ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪ್ರದರ್ಶನದ ತಂತ್ರ: ಬರಗೂರು

Last Updated 26 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ಬೆಂಗಳೂರು:  ‘ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಚಿತ್ರನಟಿ ಹೇಮಾ    ಮಾಲಿನಿ ಅವರ ಆಯ್ಕೆಗೆ ವಿಧಾನಸಭೆಯಲ್ಲಿ ವಿರೋಧವಿದೆ ಎಂಬುದನ್ನು ದಾಖಲಿಸುವ ಸಲುವಾಗಿಯೇ ವಿಮರ್ಶಕ ಮರುಳಸಿದ್ದಪ್ಪ ಅವರನ್ನು ಕಾಂಗ್ರೆಸ್- ಜೆಡಿಎಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಾಗಿದೆ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ    ತಿಳಿಸಿದರು.

ಮರುಳಸಿದ್ದಪ್ಪ ಅವರನ್ನು ಬೆಂಬಲಿಸಿ ಹೇಳಿಕೆ ನೀಡಲು ಸಾಹಿತಿಗಳು ಶನಿವಾರ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬರಗೂರು, ‘ಫಲಿತಾಂಶ ಗೊತ್ತಿರುವಂತಹುದ್ದೆ. ಅದರಲ್ಲಿ ಮುಚ್ಚಿಡುವಂತಹುದ್ದೇನಿಲ್ಲ. ಹೇಮಾಮಾಲಿನಿ ಅವರನ್ನು ಕಣಕ್ಕೆ ಇಳಿಸಿರುವ ಬಿಜೆಪಿ ಪಕ್ಷದ ತತ್ವಗಳಿಗೆ ರಾಜ್ಯದಲ್ಲಿ ವಿರೋಧವಿದೆ ಎಂಬುದನ್ನು ಸೈದ್ಧಾಂತಿಕವಾಗಿ ದಾಖಲಿಸುವುದು ನಮ್ಮ ಉದ್ದೇಶ’ ಎಂದರು.

‘ಈ ಚುನಾವಣೆಯಲ್ಲಿ ನಮಗೆ   (ಸಾಹಿತಿಗಳು) ಮತದಾನದ ಹಕ್ಕಿಲ್ಲ. ಹೀಗಾಗಿ ನಾವು ನೈತಿಕ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ. ಮತದಾದನ ಹಕ್ಕಿರುವ ಶಾಸಕರು ಮರುಳಸಿದ್ದಪ್ಪ ಅವರು ಪ್ರತಿನಿಧಿಸುವ ತತ್ವಗಳಿಗೆ ಬದ್ಧರಾಗಿ ಮತ ಚಲಾಯಿಸಬೇಕು’ ಎಂದು ಅವರು ಕರೆ ನೀಡಿದರು.

ಹೇಮಾಮಾಲಿನಿ ದಡ್ಡಿ: ಕಾರ್ನಾಡ
‘ಹೇಮಾಮಾಲಿನಿ ಒಳ್ಳೆಯ ಹೆಣ್ಣುಮಗಳು, ದೊಡ್ಡ ಕಲಾವಿದೆ. ಆದರೆ ನಿಜವಾಗಿ ಆಕೆ ದಡ್ಡಿ. ಆರು ವರ್ಷಗಳ ಕಾಲ ರಾಜ್ಯಸಭಾ ಸದಸ್ಯೆಯಾಗಿ ಆಕೆ ಒಳ್ಳೆಯ ಕೆಲಸ ಮಾಡುವುದಿರಲಿ, ರಾಜ್ಯಸಭೆಯಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಮತ್ತೆ ಆಕೆಯನ್ನು ರಾಜ್ಯಸಭೆಗೆ ಆಯ್ಕೆ ಮಾಡುವುದು ಮೂರ್ಖತನ’ ಎಂದು ಹಿರಿಯ ನಾಟಕಕಾರ ಗಿರೀಶ ಕಾರ್ನಾಡ ಅಭಿಪ್ರಾಯಪಟ್ಟರು.

‘ವೈಯಕ್ತಿಕವಾಗಿ ನನಗೆ ಹೇಮಾಮಾಲಿನಿ ಮತ್ತು ಮರುಳಸಿದ್ದಪ್ಪ ಇಬ್ಬರೂ ನಿಕಟವಾಗಿ ಗೊತ್ತು. ಅದರ ಆಧಾರದಲ್ಲಿ ನನ್ನ ಅಭಿಪ್ರಾಯಗಳನ್ನು ಹೇಳುತ್ತಿದ್ದೇನೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹೇಮಾಮಾಲಿನಿ ನನ್ನ ಜತೆ ನಟಿಸಿದ್ದಾರೆ. ಅವರು ಸಿನಿಮಾದಿಂದ ಕೋಟ್ಯಂತರ ರೂಪಾಯಿ ಹಣ ಗಳಿಸಿರಬಹುದು. ತಮ್ಮ 16ನೇ ವರ್ಷದಲ್ಲಿ ಚಿತ್ರರಂಗ ಪ್ರವೇಶಿಸಿದಾಗಿನಿಂದ ಇಲ್ಲಿಯವರೆಗೆ ಹೇಮಾಮಾಲಿನಿ ಸ್ಟಾರ್ ಆಗಿಯೇ ಉಳಿದಿದ್ದಾರೆ. ಅವರಿಗೆ ಜನರ ಸಮಸ್ಯೆಗಳ ಅರಿವಿಲ್ಲ. ತಿಳಿದುಕೊಳ್ಳಲು ಸಾಧ್ಯವೂ ಇಲ್ಲ’ ಎಂದು ಅವರು ಹೇಳಿದರು. ‘ಮರುಳಸಿದ್ದಪ್ಪ ಗೋಕಾಕ ಚಳವಳಿಯಿಂದ ಇಲ್ಲಿಯವರೆಗೆ ಕನ್ನಡ, ರೈತ, ಪ್ರಗತಿಪರ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಕನ್ನಡ, ಕರ್ನಾಟಕ ಚೆನ್ನಾಗಿ ಗೊತ್ತು. ಅವರ ಆಯ್ಕೆಯಿಂದ ಒಳ್ಳೆಯದನ್ನು ನಿರೀಕ್ಷಿಸಬಹುದು’ ಎಂದು ಅವರು ಆಶಿಸಿದರು.ಇದೇ ಸಂದರ್ಭದಲ್ಲಿ ಸಾಹಿತಿ ಶಿವರಾಮಯ್ಯ ಮಾತನಾಡಿ, ‘ಹೇಮಾಮಾಲಿನಿ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಕಾರ್ನಾಡರು ಪ್ರಯತ್ನಿಸಲಿ’ ಎಂದರು.


‘ಇನ್ನು ಮುಂದಾದರೂ ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಸಾಹಿತಿಗಳು- ಕಲಾವಿದರನ್ನು ಸಾಂಕೇತಿಕ ಸ್ಪರ್ಧೆಗೆ ಮಾತ್ರ ಇಳಿಸಬಾರದು. ಗೆಲ್ಲುವ ಸಂದರ್ಭದಲ್ಲೂ ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರ ಮತ್ತು ಪ್ರಗತಿಪರ ಚಿಂತಕರನ್ನು ಬೆಂಬಲಿಸಬೇಕು. ಆ ಮೂಲಕ ಈ ಪಕ್ಷಗಳು ತಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಲೇಖಕ ಜಿ.ಕೆ.ಗೋವಿಂದರಾವ್ ಮಾತನಾಡಿ, ‘ಸಮರ್ಥರೂ ಯೋಗ್ಯರೂ ನಿಜವಾದ ಕಾಳಜಿಯುಳ್ಳವರೂ ಆದ ಮರುಳಸಿದ್ದಪ್ಪ ಅವರನ್ನು ಶಾಸಕರು ಪಕ್ಷಾತೀತವಾಗಿ ಬೆಂಬಲಿಸಬೇಕು’ ಎಂದರು.

ಬಿಜೆಪಿ ಶಾಸಕರಿಗೂ ಮನವಿ: ಮರುಳಸಿದ್ದಪ್ಪ ಮಾತನಾಡಿ, ‘ಬಿಜೆಪಿ ಶಾಸಕರ ಬಳಿಗೂ ಹೋಗಿ ನಾನು ಮತ     ಕೇಳುತ್ತೇನೆ’ ಎಂದರು.

‘ನಾನು ಪಕ್ಷೇತರ ಅಭ್ಯರ್ಥಿ. ನಾನು ಮತ ಯಾಚನೆ ಮಾಡುವಾಗ ಪಕ್ಷ ಭೇದ ಮಾಡುವುದಿಲ್ಲ. ಎಲ್ಲ ಶಾಸಕರನ್ನೂ ಕೋರುತ್ತೇನೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.

ದಲಿತ ಸಂಘರ್ಷ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಮಾತನಾಡಿ, ‘ವಿಶ್ವ ಕನ್ನಡ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಸಮಸ್ತ ಕನ್ನಡಿಗರ ಪ್ರತಿನಿಧಿಯಾದ ಮರುಳಸಿದ್ದಪ್ಪ ಅವರನ್ನು ಆಯ್ಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನಸ್ಸು ಮಾಡಬೇಕು.

ಯಡಿಯೂರಪ್ಪ ಅವರಿಗೆ ಕನ್ನಡದ ಬಗ್ಗೆ ಗೌರವ ಇದ್ದರೆ ಅಪ್ಪಟ ಕನ್ನಡಿಗ, ಪ್ರಖರ ಚಿಂತಕ ಮರುಳಸಿದ್ದಪ್ಪ ಅವರನ್ನು ಆಯ್ಕೆ ಮಾಡಬೇಕು’ ಎಂದು ಆಗ್ರಹಿಸಿದರು.ಲೇಖಕ ಶೂದ್ರ ಶ್ರೀನಿವಾಸ್ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯ ಗೌರವ ಉಳಿಸಲು ಮರುಳಸಿದ್ದಪ್ಪ ಅವರನ್ನು ಆಯ್ಕೆ ಮಾಡಬೇಕು’ ಎಂದರು.

ಕನ್ನಡಿಗರೇ ಆಯ್ಕೆಯಾಗಲಿ: ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ‘ರಾಜ್ಯಸಭೆಗೆ ಹೊರಗಿನವರನ್ನು ಆಯ್ಕೆ ಮಾಡಿ ಕಳುಹಿಸುವುದು ಕನ್ನಡಿಗರ ಆತ್ಮಾಭಿಮಾನಕ್ಕೆ ಭಂಗ ತಂದಂತೆ. ಇದು ಖಂಡಿತ ಸರಿಯಲ್ಲ. ನಮ್ಮ ಪ್ರತಿನಿಧಿ ರಾಜ್ಯದವರೇ ಆಗಿರಬೇಕೆಂಬುದು ನನ್ನ ಅಭಿಮತ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT