ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಿತ ಸ್ಥಳಕ್ಕೆ ನ್ಯಾಯಾಧೀಶೆ ಭೇಟಿ

Last Updated 6 ಫೆಬ್ರುವರಿ 2013, 12:14 IST
ಅಕ್ಷರ ಗಾತ್ರ

ಸುರಪುರ: ಕುಂಬಾರಪೇಟೆಯ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸುವ ಕುರಿತು ಉಂಟಾದ ವಿವಾದದ ಪರಿಣಾಮ ನ್ಯಾಯಾಧೀಶೆ ಮಂಜುಳಾ ಉಂಡಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಂಬಾರಪೇಟೆಯಲ್ಲಿ ಮಹಿಳಾ ಶೌಚಾಲಯವಿಲ್ಲ. ಇದರಿಂದ ತೊಂದರೆಯಾಗಿದೆ. 2011ರಲ್ಲಿ ಶೌಚಾಲಯ ಕಾಮಗಾರಿಗೆ ಮಂಜೂರಿ ನೀಡಲಾಗಿತ್ತು. ಆದರೆ ಪುರಸಭೆ ಕಾಮಗಾರಿ ಆರಂಭಿಸಿಲ್ಲ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕುಂಬಾರಪೇಟೆಯ ಸಾರ್ವಜನಿಕರು ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರು. ಶೀಘ್ರದಲ್ಲಿ ಶೌಚಾಲಯ ನಿರ್ಮಿಸಲು ಸೂಚಿಸಿದ್ದರು. ಆದರೆ ಕಾಮಗಾರಿ ಆರಂಭಿಸಲು ಸ್ಥಳೀಯ ಕೆಲ ವ್ಯಕ್ತಿಗಳು ತಡೆ ಒಡ್ಡಿದ್ದರು. ಇದರಿಂದ ಕಾಮಗಾರಿ ನಿರ್ಮಿಸಲು ಪುರಸಭೆಗೆ ಸಾಧ್ಯವಾಗಿರಲಿಲ್ಲ.

ಕಾಮಗಾರಿ ವಿಳಂಬವಾದ ಕಾರಣ ಸಾರ್ವಜನಿಕರು ಮತ್ತೆ ನ್ಯಾಯಾಧೀಶೆಯನ್ನು ಭೇಟಿ ಮಾಡಿದ್ದರು. ಈ ಬಗ್ಗೆ ನ್ಯಾಯಾಧೀಶೆ ಪುರಸಭೆ ಮುಖ್ಯಾಧಿಕಾರಿಯನ್ನು ವಿಚಾರಿಸಿದಾಗ ಕೆಲ ವ್ಯಕ್ತಿಗಳು ಕಾಮಗಾರಿಗೆ ತಡೆ ಒಡ್ಡಿದ್ದಾರೆ ಎಂಬ ಮಾಹಿತಿ ಬಂತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದರು.

ಕಾಮಗಾರಿಗೆ ತಡೆ ಒಡ್ಡಿದ ವ್ಯಕ್ತಿಗಳೊಂದಿಗೆ ಚರ್ಚಿಸಿದರು. ಸ್ಥಳ ನಮ್ಮದಾಗಿದ್ದು ಶೌಚಾಲಯ ನಿರ್ಮಿಸಬೇಡಿ ಎಂದು ವ್ಯಕ್ತಿಗಳು ಮನವಿ ಮಾಡಿದರು.

ಸಾರ್ವಜನಿಕರು ಬೇರೆ ಸ್ಥಳ ತೋರಿಸಿ ಅಲ್ಲಿ ಶೌಚಾಲಯ ನಿರ್ಮಿಸಿ ಎಂದು ಸಲಹೆ ನೀಡಿದರು. ಆದರೆ ಮಹಿಳೆಯರು ಆ ಸ್ಥಳ ದೂರದಲ್ಲಿರುವುದರಿಂದ ಅಲ್ಲಿ ಶೌಚಾಲಯ ನಿರ್ಮಾಣ ಬೇಡ. ವಿವಾದ ಸ್ಥಳವನ್ನೆ ಸರಿಯಾಗಿ ಅಳೆದು ಉಳಿದ ಜಾಗದಲ್ಲಿ ಶೌಚಾಲಯ ನಿರ್ಮಿಸಿ ಎಂದು ಮನವಿ ಮಾಡಿದರು.

ಈ ಬಗ್ಗೆ ಕೂಲಂಕುಷವಾಗಿ ಕೆಲ ದಿನಗಳಲ್ಲಿ ವಿಚಾರಣೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನ್ಯಾಯಾಧೀಶೆ ತಿಳಿಸಿದರು.

ಗ್ರಾಮದ ಮಹಿಳೆಯರಾದ ಯಂಕಮ್ಮ ಕವಲಿ, ನಿಂಗಮ್ಮ ಶಾಂತಪುರ, ನಿಂಗಮ್ಮ ತಳವಾರ, ಪುರಸಭೆ ಮುಖ್ಯಾಧಿಕಾರಿ ಶಿವುಕುಮಾರ, ಸರ್ವೇಯರ್ ವೆಂಕಟೇಶ, ವಕೀಲರಾದ ಅರವಿಂದಕುಮಾರ, ಜಿ. ಎಸ್. ಪಾಟೀಲ, ವಿ. ಸಿ. ಪಾಟೀಲ, ಎಸ್. ಸಿದ್ರಾಮಪ್ಪ, ಯಲ್ಲಪ್ಪ ಹುಲಿಕಲ್, ಶ್ರೀದೇವಿ ಪಾಟೀಲ, ಮಲ್ಲಣ್ಣ ಬೋವಿ, ಜುಮ್ಮಣ್ಣ ಏಳುರೊಟ್ಟಿ, ಸೂಗಪ್ಪ ವಾಲಿ, ಮಲ್ಲಪ್ಪ ಹುಬ್ಬಳಿ, ಲಂಕೆಪ್ಪ ಕವಲಿ, ಹಣಮಂತ ಭಜಂತ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT