಾಗಾಗಿ ಯಶಸ್ವಿ ವಿಮೆ ಉದ್ಯೋಗಿ ಎನ್ನಿಸಿಕೊಳ್ಳು­ವುದು ಕೆಲವರಿಗೆ ಮಾತ್ರ ಸಾಧ್ಯವಾಗುತ್ತಿತ್ತು. ಆದರೆ ಖಾಸಗೀ­ಕರಣದ ನಂತರ ಹೆಚ್ಚಿದ ಅವಕಾಶ, ಉತ್ತಮ ಸಂಬಳ, ಮೂಲ ಸೌಕರ್ಯದ ಬೆಂಬಲದಿಂದ ವಿಮೆ ಉದ್ಯೋಗ ಆಕ­ರ್ಷಕ ವೃತ್ತಿ ಎನಿಸಿದೆ. ಈ ಕ್ಷೇತ್ರವೀಗ ಜನರ ಜೀವನಕ್ಕೆ, ದೇಶದ ಆಸ್ತಿಗೆ ಸುರಕ್ಷಾ ಕವಚದ ಜೊತೆಗೆ, ಸಾವಿರಾರು ಉದ್ಯೋಗಾವಕಾಶ, ವೃತ್ತಿ ಆಯ್ಕೆಗಳನ್ನೂ ಒದಗಿಸುತ್ತಿದೆ.

ದೇಶದಲ್ಲಿ ವಿಮೆ ಮಾರುಕಟ್ಟೆಗೆ ವ್ಯಾಪಕ ಅವಕಾಶ ಇದೆ. ಹೇಗೆಂದರೆ, ಇಲ್ಲಿ ಉಳಿತಾಯ ಭಾರಿ ಪ್ರಮಾಣದಲ್ಲಿ ಜಾರಿ­ಯಲ್ಲಿದ್ದರೂ, ಹಣಕಾಸು ಸೇವೆಗಳು ಅದಕ್ಕೆ ಪೂರಕ ಮಟ್ಟ­ದಲ್ಲಿ ಇಲ್ಲ. ಹಾಗಾಗಿ ವಿಮೆ ವೃತ್ತಿಪರರು ಅತ್ಯುತ್ತಮ ತರ­ಬೇತಿ ಪಡೆದಿರುವುದು ಹಾಗೂ ಕಂಪೆನಿಯ ಅಗತ್ಯಗಳಿಗೆ ತಕ್ಕಂತೆ ಕೌಶಲ ವರ್ಧಿಸಿಕೊಳ್ಳುವುದು ಬಹಳ ಮುಖ್ಯವಾಗು­ತ್ತದೆ. ಇನ್ಶೂರೆನ್ಸ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ದೇಶದಾದ್ಯಂತ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಲಭ್ಯವಿವೆ. ಇಲ್ಲಿ ವಿಮೆ ಕ್ಷೇತ್ರದ ಸರ್ವ ಆಯಾಮಗಳ ಬಗ್ಗೆ ಕೂಲಂಕಶವಾಗಿ ಕಲಿಸಿಕೊಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಈ ಕ್ಷೇತ್ರದ ಪೂರ್ಣ ಪರಿಚಯ ಆಗುವುದಲ್ಲದೆ, ಇನ್ಶೂರೆನ್ಸ್ ಕಂಪೆನಿಗಳಲ್ಲಿ ಉನ್ನತ ಹುದ್ದೆಗೇರಲು ಸಹಾಯ ಆಗುತ್ತದೆ.

ಇತ್ತೀಚೆಗೆ ಕೆಲವು ವಿಶ್ವವಿದ್ಯಾಲಯಗಳು ವಿಮೆ ವಿಷಯದಲ್ಲೇ ಕೋರ್ಸ್‌ಗಳನ್ನು ನಡೆಸುತ್ತಿವೆ. ಆದರೆ, ಅವು ಅಷ್ಟೊಂದು ಪರಿಣಾಮಕಾರಿ­ಯಾಗಿಲ್ಲ. ಅದರಿಂದ ಇಂದು ಸೂಕ್ತ ವಿಧಾನದಲ್ಲಿ ಕೌಶಲ ಗಳಿಸಿಕೊಂಡ ಹಾಗೂ ಅನುಭವಿ ವೃತ್ತಿಪರರ ಕೊರತೆ ಬಹಳವಾಗಿದೆ. ಜನರಲ್ ಇನ್ಶೂ­ರೆನ್ಸ್‌ನ್ನು ಒಂದು ವೃತ್ತಿಯಾಗಿ ಆರಿಸಿಕೊಳ್ಳುವುದಕ್ಕೆ ಸಾಕಷ್ಟು ಆಯ್ಕೆ­ಗಳಿವೆ. ಮಾರ್ಕೆಟಿಂಗ್, ವಿತರಣೆ, ವಿಮಾ ಗಣಿತ, ಕಾರ್ಯ­ಭಾರ, ಕ್ಲೇಮ್ಸ ಮತ್ತು ಹೂಡಿಕೆ ವಿಭಾಗಗಳಲ್ಲಿ ಉದ್ಯೋ­ಗಾ­­ವ­­ಕಾಶ­ಗಳಿವೆ. ಕೆಲವು ವಿಮಾ ವೃತ್ತಿಗಳು ಉನ್ನತ ಮಟ್ಟದ ಪರಿ­ಣತಿಯನ್ನು ಬೇಡು­ತ್ತವೆ ಮತ್ತು ಅರ್ಹ ಅಭ್ಯರ್ಥಿಗಳ ನೇಮಕಾ­ತಿ­ಯನ್ನೇ ಅಪೇಕ್ಷಿಸುತ್ತವೆ. ಉಳಿದ ಹುದ್ದೆಗಳಿಗೆ ಎಲ್ಲ ಪದವೀಧರರೂ ಪ್ರಯತ್ನಿಸಬಹುದು.

ವಿಮಾ ಗಣಿತಜ್ಞರು ವಿವಿಧ ಯೋಜನೆಗಳನ್ನು ರೂಪಿಸುತ್ತಾರೆ ಹಾಗೂ ಕಂಪೆನಿಯು ಒಂದು ವಿಮಾ ಪಾಲಿಸಿ ಅಥವಾ ಪಿಂಚಣಿ ಯೋಜನೆ  ಮಾರಾಟ ಮಾಡುವಾಗ ಅದರ ಬೆನ್ನಿಗಿರುವ ಹಣಕಾಸು ಸಾಧ್ಯತೆಯನ್ನು ಪರಿಶೀಲಿಸುತ್ತಾರೆ. ವಿಮೆಗಳ ಮೌಲ್ಯಮಾಪನ, ಟರ್ಮ್‌ಗಳ ನಿರ್ಧಾರ ಮತ್ತು ಗ್ರಾಹಕರಿಗೆ ವಿಮೆ ಮಾಡಿಸುವ ಮುಂಚಿನ ವೆಚ್ಚಗಳ ನಿರ್ವಹಣೆಯನ್ನು ಪ್ರಾಥಮಿಕವಾಗಿ ಅಂಡರ್‌ರೈಟರ್‌ಗಳು ನಿರ್ವಹಿಸುತ್ತಾರೆ. ಕ್ಲೇಮ್ಸ ಸಿಬ್ಬಂದಿಯು ಪಾಲಿಸಿಯ ಅವಧಿ ಮುಗಿದ ಬಳಿಕ ಅಥವಾ ಅವಘಡ ಸಂಭವಿಸಿದ ಸಂದರ್ಭದಲ್ಲಿ ಲೆಕ್ಕಾಚಾರ ವಿಲೇವಾರಿ ಮಾಡುತ್ತಾರೆ

 ಹಾನಿ ಅಂದಾಜುಕಾರರು ಸಾಮಾನ್ಯವಾಗಿ ಕಳ್ಳತನ, ದರೋಡೆ, ಅಗ್ನಿ, ಕಾರು ಅಪಘಾತ ಇತ್ಯಾದಿ ಹಾನಿಗಳ ತನಿಖೆ ನಡೆಸುತ್ತಾರೆ. ಅವರು ಪಾಲಿಸಿ ಭರಿಸಬಹುದಾದ ನಷ್ಟದ ಪಾವತಿಯನ್ನು ನಿರ್ಧರಿಸುತ್ತಾರೆ. ಇನ್ಶೂರೆನ್ಸ್ ಏಜೆಂಟರು ಸಾಮಾನ್ಯವಾಗಿ ಇನ್ಶೂರೆನ್ಸ್ ಕಂಪೆನಿಗಳನ್ನು ಪ್ರತಿನಿಧಿಸುತ್ತಾರೆ. ಇನ್ನು ಕೆಲವು ಸೇಲ್ಸ್ ವೃತ್ತಿಪರರಿದ್ದು, ಅವರು ಪ್ರೀಮಿಯಂಗಳನ್ನು ಒಗ್ಗೂಡಿಸಿ ಕಮಿಷನ್ ಆಧಾರದ ವೇಳೆ ಮಾರಾಟದ ಗುರಿ ತಲುಪುತ್ತಾರೆ. ಇನ್ಶೂರೆನ್ಸ್ ಬ್ರೋಕರ್‌ಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ವ್ಯವಹಾರಸ್ಥರಾಗಿದ್ದು, ಅವರು ತಮಗಾಗಿ ಅಥವಾ ದಲ್ಲಾಳಿ ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತಾ ಗ್ರಾಹಕರ ಅಗತ್ಯಕ್ಕೆ ತಕ್ಕಂಥ ಪಾಲಿಸಿಗಳಿಗೆ ಸಲಹೆ ನೀಡುತ್ತಾರೆ.

ರಿಸ್ಕ್ ಮ್ಯಾನೇಜರ್‌ಗಳು ಕಂಪೆನಿಗಳ ರಿಸ್ಕ್ ಗುರುತಿಸಿ ಅಂದಾಜಿಸು­ತ್ತಾರೆ. ಅದಲ್ಲದೆ ವಿಮಾ ಕಂಪೆನಿ­ಯೊಂದರ ಯಶಸ್ಸಿಗೆ ಸೇಲ್ಸ್ ಮತ್ತು ಮಾರ್ಕೆಟಿಂಗ್ ಅಗತ್ಯ. ಸೇಲ್ಸ್‌ನಲ್ಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ನೇರ ಮತ್ತು ಪರೋಕ್ಷವಾಗಿ ವಿಕ್ರಯ ಮಾಡಬೇಕಾಗುತ್ತದೆ. ಏಜೆಂಟರು ಹಾಗೂ ಏಜೆನ್ಸಿ ಮ್ಯಾನೇಜರ್‌ಗಳ ಜಾಲದ ನೇತೃತ್ವವನ್ನು ಬ್ರಾಂಚ್ ಸೇಲ್ಸ್ ಮ್ಯಾನೇಜರ್‌ಗಳು ವಹಿಸುತ್ತಾರೆ.

ಜನರಲ್ ಇನ್ಶೂರೆನ್ಸ್ ಕ್ಷೇತ್ರದಲ್ಲಿನ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪದವೀಧರರಾಗಿರಬೇಕು. ಆತ್ಮವಿಶ್ವಾಸ ಉಳ್ಳವರು, ವಿಮೆಗಳ ಬಗ್ಗೆ ತಿಳಿದುಕೊಂಡವರು ಮತ್ತು ಉತ್ತಮ ಸಂವಹನ ಕೌಶಲ ಉಳ್ಳವರು ಸೇಲ್ಸ್ ಕೆಲಸಕ್ಕೆ ಹೊಂದಿಕೊಳ್ಳುತ್ತಾರೆ. ವಿಮೆ ಮಾರಾಟದಲ್ಲಿ ಉದ್ಯೋಗ ಭದ್ರತೆ, ಆಕರ್ಷಕ ವೇತನ, ಕೊಡುಗೆ, ಬಡ್ತಿ ಅವಕಾಶ ಹೆಚ್ಚಿರುತ್ತವೆ. ಸೇಲ್ಸ್ ವಿಭಾಗದಲ್ಲಿ ಹೆಚ್ಚಿನ ಪ್ರೋತ್ಸಾಹ ಧನ (ಇನ್‌ಸೆಂಟಿವ್) ಪಡೆಯಬಹುದು.

ವಿಮೆ ಕಂಪೆನಿಗಳು ಭರ್ತಿ ಮಾಡಿಕೊಳ್ಳುವ ಕೆಲವು ಪ್ರಮುಖ ಹುದ್ದೆಗಳು ಹೀಗಿವೆ:
ವಿಮೆ ಸಲಹೆಗಾರ:
ಪಾಲಿಸಿದಾರರು ಅಗತ್ಯಕ್ಕೆ ತಕ್ಕ ವಿಮೆ ಆಯ್ಕೆ ಮಾಡಿ­ಕೊಳ್ಳಲು ಸಹಾಯ ಮಾಡುತ್ತಾರೆ. ವಿಮೆದಾರರು ಸಂಭವ­ನೀಯ ಅಪಾಯಗಳನ್ನು ಅರ್ಥ ಮಾಡಿ­ಕೊಳ್ಳಲು ಮತ್ತು ಅವುಗಳಿಂದ ತಪ್ಪಿಸಿ­ಕೊಳ್ಳಲು ಮಾರ್ಗೋಪಾಯ ತಿಳಿಸಿಕೊಡುತ್ತಾರೆ.
ಇನ್ಶೂರೆನ್ಸ್ ಅಸೋಸಿಯೇಟ್: ವಿಮೆ ಮಾರಾಟದ ಗುರಿ ಸಾಧನೆಯ ಹೊಣೆ­ಯನ್ನು ಇನ್ಶೂರೆನ್ಸ್ ಅಸೋಸಿಯೇಟ್‌ಗಳು ಹೊತ್ತಿರು­ತ್ತಾರೆ.  ಗ್ರಾಹಕರೊಂದಿಗೆ ಸಂಬಂಧ ಸಾಧಿಸುವ ಮತ್ತು ನಿರ್ವಹಿಸುವ, ವಿವಿಧ ಉತ್ತೇಜನಾ ಯೋಜನೆ­ಗಳನ್ನು ಜಾರಿಗೊಳಿಸುವ ಹೊಣೆ ಅವರ ಮೇಲಿರುತ್ತದೆ.

ಬ್ಯಾಕ್ ಆಫೀಸ್ ಸಪೋರ್ಟ್: ವಿಮೆ ಕ್ಷೇತ್ರಕ್ಕೆ ಬರ ಬಯಸುವ ವಾಣಿಜ್ಯ ಪದವೀಧರರು ಈ ಹುದ್ದೆ ಆರಿಸಿಕೊಳ್ಳಬಹುದು. ಇವರು ಸಾಮಾನ್ಯವಾಗಿ ಗ್ರಾಹಕರ ವಿಚಾರಣೆಗಳಿಗೆ ಉತ್ತರಿಸಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕಾಗುತ್ತದೆ. ವಿವಿಧ ತಂಡಗಳಿಗೆ ಸಹಕರಿಸಬೇಕಾಗುತ್ತದೆ.

ಸೇಲ್ಸ್ ಡೆವಲಪ್‌ಮೆಂಟ್ ಮ್ಯಾನೇಜರ್: ಹಣಕಾಸು ವೃತ್ತಿಪರರಿಗೆ ಈ ಹುದ್ದೆ ಸೂಕ್ತ. ಇನ್ಶೂರೆನ್ಸ್ ಏಜೆಂಟ್‌ಗಳನ್ನು ಗುರುತಿಸಿ ನೇಮಕ ಮಾಡಿಕೊಳ್ಳುವ, ತಂಡದ ನಿರ್ವಹಣೆ- ಮೌಲ್ಯಮಾಪನ ಮಾಡುವ ಅನೇಕ ಜವಾಬ್ದಾರಿ ಅವರದ್ದಾಗಿರುತ್ತದೆ.

ಕ್ಲೇಮ್ಸ ವಿಶ್ಲೇಷಕ: ಡಿಪ್ಲೊಮಾ ಅಥವಾ ಪದವೀಧರ ಎಂಜಿನಿಯರ್‌ಗಳು ಪ್ಯಾರಾ-ಮೆಡಿಕಲ್ ಅರ್ಹತೆ ಹೊಂದಿರಬೇಕಾಗುತ್ತದೆ.  ಕ್ಲೇಮ್ಸ ಸನ್ನಿವೇಶ ಎದುರಾದಾಗ, ಎಷ್ಟು ಪ್ರಮಾಣದ ಕ್ಲೇಮ್ಸ ಅಂಗೀಕರಿಸಬೇಕು ಎನ್ನುವುದು ಇವರ ವ್ಯಾಪ್ತಿಗೆ ಬರುತ್ತದೆ.                                                               l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT