ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದದ ಸುಳಿಯಲ್ಲಿ ಸುವರ್ಣಸೌಧ ಕಾಮಗಾರಿ

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿಯಲ್ಲಿ ನಿರ್ಮಾಣವಾಗುತ್ತಿರುವ ಸುವರ್ಣಸೌಧ ಕಟ್ಟಡ ಕಾಮಗಾರಿಗಳ ಅಂದಾಜು ಪಟ್ಟಿ 232ರಿಂದ 370 ಕೋಟಿ ರೂಪಾಯಿಗೆ ತಲುಪಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಸಚಿವರೊಬ್ಬರು ಮತ್ತು ಅವರ ಹಿಂಬಾಲಕರ ಒತ್ತಡಕ್ಕೆ ಮಣಿದು ಅಂದಾಜು ಪಟ್ಟಿಯನ್ನು ಮನಬಂದಂತೆ ಪರಿಷ್ಕರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸುವರ್ಣಸೌಧದ ಶೇ 70ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಈ ಮಧ್ಯೆ ವಿಧಾನ ಸಭೆ ಮತ್ತು ಪರಿಷತ್ ಸಭಾಂಗಣದ ಒಳಾಂಗಣ ವಿನ್ಯಾಸ ಮತ್ತು ವಿದ್ಯುದೀಕರಣಕ್ಕೆ 120 ಕೋಟಿ ರೂಪಾಯಿ ವೆಚ್ಚದ ಟೆಂಡರ್ ಕರೆಯಲು ಸಿದ್ಧತೆ ನಡೆದಿದ್ದು, ಸಚಿವರೊಬ್ಬರು ಬೇನಾಮಿ ಹೆಸರಿನಲ್ಲಿ ಈ ಟೆಂಡರ್‌ನ ಗುತ್ತಿಗೆ ಪಡೆಯಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸುವ ಸಂಬಂಧ ಸೂಪರಿಂಟೆಂಡಿಂಗ್ ಎಂಜಿನಿಯರ್ ವಿನಾಯಕ ಸೂಗೂರು ಮತ್ತು ಬೆಳಗಾವಿ ಉಪ ವಿಭಾಗದ ಸಹಾಯಕ ಎಂಜಿನಿಯರ್ ಪ್ರಸಾದ್ ಅವರ ಮಧ್ಯೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿತ್ತಲ್ಲದೆ, ಪ್ರಸಾದ್ ಮೇಲೆ ಹಲ್ಲೆ ಸಹ ನಡೆದಿತ್ತು. ಆದರೆ ತೆರೆಮರೆಯಲ್ಲಿ ಈ ಪ್ರಕರಣವನ್ನು ಮುಚ್ಚಿಹಾಕಲಾಗಿದ್ದು, ಸಚಿವರ ಕಡೆಯವರು ಪೊಲೀಸ್ ಠಾಣಿಯಲ್ಲಿ ದೂರು ದಾಖಲಾಗದಂತೆ ನೋಡಿಕೊಂಡರು ಎಂದು ಲೋಕೋಪಯೋಗಿ ಇಲಾಖೆಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಹಲ್ಲೆಗೆ ಕಾರಣವೇನು?: ಪ್ರಸಾದ್, ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಉಪ ವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಒಳಾಂಗಣ ವಿನ್ಯಾಸ ಮತ್ತು ವಿದ್ಯುದೀಕರಣಕ್ಕೆ ಉಪ ವಿಭಾಗದಲ್ಲಿಯೇ ಟೆಂಡರ್ ಸಿದ್ಧಪಡಿಸಿ ಅದನ್ನು ಮುಖ್ಯ ಎಂಜಿನಿಯರ್ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ನಂತರ ಸರ್ಕಾರ ಅದನ್ನು ಪರಿಶೀಲಿಸಿ ಒಪ್ಪಿಗೆ ನೀಡಬೇಕಾಗುತ್ತದೆ.

ಆದರೆ ಟೆಂಡರ್ ಸಿದ್ಧಪಡಿಸುವಾಗ ದರ ನಿಗದಿ ವಿಚಾರದಲ್ಲಿ ಪ್ರಸಾದ್ ಮತ್ತು ಸೂಗೂರು ಅವರಿಗೆ ಮಾತಿನ ಚಕಮಕಿ ನಡೆದಿತ್ತು. `ವಾಸ್ತವಿಕ ದರಗಳನ್ನು ಮಾತ್ರ ನಮೂದಿಸುತ್ತೇವೆ. ಉದ್ದೇಶಪೂರ್ವಕವಾಗಿ ಹೆಚ್ಚಿನ ದರಗಳನ್ನು ನಮೂದಿಸಲು ಸಾಧ್ಯವಿಲ್ಲ~ ಎಂದು ಪ್ರಸಾದ್ ನೇರವಾಗಿಯೇ ತಿಳಿಸಿದ್ದರು. ಆದರೆ ಇದಕ್ಕೆ ಒಪ್ಪದ ಸೂಗೂರು ಅವರು, ಪ್ರಸಾದ್ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು ಎಂದು ಗೊತ್ತಾಗಿದೆ.

ಈ ಘಟನೆಯನ್ನು ಖಂಡಿಸಿ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಬೆಳಗಾವಿಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಲ್ಲದೆ, ಸೂಗೂರು ಅವರ ವರ್ಗಾವಣೆಗೆ ಆಗ್ರಹಿಸಿ ಧರಣಿ ನಡೆಸಿದ್ದರು. ಆದರೆ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ  ಅವರ ಹಿಂಬಾಲಕ ಸತೀಶ್ ಎನ್ನುವವರು ಮಧ್ಯ ಪ್ರವೇಶಿಸಿ ಪ್ರಕರಣ ದಾಖಲಾಗದಂತೆ ನೋಡಿಕೊಂಡರು. 15 ದಿನಗಳ ಹಿಂದೆ ಈ ಘಟನೆ ನಡೆದಾಗ ಉದಾಸಿ ಮತ್ತು ಸತೀಶ್ ಒಂದೇ ವಿಮಾನದಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ತೆರಳಿದರು. ಆದರೆ ಉದಾಸಿಯವರು ಲೋಕೋಪಯೋಗಿ ಇಲಾಖೆಯ ಕಚೇರಿಗಾಗಲಿ, ಸುವರ್ಣ ಸೌಧಕ್ಕಾಗಲಿ ಭೇಟಿ ನೀಡಲಿಲ್ಲ. ಹಲ್ಲೆಗೊಳಗಾದ ವ್ಯಕ್ತಿಯನ್ನು ಕರೆದು ಮಾತನಾಡಿಸಲಿಲ್ಲ.

ಸತೀಶ್ ಮಾತ್ರ ಲೋಕೋಪಯೋಗಿ ಕಚೇರಿಗೆ ತೆರಳಿ `ಒಂದು ವಾರ ಅಲ್ಲ, 15 ದಿನ ಧರಣಿ ನಡೆಸಿದರೂ ಸೂಗೂರು ಅವರನ್ನು ವರ್ಗಾವಣೆ ಮಾಡುವುದಿಲ್ಲ, ಈ ವಿಷಯವನ್ನು ದೊಡ್ಡದಾಗಿ ಬೆಳೆಸದೆ ಕೆಲಸಕ್ಕೆ ಹಾಜರಾಗಿ~ ಎಂದು ನೌಕರರಿಗೆ ಧಮಕಿ ಹಾಕಿದರು. ಇದಾದ ನಂತರ ವಿಷಯ ತಣ್ಣಗಾಯಿತು ಎಂದು ಮೂಲಗಳು ತಿಳಿಸಿವೆ.

ಕಳಪೆ ಕಾಮಗಾರಿ: ಈ ಮಧ್ಯೆ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯ ತಾಂತ್ರಿಕ ಸಮಿತಿ ಎರಡು ಬಾರಿ ಸುವರ್ಣ ಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಮಗಾರಿಯ ಗುಣಮಟ್ಟ ತೃಪ್ತಿಕರವಾಗಿದೆ ಎಂದು ಹೇಳಿಲ್ಲ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವರದಿ ಸಿದ್ಧಪಡಿಸಿದೆ ಎಂದು ಗೊತ್ತಾಗಿದೆ.

`ಸೂಗೂರು ಹೇಳಿದ ಹಾಗೆ ಪರಿಷ್ಕೃತ ಅಂದಾಜು ಪಟ್ಟಿಯ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಸೂಗೂರು ಮತ್ತು ಗುತ್ತಿಗೆದಾರರಾದ ಅಶೋಕ ಪಾಟೀಲ, ರವಿ ಪಾಟೀಲ ಅವರು ಸೇರಿಕೊಂಡು ಮನಬಂದಂತೆ ಪ್ರಸ್ತಾವಗಳನ್ನು ಸಿದ್ಧಪಡಿಸುತ್ತಾರೆ. ಪ್ರಾಮಾಣಿಕ ಅಧಿಕಾರಿಯಾದ ಪ್ರಸಾದ್ ಅವರು, ಇದು ದುಂದು ವೆಚ್ಚಕ್ಕೆ ಆಸ್ಪದವಾಗುತ್ತದೆ. ಒಳಾಂಗಣ ವಿನ್ಯಾಸ ಮತ್ತು ವಿದ್ಯುದೀಕರಣಕ್ಕೆ 120 ಕೋಟಿ ರೂಪಾಯಿ ಅಗತ್ಯವಿಲ್ಲ. 60-70 ಕೋಟಿ ರೂಪಾಯಿ ಸಾಕಾಗುತ್ತದೆ ಎಂದು ಹೇಳಿದರೂ ಕೇಳಲಿಲ್ಲ~ ಎನ್ನಲಾಗಿದೆ.

ಸುವರ್ಣ ಸೌಧದ ಕಾಮಗಾರಿ ಆರಂಭವಾದಾಗ 232 ಕೋಟಿ ರೂಪಾಯಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಮಧ್ಯದಲ್ಲಿ ಸುಮಾರು 26.38 ಕೋಟಿ ರೂಪಾಯಿ ಜಾಸ್ತಿ ಮಾಡಲಾಗಿತ್ತು. ಈಗ ಮತ್ತೆ 120 ಕೋಟಿ ರೂಪಾಯಿ ಮೊತ್ತದ ಟೆಂಡರ್ ಕರೆಯಲಾಗುತ್ತಿದ್ದು, ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿಲ್ಲ.
 
ಸಚಿವರ ಸಂಬಂಧಿಕರೊಬ್ಬರು ಪ್ರತಿಯೊಂದು ವಿಷಯದಲ್ಲೂ ಮೂಗು ತೂರಿಸುತ್ತಾರೆ. ಈಗ ಪರಿಷ್ಕೃತ ಟೆಂಡರ್ ಅನ್ನು ಬೇನಾಮಿ ಹೆಸರಿನಲ್ಲಿ ಅವರಿಗೆ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT