ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲಕ್ಷಣ ಉದ್ಯಮಿಯ ಯಶೋಗಾಥೆ

Last Updated 26 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಹಾವರ್ಡ್ ಹ್ಯೂಸ್ ಹುಟ್ಟಿದ್ದು 1905ರಲ್ಲಿ. ಅಪ್ಪನಿಂದ ಬಳುವಳಿಯಾಗಿ ‘ಹ್ಯೂಸ್ ಟೂಲ್ ಕಂಪೆನಿ’ ಸಿಕ್ಕಿತ್ತು. ತೈಲಬಾವಿಗಳನ್ನು ಕೊರೆಯಲು ಬಳಸುವ ಕ್ರಾಂತಿಕಾರಿ ‘ಬಿಟ್’ (ಕೊರೆಯುವ ಯಂತ್ರ) ಅಭಿವೃದ್ಧಿಪಡಿಸಿ, ಅದಕ್ಕೆ ಪೇಟೆಂಟ್ ಪಡೆದಿದ್ದ ಅಪ್ಪನ ಮಗನೆಂಬ ಕಾರಣಕ್ಕಷ್ಟೇ ಹ್ಯೂಸ್ ದೊಡ್ಡಮನುಷ್ಯನಲ್ಲ. 1972ರ ಹೊತ್ತಿಗೆ ಅಪ್ಪನ ಉದ್ಯಮ ಸಾಮ್ರಾಜ್ಯವನ್ನು ವಿಸ್ತಾರಗೊಳಿಸಿದ. ಅಪ್ಪನ ಪೇಟೆಂಟ್ ಇದ್ದ ಯಂತ್ರವೊಂದರಿಂದಲೇ 74 ಕೋಟಿ ಡಾಲರ್‌ಗೂ ಹೆಚ್ಚು ಹಣ ಹರಿದುಬರುವಂತೆ ಮಾಡಿದ.

ಬಂಡವಾಳ ಹೂಡುವುದರಲ್ಲಿ ನಿಸ್ಸೀಮ ಎನಿಸಿಕೊಂಡ ಹಾರ್ವರ್ಡ್ ಹ್ಯೂಸ್ ಹಣ ತೊಡಗಿಸಿದ ಕ್ಷೇತ್ರಗಳು ಹಲವು- ಹೋಟೆಲ್‌ಗಳು, ಕ್ಯಾಸಿನೋಗಳು, ಗಣಿಗಾರಿಕೆ ಹೀಗೆ. ಅದೆಲ್ಲಕ್ಕಿಂತ ಮಿಗಿಲಾಗಿ ಅವನನ್ನು ನಾವು ನೆನಪಿಸಿಕೊಳ್ಳಬೇಕಾದದ್ದು ಹ್ಯೂಸ್ ಏರ್‌ಕ್ರಾಫ್ಟ್ ಕಂಪೆನಿಯ ಕಾರಣಕ್ಕೆ. ‘ಸ್ಪ್ರೂಸ್ ಗೂಸ್’ ಎಂಬ ಬೃಹತ್ ಸರಕು ವಿಮಾನವನ್ನು ವಿನ್ಯಾಸಗೊಳಿಸಿದ್ದು ಸ್ವತಃ ಹಾರ್ವರ್ಡ್. ವಿಮಾನ ಹಾರಾಟ ಅವನು ಇಷ್ಟಪಡುತ್ತಿದ್ದ ಹವ್ಯಾಸಗಳಲ್ಲೊಂದು.

1938ರಲ್ಲಿ ಅವನು ಅತಿ ವೇಗವಾಗಿ ವಿಶ್ವವನ್ನು ವಿಮಾನದ ಮೂಲಕ ಸುತ್ತಿದ ದಾಖಲೆ ನಿರ್ಮಿಸಿದ. ಹಾಲಿವುಡ್‌ಗೂ ಕಾಲಿಟ್ಟ ಹ್ಯೂಸ್ ಅಲ್ಲೂ ಯಶಸ್ಸಿನ ರುಚಿ ಉಂಡ. ‘ಸ್ಕೇರ್‌ಫೇಸ್’, ‘ಹೆಲ್ಸ್ ಏಂಜಲ್ಸ್’ ಹಾಗೂ ‘ದಿ ಔಟ್‌ಲಾ’ ಅವನು ನಿರ್ಮಿಸಿದ ಜನಪ್ರಿಯ ಚಿತ್ರಗಳು. 30ರ ವಯಸ್ಸಿಗೇ ಅವನು ಇಷ್ಟೆಲ್ಲಾ ಸಾಧನೆ ಮಾಡಿದ್ದ.

1958ರಲ್ಲಿ ತನ್ನ 53ನೇ ವಯಸ್ಸಿನಲ್ಲಿ ಹ್ಯೂಸ್ ತಲೆಮರೆಸಿಕೊಂಡ. ಲಾಸ್‌ವೆಗಾಸ್‌ನ ಪೆಂಟ್‌ಹೌಸ್‌ನ ಒಂಬತ್ತನೇ ಮಹಡಿಯನ್ನು ತನ್ನ ಮನೆಯನ್ನಾಗಿ ಮಾಡಿಕೊಂಡ. ಬ್ಯಾಟರಿ ಮತ್ತಿತರ ಉಪಕರಣಗಳನ್ನು ಬಳಸಿ ಸಂದೇಶ ರವಾನಿಸುವ ಮೂಲಕವಷ್ಟೇ ಬೇಕಾದವರ ಜೊತೆ ಸಂಪರ್ಕ ಇಟ್ಟುಕೊಂಡ.ಕಟ್ಟಡದ ಲಿಫ್ಟ್‌ನ ಬಟನ್‌ಗಳನ್ನು ಎಂಟನೇ ಮಹಡಿಗೇ ಸೀಮಿತಗೊಳಿಸಿದ. ಅವನ ಆಹಾರ ಕ್ರಮದ ಕುರಿತೂ ಅನೇಕ ಕಥೆಗಳಿವೆ. ವಾರಗಟ್ಟಲೆ ಐಸ್‌ಕ್ರೀಮನ್ನೋ, ಸೂಪನ್ನೋ ತಿಂದುಕೊಂಡು ಬದುಕುತ್ತಿದ್ದನಂತೆ.

ಸ್ನಾನವಿರೋಧಿಯಾಗಿ ಬದುಕಿದ ಹ್ಯೂಸ್ ಹಲ್ಲುಜ್ಜುವುದನ್ನೇ ಬಿಟ್ಟುಬಿಟ್ಟ. ಹತ್ತು ವರ್ಷದಲ್ಲಿ ಅವನು ತನ್ನ ಕೂದಲನ್ನು ಕತ್ತರಿಸಿಕೊಂಡಿದ್ದು ಮೂರೇ ಸಲ. ಉಗುರುಗಳು ಮೂರು ಇಂಚು ಬೆಳೆದಿದ್ದವು. ನಾಲ್ವರು ವೈದ್ಯರು ದೇಹಸ್ಥಿತಿ ನೋಡಿಕೊಳ್ಳಲು ಇದ್ದರೂ ಯಾರಿಗೂ ಚಿಕಿತ್ಸೆ ಕೊಡಲು ಅವನು ಬಿಡುತ್ತಿರಲಿಲ್ಲ. ಏಪ್ರಿಲ್ 5, 1976ರಲ್ಲಿ ಅವನು ಮೂತ್ರಕೋಶ ವೈಫಲ್ಯದಿಂದ ಮೃತಪಟ್ಟ. ಆರೂಕಾಲು ಅಡಿ ಉದ್ದದ ಅವನ ದೇಹದ ತೂಕ ಕೇವಲ 42 ಕೆ.ಜಿ.ಗೆ ಇಳಿದಿತ್ತು.

200 ಕೋಟಿ ಡಾಲರ್‌ನಷ್ಟು ಉದ್ಯಮ ಸಾಮ್ರಾಜ್ಯವನ್ನು ಅವನು ಉಳಿಸಿಹೋದ. ಹ್ಯೂಸ್ ಅಗಲಿದಾಗ, ಅಮೆರಿಕ ತನ್ನ ಅತಿ ಶ್ರೀಮಂತನನ್ನು ಕಳೆದುಕೊಂಡಿತು. ಹಾಲಿವುಡ್‌ನ ಹೆಸರಾಂತ ನಿರ್ದೇಶಕ ಮಾರ್ಟಿನ್ ಸ್ಕೋರ್ಸೆಸ್ 2005ರಲ್ಲಿ ‘ದಿ ಏವಿಯೇಟರ್’ ಚಿತ್ರವನ್ನು ನಿರ್ದೇಶಿಸಿದ. ಹ್ಯೂಸ್ ಜನ್ಮ ಶತಮಾನೋತ್ಸವದ ಕೊಡುಗೆಯ ರೂಪದಲ್ಲಿ ಬಂದ ಈ ಚಿತ್ರ ಆತನ ಇಡೀ ಬದುಕನ್ನು ಕಟ್ಟಿಕೊಟ್ಟಿತು. ಲಿಯೋನಾರ್ಡೋ ಡಿ ಕ್ಯಾಪ್ರಿಯೊ ಚಿತ್ರದ ನಾಯಕನಾಗಿ ಅಭಿನಯಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT