ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲೀನ ವಿವಾದ: 131 ಶಾಲೆಗಳಲ್ಲಿ ಶೂನ್ಯ ಪ್ರವೇಶ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿನ 555 ಸರ್ಕಾರಿ ಶಾಲೆಗಳಲ್ಲಿ ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಕಲಿಯುತ್ತಿದ್ದರೆ, ಈ ಪೈಕಿ 131 ಶಾಲೆಗಳಲ್ಲಿ ಶೂನ್ಯ ಪ್ರವೇಶಾತಿ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೋಮವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಒಟ್ಟು 2,489 ಕಿರಿಯ ಹಾಗೂ 74 ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅತಿ ಕಡಿಮೆ ಹಾಗೂ ಶೂನ್ಯ ವಿದ್ಯಾರ್ಥಿಗಳಿರುವ ಶಾಲೆಗಳ ಪಟ್ಟಿಯಲ್ಲಿ ತುಮಕೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಚಿಕ್ಕಮಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ ನಂತರದ ಸ್ಥಾನದಲ್ಲಿವೆ ಎಂದು ಇಲಾಖೆಯ ನಿರ್ದೇಶಕ ದೇವಪ್ರಕಾಶ್ ಲಿಖಿತ ಮಾಹಿತಿ ಸಲ್ಲಿಸಿದ್ದಾರೆ.

ಶಾಲೆಗಳ ವಿಲೀನಕ್ಕೆ ಸಂಬಂಧಿಸಿದಂತೆ ಕಳೆದ ಸೆ.24ರ ಇಲಾಖೆಯ ನಿರ್ಣಯದ ರದ್ದತಿಗೆ ಕೋರಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಹಾಗೂ ಇತರ ಸಾಹಿತಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಆಕ್ಷೇಪಣಾ ಹೇಳಿಕೆ ಸಲ್ಲಿಸಿರುವ ಅವರು, ಈ ಮಾಹಿತಿ ನೀಡಿದ್ದಾರೆ. `ಸಂವಿಧಾನದ ಅನ್ವಯ ಶಿಕ್ಷಣ ಪ್ರತಿಯೊಬ್ಬ ಮಗುವಿನ ಹಕ್ಕು. ಇದನ್ನು ಗಣನೆಗೆ ತೆಗೆದುಕೊಂಡರೆ ಸರ್ಕಾರ ಶಾಲೆಗಳನ್ನು ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ. ಅದನ್ನು ಬಿಟ್ಟು, ಇರುವ ಶಾಲೆಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ~ ಎನ್ನುವುದು ಅರ್ಜಿದಾರರ ವಾದ.

ಅರ್ಜಿದಾರರ ಆರೋಪಗಳನ್ನು ಆಕ್ಷೇಪಣಾ ಹೇಳಿಕೆಯಲ್ಲಿ ತಳ್ಳಿಹಾಕಲಾಗಿದೆ. `ಶಾಲೆಗಳನ್ನು ವಿಲೀನಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆಯೇ ಹೊರತು ಅವುಗಳನ್ನು ಮುಚ್ಚಲಾಗುತ್ತಿದೆ ಎನ್ನುವುದು ಸರಿಯಲ್ಲ. 3 ಕಿ.ಮೀ. ವ್ಯಾಪ್ತಿ ಒಳಗೆ ಇರುವ ಶಾಲೆಗಳೊಂದಿಗೆ ಮಾತ್ರ ಇಂತಹ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ.

ಶಿಕ್ಷಕರು ಹಾಗೂ ಮಕ್ಕಳ ನಡುವೆ ಸೌಹಾರ್ದ ವಾತಾವರಣ ಕಲ್ಪಿಸಲು, ಗುಣಮಟ್ಟದ ಶಿಕ್ಷಣ ನೀಡಲು, ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಇಲಾಖೆ ಈ ನಿರ್ಣಯ ತೆಗೆದುಕೊಂಡಿದೆ. ಹೆಚ್ಚು ಮಕ್ಕಳು ಶಾಲೆಯಲ್ಲಿ ಇದ್ದರೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಲು ಸಹಕಾರಿ ಆಗುತ್ತದೆ. ಶಾಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮೂಲಸೌಕರ್ಯ ನೀಡಲು ಅನುಕೂಲವಾಗುತ್ತದೆ. ಶಾಲೆಯಲ್ಲಿ ಕಡಿಮೆ ಮಕ್ಕಳು ಕಲಿಯುತ್ತಿದ್ದರೆ ಅವರು ವಿಕಾಸ ಹೊಂದುವುದು ಕಷ್ಟ ಎಂಬ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ~ ಎಂದು ನ್ಯಾಯಾಲಯಕ್ಕೆ ವಿವರಿಸಲಾಗಿದೆ.

`ರಾಜ್ಯದಲ್ಲಿ 253 ಕಿರಿಯ ಹಾಗೂ 9 ಹಿರಿಯ ಪ್ರಾಥಮಿಕ ಶಾಲೆಗಳನ್ನು ಈಗಾಗಲೇ ವಿಲೀನಗೊಳಿಸಲಾಗಿದೆ. ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಶಾಲೆಗಳು ಇಲ್ಲದ ಹಿನ್ನೆಲೆಯಲ್ಲಿ 113 ಶಾಲೆಗಳನ್ನು ಇನ್ನೂ ವಿಲೀನಗೊಳಿಸಲಾಗಿಲ್ಲ. 49 ಶಾಲೆಗಳ ವಿಲೀನ ಪ್ರಕ್ರಿಯೆ ಚಾಲ್ತಿಯಲ್ಲಿ ಇದೆ ಎಂಬ ಅಂಕಿ ಅಂಶ ನೀಡಲಾಗಿದೆ.

ನೆರವು: `ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಿದ ನಂತರ ಅಂತಹ ವಿದ್ಯಾರ್ಥಿಗಳಿಗೆ ಸಾರಿಗೆ ವೆಚ್ಚವಾಗಿ ತಿಂಗಳಿಗೆ ತಲಾ 300 ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರದ ನಿರ್ಣಯವನ್ನು ಯಾವುದೇ ವಿದ್ಯಾರ್ಥಿ ಅಥವಾ ಅವರ ಪೋಷಕರು ಪ್ರಶ್ನಿಸಿಲ್ಲ.

ಅರ್ಜಿದಾರರಿಗೂ ಇದನ್ನು ಪ್ರಶ್ನಿಸುವ ಹಕ್ಕಿಲ್ಲ. ಆದುದರಿಂದ ಅರ್ಜಿಯನ್ನು ವಜಾ ಮಾಡಬೇಕು~ ಎಂದು ಕೋರಲಾಗಿದೆ. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT