ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧಿಗೇ ಸನ್ಮಾನ; ದೊರೆಸ್ವಾಮಿಗೆ ಸೋಜಿಗ

Last Updated 20 ಅಕ್ಟೋಬರ್ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: `ಸಾರ್ವಜನಿಕರ ಜೊತೆ ಸೇರಿಕೊಂಡು ನಾನು ಈ ಹಿಂದೆ `ನಮ್ಮ ಮೆಟ್ರೊ~ ವಿರುದ್ಧ ಪ್ರತಿಭಟನೆ ನಡೆಸಿದ್ದೇನೆ. ಈಗ ಅದರ ಆಡಳಿತ ಮಂಡಳಿ ನನ್ನನ್ನು ಕರೆದು ಸನ್ಮಾನಿಸಿದ್ದಕ್ಕೆ ಸೋಜಿಗವಾಗುತ್ತಿದೆ~ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.

`ನಮ್ಮ ಮೆಟ್ರೊ~ ಮೊದಲ ವರ್ಷದ ಸಂಭ್ರಮಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. `ಮೆಟ್ರೊ ಸಂಚಾರಕ್ಕೆ ನನ್ನಿಂದ ಯಾವುದೇ ವಿರೋಧ ಇಲ್ಲ. ಆದರೆ, ಮಾರ್ಗ ನಿರ್ಮಾಣದ ವೇಳೆ ರಸ್ತೆಯನ್ನು ಹಾಳು ಮಾಡಿದರೆ ಮಾತ್ರ ಸಹಿಸಲು ಆಗುವುದಿಲ್ಲ~ ಎಂದು ತಿಳಿಸಿದರು.

`ಸಾರ್ವಜನಿಕರ ಸಂಚಾರ ವ್ಯವಸ್ಥೆಗೆ ದಕ್ಕೆ ಉಂಟಾಗದಂತೆ ಕಾಮಗಾರಿ ನಡೆಸಲಾಗುವುದು ಎಂಬ ಮಾತನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿ) ನೀಡಿತ್ತು. ಅದರಂತೆ ನಡೆಯದೆ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಕಲ್ಲುಗಳನ್ನು ಎಸೆದಿದ್ದರಿಂದ ನನಗೆ ಸಿಟ್ಟು ಬಂದಿತ್ತು~ ಎಂದು ದೊರೆಸ್ವಾಮಿ ಹೇಳಿದರು.

`ಜನಸಾಮಾನ್ಯರ ಓಡಾಟಕ್ಕೆ ಮೆಟ್ರೊದಂತಹ ಸಾರಿಗೆ ವ್ಯವಸ್ಥೆ ಖಂಡಿತವಾಗಿಯೂ ಬೇಕು.  ಎಷ್ಟೋ ಕಡೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ಇದೆ. ಮೆಟ್ರೊದಿಂದ ಆ ವಾತಾವರಣ ಬದಲಾಗಲಿದೆ~ ಎಂದು ಆಶಿಸಿದರು.

`ಜನಸಾಮಾನ್ಯರಿಗೆ ಹೊರೆಯಾಗದ ರೀತಿಪ್ರಯಾಣ ದರ ಇರಬೇಕು. ಬೆಂಗಳೂರು ಪೂರ್ತಿ ಮೆಟ್ರೊ ರೈಲು ಓಡಾಡುವಂತಾಗಬೇಕು. ನಮ್ಮತನ ಉಳಿಸಿಕೊಳ್ಳಲು ದೇಶೀ ಯಂತ್ರಗಳನ್ನೇ ಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ಅಧಿಕಾರಿಗಳಿಗೆ ದೇಶದ ಮೇಲೆ ಕಾಳಜಿ ಮೂಡಿದರೆ ಸಮಸ್ಯೆಗಳು ತಾವೇ ಬಗೆಹರಿಯುತ್ತವೆ~ ಎಂದು ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅಭಿಪ್ರಾಯಪಟ್ಟರು. `ದೇಶದ ಅತ್ಯುತ್ತಮ ಮೆಟ್ರೊ ಸಾರಿಗೆ ಸೌಲಭ್ಯ ನಮ್ಮ ಬೆಂಗಳೂರಿನಲ್ಲಿ ಸಾಕಾರಗೊಂಡಿದ್ದು ನಮಗೆಲ್ಲ ಹೆಮ್ಮೆ ತರುವ ಸಂಗತಿ~ ಎಂದು ಅವರು ಹೇಳಿದರು.

`ನಾನು ಕೆಲಸ ಮಾಡಿದ ಬಿಇಎಂಎಲ್‌ನಿಂದಲೇ ಮೆಟ್ರೊ ರೈಲುಗಳು ತಯಾರಾಗಿ ಬಂದಿರುವುದು ನನಗೆ ಅಭಿಮಾನ ಮೂಡಿಸಿದೆ~ ಎಂದು ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಡಾ ಹೋ. ಶ್ರೀನಿವಾಸಯ್ಯ ಸಂತಸ ಹಂಚಿಕೊಂಡರು. ಸಮಾರಂಭದಲ್ಲಿ 30ಕ್ಕೂ ಅಧಿಕ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT