ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದದ ಸುಳಿಯಲ್ಲಿ ನಮ್ಮ ಮೆಟ್ರೊ ಉದ್ಘಾಟನೆ ಕಾರ್ಯಕ್ರಮ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಹು ನಿರೀಕ್ಷಿತ `ನಮ್ಮ ಮೆಟ್ರೊ~ ರೈಲು ಸಂಚಾರದ ಉದ್ಘಾಟನಾ ಸಮಾರಂಭವನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ಅದ್ಧೂರಿಯಾಗಿ ನಡೆಸಲು ಮುಂದಾಗಿದೆ. ಸುಮಾರು 2.50 ಕೋಟಿ ರೂಪಾಯಿ ವೆಚ್ಚ ಮಾಡಲು ಉದ್ದೇಶಿಸಿದ್ದು, ಸಮಾರಂಭ ಆಯೋಜಿಸುವ ಜವಾಬ್ದಾರಿಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ನೀಡದೆ ಖಾಸಗಿ ಸಂಸ್ಥೆಗಳಿಗೆ ವಹಿಸಿದೆ.

ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗಿನ (ರೀಚ್-1) ರೈಲು ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಬೃಹತ್ ಮೊತ್ತದ ಹಣ ವೆಚ್ಚ ಮಾಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ ಅವರು ಅಕ್ಟೋಬರ್ 7ರಂದು ಪ್ರಕಟಿಸಿದ್ದರು.

ಕೇಂದ್ರ ಸಚಿವರಾದ ಕಮಲ್‌ನಾಥ್ ಹಾಗೂ ದಿನೇಶ್ ತ್ರಿವೇದಿ ಅವರು ಭಾಗವಹಿಸಲಿರುವ ಉದ್ಘಾಟನಾ ಸಮಾರಂಭಕ್ಕೆ 1 ರಿಂದ 1.25 ಕೋಟಿ ರೂಪಾಯಿ ವೆಚ್ಚ ಹಾಗೂ ಪ್ರಚಾರ ಕಾರ್ಯಕ್ಕೆ ಒಂದು ಕೋಟಿ ರೂಪಾಯಿ ವೆಚ್ಚ ಮಾಡಲು ಉದ್ದೇಶಿಸಿರುವುದಾಗಿ ಹೇಳಿದ್ದರು.

ಆದರೆ, ಅದೇ ದಿನ ಸರ್ಕಾರಿ ಸ್ವಾಮ್ಯದ ಮಾರ್ಕೆಟಿಂಗ್ ಕನ್ಸಲ್ಟಂಟ್ಸ್ ಅಂಡ್ ಏಜೆನ್ಸಿಸ್ (ಎಂಸಿಎ) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಮುನಿಯಪ್ಪ ಅವರು ಉದ್ಘಾಟನಾ ಸಮಾರಂಭವನ್ನು ಆಯೋಜಿಸುವ ಬಗ್ಗೆ ಆಸಕ್ತಿ ತೋರಿದ್ದರು. ಈ ಸಂಬಂಧ ಅಕ್ಟೋಬರ್ 8ರಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದರು (ಪತ್ರದ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದೆ).

`ಈಗಾಗಲೇ ಪ್ರಕಟಿಸಿರುವ ಮೊತ್ತದ ಅರ್ಧದಷ್ಟು ವೆಚ್ಚದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಂಸ್ಥೆ ಬದ್ಧವಾಗಿದೆ. ಅಲ್ಲದೇ ಇತರೆ ಜವಾಬ್ದಾರಿಯನ್ನು ಹಂಚಿಕೆ ಮಾಡಿರುವ ಸಂಸ್ಥೆಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು~ ಎಂದು ಪತ್ರದಲ್ಲಿ ತಿಳಿಸಲಾಗಿದೆ.

`ಇಂತಹ ಅಪೂರ್ವ ಕಾರ್ಯಕ್ರಮವನ್ನು ಆಯೋಜಿಸುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ. ಆ ಉದ್ದೇಶದಿಂದಲೇ ನಿಗಮವು ಖರ್ಚು ಮಾಡಲು ಉದ್ದೇಶಿಸಿರುವ ಮೊತ್ತದ ಅರ್ಧದಷ್ಟು ಹಣದಲ್ಲೇ ಸಮಾರಂಭವನ್ನು ಆಯೋಜಿಸಲು ಮುಂದಾಗಿದ್ದೇವೆ. ಉಳಿದ ಹಣವನ್ನು ಪ್ರಾಯೋಜಕತ್ವದ ಮೂಲಕ ಭರಿಸಲಾಗುವುದು~ ಎಂದು ಹೇಳಲಾಗಿದೆ.
ಆದರೆ ಈ ಪ್ರಸ್ತಾವಕ್ಕೆ ಹೆಚ್ಚಿನ ಮಹತ್ವ ನೀಡದ ಶಿವಶೈಲಂ, ಈ ಜವಾಬ್ದಾರಿಯನ್ನು ಈಗಾಗಲೇ ಬೇರೆ ಸಂಸ್ಥೆಗಳಿಗೆ ನೀಡಲಾಗಿದೆ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದೊಮ್ಮೆ ಬಿಎಂಆರ್‌ಸಿಎಲ್, ಈಗಾಗಲೇ ಖಾಸಗಿ ಸಂಸ್ಥೆಯೊಂದಕ್ಕೆ ಈ ಜವಾಬ್ದಾರಿ ನೀಡಿದ್ದರೆ ಅದು ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯನ್ವಯ ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ವೆಚ್ಚದ ಕಾಮಗಾರಿಗೆ ಟೆಂಡರ್ ಆಹ್ವಾನಿಸಬೇಕು ಎಂದು ಎಂಸಿಎ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಶೈಲಂ, `ಆ ರೀತಿಯ ಯಾವುದೇ ಪ್ರಸ್ತಾವ ಬಂದಿಲ್ಲ. ಒಂದೊಮ್ಮೆ ಪ್ರಸ್ತಾವ ಸಲ್ಲಿಕೆಯಾಗಿದ್ದರೆ, ಅದು ನನ್ನ ಗಮನಕ್ಕೆ ಬರುತ್ತಿತ್ತು~ ಎಂದರು. ಂದೊಮ್ಮೆ ಪ್ರಸ್ತಾವ ಬಂದರೆ ಅವಕಾಶ ನೀಡುತ್ತೀರಾ ಎಂದು ಪ್ರಶ್ನಿಸಿದರೆ, `ಅದನ್ನು ನಂತರ ನಿರ್ಧರಿಸಲಾಗುವುದು. ಎಲ್ಲವನ್ನೂ ನಿಯಮಗಳ ಪ್ರಕಾರ ನಡೆಸಲಾಗುವುದು~ ಎಂದು ಹೇಳಿದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ಹಲವು ಪ್ರತಿಷ್ಠಿತ ಕಾರ್ಯಕ್ರಮಗಳನ್ನು ಆಯೋಜಿಸಿದ ಅನುಭವ ಸಂಸ್ಥೆಗಿದೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಿಗೆ ಪತ್ರ ಬರೆಯಲಾಗಿದ್ದು, ಅವರಿಂದ ಉತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದೇವೆ ಎಂದು ಎಂಸಿಎ ಪದಾಧಿಕಾರಿಗಳು ತಿಳಿಸಿದ್ದಾರೆ.
 
ಈ ನಡುವೆ ಉದ್ಘಾಟನಾ ಸಮಾರಂಭಕ್ಕೆ ನಿಗದಿಪಡಿಸಲಾದ ವೆಚ್ಚದ ಮೊತ್ತದ ಶೇ 50ರಷ್ಟು ಹಣದಲ್ಲಿ ಸಮಾರಂಭ ಆಯೋಜಿಸುವುದರ ಜತೆಗೆ ಜಾಹೀರಾತು ವೆಚ್ಚವನ್ನು ಭರಿಸುವುದಾದರೆ ಎಂಸಿಎ ಪ್ರಸ್ತಾವವನ್ನು ಪರಿಗಣಿಸುವುದಾಗಿ ಬಿಎಂಆರ್‌ಸಿಎಲ್, ಎಂಸಿಎ ಸಂಸ್ಥೆಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.

`ಪ್ರಚಾರ ಮತ್ತು ಜಾಹೀರಾತು ವೆಚ್ಚವನ್ನು ಭರಿಸುವುದು ಸಾಧ್ಯವಿಲ್ಲ. ಕೇವಲ ಉದ್ಘಾಟನಾ ಸಮಾರಂಭಕ್ಕೆ ಅಗತ್ಯವಾದ ಸೌಕರ್ಯವನ್ನು ಕಲ್ಪಿಸುವುದಕ್ಕೆ ಮಾಡಲಾಗುವ ವೆಚ್ಚದಲ್ಲಿ ಶೇ 50ರಷ್ಟು ಹಣವನ್ನಷ್ಟೇ ಪಡೆದು ಆ ಸೌಲಭ್ಯಗಳನ್ನು ಕಲ್ಪಿಸಬಹುದು~ ಎಂದು ಎಂಸಿಎ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT