ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಿತ ಭೂಮಿ ಸರ್ವೆ

Last Updated 13 ಅಕ್ಟೋಬರ್ 2011, 9:25 IST
ಅಕ್ಷರ ಗಾತ್ರ

ಕೆಜಿಎಫ್: ನಗರದ ಗೌತಂನಗರ ಸುತ್ತಮುತ್ತಲಿನ ವಿವಾದಾಸ್ಪದ 92 ಎಕರೆ ಪ್ರದೇಶಕ್ಕೆ ಸಂಬಂಧಿಸಿದಂತೆ ಸರ್ವೆ ಕಾರ್ಯ ನಡೆಯಬೇಕಾಗಿದ್ದು, ಸರ್ವೆ ನಂತರ ನಗರಸಭೆಯ ಗಡಿ ಗುರ್ತು ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕಚೇರಿ ನಗರ ಯೋಜನಾಧಿಕಾರಿ ಪದ್ಮನಾಭ ಬುಧವಾರ ಹೇಳಿದರು.

ಸರ್ವೆ ನಂಬರ್‌ಗೆ ಸೇರಿದ ಪ್ರದೇಶದಲ್ಲಿ ಮನೆಗಳು ಹೇಗೆ ನಿರ್ಮಾಣವಾದವು. ಅವುಗಳಿಗೆ ಅನುಮತಿ ನೀಡಿದವರು ಯಾರು ಮುಂತಾದ ವಿವಾದಗಳು ಬಗೆಹರಿಯಬೇಕಾದರೆ ಮೊದಲು ಸರ್ವೆ ಆಗಬೇಕು. ಈ ದಿಸೆಯಲ್ಲಿ ಜಿಲ್ಲಾಧಿಕಾರಿಗಳು ಸರ್ವೆ ಇಲಾಖೆಗೆ ಸೂಚನೆ ನೀಡಿದ್ದಾರೆ. ನಂತರ ಈ ನಿಟ್ಟಿನಲ್ಲಿ ಕಂದಾಯ ಮತ್ತು ನಗರಸಭೆ ಅಧಿಕಾರಿಗಳು ವಹಿಸಿದ ಪಾತ್ರದ ಬಗ್ಗೆ ತನಿಖೆ ನಡೆಯುತ್ತದೆ ಎಂದು ಅವರು ತಿಳಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ 140 ಸಫಾಯಿ ಕರ್ಮಚಾರಿಗಳ ಪುನರ್ವಸತಿಗೆ ಸಂಬಂಧಿಸಿದಂತೆ ಯೋಜನೆ ಸಿದ್ದವಾಗಿದೆ. ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲಸೌಲಭ್ಯ ನೀಡಲು ವ್ಯವಸ್ಥೆ ಮಾಡಲಾಗಿದೆ. ಕೆಲವರನ್ನು ನಗರಸಭೆಗೆ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸಫಾಯಿ ಕರ್ಮಚಾರಿಗಳು ಹೆಚ್ಚಾಗಿ ಇರುವ ಪ್ರದೇಶದಲ್ಲಿ ಮೂಲಸೌಕರ್ಯ ಕೈಗೊಳ್ಳಲಾಗುತ್ತಿದೆ.

3.44 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಮೂಹಿಕ ಶೌಚಾಲಯಗಳ ನಿರ್ಮಾಣವಾಗಲಿದೆ. ಜಾಗ ಇರುವ ಮನೆಗಳಿಗೆ ಶೌಚಾಲಯ ಕಟ್ಟಲು ಹತ್ತು ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಅವರು ತಿಳಿಸಿದರು.

ನಗರಸಭೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಸಚಿವರಿಂದ ಬಂದಿರುವ ಪತ್ರದ ಹಿನ್ನೆಲೆಯಲ್ಲಿ ಹಂತಹಂತವಾಗಿ ತನಿಖೆ ನಡೆಯುತ್ತಿದೆ.

ತನಿಖೆ ಮುಗಿದ ನಂತರ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ನಗರಸಭೆ ಆಯುಕ್ತ ಬಾಲಚಂದ್ರ ಈ ಸಂದರ್ಭದಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT