ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಮತ್ತೊಂದು ಶತಕ

Last Updated 31 ಜುಲೈ 2012, 19:30 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ವಿರಾಟ್ ಕೊಹ್ಲಿ ಅವರ ಭರ್ಜರಿ ಫಾರ್ಮ್ ಮುಂದುವರಿದಿದೆ. ತಾವು ಆಡಿದ ಈ ಹಿಂದಿನ ಸತತ ಎಂಟು ಏಕದಿನ ಪಂದ್ಯಗಳಲ್ಲಿ ಐದನೇ ಶತಕ ಸಿಡಿಸಿದ ಕೊಹ್ಲಿ ಭಾರತಕ್ಕೆ ಮತ್ತೊಂದು ಗೆಲುವು ತಂದಿತ್ತರು.
ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆರು ವಿಕೆಟ್‌ಗಳ ಜಯ ಸಾಧಿಸಿದ ಮಹೇಂದ್ರ ಸಿಂಗ್ ದೋನಿ ಬಳಗ ಸರಣಿಯಲ್ಲಿ 3-1 ಅಂತರದ ಗೆಲುವಿನ ಮುನ್ನಡೆ ಪಡೆಯಿತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತಕ್ಕೆ ದೊರೆತ 400ನೇ ಗೆಲುವು ಇದಾಗಿದೆ.

ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 251 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಭಾರತ ಇನ್ನೂ 46 ಎಸೆತಗಳಿರುವಂತೆಯೇ 4 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿ ಗೆಲುವು ಪಡೆಯಿತು. ಅಜೇಯ 128 ರನ್ (119 ಎಸೆತ, 12 ಬೌಂ, 1 ಸಿಕ್ಸರ್) ಗಳಿಸಿದ ಕೊಹ್ಲಿ ಗೆಲುವಿನ ರೂವಾರಿ ಎನಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಸುರೇಶ್ ರೈನಾ ಅಜೇಯ 58 ರನ್ (51 ಎಸೆತ, 4 ಬೌಂ, 1 ಸಿಕ್ಸರ್) ಕಲೆಹಾಕಿದರು.

ಭಾರತ ತಂಡದ ಆರಂಭ ಆಘಾತಕಾರಿಯಾಗಿತ್ತು. ಗೌತಮ್ ಗಂಭೀರ್ ಅವರು ಲಸಿತ್ ಮಾಲಿಂಗ ಎಸೆದ ಇನಿಂಗ್ಸ್‌ನ ಮೊದಲ ಓವರ್‌ನ ಐದನೇ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 52 ರನ್    ಸೇರಿಸಿ ತಂಡವನ್ನು ಆರಂಭಿಕ ಕುಸಿತದಿಂದ ಪಾರುಮಾಡಿದರು.

ರೋಹಿತ್ ಶರ್ಮ (4) ಮತ್ತೆ ವಿಫಲರಾದರು. ಮೊದಲ ಎರಡು ಪಂದ್ಯಗಳಲ್ಲೂ ಅವರು ಎರಡಂಕಿಯ ಮೊತ್ತ ದಾಟಿರಲಿಲ್ಲ. ಕೊಹ್ಲಿ ಮತ್ತು ತಿವಾರಿ (21) ನಾಲ್ಕನೇ ವಿಕೆಟ್‌ಗೆ 49 ರನ್ ಸೇರಿಸಿ ಲಂಕಾ ತಂಡ ಮೇಲುಗೈ ಸಾಧಿಸದಂತೆ ನೋಡಿಕೊಂಡರು. ತಿವಾರಿ ಔಟಾದ ಬಳಿಕ ಜೊತೆಯಾದ ಕೊಹ್ಲಿ ಹಾಗೂ ರೈನಾ ಮುರಿಯದ ಐದನೇ ವಿಕೆಟ್‌ಗೆ 146 ರನ್ ಪೇರಿಸಿ ಭರ್ಜರಿ ಜಯಕ್ಕೆ ಕಾರಣರಾದರು.

ಭಾರತ ಈ ಪಂದ್ಯದಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್‌ನ್ನು ಆಡಿಸಲು ನಿರ್ಧರಿಸಿತು. ಇದಕ್ಕಾಗಿ ರಾಹುಲ್ ಶರ್ಮ ಬದಲು ಮನೋಜ್ ತಿವಾರಿಗೆ ಅವಕಾಶ ನೀಡಿತು. ಆದರೆ ತಿವಾರಿ ಬೌಲಿಂಗ್‌ನಲ್ಲಿ ಮಿಂಚುವ ಮೂಲಕ ಅಚ್ಚರಿ ಉಂಟುಮಾಡಿದರು. 61 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದ ಅವರು ಭಾರತದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.

ಲಂಕಾ ತಂಡ ಉತ್ತಮ ಆರಂಭ ಪಡೆದಿತ್ತು. ಉಪುಲ್ ತರಂಗ (51) ಮತ್ತು ತಿಲಕರತ್ನೆ ದಿಲ್ಶಾನ್ (42) ಮೊದಲ ವಿಕೆಟ್‌ಗೆ 91 ರನ್ ಕಲೆಹಾಕಿದರು. ಬಳಿಕ ಬಂದ ಲಾಹಿರು ತಿರಿಮನ್ನೆ (47) ಮತ್ತು ದಿನೇಶ್ ಚಂಡಿಮಾಲ (28) ಕೂಡಾ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ನಿಂತರು. ಇದರಿಂದ ಲಂಕಾ 31ನೇ ಓವರ್ ವೇಳೆಗೆ ಮೂರು ವಿಕೆಟ್‌ಗೆ 152 ರನ್ ಗಳಿಸಿ ಉತ್ತಮ ಮೊತ್ತದ ಸೂಚನೆ ನೀಡಿತ್ತು.

ಆದರೆ ಈ ಹಂತದಲ್ಲಿ ತಿವಾರಿ ತಮ್ಮ ಕೈಚಳಕ ಮೆರೆದರು. ಚಂಡಿಮಾಲ್, ಏಂಜೆಲೊ ಮ್ಯಾಥ್ಯೂಸ್, ಜೀವನ್ ಮೆಂಡಿಸ್ ಹಾಗೂ ತಿಸಾರ ಪೆರೇರಾ ವಿಕೆಟ್ ಪಡೆದು ಲಂಕಾದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದರು.

ಇದರಿಂದ ಆತಿಥೇಯ ತಂಡಕ್ಕೆ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.

ಸತತ 14 ಪಂದ್ಯಗಳಲ್ಲಿ `ಬೆಂಚ್~ ಕಾಯಿಸಿದ್ದ ತಿವಾರಿ ಕೊನೆಗೂ ಅಂತಿಮ ಇಲೆವೆನ್‌ನಲ್ಲಿ ಅವಕಾಶ ಪಡೆದರು. ಮಾತ್ರವಲ್ಲ ತಮಗೆ ಲಭಿಸಿದ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡರು. ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಪಡೆದಿದ್ದ ಅವರು ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT