ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಗಳ ಸುಪ್ಪತ್ತಿಗೆಯಲ್ಲಿ...

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

`ಬರಹಗಾರನಾಗಿ ಯಶಸ್ವಿಯಾಗದೆ ಹೋಗಿದ್ದರೆ ನಟನಾಗುತ್ತಿದ್ದೆ~ ಎನ್ನುವುದು ಸಲ್ಮಾನ್ ರಶ್ದಿ ಅವರ ಮಾತು. ಒಂದುವೇಳೆ, ರಶ್ದಿ ನಟರಾಗಿದ್ದರೆ ಒಳ್ಳೆಯ ಕಲಾವಿದ ಅನ್ನಿಸಿಕೊಳ್ಳುತ್ತಿದ್ದರೋ ಇಲ್ಲವೋ ಊಹಿಸುವುದು ಕಷ್ಟ. ಆದರೆ, ಅವರ ಬದುಕು-ಬರವಣಿಗೆಯನ್ನು ಸುತ್ತುವರಿದ ವಿವಾದಗಳನ್ನು ನೋಡಿದರೆ ರಶ್ದಿ ಅವರ ಬದುಕೇ ಒಂದು ಸಿನಿಮಾದಂತೆ ಭಾಸವಾಗುತ್ತದೆ, ಅವರೊಬ್ಬ ಪಳಗಿದ ನಟನಂತೆ ಕಾಣಿಸುತ್ತಾರೆ. ಈ ಚಲನಚಿತ್ರದ ಹೊಸ ದೃಶ್ಯ- ಇತ್ತೀಚಿನ, ಜೈಪುರ ಸಾಹಿತ್ಯೋತ್ಸವಕ್ಕೆ ಸಂಬಂಧಿಸಿದ ವಿವಾದ.

ರಾಜಕಾರಣಿಗಳ ಪಾಲ್ಗೊಳ್ಳುವಿಕೆಯ ಔಚಿತ್ಯದ ಬಗ್ಗೆ ನಮ್ಮಲ್ಲಿ ಚರ್ಚೆ ನಡೆಯುವುದಿದೆ. ಆದರೆ, ಲೇಖಕರೊಬ್ಬರು ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಬೇಕೇ ಬೇಡವೇ ಎನ್ನುವ ಜಿಜ್ಞಾಸೆಗೆ `ಜೈಪುರ ಸಾಹಿತ್ಯೋತ್ಸವ~ ವೇದಿಕೆಯಾದದ್ದು ಒಂದು ಪ್ರಹಸನದಂತಿತ್ತು. ಸಾಹಿತ್ಯವನ್ನು ಮೀರಿ, ರಾಜಕಾರಣದ ಲೆಕ್ಕಾಚಾರಗಳಿಗೆ ಹಾಗೂ ವಿವಿಧ ಗುಂಪುಗಳ ಶಕ್ತಿಪ್ರದರ್ಶನಕ್ಕೆ ಈ ಪ್ರಸಂಗ ಕಾರಣವಾಯಿತು. ಬಹುಶಃ ಇಂಥ ನಾಟಕೀಯ ಪ್ರಸಂಗಗಳಿಗೆ ಕಾರಣವಾಗಬಲ್ಲ ಜಗತ್ತಿನ ಏಕಮಾತ್ರ ಲೇಖಕ ರಶ್ದಿ ಅವರೇ ಇರಬೇಕು!

ಸಲ್ಮಾನ್ ರಶ್ದಿ ಅವರ ಬದುಕೊಂದು ಸಿನಿಮಾ ಎನ್ನುವುದು ಬೀಸು ಹೇಳಿಕೆಯಲ್ಲ. ಭಾರತೀಯ ಸಂಜಾತ ಈ ಬ್ರಿಟನ್ ಲೇಖಕ ಸಾಗಿಬಂದ ಹಾದಿ ಯಾವ ಚಿತ್ರಕಥೆಗೂ ಕಡಿಮೆಯಾದುದಲ್ಲ. ಅವರ ಬದುಕಿನ ಚಿತ್ರಪಟಗಳನ್ನೊಮ್ಮೆ ತಿರುವಿನೋಡಿ:

ಸರ್. ಅಹ್ಮದ್ ಸಲ್ಮಾನ್ ರಶ್ದಿ (ಜ: ಜೂನ್ 19, 1947) ಜನಿಸಿದ್ದು ಮುಂಬಯಿಯಲ್ಲಿ. ಅವರ ತಂದೆ ಅನೀಸ್ ಅಹ್ಮದ್ ರಶ್ದಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಕಲಿತವರು. ವಕೀಲರಾಗಿದ್ದ ಅವರು ನಂತರ ತಮ್ಮ ಕ್ಷೇತ್ರವನ್ನು ವಾಣಿಜ್ಯಕ್ಕೆ ಬದಲಿಸಿಕೊಂಡರು. ತಾಯಿ ನೆಗಿನ್ ಭಟ್ ಶಿಕ್ಷಕಿ. ಹೀಗೆ, ವಿದ್ಯಾವಂತ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ರಶ್ದಿ ಅವರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಂಬಯಿಯಲ್ಲಿಯೇ ನಡೆಯಿತು. ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ ಅವರು, ಕೇಂಬ್ರಿಜ್‌ನ ಕಿಂಗ್ಸ್ ಕಾಲೇಜ್‌ನಲ್ಲಿ ಇತಿಹಾಸ ಕಲಿತರು. 1964ರಲ್ಲಿ ರಶ್ದಿ ಪೋಷಕರು ಕರಾಚಿಗೆ ವಲಸೆ ಹೋಗುವುದರೊಂದಿಗೆ ಭಾರತದೊಂದಿಗಿನ ಅವರ ಸಂಬಂಧ ಸಡಿಲವಾಯಿತು.

ಪೂರ್ಣಾವಧಿ ಬರಹಗಾರರಾಗುವ ಮುನ್ನ ಜಾಹೀರಾತು ಕಂಪನಿಯೊಂದರಲ್ಲಿ ಕಾಪಿ ರೈಟರ್ ಆಗಿ ರಶ್ದಿ ಕೆಲಸ ಮಾಡುತ್ತಿದ್ದರು. ರಂಗತಂಡವೊಂದರಲ್ಲಿ ನಟನಾಗಿ ದುಡಿದ ಅನುಭವವೂ ಅವರದಾಗಿತ್ತು. ಬರಹಗಾರರಾಗಿ ಅವರ ಆರಂಭ ಉತ್ತಮವೇನೂ ಆಗಿರಲಿಲ್ಲ. ಅವರ ಚೊಚ್ಚಿಲ ಕಾದಂಬರಿ `ಗ್ರಿಮಸ್~ (1975) ಸಹೃದಯರ ಗಮನಸೆಳೆಯಲಿಲ್ಲ. ಆದರೆ, ಎರಡನೇ ಕಾದಂಬರಿ `ಮಿಡ್‌ನೈಟ್ಸ್ ಚಿಲ್ಡ್ರನ್~ (1981) ಅಪಾರ ಹೆಸರು ಹಾಗೂ ಬುಕರ್ ಪ್ರಶಸ್ತಿ ಎರಡನ್ನೂ ಅವರಿಗೆ ದೊರಕಿಸಿಕೊಟ್ಟಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ವರ್ಷ ರಶ್ದಿ ಅವರ ಜನನ ವರ್ಷವೂ ಹೌದು. ದೇಶ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಮಧ್ಯರಾತ್ರಿ ಜನಿಸಿದ ಒಂದು ಮಗುವಿನ ಜೀವನದ ಕಥನವೇ `ಮಿಡ್‌ನೈಟ್ಸ್ ಚಿಲ್ಡ್ರನ್~. ಈ ಕಾದಂಬರಿಯಲ್ಲಿನ ಸಲೀಮನ ಪಾತ್ರ ಸ್ವತಃ ಕಾದಂಬರಿಕಾರರ ಬದುಕಿನಿಂದಲೇ ಮೂಡಿಬಂದಿದೆ ಎನ್ನುವ ಮಾತುಗಳಿವೆ.

`ಮಿಡ್‌ನೈಟ್ಸ್ ಚಿಲ್ಡ್ರನ್~ ಕಾದಂಬರಿ ಬಗೆಗೆ ಸ್ವತಃ ರಶ್ದಿ ಅವರಿಗೂ ಒಂದು ರೀತಿಯ ಮೋಹ. ಈ ಕೃತಿಯನ್ನವರು ರಂಗಕ್ಕೆ ಅಳವಡಿಸ್ದ್ದಿದು, ಅದು ಲಂಡನ್ ಮತ್ತು ನ್ಯೂಯಾರ್ಕ್‌ನಲ್ಲಿ ಪ್ರದರ್ಶನ ಕಂಡಿದೆ (ಈ ಕಾದಂಬರಿಯನ್ನು ಆಧರಿಸಿ, ಭಾರತೀಯ ಚಿತ್ರ ನಿರ್ದೇಶಕಿ ದೀಪಾ ಮೆಹ್ತಾ ಸಿನಿಮಾ ಮಾಡಲು ಮುಂದಾಗಿದ್ದಾರೆ). ನಂತರದ `ಶೇಮ್~ ಕಾದಂಬರಿ ಪಾಕಿಸ್ತಾನದಲ್ಲಿನ ರಾಜಕೀಯ ಪ್ರಕ್ಷುಬ್ಧತೆಗೆ ಸಂಬಂಧಿಸಿದ್ದು.

ಅಲ್ಲಿಯವರೆಗೆ ರಶ್ದಿ ಬರಹದ ದಾರಿ ಸರಾಗವಾಗಿಯೇ ಇದೆ. ಆದರೆ, ಅವರ ನಾಲ್ಕನೇ ಕಾದಂಬರಿ `ಸಟಾನಿಕ್ ವರ್ಸಸ್~ (1988) ಪ್ರಕಟವಾದದ್ದೇ ತಡ, ರಶ್ದಿ ಒಮ್ಮಿಂದೊಮ್ಮೆಗೇ ಜನಪ್ರಿಯತೆಯ ತುತ್ತತುದಿ ತಲುಪಿದರು. ಅದರ ಜೊತೆಗೆ ಜೀವಬೆದರಿಕೆಗೂ ಒಳಗಾದರು. `ಸಟಾನಿಕ್ ವರ್ಸಸ್~ ಮಹಮ್ಮದ್ ಪೈಗಂಬರ್ ಅವರನ್ನು ಅವಮಾನಿಸುತ್ತದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಹಲವು ದೇಶಗಳ ಮುಸ್ಲಿಮರ ಕಟು ಟೀಕೆಗೆ ಕಾದಂಬರಿ ಗುರಿಯಾಯಿತು. ಇರಾನಿನ ಧಾರ್ಮಿಕ ಮುಖಂಡ ಆಯತೊಲ್ಲಾ ಖೊಮೇನಿ ಅವರು ರಶ್ದಿ ತಲೆದಂಡಕ್ಕೆ ಫತ್ವಾ ಹೊರಡಿಸಿದರು. ಪುಸ್ತಕದ ಪ್ರತಿಗಳನ್ನು ಸುಡಲಾಯಿತು ಹಾಗೂ ಕಾದಂಬರಿಗೆ ನಿಷೇಧ ಹೇರಲಾಯಿತು. ಈ ಪುಸ್ತಕದ ಪ್ರಕಟಣೆಗೆ ಸಹಕರಿಸಿದವರ ಮೇಲೂ ಹಲ್ಲೆಗಳಾದವು. ವಿವಿಧ ದೇಶಗಳಲ್ಲಿ ಹಿಂಸಾಚಾರ ಕಾಣಿಸಿಕೊಂಡಿತು. ಸಾವುನೋವುಗಳು ವರದಿಯಾದವು. ಖೊಮೇನಿ ನಿಧನರಾದರೂ, ಅವರು ಹೊರಡಿಸಿದ ಫತ್ವಾ ಈಗಲೂ ಜೀವಂತವಾಗಿದೆ. ಪ್ರತಿವರ್ಷ, ಫೆ.14ರ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಸಾವಿನ ಸಂದೇಶದ `ಪ್ರೇಮ ಪತ್ರ~ಗಳು ರಶ್ದಿ ಅವರಿಗೆ ಬರುವುದು ಇನ್ನೂ ನಿಂತಿಲ್ಲ.

`ಲ್ಯೂಕಾ ಅಂಡ್ ದಿ ಫೈರ್ ಆಫ್ ಲೈಫ್~, `ಶಾಲಿಮರ್ ದ ಕ್ಲೌನ್~, `ಈಸ್ಟ್ ವೆಸ್ಟ್~, `ಸ್ಟೆಪ್ ಅಕ್ರಾಸ್ ದಿಸ್ ಲೈನ್ಸ್~, `ಹರೂನ್ ಅಂಡ್ ದಿ ಸೀ ಆಫ್ ಸ್ಟೋರೀಸ್~-  ಅವರ ಬರಹದ ವೈವಿಧ್ಯಕ್ಕೆ ಉದಾಹರಣೆಯಂತಿರುವ ಪ್ರಸಿದ್ಧ ಕೃತಿಗಳು. ಪ್ರಬಂಧಕಾರರಾಗಿ, ಸಣ್ಣಕಥೆಗಾರರಾಗಿಯೂ ಅವರು ಪ್ರಸಿದ್ಧರು. ರಶ್ದಿ ಅವರ ಅಂಗರಕ್ಷಕನಾಗಿದ್ದ ಇವಾನ್ ಎನ್ನುವ ವ್ಯಕ್ತಿ ಪ್ರಕಟಿಸಿದ ಪುಸ್ತಕವೊಂದು ಕೂಡ ವಿವಾದಕ್ಕೆ ಕಾರಣವಾಗಿತ್ತು. `ಫತ್ವಾದ ಲಾಭ ಪಡೆಯಲು ರಶ್ದಿ ಪ್ರಯತ್ನಿಸಿದರು~ ಎನ್ನುವ ಇವಾನ್ ಆರೋಪದಿಂದ ಸಿಟ್ಟಿಗೆದ್ದ ರಶ್ದಿ, ನ್ಯಾಯಾಲಯದ ಮೊರೆಹೋಗಿದ್ದರು. ಕೊನೆಗೆ, ಇವಾನ್ ಹಾಗೂ ಪುಸ್ತಕದ ಪ್ರಕಾಶಕರು ಕ್ಷಮೆ ಕೋರುವುದೊಂದಿಗೆ ವಿವಾದ ತಿಳಿಯಾಯಿತು.

ವಿವಾದಗಳ ಜೊತೆಗೆ ವಿವಾಹಗಳ (ನಾಲ್ಕು ಮದುವೆಗಳು) ಮೂಲಕವೂ ಅವರು ಸುದ್ದಿ ಮಾಡಿದ್ದಾರೆ. ಕ್ಲಾರಿಸ್ಸಾ ಲಾರ್ಡ್, ಮೆರಿಯನ್ ವಿಗ್ಗಿನ್ಸ್, ಎಲಿಜಬೆತ್ ವೆಸ್ಟ್ ಹಾಗೂ ಪದ್ಮಾ ಲಕ್ಷ್ಮಿ ಅವರ ಆದುಹೋದ ಸಂಗಾತಿಗಳು. ರಶ್ದಿ ಅವರ ಎರಡನೇ ಪತ್ನಿ ಮೆರಿಯನ್ ಅಮೆರಿಕಾದ ಹೆಣ್ಣುಮಗಳು, ಕಾದಂಬರಿಗಾರ್ತಿ. ನಾಲ್ಕನೆಯ ಹೆಣ್ಣು ಪದ್ಮಾ ಲಕ್ಷ್ಮಿ ಪ್ರಖ್ಯಾತ ರೂಪದರ್ಶಿ ಹಾಗೂ ನಟಿ. ನಾಲ್ವರೊಂದಿಗೂ ಸಂಬಂಧಗಳನ್ನು ಕಡಿದುಕೊಂಡಿರುವ ರಶ್ದಿ ಅವರ ಹೆಸರು ಕೆಲಕಾಲ ಬಾಲಿವುಡ್ ನಟಿ ರಿಯಾ ಸೇನ್ ಅವರೊಂದಿಗೆ ತಳಕು ಹಾಕಿಕೊಂಡಿತ್ತು.

ವಿವಾದಗಳಷ್ಟೇ ದೊಡ್ಡಮಟ್ಟದ ಮನ್ನಣೆಗಳೂ ಅವರಿಗೆ ದೊರೆತಿವೆ. ಇಂಗ್ಲೆಂಡ್‌ನ ರಾಣಿ ಎಲಿಜಬೆತ್, ರಶ್ದಿ ಅವರ ಸಾಹಿತ್ಯ ಪ್ರತಿಭೆಗೆ `ನೈಟ್ ಬ್ಯಾಚಲರ್~ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಟೈಮ್ಸ ನಿಯತಕಾಲಿಕೆ 2008ರಲ್ಲಿ ಪಟ್ಟಿ ಮಾಡಿದ 50 ಅತ್ಯುತ್ತಮ ಬ್ರಿಟಿಷ್ ಬರಹಗಾರರಲ್ಲಿ (1945ರಿಂದ ಈಚಿನ) ರಶ್ದಿ ಅವರಿಗೆ ಹದಿಮೂರನೇ ಸ್ಥಾನ ದೊರೆತಿತ್ತು. ಇಷ್ಟು ಮಾತ್ರವಲ್ಲ, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕಾ, ಆಸ್ಟ್ರಿಯಾ, ಇಟಲಿ ಸೇರಿದಂತೆ ಅನೇಕ ದೇಶಗಳ ಸಾಹಿತ್ಯಿಕ ಪುರಸ್ಕಾರಗಳು ಅವರಿಗೆ ಸಂದಿವೆ. ಭಾರತದ `ಕ್ರಾಸ್‌ವರ್ಡ್ ಪುಸ್ತಕ ಪ್ರಶಸ್ತಿ~ಯೂ ದೊರೆತಿದೆ. ಬುಕರ್ ಪ್ರಶಸ್ತಿಗೆ ನಲವತ್ತು ವರ್ಷ ತುಂಬಿದ ಸಂದರ್ಭದಲ್ಲಿ, ಸಾರ್ವಜನಿಕರ ಅಭಿಮತದ ಮೇರೆಗೆ ನೀಡಲಾದ `ಬುಕರ್‌ಗಳ ಬುಕರ್~ ಪ್ರಶಸ್ತಿಯೂ ಅವರದಾಗಿದೆ. ಇದೆಲ್ಲಕ್ಕೂ ಮಿಗಿಲಾಗಿ, ನಲವತ್ತು ಭಾಷೆಗಳಿಗೆ ಅವರ ಪುಸ್ತಕಗಳು ಅನುವಾದಗೊಂಡಿವೆ.

ರಶ್ದಿ ಬ್ರಿಟನ್ ಪೌರತ್ವ ಹೊಂದಿದ್ದರೂ, ಅವರ ಬಹುತೇಕ ಕಥನಗಳ ಕೇಂದ್ರದಲ್ಲಿ ಭಾರತ ಉಪಖಂಡ ಇರುವುದು ಗಮನಾರ್ಹ. ಕಾಲ್ಪನಿಕ ವಾಸ್ತವವಾದದೊಂದಿಗೆ ಇತಿಹಾಸವನ್ನು ತಳಕು ಹಾಕಿ ಕಥೆ ಕಟ್ಟುವುದರಲ್ಲಿ ಅವರು ಸಿದ್ಧಹಸ್ತರು. ಪೂರ್ವ ಪಶ್ಚಿಮಗಳ ನಡುವಣ ಆಕರ್ಷಣೆ ವಿಕರ್ಷಣೆಯೂ ಅವರ ಕಥನಗಳಲ್ಲಿ ಪುನರ್ ವ್ಯಾಖ್ಯಾನಕ್ಕೆ ಒಳಗಾಗುತ್ತಲೇ ಇದೆ. ಹಾಲಿವುಡ್ ಚಿತ್ರಗಳಲ್ಲಿ ನಟಿಸುವುದು ಅವರ ಬಾಲ್ಯ-ಯೌವನದ ದಿನಗಳ ಕನಸಾಗಿತ್ತಷ್ಟೇ; ಆ ಕಾರಣದಿಂದಲೋ ಏನೋ- ಅವರ ಬರಹಗಳಲ್ಲಿ ಕಾಲ್ಪನಿಕ ಸಿನಿಮಾ ಮತ್ತು ಕಿರುತೆರೆಯ ಪಾತ್ರಗಳು ಬರುವುದಿದೆ.

`ನಾನು ಜೀವಿಸುತ್ತಿರುವ ಈ ವಿಶ್ವವನ್ನು ವಿಶ್ಲೇಷಿಸಲು ನನಗೆ ದೇವರ ಅಗತ್ಯವಿಲ್ಲ~ ಎನ್ನುವ ರಶ್ದಿ ನಾಸ್ತಿಕರಾಗಿ ಪರಿಚಿತರು. ಆದರೆ, ಫತ್ವಾದ ಬೆದರಿಕೆ ಸಂದರ್ಭದಲ್ಲಿ, ಧರ್ಮದ ಬಗೆಗಿನ ಮೆದು ಮಾತುಗಳನ್ನು ಅವರು ಆಡಿದ್ದರು. ನಂತರ, `ಆ ರೀತಿ ಸೋಗು ಹಾಕಿದ್ದೆ~ ಎಂದು ಸಿನಿಮಾ ನಟರಂತೆ ತಮ್ಮ ಹೇಳಿಕೆಯನ್ನು ಅವರು ವಿಶ್ಲೇಷಿಸಿದ್ದರು.

ಫತ್ವಾ, ವಿವಾದ, ಸಿಟ್ಟು ಸೆಡವು, ಸೋಗು- ಇವೆಲ್ಲವುಗಳ ಹೊರತಾಗಿಯೂ ಸಲ್ಮಾನ್ ರಶ್ದಿ ಅವರದು ಜೀವಂತಿಕೆಯಿಂದ ಕೂಡಿದ ವರ್ಣರಂಜಿತ ವ್ಯಕ್ತಿತ್ವ. ತಮ್ಮ ನೆನಪುಗಳನ್ನು ಬರೆಯುವುದಾಗಿ ಅವರು ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಆ ನೆನಪುಗಳ ಸಂಪುಟದಲ್ಲಿ ಭಾರತಕ್ಕೆ ಮಹತ್ವದ ಸ್ಥಾನವಿರುತ್ತದೆ ಎಂದೂ `ಜೈಪುರ ಸಾಹಿತ್ಯೋತ್ಸವ ಪ್ರಸಂಗ~ವೂ ಅದರಲ್ಲಿ ಒಂದಾಗಿರುತ್ತದೆ ಎಂದೂ ಭಾವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT