ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಹದ ಸುಳಿ, ತಪ್ಪಿದ ಹಳಿ (ಚಿತ್ರ: ಸನಿಹ)

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಒಂದೂರು. ಅಲ್ಲಿ ಎಳೆಯ ಪ್ರೇಮಿಗಳು. ಒಲವೇ ಜೀವವೆಂದು ನಂಬಿದವರು. ಹಾಗೆಯೇ ಬದುಕಿದವರು. ಹುಡುಗಿಯ ಅಣ್ಣ, ಹುಡುಗನ ಅಪ್ಪ ಅಕ್ರಮ ಸಾರಾಯಿ ದಂಧೆಯಲ್ಲಿ ಪೈಪೋಟಿ ನಡೆಸುತ್ತಿರುವವರು. ಹಣ, ಅಂತಸ್ತು ನಲುಮೆಗೆ ಶತ್ರು. ಹುಡುಗಿ ಮನೆಯವರಿಂದ ಪ್ರಿಯತಮನಿಗೆ ಥಳಿತ. ತನ್ನಿಂದ ಪ್ರೇಯಸಿ ದೂರವಾದಳು ಎಂಬ ಬಗ್ಗೆ ಪ್ರಿಯಕರನ ಆಕ್ರೋಶ. ಆದರೆ ಹುಡುಗಿ ನಿಜಕ್ಕೂ ದೂರವಾದಳೆ? ಆಕೆಯ ಪ್ರೀತಿ ಕಪಟವೇ? 1994ರಲ್ಲಿ ನಡೆದ ಸತ್ಯ ಘಟನೆಯೊಂದನ್ನು ಎಳೆಯಾಗಿರಿಸಿಕೊಂಡ ದುರಂತ ಪ್ರೇಮಕತೆ `ಸನಿಹ~.

ನಾಯಕನ ಸುತ್ತಲೇ ಕತೆ ಗಿರಕಿ ಹೊಡೆದರೂ ಹೆಣ್ಣಿನ ತೊಳಲಾಟಕ್ಕೆ ಒಂದಿಷ್ಟು ಜಾಗ ಕಲ್ಪಿಸಿರುವುದು ಚಿತ್ರದ ಹೆಚ್ಚುಗಾರಿಕೆ. ಪ್ರಿಯಕರ ಸಂತುವಿನ ಪಾತ್ರದಲ್ಲಿ ನಟಿಸಿರುವ ಅಭಯ್ `ಸನಿಹ~ದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಬಯಸಿದವರು. ಕುಳಿತ ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣವಾಗುವಷ್ಟು ಅಂಕಗಳನ್ನು ಅವರ ಅಭಿನಯ ಸಲೀಸಾಗಿ ಗಳಿಸಬಲ್ಲದು. ಆದರೆ ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಲು ಬೇಕಾದ ಶ್ರಮ ಕಾಣದು.

ನಾಯಕಿ ದಿವ್ಯಾ ಶ್ರೀಧರ್ ಅಳುವಿನಲ್ಲೂ ನಗುವಿನಲ್ಲೂ ಭಾವಪೂರ್ಣವಾಗಿ ಅಭಿನಯಿಸಿದ್ದಾರೆ. ದೊರೆತ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಎರಡನೇ ನಾಯಕಿ ಬಿಂಬಿಕಾ ಬಂದು ಹೋಗುವ ಪಾತ್ರಕ್ಕೆ ಸೀಮಿತವಾಗಿದ್ದಾರೆ. ನಾಯಕನ ಅಪ್ಪ ಅಮ್ಮನ ಪಾತ್ರದಲ್ಲಿ ಅಭಿನಯಿಸಿರುವ ಶೋಭರಾಜ್, ಚಿತ್ರಾ ಶೆಣೈ, ಹುಡುಗಿಯ ಅಣ್ಣನಾಗಿ ಕಾಣಿಸಿಕೊಂಡಿರುವ ನೀನಾಸಂ ಅಶ್ವತ್ಥ್ ತಮ್ಮ ಪಾತ್ರಗಳನ್ನು ಧ್ಯಾನಿಸಿದ್ದಾರೆ.

ಚಿತ್ರ ಮುಗ್ಗರಿಸಿರುವುದು ಕತೆ ಹೇಳುವ ಕ್ರಮದಲ್ಲಿ. ಇದೇ ಮೊದಲ ಬಾರಿಗೆ ನಿರ್ದೇಶನದ ಚುಕ್ಕಾಣಿ ಹಿಡಿದಿರುವ ಮಹೇಶ್ ಚಿನ್ಮಯ್ ಹೊಸತೇನನ್ನೂ ಹುಡುಕಿಲ್ಲ. ಸತ್ಯಕತೆಯೊಂದನ್ನು ಸ್ವಾರಸ್ಯಕರವಾಗಿ ಉಣಬಡಿಸಬಹುದಾಗಿದ್ದ ಸಾಧ್ಯತೆ ಅವರ ಕೈತಪ್ಪಿ ಹೋಗಿದೆ. ಕತೆ ಬೆಳೆಸುವ ಪರಿಕರಗಳಾವುವೂ ಅವರ ಬಳಿ ಇಲ್ಲ. ಇದರಿಂದ ಇಡೀ ಕತೆ ಜಾಳು ಜಾಳಾಗಿ ತೋರುತ್ತದೆ. ಹೇಳಿದ್ದನ್ನೇ ಹೇಳುವ ದೋಷಕ್ಕೆ ತುತ್ತಾಗುತ್ತದೆ.ಮುಂದೇನಾಗಬಹುದು ಎಂಬುದನ್ನು ಪ್ರೇಕ್ಷಕರು ಸುಲಭವಾಗಿ ಊಹಿಸಬಹುದಾದಷ್ಟು ನೀರಸವಾಗಿದೆ ಚಿತ್ರ. ಸುಮಾರು ಒಂದೂವರೆ ದಶಕದ ಹಿಂದೆ ನಡೆದ ಕತೆಯನ್ನು ಆ ಕಾಲಕ್ಕೇ ಕೊಂಡೊಯ್ದು ಹೇಳುವ ಯತ್ನವೂ ಫಲಿಸಿಲ್ಲ. ದೃಶ್ಯಗಳನ್ನು ಚಿತ್ರಿಸುವಲ್ಲಿಯೇ ಆ ಜಾಣ್ಮೆಯನ್ನು ತೋರಬಹುದಾಗಿದ್ದರೂ ಆ ಬಗ್ಗೆ ನಿರ್ದೇಶಕರಿಗೆ ಒಲವು ಇದ್ದಂತಿಲ್ಲ.

ಪೇಲವ ಕತೆಗೆ ಹಾಸ್ಯವಾದರೂ ಜೀವ ತಂದೀತೆ? ಅದೂ ಸಾಧ್ಯವಾಗಿಲ್ಲ. ಊಟಕ್ಕೆ ಬಡಿಸಿದ ಉಪ್ಪಿನಕಾಯಿಯೂ ಕೊಳೆತಿದೆ. ದ್ವಂದ್ವಾರ್ಥವಿದ್ದರೆ ಸಾಕು ಹಾಸ್ಯ ಉಕ್ಕಿಸಬಹುದು ಎಂಬ ಅಂಧಶ್ರದ್ಧೆ ನಿರ್ದೇಶಕರಲ್ಲಿದ್ದಂತಿದೆ. ಇದರಿಂದಾಗಿ ರಾಜು ತಾಳಿಕೋಟೆ, ರೇಖಾದಾಸ್ ಮುಂತಾದ ಅನುಭವಿ ನಟರಿದ್ದರೂ ಹಾಸ್ಯ ಕಳಪೆಯಾಗಿದೆ.

ಎ.ಎಂ. ನೀಲ್ ಅವರ ಸಂಗೀತ ಗಮನ ಸೆಳೆಯುವುದಿಲ್ಲ. ಹಾಡುಗಳಲ್ಲೇನಾದರೂ ಕೊಂಚ ಜೀವಂತಿಕೆ ಇದ್ದರೆ ಅದು ನಾಯಕ ನಾಯಕಿಯರು ಹಾಕುವ ಹೆಜ್ಜೆಯಿಂದ ಮಾತ್ರ. ಸಾಹಿತ್ಯವನ್ನು ನುಂಗಿಹಾಕಿರುವುದೇ ಸಂಗೀತದ ಅಗ್ಗಳಿಕೆ. ಥ್ರಿಲ್ಲರ್ ಮಂಜು ಅವರ ಸಾಹಸದಲ್ಲಿ ನಾವೀನ್ಯತೆ ಇಲ್ಲ. ಏಕತಾನತೆಯ ಹೊಡೆದಾಟ ಬಡಿದಾಟ ತೋರಿಸಲಷ್ಟೇ ಅವರ ಸೃಜನಶೀಲತೆ ಮಡುಗಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT