ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಗಳ ಅಗ್ನಿದಿವ್ಯ!

ನೂರು ಕಣ್ಣು ಸಾಲದು
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆಶ್ರಮದ ಒಳಾವರಣದಲ್ಲಿ ಹೆಣ್ಣುಮಕ್ಕಳು ಚರಕದಿಂದ ನೇಯುತ್ತಿದ್ದಾರೆ. ಹಿಂಬದಿ ಗೋಡೆಯ ಮೇಲೆ ಮಹಾತ್ಮ ಗಾಂಧೀ ಚಿತ್ರವಿದೆ. ಇದು ತೆಲುಗಿನ ‘ಮಾಪಿಲ್ಲ’ ಚಿತ್ರದ ದೃಶ್ಯ. ಆದರೆ, ಬ್ರಿಟಿಷ್ ಸರ್ಕಾರ ಇದರ ಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ. ಅವರು ಕೊಟ್ಟ ಕಾರಣ, ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡುವ ಸನ್ನಿವೇಶವಿದೆ ಎಂಬುದು. 

ಜರ್ಮನಿಯಲ್ಲಿ ಚಲನಚಿತ್ರ ತರಬೇತಿ ಪಡೆದ ಮೋಹನ್ ಭವನಾನಿ ‘ಮಿಲ್’ ಎಂಬ ಚಿತ್ರವನ್ನು ೧೯೩೪ರಲ್ಲಿ ತಯಾರಿಸಿದರು. ಕಾರ್ಖಾನೆ ಮಾಲೀಕ ಹಾಗೂ ಕಾರ್ಮಿಕರ ನಡುವಿನ ತಿಕ್ಕಾಟದ ಕಥಾ ಹಂದರವನ್ನು ಈ ಚಿತ್ರ ಹೊಂದಿತ್ತು. ಇದಕ್ಕೂ ಆಗಿನ ಸೆನ್ಸಾರ್ ಅಧಿಕಾರಿಗಳು ಪ್ರದರ್ಶನಕ್ಕಾಗಿ ಸರ್ಟಿಫಿಕೇಟ್ ನೀಡಲಿಲ್ಲ. ಇಂತಹ ಹಲವಾರು ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದನ್ನು ನಿರಾಕರಿಸಿದ ಪ್ರಕರಣಗಳು ಸ್ವಾತಂತ್ರ್ಯ ಪೂರ್ವದಲ್ಲೂ ನಡೆದವು, ಈಗಲೂ ಇಂತಹ ಘಟನೆಗಳೇನೂ ಕಡಿಮೆಯಾಗಿಲ್ಲ. 

ಮನರಂಜನೆಗಾಗಿ ತಯಾರಾಗಿ ತೆರೆಕಾಣುತ್ತಿದ್ದ ಚಿತ್ರಗಳನ್ನು ನೋಡಿ, ಚಿತ್ರಗಳನ್ನು ವರ್ಗೀಕರಿಸಿ ಸರ್ಟಿಫಿಕೇಟ್ ನೀಡುವ ಅಧಿಕಾರವನ್ನು ೧೯೦೯ರಲ್ಲಿಯೇ ಸಿನಿಮಾಟೋಗ್ರಫಿ ಕಾಯ್ದೆಯ ಮೂಲಕ ಜಾರಿಗೆ ತರಲಾಗಿತ್ತು. ಸರ್ಕಾರ ಕೆಲವೊಂದು ನೀತಿ ನಿಯಮಗಳನ್ನು ಆಗ ರೂಪಿಸಿತ್ತು. ಅದಕ್ಕನುಗುಣವಾಗಿ ಚಲನಚಿತ್ರಗಳು ಪ್ರದರ್ಶನಕ್ಕೆ ಅಣಿಗೊಳ್ಳಬೇಕಿತ್ತು.

ಸಮಾಜ ವಿರೋಧಿ ಚಟುವಟಿಕೆ, ಧಾರ್ಮಿಕ ಭಾವನೆಗಳಿಗೆ ನೋವು ತರುವುದು, ಹಿಂಸೆ, ಜನಾಂಗೀಯ ವೈಷಮ್ಯ, ವ್ಯಕ್ತಿ ನಿಂದನೆ, ಅಶ್ಲೀಲತೆ, ಚಾರಿತ್ರ್ಯ ವಧೆ ಮೊದಲಾದ ವಿಷಯಗಳನ್ನು ಒಳಗೊಂಡ ಚಿತ್ರಗಳಿಗೆ ಅಂಕುಶ ಹಾಕುವ ಸೆನ್ಸಾರ್ ಭಾರತದಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಚಾಲ್ತಿಯಲ್ಲಿದೆ. ಈ ಕಾನೂನು ಆಗ್ಗಿಂದಾಗ್ಗೆ ಬದಲಾಗುತ್ತಿದೆ. ಸೆನ್ಸಾರ್ ಮಂಡಳಿಯಿಂದ ಬಗೆಹರೆಯದೆ ನ್ಯಾಯಾಲಯದ ಮೂಲಕ ಇತ್ಯಾರ್ಥಗೊಂಡ ಘಟನೆಗಳೇನೂ ಕಡಿಮೆಯಿಲ್ಲ.

ಸ್ವಾತಂತ್ರ್ಯ ಹೋರಾಟದ ಸಂದರ್ಭಕ್ಕೆ ತಯಾರಾದ ಹಲವು ಚಿತ್ರಗಳಲ್ಲಿ ಸ್ವಾತಂತ್ರ್ಯದ ಅಭಿವ್ಯಕ್ತಿಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುವ ಜಾಣ್ಮೆಯನ್ನು ನಿರ್ದೇಶಕರು ತೋರಿಸುತ್ತಿದ್ದರೆಂಬುದು ಸುಳ್ಳೇನಲ್ಲ. ಅದನ್ನು ಸೃಜನಶೀಲ ಅಭಿವ್ಯಕ್ತಿಯ ಮೂಲಕ ನೋಡುಗರ ಮನಸ್ಸಿಗೆ ತಲುಪುವ ಪ್ರಯತ್ನಗಳು ಆಗೀಗ ನಡೆಯುತ್ತಲೇ ಇದ್ದವು. ಕೆಲವು ಬಾರಿ ಸೆನ್ಸಾರ್ ಮಂಡಳಿಯ ರೀತಿ ನೀತಿಗಳನ್ನು ಒಪ್ಪಿಕೊಂಡೇ ಸ್ವಾತಂತ್ರ್ಯ ಅಭೀಪ್ಸೆಯನ್ನು ಒಳಗೊಂಡ ಹಲವು ಚಿತ್ರಗಳೂ ತೆರೆಗೆ ಬಂದಿದ್ದು, ಬಹುಕಾಲದ ನಂತರ ಅದರ ನೈಜ ಅರ್ಥ ಪ್ರಭುತ್ವಕ್ಕೆ ಗೊತ್ತಾಗಿದ್ದೂ ಉಂಟು. 

ದೇಶ ಭಕ್ತಿ ಗೀತೆಗಳನ್ನು ಅಳವಡಿಸುವುದು, ಸಂಗೀತ ಸಾಹಿತ್ಯದಲ್ಲಿ ನೈಜ ರೀತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುವುದು ಇವೆಲ್ಲವೂ ಸ್ವಾತಂತ್ರ್ಯದ ದಿನಗಳಲ್ಲಿ ಮಾಮೂಲಿಯಾಗಿದ್ದವು.  ಸೆನ್ಸಾರ್ ಅಧಿಕಾರಿಗಳು ಹದ್ದಿನ ಕಣ್ಣಿನಿಂದ ನೋಡಿ ಚಿತ್ರಗಳಿಗೆ ಸರ್ಟಿಫಿಕೇಟ್ ನೀಡುತ್ತಿದ್ದರೂ ಬೇರೆ ಬೇರೆ ಚತುರ ಮಾರ್ಗಗಳ ಮೂಲಕ ಸ್ವಾತಂತ್ರ್ಯದ ಸಂದೇಶವನ್ನು ಪ್ರೇಕ್ಷಕರಿಗೆ ಮುಟ್ಟಿಸುವ ಕೆಲಸವನ್ನು ಕೊನೆಯವರೆಗೂ ಕೆಲವು ನಿರ್ದೇಶಕರು ಬಿಟ್ಟಿರಲಿಲ್ಲ.
 
ಚಲನಚಿತ್ರಗಳು ವಿವಾದಗಳಿಗೆ ಸಿಕ್ಕಿಬೀಳುವ ಘಟನೆಗಳಿಗೆ ದೊಡ್ಡ ಪರಂಪರೆಯೇ ಇದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಭಾರತ ಮೊಟ್ಟಮೊದಲ ಬಾರಿಗೆ ತುರ್ತುಪರಿಸ್ಥಿತಿಯನ್ನು ಕಂಡ ಸಂದರ್ಭದಲ್ಲಿ ಗುಲ್ಜಾರ್ ನಿರ್ದೇಶನದ ‘ಆಂಧೀ’ ಚಿತ್ರವನ್ನು ನಿಷೇಧಿಸಲಾಗಿತ್ತು.

ಈ ಚಿತ್ರದಲ್ಲಿ ಆಗಿನ ಪ್ರಧಾನ ಮಂತ್ರಿಗಳ ಬದುಕನ್ನು ಒಳಗೊಂಡ ಚಿತ್ರಣವಿದೆ ಎಂಬ ಗುಮಾನಿ ಸರ್ಕಾರಕ್ಕಿತ್ತು. ಇಂದಿರಾ ಗಾಂಧಿಯವರ ವೇಷಭೂಷಣ, ಹಾವಭಾವಗಳು ಚಿತ್ರದ ನಾಯಕಿಯ ಅಭಿನಯದಲ್ಲಿದ್ದವು ಎಂಬ ಕಾರಣಕ್ಕಾಗಿ ಈ ಚಿತ್ರ ಪ್ರದರ್ಶನ ಭಾಗ್ಯವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಆಗಿನ ಆಡಳಿತ ಪಕ್ಷ ಬದಲಾದ ಸಂದರ್ಭದಲ್ಲಿ ದೂರದರ್ಶನದ ಮೂಲಕ ‘ಆಂಧೀ’ ಚಿತ್ರವನ್ನು ನೋಡುವ ಅವಕಾಶವನ್ನು ಒದಗಿಸಿಕೊಟ್ಟಿತ್ತು. 

ವಾಸ್ತವ ಚಿತ್ರಗಳು ಸಮಾಜದ ಸ್ಥಿತಿಗತಿಗಳನ್ನು ಕಲಾತ್ಮಕ ಮಾದರಿಗಳಲ್ಲಿ ನೇರವಾಗಿ ಅನಾವರಣಗೊಳಿಸುವ ಪರಿಪಾಠ ಆರಂಭಿಸಿದ್ದರೂ ರಾಜಕೀಯ ಮೇಲಾಟಗಳ ಮೂಲಕ ವಾಸ್ತವ ಚಿತ್ರಣವನ್ನು ಹೊತ್ತು ತರುವ ಹಾಗೂ ಅದಕ್ಕೆ ಕಾರಣರಾದವರನ್ನು ಬೊಟ್ಟು ಮಾಡಿ ತೋರಿಸುವ ಚಿತ್ರಗಳೇನೂ ಕಡಿಮೆಯಾಗಲಿಲ್ಲ. ‘ಕಿಸ್ಸಾ ಕುರ್ಸಿ ಕಾ’ ಚಿತ್ರ ಇದಕ್ಕೊಂದು ಉತ್ತಮ ಉದಾಹರಣೆ. ರಾಜಕೀಯ ಅಧಿಕಾರಸ್ಥರು ಕುರ್ಚಿ ಖಯಾಲಿಯನ್ನು ಹೇಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂಬುದನ್ನು ಹಾಸ್ಯ ಹಾಗೂ ವಿಡಂಬನೆಯ ಮೂಲಕ ‘ಕಿಸ್ಸಾ ಕುರ್ಸಿ ಕಾ’ ಹೊರಹಾಕಿತ್ತು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಸಂಜಯ್ ಗಾಂಧಿ ಮಾಡಿದ ಅನೇಕ ಕೃತ್ಯಗಳನ್ನು ವಿಡಂಬಿಸಿತ್ತು ಎಂಬ ಕಾರಣಕ್ಕಾಗಿ ಚಿತ್ರದ ಮೇಲೆ ನಿಷೇಧ ಹೇರಲಾಗಿತ್ತು.

ಪಟ್ಟಾಭಿರಾಮ ರೆಡ್ಡಿಯವರು ಚಿತ್ರಿಸಿದ
ಯು.ಆರ್. ಅನಂತಮೂರ್ತಿ ಅವರ ‘ಸಂಸ್ಕಾರ’ ಒಂದು ವರ್ಷಕ್ಕೂ ಹೆಚ್ಚು ಕಾಲ ಸೆನ್ಸಾರ್ ಅನುಮತಿಗಾಗಿ ಕಾಯುತ್ತಾ ಕುಳಿತಿದ್ದು, ಈ ವಿವಾದ ಲೋಕಸಭೆಯಲ್ಲಿಯೂ ಚರ್ಚೆಯಾಗಿದ್ದು ಈಗ ಇತಿಹಾಸ. ಜನಾಂಗವೊಂದರ ಆಚರಣೆಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಆರೋಪಕ್ಕೊಳಗಾದ ‘ಸಂಸ್ಕಾರ’ ಕೊನೆಗೂ ಸೆನ್ಸಾರ್ ಅನುಮತಿ ಪಡೆದುಕೊಂಡು ತೆರೆಗೆ ಬಂತು. ಅಷ್ಟೇ ಅಲ್ಲ, ‘ಸಂಸ್ಕಾರ’ ಕನ್ನಡಕ್ಕೆ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಅಗ್ರಸ್ಥಾನ ತಂದುಕೊಟ್ಟ ಪ್ರಥಮ ಚಿತ್ರ ಎನ್ನಿಸಿಕೊಂಡಿತು. 

ಅಧಿಕಾರಸ್ಥರು ಸ್ವಜನ ಪಕ್ಷಪಾತ, ಭ್ರಷ್ಟಚಾರದಲ್ಲಿ ತೊಡಗುವುದರೊಂದಿಗೆ ಅದನ್ನು ಪ್ರಶ್ನಿಸಿದವರಿಗೆ ಇನ್ನಿಲ್ಲದ ಕಿರುಕುಳ ಕೊಡುವ ಘಟನೆಗಳನ್ನು ಅತ್ಯಂತ ಸಮರ್ಥವಾಗಿ ಚಿತ್ರಿಸಿದ ಕನ್ನಡದ ‘ಅಂತ’ ಸೆನ್ಸಾರ್ ಅಡಕತ್ತರಿಗೆ ಸಿಕ್ಕಿಕೊಂಡು ಅನುಭವಿಸಿದ ತೊಂದರೆಗಳು ಅಷ್ಟಿಷ್ಟಲ್ಲ. ಎಚ್.ಎನ್. ಮಾರುತಿಯವರು ನಿರ್ಮಿಸಿ ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶಿಸಿದ ‘ಅಂತ’ (ಲೇ: ಎಚ್.ಕೆ. ಅನಂತರಾವ್) ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರೇ ಮಧ್ಯೆ ಪ್ರವೇಶಿಸಬೇಕಾಯಿತು. 

ವೇಶ್ಯಾವೃತ್ತಿಯನ್ನು ಖಂಡಿಸುವ, ಅದರಿಂದಾಗುವ ಕಷ್ಟನಷ್ಟಗಳ ಮೇಲೆ ಬೆಳಕು ಚೆಲ್ಲುವ ಹಲವಾರು ಚಿತ್ರಗಳು ಭಾರತೀಯ ಪರದೆಯಲ್ಲಿ ಬಂದು ಹೋಗಿವೆ. ಅಂತಹ ಅನೇಕ ಚಿತ್ರಗಳು ವಿವಾದಕ್ಕೊಳಗಾಗಿ ದೇಶದುದ್ದಕ್ಕೂ ಚರ್ಚೆಗೆ ಗ್ರಾಸವಾಗಿವೆ. ಇದಕ್ಕೆ ‘ಚೇತ್ನಾ’ ಹಿಂದಿ ಚಿತ್ರ ಒಂದು ನಿದರ್ಶನ. ಇತ್ತೀಚೆಗೆ ಕ್ಯಾಬರೆ ನರ್ತಕಿಯೊಬ್ಬಳ ಜೀವನದ ಕಥೆಯನ್ನು ಹೊತ್ತು ತಂದ ‘ಡರ್ಟಿ ಪಿಕ್ಜರ್’ ಕೂಡ ಚರ್ಚೆಗೆ ಕಾರಣವಾಗಿತ್ತು. 

ಚಂಬಲ್ ಕಣಿವೆಯಲ್ಲಿ ಡಕಾಯಿತಿ ತಂಡದ ಮುಖ್ಯಸ್ಥೆಯಾಗಿ ಪೂಲನ್ ದೇವಿ ಅನೇಕ ಹಿಂಸಾತ್ಮಕ ಘಟನೆಗಳಲ್ಲಿ ಪಾಲ್ಗೊಂಡಿದ್ದ ಘಟನೆಗಳು ಇಡೀ ವಿಶ್ವದ ಗಮನ ಸೆಳೆದಿದ್ದವು. ಪರಿಸ್ಥಿತಿಯ ಒತ್ತಡದಿಂದ ಅಸಹಾಯಕ ಹೆಣ್ಣು ಮಗಳೊಬ್ಬಳು ತನ್ನ ಕುಟುಂಬದ ಅವಸಾನಕ್ಕೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ಡಕಾಯಿತರ ಗುಂಪು ಸೇರಿ ನಂತರ ಆ ಗುಂಪಿಗೆ ನಾಯಕಿಯಾಗಿ ಹೊರಹೊಮ್ಮಿದ್ದೂ ತಪ್ಪನ್ನು ಒಪ್ಪಿಕೊಂಡು ಶಿಕ್ಷೆ ಅನುಭವಿಸಿ ಕೊನೆಗೆ ಸಾರ್ವಜನಿಕ ಬದುಕಿನಲ್ಲಿಯೂ ಕಾಲಿಟ್ಟು ನಂತರ ಅಮಾನುಷವಾಗಿ ಹತ್ಯೆಗೊಳಗಾದಳು.

ಪೂಲನ್ ದೇವಿಯ ಬದುಕನ್ನು ಆಧರಿಸಿದ ‘ಬಂಡಿತ್ ಕ್ವೀನ್’ ಚಿತ್ರ ತೆರೆಗೆ ಬಂದಾಗ ಸ್ವತಃ ಪೂಲನ್ ಅದು ತನ್ನ ನಿಜ ಜೀವನದ ಚಿತ್ರಣವಲ್ಲ ಎಂದು ಹೇಳಿದ್ದು ಮಾತ್ರವಲ್ಲ ಚಿತ್ರ ನಿಷೇಧಿಸಲು ಮನವಿಯನ್ನೂ ಮಾಡಿದ್ದಳು. ನಿರ್ಮಾಪಕರು ಒಪ್ಪದಿದ್ದಾಗ ಪೂಲನ್ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದು ತನ್ನ ವಿರೋಧವನ್ನು ವ್ಯಕ್ತಪಡಿಸಿದ್ದು ಈಗ ಚರಿತ್ರೆಯ ಭಾಗ.

ಭಾರತದಲ್ಲಿ ವಿಧವೆಯರ ಕಷ್ಟ-ಕೋಟಲೆಗಳ ಮೇಲೆ ಬೆಳಕು ಚೆಲ್ಲುವಂತಹ ‘ವಾಟರ್’ ಚಿತ್ರವನ್ನು ಗಂಗಾ ನದಿಯ ಕಿನಾರೆಯಲ್ಲಿ ಚಿತ್ರೀಕರಿಸಲು ವಿರೋಧ ವ್ಯಕ್ತವಾಯಿತು. ಕೊನೆಗೆ ಈ ಚಿತ್ರದ ಚಿತ್ರೀಕರಣವನ್ನು ವಿದೇಶದಲ್ಲಿ ನಡೆಸಬೇಕಾಯಿತು. ‘ವಾಟರ್’ ಬಿಡುಗಡೆಯ ಸಂದರ್ಭದಲ್ಲಿಯೂ ಅಪಸ್ವರ ಎದ್ದರೂ ಆ ಚಿತ್ರದ ವಾಸ್ತವ ಅಂಶಗಳನ್ನು ನೋಡುಗರು ಒಪ್ಪಿಕೊಂಡರು. ಅನೇಕ ಚಿತ್ರೋತ್ಸವಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಿತು.

ಹಿಂದಿ ಚಿತ್ರರಂಗದ ಹೆಸರಾಂತ ನಿರ್ದೇಶಕ 
ಬಿ.ಆರ್. ಛೋಪ್ರಾ ಅವರ ‘ಇನ್ ಸಾಫ್ ಕಾ ತರಾಜು’ ಸಿನಿಮಾ, ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳೊಬ್ಬಳ ಮೇಲೆ ಅತ್ಯಾಚಾರವೆಸಗುವ ದೃಶ್ಯ ಒಳಗೊಂಡಿತ್ತು. ಇದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆದವು. 

ಸ್ವಾತಂತ್ರ್ಯಾ ನಂತರ ಮುಂಬೈನಲ್ಲಿ ನಡೆದ ಸ್ಫೋಟ ಪ್ರಕರಣಗಳು ದೇಶ ಹಾಗೂ ವಿದೇಶಗಳಲ್ಲಿ ಭಯೋತ್ಪಾದನೆಯ ವಿರುದ್ಧದ ಕೂಗು ಜೋರಾಗಲು ಕಾರಣವಾಯಿತು. ಈ ಘಟನೆಯ ಹಿನ್ನಲೆ ಮುನ್ನೆಲೆಗಳನ್ನು ಆಧಾರವಾಗಿಟ್ಟುಕೊಂಡು ಪತ್ರಕರ್ತರೊಬ್ಬರು ಕೃತಿಯೊಂದನ್ನು ಪ್ರಕಟಿಸಿದರು. ಇದರಲ್ಲಿದ್ದ ಅಂಶಗಳನ್ನೇ ಬಳಸಿಕೊಂಡು ‘ಬ್ಲಾಕ್ ಫ್ರೈಡೆ’ ಚಿತ್ರ ತಯಾರಾಯಿತು. ಈ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ಪ್ರಕರಣದ ಆರೋಪಿಗಳು ಜೈಲಿನಲ್ಲಿದ್ದುಕೊಂಡೇ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತರುವಲ್ಲಿ ಸಫಲರಾದರು. ಆದರೆ, ಪ್ರಕರಣ ನ್ಯಾಯಾಲಯದ ಮೇಟ್ಟಿಲೇರಿ ಕೊನೆಗೂ ಚಿತ್ರ ಬಿಡುಗಡೆಗೆ ಅನುಮತಿ ದೊರೆಯಿತು.

ಇಪ್ಪತ್ತೊಂದನೇ ಶತಮಾನದಲ್ಲಿ ಆಧುನಿಕ ಸಮಾಜದ ರೀತಿ ರಿವಾಜುಗಳು ತೆರೆಯ ಮೇಲೆ ಮೂಡಿಬಂದು ಆ ಚಿತ್ರಗಳು ವಿವಾದಗಳನ್ನು ಸೃಷ್ಟಿಸಿದವು. ಸಲಿಂಗ ಕಾಮ, ಅನೈತಿಕ ಸಂಬಂಧ, ಅಪ್ರಾಪ್ತರ ಲೈಂಗಿಕ ಚಟುವಟಿಕೆ, ಬಾಲ್ಯ ವಿವಾಹ, ವಿಲಕ್ಷಣ ಹತ್ಯೆ ಮೊದಲಾದ ಕಥೆಗಳನ್ನು ಇಂತಹ ಚಿತ್ರಗಳು ಒಳಗೊಂಡಿದ್ದವು. ‘ಫೈರ್’ ಚಿತ್ರ (ನಿರ್ಮಾಣ: ದೀಪಾ ಮೆಹ್ತಾ) ಇದಕ್ಕೊಂದು ಉದಾಹರಣೆ. ಕಮಲ ಹಾಸನ್ ಅವರ ‘ವಿಶ್ವ ರೂಪಂ’, ಮಣಿರತ್ನಂ ಅವರ ‘ಕಡಲ್’ ಚಿತ್ರಗಳು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿವೆ ಎಂಬ ಆರೋಪವನ್ನು ಹೊತ್ತಿದ್ದವು. ಈ ಚಿತ್ರಗಳ ಬಗ್ಗೆ ಸರ್ಕಾರಗಳೂ ಆಕ್ಷೇಪ ಎತ್ತಿದ್ದವು. ಸೆನ್ಸಾರ್ ಕತ್ತರಿ ಪ್ರಯೋಗದ ನಂತರ ಈ ಚಿತ್ರಗಳು ತೆರೆಯ ಮೇಲೆ ಬಂದವು. 

ಬೇರೆ ಬೇರೆ ಕಾರಣಗಳಿಗಾಗಿ ಚಿತ್ರಗಳು ವಿವಾದಕ್ಕೊಳಗಾದರೂ ಗಲ್ಲಾ ಪೆಟ್ಟಿಗೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿವೆ. ಕೆಲವು ಭರ್ಜರಿ ಯಶಸ್ವಿ ಕಂಡರೆ ಕೆಲವು ಹೇಳ ಹೆಸರಿಲ್ಲದಂತೆ ಹೋಗುತ್ತಿವೆ. ಇನ್ನೂ ಕೆಲವು ಚಿತ್ರಗಳು ಪ್ರಶಸ್ತಿಗಳನ್ನು ಬಾಚುತ್ತಿವೆಯಲ್ಲದೇ ರಾಷ್ಟ್ರೀಯ, ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನಗೊಳ್ಳುತ್ತಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT