ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆಯತ್ತ ರಾಜ್ಯದ ಮೀನುಗಾರರ ನಿರ್ಲಕ್ಷ್ಯ

Last Updated 3 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಮಂಗಳೂರು: ಮೀನುಗಾರಿಕಾ ವಿಮಾ ಯೋಜನೆಗೆ ರಾಜ್ಯದಲ್ಲಿ ಈವರೆಗೂ ಉತ್ತಮ ಸ್ಪಂದನೆ ದೊರೆತಿಲ್ಲ ಎಂದು ಗಮನ ಸೆಳೆದ ರಾಷ್ಟ್ರೀಯ ಮೀನುಗಾರರ ಸಹಕಾರಿ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ.ಮಿಶ್ರಾ ರಾಜ್ಯದ ಎಲ್ಲಾ ಮೀನುಗಾರರು ಅಪಘಾತ ವಿಮಾ ವ್ಯಾಪ್ತಿಗೆ ಒಳಪಡಬೇಕೆಂದು ಹೇಳಿದರು.

ರಾಷ್ಟ್ರೀಯ ಮೀನುಗಾರರ ಸಹಕಾರಿ ಸಂಘಗಳ ಒಕ್ಕೂಟ ಮತ್ತು ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ನಗರದ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ‘ಮೀನುಗಾರಿಕಾ ವಿಮಾ ಮತ್ತು ಭಾರತೀಯ ಮೀನುಗಾರಿಕಾ ಕ್ಷೇತ್ರದ ಬಲವರ್ದನೆ’ ಕುರಿತು ಬುಧವಾರ ಆರಂಭಗೊಂಡ ಮೂರು ದಿನಗಳ ಕಾರ್ಯಾಗಾರದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

1982ರಲ್ಲಿ ಮೀನುಗಾರರ ವಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಆದರೆ ಈ ಯೋಜನೆ ಬಗ್ಗೆ ಮೀನುಗಾರ ಸಮುದಾಯಕ್ಕೆ ಸರಿಯಾದ ಮಾಹಿತಿ ಇಲ್ಲದೇ ವಿಮಾ ಸೌಲಭ್ಯದಿಂದ ದೂರವಾಗಿದ್ದಾರೆ ಎಂದರು.2009-10ರಲ್ಲಿ ದೇಶದಲ್ಲಿ 28 ಲಕ್ಷ ಮೀನುಗಾರರು ಈ ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದು, ಪ್ರಸ್ತುತ ರಾಜ್ಯದಲ್ಲಿ 1.2 ಲಕ್ಷ ಮೀನುಗಾರರು ಮಾತ್ರ ವಿಮೆ ಯೋಜನೆ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

18ರಿಂದ 70 ವರ್ಷದೊಳಗಿನ ಎಲ್ಲಾ ಮೀನುಗಾರರು ವಿಮಾ ಸೌಲಭ್ಯಕ್ಕೆ ಅರ್ಹರಾಗಿದ್ದು, ಅಪಘಾತದಲ್ಲಿ ಜೀವತೆತ್ತರೆ ಇಲ್ಲವೇ ಶಾಶ್ವತ ಅಂಗವೈಕಲ್ಯವಾದರೆ ರೂ. 1 ಲಕ್ಷ, ಭಾಗಶಃ ಅಂಗವೈಕಲ್ಯಕ್ಕೊಳಗಾದರೆ ರೂ. 50 ಸಾವಿರ ವಿಮಾ ಪರಿಹಾರ ದೊರೆಯಲಿದೆ. ಮೀನುಗಾರರು ಈ ವಿಮಾ ಸೌಲಭ್ಯ ಪಡೆದುಕೊಳ್ಳಬೇಕಾದರೆ ಪ್ರಾಥಮಿಕ ಸಹಕಾರಿ ಸಂಘದಲ್ಲಿ ಸದಸ್ಯತ್ವ ಪಡೆದುಕೊಂಡು ಕೇವಲ ರೂ. 14.50  ಶುಲ್ಕ ಪಾವತಿಸಿದರೆ ಸಾಕು. ಕೇಂದ್ರ ಮತ್ತು ರಾಜ್ಯ ಸರ್ಕಾರ 75:25ರ ಅನುಪಾತದಲ್ಲಿ ವಿಮಾ ಮೊತ್ತವನ್ನು ಪಾವತಿಸಲಿದೆ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರು ವಿಮಾ ಸೌಲಭ್ಯ ಪಡೆದುಕೊಂಡು ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಂತೆ ಮೀನುಗಾರಿಕಾ ಸಹಕಾರಿ ಸಂಘಗಳು ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

ಕಾರ್ಯಾಗಾರ ಉದ್ಘಾಟಿಸಿದ ಕರ್ನಾಟಕ ಮೀನುಗಾರಿಕಾ ಸಹಕಾರಿ ಮಹಾಮಂಡಳಿ ಅಧ್ಯಕ್ಷ ನಂಜೇಗೌಡ, ಇತರೆ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸುವ ಸರ್ಕಾರಗಳು ಮೀನುಗಾರಿಕಾ ಕ್ಷೇತ್ರವನ್ನು ನಿರ್ಲಕ್ಷಿಸಿವೆ. ಸರ್ಕಾರಗಳು ಮೀನುಗಾರರಿಗೆ ಗೌರವ ತರುವ ಕೆಲಸ ಮಾಡಬೇಕು ಎಂದರು.ಮೀನು ಅತ್ಯಂತ ಪೌಷ್ಠಿಕ ಆಹಾರವಾಗಿದ್ದು, ಮೀನು ಸೇವನೆ ವಿಷಯದಲ್ಲಿ ಮಡಿವಂತಿಕೆ ಬೇಡ ಎಂದರು.

ಬಡ ಮೀನುಗಾರರ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು. ಪ್ರಸ್ತುತ ರೂ. 1ಲಕ್ಷ ಇರುವ ವಿಮಾ ಮೊತ್ತವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಮೀನುಗಾರಿಕಾ ಇಲಾಖೆ ಉಪ ನಿದೇರ್ಶಕ ಯು.ಸುರೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಎಲ್ಲಾ ಮೀನುಗಾರರು ವಿಮಾ ಸೌಲಭ್ಯ ಪಡೆದುಕೊಳ್ಳುವಂತೆ ಸಲಹೆ ಮಾಡಿದರು.

ಆಧುನಿಕ ಸೌಲಭ್ಯವನ್ನು ಮೀನುಗಾರಿಕಾ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ಮೂಲಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೀನುಗಾರರು ಸಾಕಷ್ಟು ಅಭಿವೃದ್ಧಿ ಹೊಂದಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ ಎಂದರು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮಾರಾಟ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಗಣಪತಿ ಭಟ್, ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಶ್ಯಾಂ ಸುಂದರ್,  ಪ್ರೊ. ರಾಮಚಂದ್ರ ಭಟ್ ಇದ್ದರು.

‘ಮೀನುಗಾರ-ಸಿಎಂ; ಯಾರು ಮುಖ್ಯ?’
ಕಾರ್ಯಕ್ರಮಕ್ಕೆ ಸಚಿವ ಕೃಷ್ಣ ಪಾಲೆಮಾರ್ ಗೈರು ಹಾಜರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕರ್ನಾಟಕ ಮೀನುಗಾರಿಕಾ ಸಹಕಾರಿ ಮಹಾಮಂಡಳಿ ಅಧ್ಯಕ್ಷ ನಂಜೇಗೌಡ, ಸಚಿವರಿಗೆ ಮೀನುಗಾರರು ಮುಖ್ಯವೊ? ಯಡಿಯೂರಪ್ಪ ಮುಖ್ಯವೊ? ಎಂದು ತರಾಟೆಗೆ ತೆಗೆದುಕೊಂಡರು.

ರಾಜಕೀಯವಾಗಿ ಯಡಿಯೂರಪ್ಪ ಮುಖ್ಯ ಇರಬಹುದು, ಆದರೆ ಮೀನುಗಾರಿಕಾ ಇಲಾಖೆಯ ಸಚಿವರಾಗಿ ರಾಜ್ಯದ ಮೀನುಗಾರರ ಸ್ಥಿತಿ ತಿಳಿದುಕೊಳ್ಳುವ ವ್ಯವದಾನವಿಲ್ಲದ ಇವರಿಗೆ ಮುಖ್ಯಮಂತ್ರಿಯಷ್ಟೇ ಸಾಕೆ? ಎಂದು ಖಾರವಾಗಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT