ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ಖರೀದಿಸುವ ಜಾಣ ತಂತ್ರಗಳು

ಅಕ್ಷರ ಗಾತ್ರ

ವಾಹನ ವಿಮೆಯಲ್ಲಿ ಹಲವಾರು ಬಗೆ. ದ್ವಿಚಕ್ರ, ತ್ರಿಚಕ್ರ, ಕಾರು ಅಥವಾ ಜೀಪು ಹಾಗೂ ಬೃಹತ್ ವಾಣಿಜ್ಯ ವಾಹನಗಳಾದ ಬಸ್, ಟ್ರಕ್ ಇತ್ಯಾದಿ ವಾಹನಗಳು ಮೋಟಾರು ವಿಮೆಗೆ ಒಳಪಡುತ್ತವೆ.
 
ಹೀಗೆ ಈ ವಿಭಾಗಗಳಲ್ಲಿ ಅತಿ ದೊಡ್ಡ ಮಾರುಕಟ್ಟೆ ಕಾರು ವಿಮಾ ಕ್ಷೇತ್ರದ್ದು. ಪ್ರಮುಖ ಕಾರು ತಯಾರಿಕಾ ಕಂಪೆನಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಮಾ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಶೀರ್ಘವಾಗಿ ವಿಮಾ ಪಾಲಿಸಿ ನೀಡುತ್ತಿವೆ.
 
ರಸ್ತೆ ಅಪಘಾತ, ಅಗ್ನಿ ಆಕಸ್ಮಿಕ, ಸಿಡಿಲು, ಗಲಬೆ, ಭೂಕಂಪ, ಚಂಡಮಾರುತ, ಭಯೋತ್ಪಾದಕರ ದಾಳಿ, ಸ್ಫೋಟ, ಕಳ್ಳತನ, ಮೂರನೇ ವ್ಯಕ್ತಿಯ ಆಸ್ತಿಪಾಸ್ತಿ, ಪ್ರಾಣ ನಷ್ಟ ಇತ್ಯಾದಿಗಳು ಕಾರು ವಿಮೆಯಲ್ಲಿ ಒಳಗೊಳ್ಳಲಿವೆ. ಹೀಗಾಗಿ ವಿಮೆಯ ಮೊತ್ತವು ವಾಹನದ ಮೊತ್ತ, ವಿಮಾರಕ್ಷಣೆಯ ಬಗೆ, ವಾಹನದ ಬಗೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಕಾರು ವಿಮೆಯಲ್ಲೂ ಎರಡು ಬಗೆ. ಕಾಂಪ್ರಹೆನ್ಸೀವ್ ಅಥವಾ ಸಮಗ್ರ ವಿಮೆ. ಮತ್ತೊಂದು ಲಯಬಿಲಿಟಿ ಅಥವಾ ಭಾದ್ಯತಾ ವಿಮೆ (ಥರ್ಡ್‌ಪಾರ್ಟಿ ಇನ್ಶೂರೆನ್ಸ್ ಎಂದೂ ಕರೆಯಲಾಗುತ್ತದೆ)ಎಂಬ ಎರಡು ವಿಮಾ ಪಾಲಿಸಿಗಳಿವೆ. ಸಮಗ್ರ ವಿಮೆ ಹೆಸರೇ ಹೇಳುವಂತೆ ಮೇಲೆ ತಿಳಿಸಿದ ಎಲ್ಲಾ ಬಗೆಯ ನಷ್ಟಗಳನ್ನು ಒಳಗೊಳ್ಳುವ ವಿಮೆಯಾಗಿದೆ.

ಅಪಘಾತ ಅಥವಾ ನಷ್ಟಕ್ಕೆ ಗರಿಷ್ಠ ಪ್ರಮಾಣದ ವಿಮಾ ಮೊತ್ತ ನೀಡುವ ಇದು ದುಬಾರಿಯೂ ಹೌದು. ವಿಶಾಲವಾದ ರಕ್ಷಣೆ ನೀಡುವ ಈ ವಿಮೆ ಕಾರು ವಿಮೆಯಲ್ಲೇ ಅತ್ಯಂತ ಹೆಚ್ಚು ಮೊತ್ತದ್ದಾಗಿದೆ. ಸಮಗ್ರ ವಿಮೆ ನೀಡುವ ಅನೇಕ ವಿಮಾ ಕಂಪೆನಿಗಳು ಮಾರುಕಟ್ಟೆಯಲ್ಲಿವೆ.

ವಿಮಾ ಶುಲ್ಕವಾಗಿ ದುಬಾರಿ ಮೊತ್ತವನ್ನು ಪಡೆಯುವ ವಿಮಾ ಕಂಪೆನಿಗಳು ಗ್ರಾಹಕರಿಗೆ ನೀಡುವ ವಿಮಾರಕ್ಷಣೆ ಮಾತ್ರ ಕಂಪೆನಿಯಿಂದ ಕಂಪೆನಿಗೆ ಭಿನ್ನವಾಗಿವೆ. ಹೀಗಾಗಿ ಗ್ರಾಹಕರು ತಮ್ಮ ಕಾರುಗಳಿಗೆ ಪಡೆಯುವ ವಿಮೆಗಾಗಿ ಲಭ್ಯವಿರುವ ವಿಮಾ ಕಂಪೆನಿಗಳಿಂದ ತಮಗಾಗುವ ಲಾಭ ಕುರಿತು ಸಮಗ್ರ ಮಾಹಿತಿ ಹೊಂದಿದ್ದರೆ ಉತ್ತಮ.

ದೊಡ್ಡ ಪ್ರೀಮಿಯಂ ಮೊತ್ತ ಕಟ್ಟಲಾಗದವರಿಗೆ ಲಯಬಿಲಿಟಿ ವಿಮಾ ಪಾಲಿಸಿ ಮೊರೆ ಹೋಗಬಹುದು. ಹಳೆಯ ಕಾರು ಹೊಂದಿರುವರು ಅಥವಾ ಹಳೆಯ ಕಾರುಗಳನ್ನು ಖರೀದಿಸುವವರು ಭಾದ್ಯತಾ ವಿಮಾ ಪಾಲಿಸಿ ಮೊರೆ ಹೋಗುವುದು ಸಾಮಾನ್ಯ.

ಕಾಸಿಗೆ ತಕ್ಕಂತೆ ಕಜ್ಜಾಯ ಎನ್ನುವಂತೆ ಭಾದ್ಯತಾ ವಿಮಾ ಪಾಲಿಸಿಯ ಪ್ರೀಮಿಯಂ ಮೊತ್ತಕ್ಕೆ ತಕ್ಕಂತೆ ವಿಮಾರಕ್ಷಣೆಯನ್ನೂ ಹೊಂದಿದೆ. ಅಪಘಾತದ ವೇಳೆಯಲ್ಲಿ ವಿಮಾದಾರರಿಗೆ ಅಥವಾ ಗಾಯಗೊಂಡ ವ್ಯಕ್ತಿಯನ್ನು ವಿಮಾರಕ್ಷಣೆ ಒಳಗೊಂಡಿರುತ್ತದೆ. ಆದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ.

ಈ ಎರಡನ್ನೂ ಹೊರತುಪಡಿಸಿ ಈಗ ಮತ್ತೊಂದು ಬಗೆಯ ಕಾರು ವಿಮೆಯನ್ನು ಪರಿಚಯಿಸಲಾಗಿದೆ. ಅದರ ಹೆಸರು ಬಂಪರ್-ಟು-ಬಂಪರ್. ಕಾಂಪ್ರಹೆನ್ಸೀವ್ ವಿಮೆಗಿಂತ ದುಬಾರಿ ಮೊತ್ತದ ಈ ವಿಮೆಯು ಏಕರೂಪ ವಿಮಾ ರಕ್ಷಣೆಯನ್ನು ಹೊಂದಿದೆ.

ಉದಾಹರಣೆಗೆ ಅಪಘಾತ ಸಂಭವಿಸಿದಾಗ ಕಾರಿನ ದುರಸ್ತಿಗಾಗಿ ಹಾನಿಗೊಳಗಾದ ರಬ್ಬರ್, ನೈಲಾನ್ ಹಾಗೂ ಪ್ಲಾಸ್ಟಿಕ್ ವಸ್ತುಗಳಿಗೆ ಶೇ 50ರಷ್ಟು ವಿಮೆ, ಫೈಬರ್ ಗ್ಲಾಸ್‌ಗಳಿಗೆ ಶೇ 30ರಷ್ಟು ಹಾಗೂ ಗಾಜಿನಿಂದ ತಯಾರಿಸಲಾದ ಯಾವುದೇ ಭಾಗಕ್ಕೂ ಯಾವ ರೀತಿಯ ಶುಲ್ಕವೂ ಇರುವುದಿಲ್ಲ.
 
ಆದರೆ ಬಂಪರ್-ಟು-ಬಂಪರ್ ವಿಮೆಯು ಏಕರೂಪದ್ದಾಗಿರುತ್ತದೆ. ಕಾಂಪ್ರಹೆನ್ಸೀವ್ ವಿಮೆಯಲ್ಲಿ ಪರಿಗಣಿಸಲಾಗದ, ಸವೆಯುವ ಟೈರ್, ಬೆಲ್ಟ್, ಟ್ರಾನ್ಸ್‌ಮಿಷನ್ ವ್ಯವಸ್ಥೆ, ಗಾಜಿನಿಂದ ಕೂಡಿದ ಹೆಡ್ ಲೈಟ್ ಇತ್ಯಾದಿ ಬಿಡಿ ಭಾಗಗಳನ್ನೂ ಇದು ಒಳಗೊಳ್ಳುತ್ತದೆ. ಆದರೆ ಹೊಸ ಕಾರುಗಳಿಗೆ ಮಾತ್ರ ಇದು ಅನ್ವಯ. ಮೂರು ವರ್ಷ ಅಥವಾ 36,000 ಕಿ.ಮೀ.ಗಳವರೆಗೆ ಮಾತ್ರ ಈ ವಿಮೆ ಅನ್ವಯ.

ವಿಮೆಯ ಲಾಭ?
* ಅಪಘಾತದಲ್ಲಿ ಪ್ರಾಣಹಾನಿಯಾದಲ್ಲಿ ಬದುಕುಳಿದವರ ಹಿತ ಕಾಪಾಡುವುದು.

* ಅಪಘಾತ ಸಂಭವಿಸಿದ ನಂತರ ವಿಮಾದಾರ ನೀಡಬೇಕಾದ ನಷ್ಟಪರಿಹಾರದ ಮೊತ್ತವನ್ನೂ ಇದು ಒಳಗೊಂಡಿರುತ್ತದೆ.

* ವಾಹನ ಜಖಂಗೊಂಡಲ್ಲಿ ಅದರ ದುರಸ್ತಿಗೆ ತಗಲುವ ವೆಚ್ಚದ ಗರಿಷ್ಠ ಮೊತ್ತಕ್ಕೂ ವಿಮಾರಕ್ಷಣೆ ಇದೆ.

* ಅಪಘಾತ ಮಾತ್ರವಲ್ಲದೆ ಕಳ್ಳತನ, ಬೆಂಕಿ ಅನಾಹುತ ಇತ್ಯಾದಿಗಳಿಂದಾಗುವ ಹಾನಿಗೂ ವಿಮಾರಕ್ಷಣೆ ಇದೆ.

* ಕಾರಿನ ಕಳ್ಳತನ ಅಥವಾ ಒಂದೇ ಕಾರಿಗೆ ಒಂದಕ್ಕಿಂತ ಹೆಚ್ಚು ವಿಮೆ ಮಾಡಿಸುವವರಿಗೆ ಪ್ರೀಮಿಯಂ ರಿಯಾಯಿತಿಯೂ ಲಭ್ಯ. ಕಾರಿನ ಮಾಲೀಕರ ಅನುಮತಿ ಮೇರೆಗೆ ವಾಹನ ಚಾಲನೆ ನಡೆಸುವ ಮೂರನೇ ವ್ಯಕ್ತಿಯನ್ನೂ ವಿಮಾರಕ್ಷಣೆ ಒಳಗೊಂಡಿರುತ್ತದೆ.

* ವಿಮೆ ಮಾಡಿಸಿದ ವರ್ಷದಲ್ಲಿ ಯಾವುದೇ ರೀತಿಯ ಪರಿಹಾರ ಕೋರದಿದ್ದಲ್ಲಿ, ಮುಂದಿನ ಬಾರಿ ಕಂತು ಕಟ್ಟುವಾಗ ಬೋನಸ್ ರಿಯಾಯಿತಿ ಲಭಿಸುತ್ತದೆ.

ವಿಮೆ ರಕ್ಷಣೆ ನೀಡುವುದು ಯಾವುದಕ್ಕೆ?
ಕಾರು ರಸ್ತೆಗಿಳಿಯುವ ಮುನ್ನ ವಿಮೆ ಮಾಡಿಸಬೇಕಾದ್ದು ಈ ನೆಲದ ಕಾನೂನು. ಹಾಗೆಯೇ ವಿಮೆ ಮಾಡಿಸಿದ ಕಾರು ಹಾಗೂ ಅದರ ಮಾಲೀಕರಿಗೆ ವಿಮಾ ಕಂಪೆನಿಯ ಆಧಾರದ ಮೇಲೆ ವಿಮಾರಕ್ಷಣೆ ಸಿಗಲಿದೆ. ಆದಾಗ್ಯೂ ವಿಮಾರಕ್ಷಣೆ ಸಿಗುವ ಕೆಲ ಅಂಶಗಳು ಹೀಗಿವೆ.

* ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಪರಿಹಾರ.

* ಮೂರನೇ ವ್ಯಕ್ತಿಯ ವಾಹನ ಅಥವಾ ಆಸ್ತಿಪಾಸ್ತಿಗೆ ಆಗುವ ಹಾನಿಗೆ ಪರಿಹಾರ.

* ವಿಮೆ ಮಾಡಿಸಿರುವ ಕಾರಿನ ಮಾಲೀಕ ಹಾಗೂ ಆತನೊಂದಿಗೆ ಪ್ರಯಾಣಿಸುವ ಸಹ ಸವಾರರ ಆರೋಗ್ಯಕ್ಕೂ ವಿಮಾರಕ್ಷಣೆ ಇದೆ.

* ಯಾವುದೇ ವಿಮೆ ಮಾಡಿಸದ ಅಥವಾ ಸಾಕಷ್ಟು ವಿಮಾರಕ್ಷಣಾ ಮೊತ್ತ ಹೊಂದಿರದ ವ್ಯಕ್ತಿಯ ನಿರ್ಲಕ್ಷ್ಯ ಚಾಲನೆಯಿಂದ ಆಗುವ ಹಾನಿಯನ್ನೂ ಕಾರು ವಿಮೆ ಒಳಗೊಂಡಿರುತ್ತದೆ.
* ಕಾರು ಅಪಘಾತದಲ್ಲಿ ಆಗುವ ಹಾನಿ ಹಾಗೂ ಅಪಘಾತವಲ್ಲದೆ ನೈಸರ್ಗಿಕ ವಿಕೋಪದಿಂದ ಆಗಬಹುದಾದ ಹಾನಿ ಇತ್ಯಾದಿಯನ್ನು ವಿಮಾರಕ್ಷಣೆ ಒಳಗೊಂಡಿರುತ್ತದೆ.

ಎಲ್ಲಾ ವಿಮಾ ಕಂಪೆನಿಗಳು ತಮ್ಮದೇ ಆದ ಲೆಕ್ಕಾಚಾರದ ಆದಾರದ ಮೇಲೆ ಹಾಗೂ ವಿವಿಧ ಬಗೆಯಲ್ಲಿ ಪ್ರೀಮಿಯಂ ಮೊತ್ತವನ್ನು ಲೆಕ್ಕ ಹಾಕುತ್ತವೆ. ಒಂದೊಂದು ಕಂಪೆನಿಗಳು ಕೆಲವೊಂದು ವಿಭಾಗಗಳಲ್ಲಿ ಪಳಗಿರುತ್ತಾರೆ.

ಹೀಗಾಗಿ ಅವರು ಅಂತಹ ಕ್ಷೇತ್ರದ ವಿಮೆಗಳಿಗೆ ಹೆಚ್ಚು ರಿಯಾಯಿತಿ ನೀಡುತ್ತಿರುತ್ತಾರೆ. ಈ ಎಲ್ಲಾ ಸಂಗತಿಗಳು ಪ್ರೀಮಿಯಂ ಮೊತ್ತದ ಮೇಲೆ ಪ್ರಭಾವ ಬೀರುತ್ತವೆ. ಕಾರು ತಯಾರಿಕೆ ಹಾಗೂ ಅದರ ಮಾದರಿ, ತಯಾರಾದ ವರ್ಷ, ನೋಂದಣಿಯಾದ ಸ್ಥಳ, ಕಾರಿನ ಸದ್ಯದ ಬೆಲೆ, ವಿಮಾದಾರರು ವ್ಯಕ್ತಿಯೇ ಅಥವಾ ಸಂಸ್ಥೆಯೇ ಎಂಬುದಕ್ಕೆ ಅನುಸಾರವಾಗಿ ಪ್ರೀಮಿಯಂ ಮೊತ್ತ ನಿಗದಿಯಾಗುತ್ತದೆ.
 
ಇದಕ್ಕೆ ಮೂಲ ಆಧಾರ ವಾಹನದ ಶೋರೂಂ ಬೆಲೆ. ವಿಮೆ ಮಾಡಿಸಿದ ನಂತರ ವಿಮೆಯ ತಾತ್ಕಾಲಿಕ ದಾಖಲೆ ಪತ್ರವನ್ನು ನೀಡಲಾಗುತ್ತದೆ. ಅದರ ಆಧಾರದ ಮೇಲೆ ಕಾರು ನೋಂದಣಿ ಮಾಡಿಸಿಕೊಳ್ಳಬಹುದು. ಈ ತಾತ್ಕಾಲಿಕ ದಾಖಲೆ ಪತ್ರದ ಅವಧಿ ಕೇವಲ 60 ದಿನ ಮಾತ್ರ. ಅಷ್ಟರೊಳಗೆ ವಿಮೆಯ ಪ್ರಮಾಣ ಪತ್ರ ಹೊಂದುವುದು ಕಡ್ಡಾಯ.
ರಸ್ತೆ ಅಪಘಾತ ಸಂಭವಿಸಿದಾಗ ಏನು ಮಾಡಬೇಕು?

ಅಪಘಾತ ಎನ್ನುವುದು ಆಕಸ್ಮಿಕ. ಇದು ವಾಹನ ಓಡಿಸುವ ಯಾರಿಗೆ ಬೇಕಾದರೂ ಆಗಬಹುದು. ಕಾರು ಅಪಘಾತದಲ್ಲಿ ಡಿಕ್ಕಿ ಅಥವಾ ಇತರ ಬಗೆಯ ಅಪಘಾತ ಸಂಭವಿಸಬಹುದು.
 
ಅಪಘಾತದಲ್ಲಿ ಪ್ರಾಣವೂ ಹೋಗಬಹುದು. ಇಂತದ್ದೊಂದು ಸ್ಥಿತಿ ಸಂಭವಿಸಿದರೆ, ಮೊದಲು ಶಾಂತವಾಗಿರುವುದರ ಜತೆಗೆ ವೈದ್ಯಕೀಯ ನೆರವು ಬೇಕೆ ಎಂಬುದನ್ನು ಖಾತರಿಪಡಿಸಿಕೊಂಡು ಅದರ ಸಹಾಯದ ಕಡೆ ಗಮನ ನೀಡಿ. ಅಪಘಾತದ ಸ್ಥಳದಲ್ಲಿ ಪೊಲೀಸರು ಹಾಗೂ ಅವರ ಶ್ರಮವನ್ನು ಗೌರವಿಸಿ.

ವೈದ್ಯಕೀಯ ಚಿಕಿತ್ಸೆ ಹಾಗೂ ಆತಂಕದಿಂದ ದೂರವಾದ ನಂತರ ನೀವು ಪೊಲೀಸರೊಂದಿಗೆ ಶಾಂತವಾಗಿ ವ್ಯವಹರಿಸುತ್ತೀರಿ ಎಂಬ ನಂಬಿಕೆ ಪೊಲೀಸರಿಗೆ ಬರುವಂತೆ ನೋಡಿಕೊಳ್ಳಿ. ಅಂತಿಮವಾಗಿ ಪರಿಣಿತರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಹೆಜ್ಜೆ ಇಡುವುದು ಸೂಕ್ತ.

ಅಪಘಾತ ಸಂಭವಿಸುವ ಮೊದಲು ತಪ್ಪು ಯಾರದ್ದು ಎಂಬುದು ನಂತರ ಅರಿವಿಗೆ ಬಾರದೇ ಇರಬಹುದು. ಅಪಘಾತದ ಆಘಾತದಲ್ಲಿ ಮನಸ್ಸು ಸ್ಥಿಮಿತ ಕಳೆದುಕೊಂಡಿರುವುದರಿಂದ ಮುಂದೆ ಎದುರಾಗಬಹುದಾದ ಯಾವುದೇ ರೀತಿಯ ಅನಾಹುತವನ್ನು ತಡೆಯಲು ಕೆಲವೊಂದು ಅಂಶಗಳನ್ನು ನೆನಪಿನಲ್ಲಿಡುವುದು ಮುಖ್ಯ.

* ಅಪಘಾತ ಸಂಭವಿಸಿದ ತಕ್ಷಣ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬೇಡಿ.

* ಅಪಘಾತದ ಸಂದರ್ಭ ಹಾಗೂ ಅದರ ಪರಿಣಾಮದ ಅರಿವಿಲ್ಲದೆ ಯಾವುದೇ ರೀತಿಯ ಪತ್ರದ ಮೇಲೆ ಸಹಿ ಹಾಕಬೇಡಿ.

* ನಿಮ್ಮಿಂದ ಯಾವುದೇ ರೀತಿಯ ಲೋಪವಾಗದಿದ್ದಲ್ಲಿ ನಿಮ್ಮ ಮೇಲೆ ಹೋರಿಸಲಾಗುವ ಆರೋಪವನ್ನು ನಿರಾಕರಿಸಿ.

* ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ.

* ಅವಾಚ್ಯ ಶಬ್ದಗಳ ಪ್ರಯೋಗ ನಡೆಸದಿರಿ.

* ಆಕ್ರಮಣಶಾಲಿಯಾಗಿ ಪರಿಸ್ಥಿತಿಯನ್ನು ಎದುರಿಸಬೇಡಿ.

ಕಾರು ವಿಮೆ ಪ್ರೀಮಿಯಂ ಮೊತ್ತ ತಗ್ಗಿಸುವ ಬಗೆ ಮನೆ ಕಟ್ಟಿಸಿದಂತೆಯೇ ಕಾರು ಖರೀದಿಯೂ ಕೆಲವರ ಜೀವನದಲ್ಲಿ ಒಂದು ಮಹತ್ತರ ಘಟ್ಟ. ಹೀಗೆ ಖರೀದಿಸಿದ ಕಾರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಮ್ಯೂಸಿಕ್ ಸಿಸ್ಟಂ, ನೈಟ್ ವಿಷನ್, ಸೆನ್ಸರ್‌ಗಳು ಇತ್ಯಾದಿ ಇತ್ಯಾದಿ ಸೌಲಭ್ಯಗಳನ್ನು ಹಾಕಿಸುವುದು ಸಾಮಾನ್ಯ. ಆದರೆ ಇಂತಹ ಹಲವಾರು ಐಷಾರಾಮಿ ಸೌಲಭ್ಯಗಳೇ ವಿಮಾ ಮೊತ್ತ ಹೆಚ್ಚಳಕ್ಕೆ ಕಾರಣ. ಕಾರು ವಿಮೆಯ ಮೊತ್ತ ತಗ್ಗಿಸಲು ಕೆಲವೊಂದು ಮಾರ್ಗೋಪಾಯಗಳು ಇಲ್ಲಿವೆ.

* ದುಬಾರಿ ಗ್ಯಾಜೆಟ್‌ಗಳು ಕಾರು ವಿಮೆಯ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸುತ್ತವೆ.

* ಕಾರು ಅಪಘಾತಕ್ಕೀಡಾದಾಗ ಅಥವಾ ದುರಸ್ತಿಗೊಳಪಟ್ಟಾಗ ತಕ್ಷಣ ವಿಮಾ ಮೊತ್ತಕ್ಕೆ ಬೇಡಿಕೆ ಇಟ್ಟರೆ ಅದೂ ವಿಮೆಯ ಪ್ರೀಮಿಯಂ ಹೆಚ್ಚಳಕ್ಕೆ ಕಾರಣವಾಗಬಹುದು.

* ವಾಲೆಂಟರಿ ಎಕ್ಸಸ್ ಮೊತ್ತ ಹೆಚ್ಚಾದಷ್ಟು ಪ್ರೀಮಿಯಂ ಹಣ ತಗ್ಗಲಿದೆ. ಅಂದರೆ ಅಪಘಾತ ಸಂಭವಿಸಿದಾಗ ಕಾರಿನ ದುರಸ್ತಿಗೆ ಅಥವಾ ಇನ್ಯಾವುದೇ  ವಿಮಾ ವ್ಯಾಪ್ತಿಯೊಳಗಿನವುಗಳಿಗೆ ಹೆಚ್ಚುವರಿ ಹಣ ನೀವೇ ನೀಡಿದ್ದರೆ ಅದು ಪ್ರೀಮಿಯಂ ಹಣ ಕಡಿತಗೊಳಿಸಲು ಸಾಧ್ಯವಾಗಬಹುದು.

* ಕಾರಿನ ಬೀಗ ಮುರಿದು ಅದರಲ್ಲಿದ್ದ ಕಾರಿಗೆ ಸಂಬಂಧಪಡದ ನಿಮ್ಮ ವೈಯಕ್ತಿಕ ವಸ್ತುಗಳು ಕಳುವಾಗಿದ್ದರೆ ಆ ಸಂದರ್ಭದಲ್ಲೂ ಪ್ರೀಮಿಯಂ ಮೊತ್ತ ಹೆಚ್ಚಾಗಲಿದೆ.

* ಕ್ಲೇಮ್ ಇಲ್ಲದ ವರ್ಷದ ಮುಂದಿನ ವರ್ಷದ ಪ್ರೀಮಿಯಂ ಮೊತ್ತದಲ್ಲಿ ಸ್ವಲ್ಪ ಮಟ್ಟಿನ ರಿಯಾಯಿತಿ ಸಿಗಲಿದೆ.

* ಡ್ರೈವರ್‌ಗಳನ್ನು ನೇಮಿಸುವುದು ಅಥವಾ ನಿರ್ದಿಷ್ಟ ವಯಸ್ಸಿನೊಳಗಿನ ಚಾಲಕರನ್ನು ಮಾತ್ರ ನಿಮ್ಮ ಕಾರು ಓಡಿಸಲು ನೇಮಿಸಿಕೊಳ್ಳುವುದೂ ಪ್ರೀಮಿಯಂ ಮೊತ್ತ ತಗ್ಗಿಸಲು ಸಹಕಾರಿಯಾಗಬಹುದು.

* ಸುರಕ್ಷತಾ ದೃಷ್ಟಿಯಿಂದ ಕಾರಿಗೆ ಅಳವಡಿಸುವ ಏರ್‌ಬ್ಯಾಗ್, ಆಂಟಿಲ್ಯಾಕ್ ಬ್ರೇಕ್ಸ್ ಹಾಗೂ ಇಮ್ಮಬಲೈಸರ್‌ಗಳು ಪ್ರೀಮಿಯಂ ಮೊತ್ತ ತಗ್ಗಿಸಲು ಸಹಕಾರಿ.

* ಒಂದೇ ವಿಮಾ ಕಂಪೆನಿಯಲ್ಲಿ ಒಂದಕ್ಕಿಂತ ಹೆಚ್ಚು ವಾಹನಗಳ ವಿಮೆ ಹೊಂದಿದ್ದರೆ, ಅಂತಹ ವಿಮಾದಾರರಿಗೆ ಹೆಚ್ಚು ರಿಯಾಯಿತಿ ಸಿಗಲಿದೆ.

* ವಿಮೆಯ ಕಂತನ್ನು ನಿಗಧಿಪಡಿಸಲಾದ ದಿನಾಂಕದಂದೇ ಕಟ್ಟುವುದು ಲೇಸು. ಏಕೆಂದರೆ ಅವಧಿ ಮೀರಿದರೆ ವಿಮೆಯು ಅನರ್ಹಗೊಂಡು ಸಿಗಬಹುದಾದ ರಿಯಾಯಿತಿ ಕೈತಪ್ಪಿ ಹೋಗಬಹುದು.

* ನಿಮ್ಮಲ್ಲಿ ಕಾರು ನಿಲ್ಲಿಸಲು ಗ್ಯಾರೇಜ್ ಇದ್ದಲ್ಲಿ ಅದನ್ನೂ ನಮೂದಿಸಿ. ಇದೂ ಸಹ ವಿಮಾ ಕಂತಿನಲ್ಲಿ ಅಲ್ಪ ಮಟ್ಟಿನ ರಿಯಾಯಿತಿಗೆ ಕಾರಣವಾಗಬಹುದು.

* ಕೆಲವೊಂದು ವಿಮಾ ಕಂಪೆನಿಗಳು ಉತ್ತಮ ಕಾರುಗಳ ಪಟ್ಟಿಯನ್ನು ಹೊಂದಿರುತ್ತವೆ.

ಕಾರುಗಳ ಗುಣಮಟ್ಟ, ಸಂಚಾರದಲ್ಲಿ ಸುರಕ್ಷತೆ ಇತ್ಯಾದಿ ಅಂಶಗಳನ್ನು ಹೊಂದಿರುವ ಕಾರುಗಳನ್ನು ಹಾಗೂ ಹೆಚ್ಚು ಕಳ್ಳತನವಾಗದ ಕಾರುಗಳನ್ನು ವಿಮಾ ಕಂಪೆನಿಗಳು ಹೆಚ್ಚು ಬೆಂಬಲಿಸುತ್ತವೆ.

ಕಾರಿಗೆ ಉತ್ತಮ ವಿಮಾ ಪಾಲಿಸಿ ಆಯ್ಕೆ ಹೇಗೆ?
ನ್ಯಾಷನಲ್ ಇನ್ಶೂರೆನ್ಸ್, ದಿ ಓರಿಯಂಟಲ್, ಯುನೈಟೆಡ್ ಇಂಡಿಯಾ, ದ ನ್ಯೂ ಇಂಡಿಯಾ, ಬಜಾಜ್ ಅಲೆಯಾನ್ಸ್, ಜನರಲ್ ಇನ್ಶೂರೆನ್ಸ್, ಐಸಿಐಸಿಐ ಲೊಂಬಾರ್ಡ್, ಐಎಫ್‌ಎಫ್‌ಸಿಒ ಟೊಕಿಯೊ, ರಾಯಲ್ ಸುಂದರಂ, ಟಾಟಾ ಎಐಜಿ, ಚೋಲಮಂಡಲಂ, ಎಚ್‌ಡಿಎಫ್‌ಸಿ, ಯೂನಿವರ್ಸಲ್, ಭಾರತಿ ಎಎಕ್ಸ್‌ಎ, ಶ್ರೀರಾಮ್ ಎಂಬ ಹಲವಾರು ವಿಮಾ ಕಂಪೆನಿಗಳು ನಿಮ್ಮ ಕಾರಿಗೆ ವಿಮೆ ನೀಡಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಿವೆ. ಇವುಗಳಲ್ಲಿ ಉತ್ತಮವಾದದ್ದು ಹಾಗೂ ಕಡಿಮೆ ಶುಲ್ಕದಲ್ಲಿ ಗರಿಷ್ಠ ಲಾಭದ ವಿಮೆಯ ಆಯ್ಕೆ ಹೇಗೆ?

ಎಲ್ಲಾ ವಿಮಾ ಕಂಪೆನಿಯ ಪಾಲಿಸಿ ಹಾಗೂ ಅವುಗಳ ಮೊತ್ತ ಹಾಗೂ ಅವುಗಳಿಂದಾಗುವ ಲಾಭವನ್ನು ಸೂಕ್ಷ್ಮವಾಗಿ ಗಮನಿಸಿ. ಇದು ತುಸು ಕಷ್ಟದ ಕೆಲಸ. ಆದರೆ ಕೆಲವೊಂದು ಆನ್‌ಲೈನ್ ತಾಣಗಳು (ಉದಾಹರಣೆಗೆ: ಪಾಲಿಸಿಬಜಾರ್.ಕಾಮ್) ಈ ಕೆಲಸವನ್ನು ಸುಲಭ ಮಾಡಲಿವೆ. ಹೀಗೆ ಮಾಡುವುದರಿಂದ ಶೇ 55ರಷ್ಟು ಪ್ರೀಮಿಯಂ ಮೊತ್ತವನ್ನು ತಗ್ಗಿಸಬಹುದು.

ಕಾರು ಅಪಘಾತಕ್ಕೀಡಾಗ ಸಂಪೂರ್ಣ ನಷ್ಟವಾದಲ್ಲಿ ಅತಿ ಹೆಚ್ಚು ಮೊತ್ತ ನೀಡುವುದೇ ಐಡಿವಿ. ನಿಮ್ಮ ಪ್ರೀಮಿಯಂ ಕಡಿಮೆಯಾಗಬೇಕೆಂದರೆ ನಿಮ್ಮ ವಿಮಾ ಏಜೆಂಟ್ ಈ ಐಡಿವಿ ಮೊತ್ತವನ್ನು ತಗ್ಗಿಸಬೇಕು.

ಅಪಘಾತ ಸಂಭವಿಸಿದಲ್ಲಿ ವಿಮಾರಕ್ಷಣಾ ಮೊತ್ತ ಬಿಡುಗಡೆಗೆ ಮುನ್ನವೇ ಹೆಚ್ಚುವರಿಯಾಗಿ ನೀವಾಗಿಯೇ ಐದು ಸಾವಿರ ರೂಪಾಯಿ ಕಟ್ಟುತ್ತೀರೆಂದರೆ ಅದು ಪ್ರೀಮಿಯಂ ಮೊತ್ತವನ್ನು ತಗ್ಗಿಸುತ್ತದೆ. ಆದರೆ ಬಹಳಷ್ಟು ಏಜೆಂಟರು ಈ ಅಂಶವನ್ನು ನಿಮ್ಮ ಗಮನಕ್ಕೆ ತಾರದೇ ಇದಕ್ಕೆ ಒಪ್ಪಿಗೆ ಸೂಚಿಸಿರುತ್ತಾರೆ. ಇದರ ಬಗ್ಗೆ ಎಚ್ಚರವಿರಲಿ. ವಿಮೆಯನ್ನು ದಲ್ಲಾಳಿಗಳ ಮೂಲಕ ಮಾಡಿಸುವುದೇ ಆದಲ್ಲಿ, ಅವರ ಪರವಾನಗಿ ಸಂಖ್ಯೆಯನ್ನು ಪಡೆದು ಅದನ್ನು ಐಆರ್‌ಡಿಎ ಜಾಲತಾಣದಲ್ಲಿ ಮರುಪರಿಶೀಲಿಸಿ. 

ಪ್ರಪೋಸಲ್ ಫಾರ್ಮ್‌ನಲ್ಲಿ ಸಾಧ್ಯವಾದಷ್ಟು ಸತ್ಯಕ್ಕೆ ಹತ್ತಿರವಾದ ಅಂಶವನ್ನೇ ತಿಳಿಸಿ. ಇದರಿಂದ ಗರಿಷ್ಠ ಲಾಭ ವಿಮಾದಾರರಿಗೇ ಆಗಲಿದೆ. ಅಂತಿಮವಾಗಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ. ಮದ್ಯಪಾನ ವಾಹನ ಚಾಲನೆ ಮಾಡಬೇಡಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT